ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ನಾಲ್ಕು ಟಿಎಂಸಿ ನೀರುವ ಬಿಡುವ ಪರಿಸ್ಥಿತಿಯಲ್ಲಿ ಕರ್ನಾಟಕ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಗುರುವಾರ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್, ರಾಜ್ಯದ ಕಾವೇರಿನದಿಯ ಅಣೆಕಟ್ಟುಗಳಲ್ಲಿ ನೀರಿನ ಅಭಾವ ಇರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪಾಲಿಸುವುದು ಕಷ್ಟಕರ ಎಂದಿದ್ದಾರೆ.
ಕಾವೇರಿ ಅಣೆಕಟ್ಟುಗಳಲ್ಲಿ 9 ಟಿಎಂಸಿ ನೀರಿದೆ. ಇದು ರಾಜ್ಯದ ಉಪಯೋಗಕ್ಕೂ ಸಾಲದು. ಹೀಗಾಗಿ ತಮಿಳುನಾಡಿಗೆ ನೀರು ಬಿಡುವುದು ಕಷ್ಟಸಾಧ್ಯ. ರಾಜ್ಯದ ಬಳಕೆಗೆ ನೀರು ಇಲ್ಲದ ಪರಿಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್ 4ಟಿಎಂಸಿ ನೀರು ಬಿಡಬೇಕು ಎಂದು ನೀಡಿರುವ ಆದೇಶವನ್ನು ಪಾಲಿಸುವುದು ಕಷ್ಟ ಎಂದು ಅವರು ಹೇಳಿದ್ದಾರೆ.
ಈ ಸುಪ್ರೀಂ ಆದೇಶದ ಕುರಿತು ನಾವು ಕಾನೂನು ತಜ್ಞರೊಂದಿಗೆ ಚರ್ಚಿಸುತ್ತೇವೆ ಮತ್ತು ನಮ್ಮ ಅಣೆಕಟ್ಟುಗಳಲ್ಲಿರುವ ನೀರಿನ ಲಭ್ಯತೆ ಕುರಿತು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.