

ಬೆಂಗಳೂರು: 2020ನೇ ಸಾಲಿನ ಸಿಇಟಿ ಪರೀಕ್ಷೆಗಳು ಜುಲೈ 30 ಹಾಗೂ 31ರಂದು ನಡೆಯಲಿದ್ದು 75 ಹೊಸ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೋವಿಡ್ 19 ಪರಿಸ್ಥಿತಿಯನ್ನು ಪರಿಗಣಿಸಿ ವಿದ್ಯಾರ್ಥಿಗಳಿಗೆ ಸಮೀಪ ಇರುವ ಪರೀಕ್ಷಾ ಕೇಂದ್ರಗಳಲ್ಲೇ ಪರೀಕ್ಷೆಗೆ ಹಾಜರಾಗಲು ಈಗಾಗಲೇ ಅವಕಾಶ ನೀಡಲಾಗಿದೆ.
ಹೊಸದಾಗಿ ಸೇರ್ಪಡೆಗೊಂಡಿರುವ 75 ಪರೀಕ್ಷಾ ಕೇಂದ್ರಗಳ ಮಾಹಿತಿ ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಈ ಹೊಸ ಪರೀಕ್ಷಾ ಕೇಂದ್ರಗಳನ್ನು ಪರಿಶೀಲಿಸಿದ ಬಳಿಕ ವಿದ್ಯಾರ್ಥಿಗಳು ಅಗತ್ಯವೆಂದು ಕಂಡುಬಂದಲ್ಲಿ ತಾವು ಈ ಮೊದಲು ನಮೂದಿಸಿದ್ದ ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಆದ್ಯತೆಯ ಮೇರೆಗೆ ತಾವು ಹಾಜರಾಗಬಯಸುವ ಪರೀಕ್ಷಾ ಕೇಂದ್ರಗಳಿಗೆ ಮೂರು ಆಯ್ಕೆಗಳನ್ನು ಅಲ್ಲೇ ನೀಡಬಹುದಾಗಿರುತ್ತದೆ. ಅಭ್ಯರ್ಥಿಯು ನೀಡುವ ಆದ್ಯತೆ ಮತ್ತು ಪರೀಕ್ಷಾ ಕೇಂದ್ರದ ಲಭ್ಯತೆಯ ಆಧಾರದಲ್ಲಿ ಪರೀಕ್ಷಾ ಕೇಂದ್ರಗಳನ್ನು ಸಿಇಟಿ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಸಿಇಟಿ-2020 ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿಕೊಳ್ಳಲು ಹಾಗೂ ಅರ್ಜಿಗಳಲ್ಲಿನ ಮಾಹಿತಿಯನ್ನು ಅರ್ಹತೆಗೆ ಅನುಗುಣವಾಗಿ ಮಾರ್ಪಡಿಸಲು ಮೇ 20ರ ಸಾಯಂಕಾಲ 6.00ರಿಂದ ಮೇ 22ರ ಸಾಯಂಕಾಲ 6 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.