ಬೆಂಗಳೂರು: ರಾಜ್ಯದಲ್ಲಿ ಹೊಸ ಸೋಂಕು ಪ್ರಕರಣಗಳು ಇಳಿಕೆಯಾದರೂ, ಸಾವಿನ ಪ್ರಮಾಣ ಮಾತ್ರ ಇಳಿಕೆಯಾಗುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೊಪ್ಪಳ ಮೂಲದ 2 ವರ್ಷದ ಮಗು ಸೇರಿ 340 ಮಂದಿ ಸಾವನ್ನಪ್ಪಿದ್ದಾರೆ.
ಕೊಪ್ಪಳ ಮೂಲದ 2 ವರ್ಷದ ಗಂಡು ಮಗು ಶ್ವಾಸಕೋಶದ ಅತೀವ್ರ ಸೋಂಕು, ಜ್ವರ ಹಾಗೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು, ಮೇ.31 ರಂದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ನಿನ್ನೆ ಕೊನೆಯುಸಿರೆಳೆದಿದೆ.
ಇದರೊಂದಿಗೆ ರಾಜ್ಯದಲ್ಲಿ 2 ವರ್ಷದ ಮಗು ಸೇರಿದಂತೆ ಒಟ್ಟು 340 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖಅಯೆ 31,920ಕ್ಕೆ ಏರಿಕೆಯಾಗಿದೆ.
ಈ ನಡುವೆ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಿದ್ದು, ಸೋಮವಾರ 11,958 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 27,07,481ಕ್ಕೆ ತಲುಪಿದೆ.
ರಾಜ್ಯದಲ್ಲಿ 0-9 ವರ್ಷದ 81,520 ಮಕ್ಕಳಿಕೆ ಸೋಂಕು ತಗುಲಿದ್ದು, 10-19 ವರ್ಷದ 2,03,526 ಮಕ್ಕಳಿಗೆ ಸೋಂಕು ತಗುಲಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. ಅಲ್ಲದೆ, 0-9 ವರ್ಷದ 60 ಮಕ್ಕಳು, 10-19 ವರ್ಷದ 83 ಮಕ್ಕಳು ಮಹಾಮಾರಿ ಸೋಂಕಿಗೆ ಬಲಿಯಾಗಿದ್ದಾರೆ.
Advertisement