ಅಕ್ರಮ ಆಸ್ತಿ ಪ್ರಕರಣ: ಮತ್ತೆ ಸಿಬಿಐ ವಿಚಾರಣೆಗೆ ಹಾಜರಾಗಲಿರುವ ಡಿಕೆ ಶಿವಕುಮಾರ್!

3ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಂದು ಸಂಜೆ ಸಿಬಿಐ ಅಧಿಕಾರಿಗಳ ವಿಚಾರಣೆಗೆ ಹಾಜರಾಗಲಿದ್ದಾರೆ.
ಡಿಕೆ. ಶಿವಕುಮಾರ್
ಡಿಕೆ. ಶಿವಕುಮಾರ್
Updated on: 

ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಂದು ಸಂಜೆ ಸಿಬಿಐ ಅಧಿಕಾರಿಗಳ ವಿಚಾರಣೆಗೆ ಹಾಜರಾಗಲಿದ್ದಾರೆ.

ಸಿಬಿಐ ಅಧಿಕಾರಿಗಳಿಂದ ನೋಟಿಸ್ ಬಂದಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ವಿಚಾರಣೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಜರಾಗಲಿದ್ದಾರೆ. ಈ ಮೊದಲು ನವೆಂಬರ್ 19ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ನೀಡಿತ್ತು. ಆದರೆ, ಅದೇ ದಿನ ಡಿಕೆಶಿವಕುಮಾರ್ ಅವರ  ಮಗಳು ಐಶ್ವರ್ಯಾ ನಿಶ್ಚಿತಾರ್ಥ ಕಾರ್ಯಕ್ರಮ ಇದ್ದುದ್ದರಿಂದ ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ.

ನ. 23ರಂದು ದೆಹಯ ಸಿಬಿಐ ಕೇಂದ್ರ ಕಚೇರಿಗೆ ಆಗಮಿಸಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಲ್ಲಿ ತಿಳಿಸಲಾಗಿತ್ತು. ಆದರೆ ಇದಕ್ಕಿಂತಲೂ ಮುಂಚಿತವಾಗಿಯೇ ನಿಗದಿಯಾಗಿದ್ದ ರಾಜ್ಯ ಪ್ರವಾಸವನ್ನು ನ.21 ರಿಂದ 24ರವರೆಗೆ ನಿಗದಿಪಡಿಸಿಕೊಂಡಿದ್ದ ಕಾರಣ ಶಿವಕುಮಾರ್ ಸಿಬಿಐ  ಅಧಿಕಾರಿಗಳಿಗೆ ಮನವಿ ಮಾಡಿಕೊಂಡು, ನ. 23 ರ ಬದಲು  ನ.25ರಂದು ವಿಚಾರಣೆಗೆ ಹಾಜರಾಗುವುದಾಗಿ ಕೋರಿದ್ದರು. ಅಲ್ಲದೇ ವಿಚಾರಣೆಗೆ ದೆಹಲಿಯ ಬದಲು ಬೆಂಗಳೂರಿನ ಸಿಬಿಐ ಕಚೇರಿಗೆ ಆಗಮಿಸುವುದಾಗಿ ಕೇಳಿಕೊಂಡಿದ್ದರು. ಇದಕ್ಕೆ ಸಿಬಿಐ ಅಧಿಕಾರಿಗಳು ಕೂಡ ಒಪ್ಪಿಗೆ  ನೀಡಿದ್ದರು.

ಇನ್ನು ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ನಾಲ್ಕು ದಿನಗಳ ಪ್ರವಾಸ ಕೈಗೊಂಡಿದ್ದ ಶಿವಕುಮಾರ್ ಇಂದು ಬೆಳಿಗ್ಗೆ ತಮ್ಮ ಸದಾಶಿವನಗರ ನಿವಾಸಕ್ಕೆ ಆಗಮಿಸಿದ್ದು, ಸಂಜೆಯವರೆಗೆ ವಿಶ್ರಾಂತಿ ಪಡೆದು ಸಂಜೆ ನಾಲ್ಕು ಗಂಟೆ ನಂತರ ಸಿಬಿಐ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು  ತಿಳಿದುಬಂದಿದೆ.

ಕಳೆದ ಆಕ್ಟೋಬರ್ 5 ರಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸೋದರ ಮತ್ತು ಸಂಸದ ಡಿ.ಕೆ. ಸುರೇಶ್ ಬೆಂಗಳೂರಿನ ನಿವಾಸ ಜೊತೆಗೆ, ಡಿಕೆಶಿ ಅಪ್ತರು, ಸ್ನೇಹಿತರು ಮನೆ, ಕಚೇರಿಗಳ  ಮೇಲೆ ಸಿಬಿಐ ದಾಳಿ ನಡೆದಿತ್ತು. ಸಾಕಷ್ಟು ದಾಖಲೆಗಳನ್ನು ಹಾಗೂ 50 ಲಕ್ಷ ರೂ  ನಗದನ್ನು ವಶಪಡಿಸಿಕೊಂಡಿದ್ದರು. ಡಿಕೆಶಿ ಸಚಿವರಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಆಸ್ತಿಗಳಿಸಿದ್ದರು ಎಂಬ ಆರೋಪವಿದ್ದು, ಇದೇ ಆರೋಪದ ಮೇರೆಗೆ ಸಿಬಿಐ ದಾಳಿಯಾಗಿತ್ತು, ದಾಳಿ ವೇಳೆ ಸಂಗ್ರಹಿಸಿದ್ದ ಅಧಿಕಾರಿಗಳು ಅದರ ಆಧಾರದ ಮೇಲೆ ವಿಚಾರಣೆ ನಡೆಸಲಿದ್ದಾರೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com