

ಬೆಂಗಳೂರು:ಕೋವಿಡ್- 19 ಪಾಸಿಟಿವ್ ಪ್ರಕರಣಗಳಾಗಿ ಬದಲಾಗುತ್ತಿರುವ ತೀವ್ರ ಉಸಿರಾಟದಂತಹ ಸಾರಿ ಪ್ರಕರಣಗಳು ಹೆಚ್ಚಾಗುತ್ತಿರುವಂತೆ ಇಂತಹ ರೋಗಿಗಳನ್ನು ಎರಡು ದಿನಗಳಿಗೊಮ್ಮೆ ಪರೀಕ್ಷಿಸುತ್ತಿದ್ದ ಸರ್ಕಾರ ಇದೀಗ ತನ್ನ ನಿಲುವನ್ನು ಬದಲಾಯಿಸಿದೆ.
ಸಾರಿ ಮತ್ತು ಐಎಲ್ ಐ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಪರೀಕ್ಷೆ ಮಾಡುವುದಲ್ಲದೇ, ಆರೋಗ್ಯ ಕಾರ್ಯಕರ್ತೆಯರನ್ನು ಮನೆ ಮನೆಗೆ ಕಳುಹಿಸಿ ಮಾಹಿತಿ ಸಂಗ್ರಹಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ಸಾರಿ, ಐಎಲ್ ಐ, ಹೆಚ್ ಐವಿ, ಟಿಬಿ ಕ್ಯಾನ್ಸರ್ ರೋಗಿಗಳು ಹಾಗೂ ವೃಯೋವೃದ್ಧರ ಪಟ್ಟಿಯನ್ನು ಆಶಾ ಕಾರ್ಯಕರ್ತೆಯರು ಹೊಂದುವಂತೆ ವ್ಯವಸ್ಥೆ ಮಾಡಲಾಗಿದೆ ಆಶಾ ಕಾರ್ಯಕರ್ತೆಯರು ಪ್ರತಿನಿತ್ಯ ಭೇಟಿ ನೀಡಲಿದ್ದು, ಇಂತಹ ರೋಗಿಗಳ ಬಗ್ಗೆ ಮಾಹಿತಿಯನ್ನು ಮೊಬೈಲ್ ಆಪ್ ನಲ್ಲಿ ಅಪ್ ಡೇಟ್ ಮಾಡಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರು ಪ್ರತಿಯೊಂದು ಮನೆಗೆ ಹೋಗಿ ದೇಹದ ಉಷ್ಣತೆ ಮತ್ತು ಲಕ್ಷಣಗಳನ್ನು ದಾಖಲು ಮಾಡಿಕೊಳ್ಳಲಿದ್ದಾರೆ. ಅಲ್ಲದೇ ಮುಂದಿನ ಬೆಳವಣಿಗೆ ಪರಿಶೀಲಿಸಲು ಸಂಪರ್ಕ ನಂಬರ್ ತೆಗೆದುಕೊಂಡು ಬರಲಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿರುವ ರೋಗಿಗಳ ಬಗ್ಗೆಯೂ ಮಾಹಿತಿ ಇರಲಿದ್ದು, ಜಿಲ್ಲಾ ಮತ್ತು ಪಂಚಾಯತ್ ಮಟ್ಟದಲ್ಲೂ ಪಟ್ಟಿಯನ್ನು ತಯಾರಿಸಲಾಗುತ್ತದೆ. ರೋಗಿ ಕಂಟೈನ್ ಮೆಂಟ್ ಪ್ರದೇಶದಲ್ಲಿದ್ದರೆ ಆಶಾ ಕಾರ್ಯಕರ್ತೆಯರು ಪ್ರತಿದಿನ ಹೋಗಿ ಪರೀಕ್ಷಿಸಬೇಕಾಗುತ್ತದೆ. ಆರೆಂಜ್ ವಲಯದಲ್ಲಿದ್ದರೆ ವಾರಕ್ಕೆ ಎರಡು ಬಾರಿ , ಗ್ರೀನ್ ವಲಯದಲ್ಲಿದ್ದರೆ 15 ದಿನಗಳಿಗೆ ಒಂದು ಬಾರಿ ಭೇಟಿ ನೀಡುತ್ತಾರೆ. ಆದಾಗ್ಯೂ, ಮೂರು ಅಥವಾ ನಾಲ್ಕು ದಿನಗಳಿಗೊಮ್ಮೆ ಕರೆ ಮಾಡಿ ಮಾಹಿತಿ ಸಂಗ್ರಹಿಸಲಿದ್ದಾರೆ.
ಈ ಮಧ್ಯೆ ಜ್ವರ, ಕೆಮ್ಮಿನಂತಹ ಬಾದೆಗಾಗಿ ಔಷಧ ಕೊಳ್ಳುವ ಗ್ರಾಹಕರ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳುವಂತೆ ನಗರ, ಜಿಲ್ಲೆ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಮೆಡಿಕಲ್ ಸ್ಟೋರ್ ಗಳಿಗೆ ಸೂಚನೆ ನೀಡಲಾಗಿದೆ.