ರಾಜ್ಯ

ಅನ್'ಲಾಕ್ ಬೆಂಗಳೂರು: ಕಾದು, ಅಧ್ಯಯನ ನಡೆಸಿ ನಿರ್ಣಯ ಕೈಗೊಳ್ಳಲು ಸರ್ಕಾರ ನಿರ್ಧಾರ

ಅನ್'ಲಾಕ್ ಬೆಂಗಳೂರು: ಕಾದು, ಅಧ್ಯಯನ ನಡೆಸಿ ನಿರ್ಣಯ ಕೈಗೊಳ್ಳಲು ಸರ್ಕಾರ ನಿರ್ಧಾರ
ಸಂಗ್ರಹ ಚಿತ್ರ
Published On :

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿರನ ಅಬ್ಬರ ತಗ್ಗುತ್ತಿರುವ ಬೆನ್ನಲ್ಲೇ ಸಾಕಷ್ಟು ಜನರು ಅನ್ ಲಾಕ್ ಪ್ರಕ್ರಿಯೆ ಯಾವಾಗ ಆರಂಭವಾಗುತ್ತದೆ ಎಂದು ಸರ್ಕಾರದ ಘೋಷಣೆಗೆ ಕಾದು ಕುಳಿತಿದ್ದಾರೆ. ಆದರೆ, ಕೊರೋನಾ ಮೊದಲನೇ ಅಲೆ ವೇಳೆ ಎಡವಿದ್ದಂತೆ ಈ ಬಾರಿ ಯಾವುದೇ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಿರುವ ಸರ್ಕಾರ, ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳದೆ ಕಾದು, ಅಧ್ಯಯನ ನಡೆಸಿ ನಂತರ ಅಂತಿಮ ನಿರ್ಣಯ ಕೈಗೊಳ್ಳಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. 

ಸರ್ಕಾರದ ನಿರ್ಣಯಗಳನ್ನು ಸೂಕ್ಷ್ಮವಾಗಿ ಗಮಿಸಿದರೆ, ಈ ಬಾರಿ ಅನ್ ಲಾಕ್ ಪ್ರಕ್ರಿಯೆಯಲ್ಲಿ ಚಿತ್ರಮಂದಿರಗಳು ಹಾಗೂ ಮಾಲ್ ತೆರೆಯುವ ಲಕ್ಷಣಗಳು ಕಂಡು ಬರುತ್ತಿಲ್ಲ. 

ಇನ್ನು ಮದುವೆ ಸಮಾರಂಭಗಳಿಗೂ ನಿಯಂತ್ರಿತ ಜನರು ಪಾಲ್ಗೊಳ್ಳಲು ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಮೊದಲ ಅಲೆ ವೇಳೆ ಆದ ತಪ್ಪುಗಳು ಮರುಕಳಿಸದಂತೆ ಮಾಡಲು ಸರ್ಕಾರ ಹಾಗೂ ಅಧಿಕಾರಿಗಳು ಅಧಿಕ ಅವಧಿಯಲ್ಲಿ ಅನ್ ಲಾಕ್ ಪ್ರಕ್ರಿಯೆ ಕುರಿತು ಕೆಲಸ ಮಾಡುತ್ತಿದ್ದಾರೆ. 

ಕೊರೋನಾ ಮೂರನೇ ಅಲೆ ಆತಂಕ ಈಗಾಗಲೇ ಶುರುವಾಗಿದ್ದು, ಹೀಗಾಗಿ ಕಠಿಣ ನಿಯಮಗಳೊಂದಿಗೆ, ವೈಜ್ಞಾನಿಕ ಮಾರ್ಗಸೂಚಿಗಳೊಂದಿಗೆ ಅನ್ ಲಾಕ್ ಮಾಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. 

ದೇಶದ ಇತರೆ ರಾಜ್ಯಗಳ ಕ್ರಮ ಹಾಗೂ ನಿಯಮಗಳು, ಅಮೆರಿಕಾ, ಬ್ರಿಟನ್, ಆಸ್ಪ್ರೇಲಿಯಾ, ಬ್ಯಾಂಕಾಕ್ , ಹಾಂಗ್ ಕಾಂಗ್ ರಾಷ್ಟ್ರಗಳ ಮಾದರಿಗಳನ್ನೂ ಸರ್ಕಾರದ ಅಧಿಕಾರಿಗಳು, ತಜ್ಞರು, ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಅಧ್ಯಯನ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

ಅನ್ ಲಾಕ್ ಪ್ರಕ್ರಿಯೆ ಕುರಿತು ಸರ್ಕಾರದ ಅಧಿಕಾರಿಗಳು ತಡ ರಾತ್ರಿವರೆಗೂ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಉದ್ಯಾನವನಗಳು, ಆರಂಭಿಕ ಹಂತದಲ್ಲಿ ಆಟದ ಮೈದಾನಗಳ ತೆರೆಯಲು ನಿರ್ಧರಿಸಿದ್ದೇವೆ. ಇದರಿಂದ ಜನರು ವ್ಯಾಯಾಮ ಮಾಡಲು, ವಾಕಿಂಗ್ ಮಾಡಲು ಸಹಾಯವಾಗುತ್ತದೆ. ಇದಲ್ಲದೆ ಆರ್ಥಿಕ ಚಟುವಟಿಕೆ ಸುಧಾರಿಸುವ ಸಲುವಾಗಿ ಕೆಲವು ಕಚೇರಿಗಳನ್ನು ತೆರೆಯಲು ನಿರ್ಧರಿಸಿದ್ದೇವೆ. ಯಾವುದೇ ಜಾತ್ರೆ, ದೊಡ್ಡ ಮಟ್ಟದ ಸಭೆ ಸಮಾರಂಭಗಳಿಗೆ ಈ ಬಾರಿ ಅವಕಾಶ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ನಿರ್ಬಂಧಿತ ಚಟುವಟಿಕೆಯನ್ನು ಅನುಮತಿ ನೀಡಲು ನಿರ್ಧರಿಸಲಾಗಿದೆ. ಆದರೆ, ಸಭೆ, ಸಮಾರಂಭಗಳಿಗೆ ಅವಕಾಶ ನೀಡಲಾಗುವುದಿಲ್ಲ. ಸೋಂಕಿತರ ಸಂಖ್ಯೆ ಕಡಿಮೆ ಇರುವಂತೆ ನೋಡಿಕೊಳ್ಳಲು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದಕ್ಕಾಗಿ ಕಠಿಣ ಕ್ರಮಗಳ ಅಗತ್ಯವೂ ಇದೆ. ಹೀಗಾಗಿ ಮಾಲ್, ಚಿತ್ರಮಂದಿರ, ರೆಸ್ಟೋರೆಂಟ್ ಗಳನ್ನು ತೆರೆಯದಿರಲು ನಿರ್ಧರಿಸಿದ್ದೇವೆ. ಇಂತಹ ಪ್ರದೇಶಗಳಿಂದಲೇ ಹೆಚ್ಚೆಚ್ಚು ಸೋಂಕು ಪತ್ತೆಯಾಗಿತ್ತು. ಹೀಗಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆದರೆ, ಸಲೂನ್ ಗಳ ಆರಂಭ ಕುರಿತು ಚರ್ಚೆಗಳು ನಡೆಯುತ್ತಿವೆ. ಪರ್ಯಾಯ ದಿನಗಳಲ್ಲಿ ಮಾರುಕಟ್ಟೆ ತೆರೆಯುವ ಕುರಿತಂತೆಯೂ ಚರ್ಚೆಗಳು ನಡೆಯುತ್ತಿವೆ ಎಂದು ಬಿಬಿಎಂಪಿ ಮೂಲಗಳು ಮಾಹಿತಿ ನೀಡಿವೆ. 

ಅನ್ ಲಾಕ್ ಕುರಿತು ಸರ್ಕಾರ ಚಿಂತನೆ ನಡೆಸುತ್ತಿರುವ ನಡುವಲ್ಲೇ ಜೂನ್.14ರವರೆಗೂ ಅನ್ ಲಾಕ್ ಕುರಿತು ಸರ್ಕಾರ ಯಾವುದೇ ಘೋಷಣೆಗಳನ್ನೂ ಮಾಡಬಾರದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೊರೋನಾ ಮೂರನೇ ಅಲೆ ಎದುರಿಸಲು ಸರ್ಕಾರ ಮತ್ತಷ್ಟು ಕಾಲಾವಕಾಶ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.