

ಬೆಂಗಳೂರು: ರೈತ ಹೋರಾಟ ಲೆಕ್ಕಿಸದೆ ಕೃಷಿ ಮಸೂದೆ, ಭೂ ಸುಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ ಮಸೂದೆಗಳ ಜಾರಿಗೆ ಹೊರಟಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕ್ರಮ ಖಂಡಿಸಿ ರೈತ, ಕಾರ್ಮಿಕ, ದಲಿತ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಕರೆ ನೀಡಿರುವ ಸೋಮವಾರದ ಕರ್ನಾಟಕ ಬಂದ್' ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಸೇರಿದಂತೆ ನಾಡಿನ ಅನೇಕ ಸಂಘಟನೆಗಳು ಬೆಂಬಲ ಘೋಷಿಸಿವೆ.
ಇಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6ಗಂಟೆಯವರೆಗೂ ಬಂದ್'ಗೆ ಕರೆ ನೀಡಲಾಗಿದ್ದು, ಈ ವೇಳೆ ಹಾಲು, ಪತ್ರಿಕೆ, ಆ್ಯಂಬುಲೆನ್ಸ್ ಸೇರಿದಂತೆ ಅಗತ್ಯ ಸೇವೆಗಳಿಗೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ. ಆದರೆ, ಆಟೋ, ಟ್ಯಾಕ್ಸಿ ಚಾಲಕರ ಸಂಘ ಬಂದ್'ಗೆ ಬೆಂಬಲ ನೀಡಿರುವುದರಿಂದ ಖಾಸಗಿ ಸಾರಿಗೆ ಸೌಲಭ್ಯದಲ್ಲಿ ವ್ಯತ್ಯಾಯ ಉಂಟಾಗುವ ಸಾಧ್ಯತೆಗಳಿವೆ.
ಬಂದ್ ಇದ್ದರೂ ಕೆಎಸ್ಆರ್'ಟಿಸಿ, ಬಿಎಂಟಿಸಿ ಮತ್ತು ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ರಾಜ್ಯ ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಭದ್ರತಾ ಕಾರ್ಯದಲ್ಲಿ ಸುಮಾರು 70000ಕ್ಕೂ ಹೆಚ್ಚಿನ ಪೊಲೀಸರು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ರಾಜ್ಯ, ನಗರ, ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳನ್ನೂ ಸೂಕ್ಷ್ಮ ಪ್ರದೇಶಗಳಿಗೆ ಬಂದೋಬಸ್ತ್'ಗೆ ಬಳಸಿಕೊಳ್ಳಲಾಗಿದೆ. ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವಂತೆ ಬೆಂಗಳೂರು, ಮೈಸೂರು, ಕಲಬುರಗಿ, ಮಂಗಳೂರು, ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಆಯುಕ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಅನುಮತಿ ಪಡೆದರೆ ಮಾತ್ರ ಪ್ರತಿಭಟನೆಗೆ ಅವಕಾಶ; ಕೊಡಗು ಜಿಲ್ಲಾಡಳಿತ
ಕೇಂದ್ರ ಸರ್ಕಾರವು ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಾಗೂ ಎ.ಪಿ.ಎಂ.ಸಿ ಕಾಯ್ದೆ, ವಿದ್ಯುತ್ ಖಾಸಗೀಕರಣ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಲವು ರೈತ ಸಂಘಟನೆಗಳು ಜಂಟಿಯಾಗಿ ನಾಳೆ ಬಂದ್ಗೆ ಕರೆ ನೀಡಿದ್ದು, ಜಿಲ್ಲೆಯಲ್ಲಿ ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆ-2005 ಜಾರಿಯಲ್ಲಿದ್ದು, ಯಾವುದೇ ಸಭೆ, ಸಮಾರಂಭ, ಪ್ರತಿಭಟನೆ, ಬಂದ್ ನಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದಲ್ಲಿ ಜಿಲ್ಲಾಡಳಿತದಿಂದ ಸೂಕ್ತ ಅನುಮತಿ ಪಡೆಯಬೇಕು ಎಂದು ಕೊಡಗು ಜಿಲ್ಲಾಡಳಿತ ತಿಳಿಸಿದೆ.
ಸಾರ್ವಜನಿಕ ಶಾಂತಿಗೆ ಧಕ್ಕೆಯುಂಟಾಗದಂತೆ ಕಾರ್ಯಕ್ರಮಗಳನ್ನು ನಡೆಸುವುದು ಕಡ್ಡಾಯವಾಗಿರುತ್ತದೆ. ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವುದರ ಹಿನ್ನೆಲೆಯಲ್ಲಿ ಯಾವುದೇ ಸಭೆ, ಸಮಾರಂಭ, ಪ್ರತಿಭಟನೆ, ಬಂದ್ ನಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಕೋವಿಡ್-19 ಮಾರ್ಗಸೂಚಿಯಂತೆ ಮಾಸ್ಕ್ ಕಡ್ಡಾಯವಾಗಿ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಈ ಮಾರ್ಗಸೂಚಿಯನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಸರ್ವೋಚ್ಚ ನ್ಯಾಯಾಲಯವು ಬಂದ್ ಹಾಗೂ ಪ್ರತಿಭಟನೆ ಸಂದರ್ಭಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾದ ಸಂದರ್ಭದಲ್ಲಿ ಬಂದ್ ಹಾಗೂ ಪ್ರತಿಭಟನೆಗೆ ಕರೆ ಕೊಟ್ಟಿರುವ ಸಂಘಟನಕಾರರಿಂದಲೇ ಸದರಿ ಆಸ್ತಿಯ ನಷ್ಟ ಭರಿಸಬೇಕೆಂದು ಆದೇಶ ನೀಡಿರುತ್ತದೆ. ಆದ್ದರಿಂದ ಸೋಮವಾರದ ಬಂದ್ ವೇಳೆ ಯಾವುದೇ ರೀತಿಯ ಅಂಗಡಿ ಮುಂಗ್ಗಟ್ಟುಗಳು, ಸರ್ಕಾರಿ ಕಚೇರಿಗಳನ್ನು ಬಲವಂತವಾಗಿ ಮುಚ್ಚಿಸುವುದು ಕಾನೂನುಬಾಹಿರವಾಗಿದ್ದು ಅಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.