ಬೆಂಗಳೂರು: ಗಂಡನ ಹತ್ಯೆಗೈದಿದ್ದ ಪತ್ನಿ, ಆಕೆಯ ಪ್ರಿಯಕರನ ಬಂಧನ

ಪತಿಯನ್ನು ಕೊಂದ ಆರೋಪದ ಮೇಲೆ 21 ವರ್ಷದ ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಯಲಹಂಕ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪತಿಯನ್ನು ಕೊಂದ ಆರೋಪದ ಮೇಲೆ 21 ವರ್ಷದ ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಯಲಹಂಕ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. 

ಕೊಂಡಪ್ಪ ಲೇಔಟ್'ನ ಶ್ವೇತಾ (21), ಆಕೆಯ ಪ್ರಿಯಕರ ಸುರೇಶ್ ಅಲಿಯಾಸ್ ಮೂಲಿ ಸೂರಿ (25) ಬಂಧಿತ ಆರೋಪಿಗಳಾಗಿದ್ದಾರೆ. 

ಹತ್ಯೆಯಾದ ಚಂದ್ರಶೇಖರ್ (39) ನೇಕಾರನಾಗಿದ್ದು, ಅಕ್ಟೋಬರ್ 21 ರಂದು ಮನೆಯ ಮಹಡಿಯಲ್ಲಿ ಇವರ ಶವ ಪತ್ತೆಯಾಗಿತ್ತು. ಮೃತದೇಹದ ಮೇಲೆ ಕೆಲ ಗಾಯಗಳು ಪತ್ತೆಯಾಗಿದ್ದವು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಚಂದ್ರಶೇಖರ್ ಅವರ ಪತ್ನಿ ಶ್ವೇತಾ ಹಾಗೂ ಆಕೆಯ ಪ್ರಿಯಕರನನ್ನು ಬಂಧನಕ್ಕೊಳಪಡಿಸಿದ್ದಾರೆ. 

ತನಿಖೆ ವೇಳೆ ಚಂದ್ರಶೇಖರ್ ಅವರ ಹತ್ಯೆಗೆ ಶ್ವೇತಾ ಕಾರಣ ಎಂದು ತಿಳಿದುಬಂದಿದೆ. ತನಗಿಂತ 18 ವರ್ಷ ದೊಡ್ಡವರಾಗಿದ್ದ ಚಂದ್ರಶೇಖರ್ ಅವರನ್ನು ವಿವಾಹವಾಗಲು ಶ್ವೇತಾಗೆ ಇಷ್ಟವಿರಲಿಲ್ಲ. ಹೀಗಾಗಿ ಪ್ರಿಯಕರನೊಂದಿಗೆ ಸಂಚು ರೂಪಿಸಿ ಚಂದ್ರಶೇಖರ್ ನನ್ನು ಹತ್ಯೆ ಮಾಡಿದ್ದಾಳೆಂದು ತಿಳಿದುಬಂದಿದೆ. 

ಮೂರೂವರೆ ವರ್ಷಗಳ ಹಿಂದೆ ಆಂಧ್ರಪ್ರದೇಶ ರಾಜ್ಯ ಹಿಂದೂಪುರ ತಾಲೂಕಿನ ಪೆಡಿಹಟ್ಟಿ ಗ್ರಾಮದ ಮೃತ ಚಂದ್ರಶೇಖರ್ ಹಾಗೂ ಶ್ವೇತಾ ವಿವಾಹವಾಗಿದ್ದರು. 5 ತಿಂಗಳ ಹಿಂದೆ ಯಲಹಂಕಕ್ಕೆ ಬಂದು ದಂಪತಿ ನೆಲೆಸಿದ್ದರು. ನೇಯ್ಗೆ ಕೇಂದ್ರದಲ್ಲಿ ಚಂದ್ರಶೇಖರ್ ಕೆಲಸ ಮಾಡುತ್ತಿದ್ದ. ಎಂಎಸ್ಸಿ ಓದಿದ್ದ ಶ್ವೇತಾ ಖಾಸಗಿ ಕಂಪನಿಯಲ್ಲಿ ಇಂಟರ್ನ್ ಶಿಪ್ ಮಾಡುತ್ತಿದ್ದಳು. ಮದುವೆಗೂ ಮುನ್ನ ಸುರೇಶ್ ನನ್ನು ಆಕೆ ಪ್ರೀತಿಸುತ್ತಿದ್ದಳು. ಈ ಪ್ರೀತಿಗೆ ಶ್ವೇತಾ ಪೋಷಕರ ತೀವ್ರ ವಿರೋಧವಿತ್ತು. ಬಳಿತ ತನ್ನ ಸೋದರ ಮಾವನನ್ನು ಪೋಷಕರ ಬಲವಂತಕ್ಕೆ ಕಟ್ಟುಬಿದ್ದು ಮದುವೆಯಾಗಿದ್ದಳು. ಇಂಟರ್ನ್ ಶಿಪ್ ಹಿನ್ನೆಲೆಯಲ್ಲಿ ಮದುವೆಯಾದ ಬಳಿಕವೂ ಶ್ವೇತ ಊರಿನಲ್ಲಿಯೇ ಉಳಿದುಕೊಂಡಿದ್ದಳು. ಊರಿನಲ್ಲಿಯೇ ಇದ್ದ ಶ್ವೇತ ಮದುವೆಯಾದರೂ ಪ್ರಿಯಕರನ ಜತೆ ಸಂಬಂಧ ಮುಂದುವರೆಸಿದ್ದಳು. ಈ ನಡುವೆ ಮತ್ತೊಬ್ಬ ಲೋಕೇಶ್ ಎಂಬಾತ ಶ್ವೇತಾ ಹಿಂದೆ ಬಿದ್ದಿದ್ದ. ಲೋಕೇಶ್ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೂ, ಬೆನ್ನು ಬಿಡದ ಹಿನ್ನೆಲೆಯಲ್ಲಿ ಶ್ವೇತಾಳನ್ನು ಕುಟುಂಬಸ್ಥರು ಪತಿ ಚಂದ್ರಶೇಖರ್ ಜೊತೆಗೆ ಬೆಂಗಳೂರಿಗೆ ಕಳುಹಿಸಿದ್ದರು. 

ಈ ಎಲ್ಲಾ ಬೆಳವಣಿಗೆ ನಡುವೆ ತನ್ನ ಇಷ್ಟಕ್ಕೆ ಮದುವೆ ಮಾಡದ್ದಕ್ಕೆ ಕೆರಳಿದ ಶ್ವೇತಾ, ಪ್ರೀತಿಗೆ ಅಡ್ಡಿಯಾದ ಪತಿಯನ್ನು ಕೊಂದು ಪ್ರಿಯಕರನ ಜೊತೆ ಹೊಸ ಜೀವನ ಶುರು ಮಾಡಲು ನಿರ್ಧರಿಸಿದ್ದಳು. 

ಅಂತೆಯೇ ಚಂದ್ರಶೇಖರ್ ಹತ್ಯೆಗೆ ಆರೋಪಿಗಳು ಸಂಚು ರೂಪಿಸಿದ್ದರು. ಅ.21 ರಂದು ರಾತ್ರಿ ತನ್ನ ಮನೆಗೆ ಸುರೇಶ್ ನನ್ನು ಕರೆಸಿಕೊಂಡ ಶ್ವೇತಾ ಆತನನ್ನು ಮಹಡಿ ಮೇಲಿರುವಂತೆ ಸೂಚಿಸಿದ್ದಳು. ಬಳಿಕ ಮಹಡಿಯಲ್ಲಿ ಹಾಕಿರುವ ಬಟ್ಟೆ ತೆಗೆದುಕೊಂಡು ಬರುವಂತೆ ಪತಿಗೆ ಹೇಳಿ ಒತ್ತಾಯಪೂರ್ವಕವಾಗಿ ಕಳುಹಿಸಿದ್ದಳು. ಆಗ ಮಹಡಿಗೆ ತೆರಳಿದ ಚಂದ್ರಶೇಖರ್ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಸುರೇಶ್ ಪರಾರಿಯಾಗಿದ್ದ. ಹತ್ಯೆ ಬಳಿಕ ಪೊಲೀಸ್ ಠಾಣೆಗೆ ತೆರಳಿದ್ದ ಶ್ವೇತಾ, ಲೋಕೇಶ್ ವಿರುದ್ಧ ಆರೋಪ ಮಾಡಿದ್ದಳು. 

ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ತನಿಖೆ ವೇಳೆ, ಕೊಲೆಯಾದ ಸಂದರ್ಭದಲ್ಲಿ ಲೋಕೇಶ್ ಆಂಧ್ರಪ್ರದೇಶದಲ್ಲಿದ್ದ ಕಾರಣ ಕೊಲೆಯಲ್ಲಿ ಯಾವುದೇ ಪಾತ್ರವಿಲ್ಲ ಎಂಬುದನ್ನು ಸ್ಪಷ್ಟಪಡಿಸಿಕೊಂಡಿದ್ದರು. 

ನಂತರ ಪತ್ನಿಯ ಕೈವಾಡ ಇರುವುದನ್ನು ಶಂಕಿಸಿ, ಆಕೆಯ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡರು ಮತ್ತು ಡೇಟಾವನ್ನು ಹಿಂಪಡೆಯಲು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದರು. ಬಳಿಕ ಸಿಮ್ ಕಾರ್ಡ್'ನ್ನು ಬೇರೊಂದು ಮೊಬೈಲ್ ಫೋನ್'ಗೆ ಹಾಕಿ ಸಾಕ್ಷ್ಯ ಸಿಗುವ ಆಶಯದೊಂದಿಗೆ ಕಾದು ಕುಳಿತಿದ್ದರು. 

ಪತಿಯ ಹತ್ಯೆಗೆ ಸಂಚು ರೂಪಿಸಿದ್ದ ಶ್ವೇತ ಮನೆಯ ವಿಳಾಸವನ್ನು ವಾಟ್ಸಾಪ್ ಮೂಲಕ ಪ್ರಿಯಕರ ಸುರೇಶ್ ಜೊತೆಗೆ ಹಂಚಿಕೊಂಡಿದ್ದಳು. ವಾಟ್ಸಾಪ್ ನಲ್ಲಿಯೂ ಆತನೊಂದಿಗೆ ಮಾತನಾಡಿದ್ದಳು. ಹತ್ಯೆ ಬಳಿಕ ವಾಟ್ಸಾಪ್ ಚಾಟ್ ಗಳನ್ನು ಡಿಲಿಟ್ ಮಾಡಿದ್ದಳು. ಈ ನಡುವೆ ಪರಾರಿಯಾಗಿದ್ದ ಸುರೇಶ್'ಗೆ ಪ್ರಸ್ತುತದ ಬೆಳವಣಿಗೆಗಳು ತಿಳಿದಿರಲಿಲ್ಲ.

ತಲೆಮರೆಸಿಕೊಂಡಿದ್ದ ಸುರೇಶ್ ಶ್ವೇತಾಳನ್ನು ಸಂಪರ್ಕಿಸಲು ಯತ್ನಿಸಿದ್ದಾನೆ. ವಾಟ್ಸಾಪ್ ಕಾಲ್ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನೇರವಾಗಿ ದೂರವಾಣಿ ಕರೆ ಮಾಡಿದ್ದಾನೆ. ಈ ವೇಳೆ ಸುರೇಶ್ ಇದ್ದ ಸ್ಥಳವನ್ನು ಕಂಡುಕೊಂಡ ಪೊಲೀಸರು ಪೆನುಗೊಂಡ ಬಳಿಕ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com