

ಬೆಂಗಳೂರು: ರಾಜ್ಯ ಸರ್ಕಾರದ ಆದೇಶದಂತೆ ಕೋವಿಡ್ ಸೋಂಕಿತರ ಚಿಕಿತ್ಸೆ ಶೇ.50ರಷ್ಟು ಹಾಸಿಗೆ ಮೀಸಲಿಡದ ವಿಕ್ರಮ್ ಆಸ್ಪತ್ರೆ ಸೇರಿದಂತೆ ಮೂರು ಆಸ್ಪತ್ರೆಗಳಿಗೆ ನೋಟಿಸ್ ನೀಡಿದ್ದು, 24 ಗಂಟೆಯೊಳಗೆ ನಿಗದಿತ ಹಾಸಿಗೆಗಳನ್ನು ನೀಡುವಂತೆ ಸೂಚಿಸಿದ್ದೇವೆಂದು ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆ ಮೀಸಲಿಟ್ಟಿರುವ ಸಂಬಂಧ ನಗರದ ವಿಕ್ರಂ ಆಸ್ಪತ್ರೆ, ಶಿಫಾ ಆಸ್ಪತ್ರೆ, ಎಚ್'ಬಿಎಸ್ ಆಸ್ಪತ್ರೆಗಳಿಗೆ ಶನಿವಾರ ಭೇಟಿ ನೀಡಿದ ಅವರು, ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ಶೇ.50ರಷ್ಟು ಹಾಸಿಗೆ ಮತ್ತು ಐಸಿಯು ಹಾಸಿಗೆ ನೀಡದ ಮೂರು ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದ್ದು, 24 ಗಂಟೆಯೊಳಗೆ ಹಾಸಿಗೆ ಕೊಡುವಂತೆ ಸೂಚನೆ ನೀಡಲಾಗಿದೆ. ಜೊತೆಗೆ ಈವರೆಗೂ ಹಾಸಿಗೆ ನೀಡದ ಕುರಿತು ಸಮಜಾಯಿಷಿ ಕೂಡ ಕೊಡುವಂತೆ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.