ಕೋವಿಡ್-19: ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಧಾರವಾಡದಲ್ಲಿ ಉತ್ಪಾದನೆ

ಕೊರೋನಾ ಲಸಿಕೆಗಳಿಗೆ ದೇಶದಾದ್ಯಂತ ತೀವ್ರ ಕೊರತೆ ಎದುರಾಗಿರುವಾಗಲೇ, ವಿಶ್ವದ ಮೊದಲ ಕೋವಿಡ್ ಲಸಿಕೆ ಎಂಬ ಹಿರಿಮೆ ಹೊಂದಿರುವ ರಷ್ಯಾದ ಸ್ಪುಟ್ನಿಕ್-ವಿ ಯನ್ನು ಕರ್ನಾಟಕದಲ್ಲಿ ಉತ್ಪಾದಿಸಲು ಕಂಪನಿಯೊಂದು ಮುಂದೆ ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಧಾರವಾಡ: ಕೊರೋನಾ ಲಸಿಕೆಗಳಿಗೆ ದೇಶದಾದ್ಯಂತ ತೀವ್ರ ಕೊರತೆ ಎದುರಾಗಿರುವಾಗಲೇ, ವಿಶ್ವದ ಮೊದಲ ಕೋವಿಡ್ ಲಸಿಕೆ ಎಂಬ ಹಿರಿಮೆ ಹೊಂದಿರುವ ರಷ್ಯಾದ ಸ್ಪುಟ್ನಿಕ್-ವಿ ಯನ್ನು ಕರ್ನಾಟಕದಲ್ಲಿ ಉತ್ಪಾದಿಸಲು ಕಂಪನಿಯೊಂದು ಮುಂದೆ ಬಂದಿದೆ. 

ರಾಯಚೂರಿನ ಶಿಲ್ಪಾ ಮೆಡಿಕೇರ್ ಎಂಬ ಔಷಧ ಕಂಪನಿಯು ತನ್ನ ಅಂಗ ಸಂಸ್ಥೆಯಾದ ಶಿಲ್ಪಾ ಬಯೋಲಾಜಿಕ್ಸ್ ಪ್ರೈವೇಟ್ ಲಿಮಿಟೆಡ್'ನ ಧಾರವಾಡ ಘಟಕದಲ್ಲಿ ಲಸಿಕೆ ಉತ್ಪಾದಿಸಲು ಡಾ. ರೆಡ್ಡೀಸ್ ಲ್ಯಾಬೋರೇಟರಿ ಜೊತೆ ಒಪ್ಪಂದ ಮಾಡಿಕೊಂಡಿದೆ. 

ಮತ್ತೊಂದೆಡೆ ಸ್ಪುಟ್ನಿಕ್ ಲಸಿಕೆ ಅಭಿಯಾನವನ್ನು ಆರಂಭಿಸುವ ಸಂಬಂಧ ಅಪೋಲೋ ಆಸ್ಪತ್ರೆ ಸಮೂಹ ಹಾಗೂ ಡಾ. ರೆಡ್ಡೀಸ್ ಲ್ಯಾಬ್ ಸೋಮವಾರ ಮತ್ತೊಂದು ಒಪ್ಪಂದ ಮಾಡಿಕೊಂಡಿವೆ. ಸೋಮವಾರದಿಂದಲೇ ಹೈದರಾಬಾದ್ ನಲ್ಲಿ ಪ್ರಾಯೋಗಿಕವಾಗಿ ಲಸಿಕೆ ಅಭಿಯಾನ ಆರಂಭವಾಗಿದೆ. ಮಂಗಳವಾರ ವಿಶಾಖಪಟ್ಟಣದಲ್ಲಿ ಪ್ರಾರಂಭವಾಗಲಿದೆ.

ಸ್ಪುಟ್ನಿಕ್ ಲಸಿಕೆಯನ್ನು 2020ರ ಆಗಸ್ಟ್ ನಲ್ಲಿ ರಷ್ಯಾ ನೋಂದಣಿ ಮಾಡಿಸಿತ್ತು. ಕಳೆದ ಸೆಪ್ಟೆಂಬರ್ ನಲ್ಲಿ ಹೈದರಾಬಾದ್ ಮೂಲದ ಡಾ. ರೆಡ್ಡೀಸ್ ಲ್ಯಾಬೋರೇಟರಿ ಕಂಪನಿ ರಷ್ಯಾ ಜೊತೆ ಒಪ್ಪಂದ ಮಾಡಿಕೊಂಡು ಕ್ಲಿನಿಕಲ್ ಟ್ರಯಲ್ ಆರಂಭಿಸಿತ್ತು. ಬಳಿಕ ಭಾರತದಲ್ಲಿ ಬಳಸಲು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದುಕೊಂಡಿತ್ತು. 

ಮೇ.1 ರಂದು ಭಾರತಕ್ಕೆ ಮೊದಲ ಬ್ಯಾಚ್'ನ ಲಸಿಕೆಯನ್ನು ಡಾ. ರೆಡ್ಡೀಸ್ ಲ್ಯಾಬ್ ಆಮದು ಮಾಡಿಕೊಂಡಿತ್ತು. ಇದೀಗ ಆ ಕಂಪನಿ ಜೊತೆಗೆ ಧಾರವಾಡದ ಶಿಲ್ಪಾ ಬಯೋಲಾಜಿಕಲ್ಸ್ ಪ್ರೈವೇಟ್ ಲಿಮಿಟೆಡ್ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದೆ. 

ಧಾರವಾಡದಲ್ಲಿರುವ ತನ್ನ ಘಟಕದಲ್ಲಿ ಸ್ಪುಟ್ನಿಕ್ ಲಸಿಕೆಯನ್ನು ಶಿಲ್ಪಾ ಬಯೋಲಾಜಿಕಲ್ಸ್ ವರ್ಷಕ್ಕೆ 5 ಕೋಟಿ ಲಸಿಕೆಯಂತೆ ಉತ್ಪಾದಿಸಲಿದೆ. ಈ ಸಂಬಂಧ ಶಿಲ್ಪಾ ಬಯೋಲಾಜಿಕಲ್ಸ್ ಕಂಪನಿಗೆ ಡಾ. ರೆಡ್ಡೀಸ್ ಸಂಸ್ಥೆ ಸ್ಪುಟ್ನಿಕ್ ತಂತ್ರಜ್ಞಾನವನ್ನು ವರ್ಗಾವಣೆ ಮಾಡಲಿದೆ ಎಂದು ಶಿಲ್ಪಾ ಮೆಡಿಕೇರ್ ಮಾಹಿತಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com