ಭದ್ರತೆ ನೀಡುವಂತೆ 'ಹೈ' ಮೊರೆ ಹೋದ ಬಿಜೆಪಿ ನಾಯಕ: ಡಿಜಿ, ಐಜಿ ಸಂಪರ್ಕಿಸುವಂತೆ ನ್ಯಾಯಾಲಯ ಸೂಚನೆ
ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಪೊಲೀಸರು ಯತ್ನ ನಡೆಸುತ್ತಿದ್ದು, ಭದ್ರತೆ ನೀಡಬೇಕೆಂದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದ ಬಿಜೆಪಿ ನಾಯಕ ಸೋಮಶೇಖರ್ ಜಯರಾಜ್ ಅವರ ಅರ್ಜಿಯನ್ನು ಹೈಕೋರ್ಟ್ ಗುರುವಾರ ವಿಲೇವಾರಿ ಮಾಡಿದೆ...
ಬೆಂಗಳೂರು: ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಪೊಲೀಸರು ಯತ್ನ ನಡೆಸುತ್ತಿದ್ದು, ಭದ್ರತೆ ನೀಡಬೇಕೆಂದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದ ಬಿಜೆಪಿ ನಾಯಕ ಸೋಮಶೇಖರ್ ಜಯರಾಜ್ ಅವರ ಅರ್ಜಿಯನ್ನು ಹೈಕೋರ್ಟ್ ಗುರುವಾರ ವಿಲೇವಾರಿ ಮಾಡಿದೆ.
ಭದ್ರತೆ ಕುರಿತು ಡಿಜಿ ಅಥವಾ ಐಜಿಗೆ ಮನವಿ ಮಾಡಿಕೊಳ್ಳುವಂತೆ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮಶೇಖರ್ ಅವರಿಗೆ ಸೂಚಿಸಿದೆ.
ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜ್ಯದ ಆಡಳಿತಾರೂಢ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿಸಲು ಆಪರೇಷನ್ ಕಮನ ನಡೆಸಲಾಗುತ್ತಿದ್ದು, ಪ್ರಮುಖ ಸೂತ್ರಧಾರರಲ್ಲಿ ಸೋಮಶೇಖರ್ ಕೂಡ ಒಬ್ಬರು ಎಂದು ಹೇಳಿದ್ದರು. ಇದನ್ನು ಮಾಧ್ಯಮಗಳು ವರದಿ ಮಾಡಿದ್ದರು.
ವಿಚಾರಣೆ ವೇಳೆ ಸೋಮಶೇಖರ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು, ರಾಜಕೀಯ ನಾಯಕರು ಪೊಲೀಸರನ್ನು ಬಳಸಿಕೊಂಡು ಅರ್ಜಿದಾರರಿಗೆ ಕಿರುಕುಳ ನೀಡಬಾರದು ಎಂದು ಹೇಳಿದರು.
ಬಳಿಕ ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಾಲಯ, ಮಾಧ್ಯಮಗಳ ವರದಿಗಳನ್ನು ನೀವು ನಂಬಬಾರದು. ಮತ್ತೊಮ್ಮೆ ಮನವಿ ಸಲ್ಲಿಸಿ ಎಂದು ಹೇಳಿತು.