ಚುನಾವಣೆಯತ್ತ ಅಧಿಕಾರಿಗಳ ಚಿತ್ತ: ಒತ್ತುವರಿ ಕಾರ್ಯಾಚರಣೆ ಅಂತ್ಯ ಸಾಧ್ಯತೆ, ಮುಂದಿನ ಪ್ರವಾಹ ಪರಿಸ್ಥಿತಿವರೆಗೂ ಸ್ಥಳೀಯರು ನಿರಾಳ!
ಅತಿಕ್ರಮಣದಾರರ ಆಸ್ತಿ ಧ್ವಂಸಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ನೀಡಲು ಸಹಕರಿಸಿದ ಆರೋಪದ ಮೇಲೆ ಬೆಂಗಳೂರು ಪೂರ್ವ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರು ಅಮಾನತುಗೊಂಡಿದ್ದು, ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಒತ್ತುವರಿ ಕಾರ್ಯಾಚರಣೆ ಅಂತ್ಯಗೊಳ್ಳುವ ಸಾಧ್ಯತೆಗಳ ಕುರಿತು ಸ್ಥಳೀಯರು...
Published: 05th December 2022 12:10 PM | Last Updated: 05th December 2022 03:04 PM | A+A A-

ಬೆಂಗಳೂರು: ಅತಿಕ್ರಮಣದಾರರ ಆಸ್ತಿ ಧ್ವಂಸಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ನೀಡಲು ಸಹಕರಿಸಿದ ಆರೋಪದ ಮೇಲೆ ಬೆಂಗಳೂರು ಪೂರ್ವ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರು ಅಮಾನತುಗೊಂಡಿದ್ದು, ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಒತ್ತುವರಿ ಕಾರ್ಯಾಚರಣೆ ಅಂತ್ಯಗೊಳ್ಳುವ ಸಾಧ್ಯತೆಗಳ ಕುರಿತು ಸ್ಥಳೀಯರು, ಹೋರಾಟಗಾರರು ಹಾಗೂ ತಜ್ಞರಲ್ಲಿ ಆತಂಕ ಶುರುವಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಅಧಿಕಾರಿಗಳ ಚಿತ್ತ ಇದೀಗ ಚುನಾವಣಾ ಕರ್ತವ್ಯದತ್ತ ಹೊರಳಿದೆ. ಈ ಹಿನ್ನೆಲೆಯಲ್ಲಿ ಒತ್ತುವರಿ ಕಾರ್ಯಾಚರಣೆ ಕಾರ್ಯ ಅಂತ್ಯಗೊಳ್ಳುವ ಆತಂಕ ತಜ್ಞರು ಹಾಗೂ ಹೋರಾಟಗಾರರಲ್ಲಿ ಶುರುವಾಗಿದೆ.
ನಗರ ತಜ್ಞ ಅಶ್ವಿನ್ ಮಹೇಶ್ ಮಾತನಾಡಿ, ಸೆಪ್ಟಂಬರ್‌ನಲ್ಲಿ ಭಾರಿ ಮಳೆ ಸುರಿದ ನಂತರ ಬೆಂಗಳೂರಿನ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದರು, ಮುಂಬರುವ ಮಳೆಗಾಲದಲ್ಲೂ ಜನರು ಅದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿರಬೇಕಾಗಿದೆ. ಜನರು ತಾವು ಎಲ್ಲಿಯೇ ನೆಲೆಸಿದ್ದರೂ ಒತ್ತವರಿ ಕಾರ್ಯಾಚರಣೆ ಬಗ್ಗೆ ಕಾಳಜಿವಹಿಸಬೇಕಿದೆ. ಆಗ ಮಾತ್ರವೇ ಬಿಬಿಎಂಪಿ ತನ್ನ ಕರ್ತವ್ಯವವನ್ನು ಸೂಕ್ತವಾಗಿ ನಿಭಾಯಿಸಲು ಸಾಧ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶಿವಾಜಿನಗರಕ್ಕೆ ಸ್ಮಾರ್ಟ್ ಲುಕ್: ಜ.15ಕ್ಕೆ ಜನತೆಗೆ ಸಂಕ್ರಾಂತಿ ಉಡುಗೊರೆ ನೀಡಲು ಅಧಿಕಾರಿಗಳು ಮುಂದು!
ಬೆಂಗಳೂರು ನಿವಾಸಿಯೊಬ್ಬರು ಮಾತನಾಡಿ, ನಗರದ ಹಲವು ನಿವಾಸಿಗಳು ತಮ್ಮ ಭೂಮಿ ಹಾಗೂ ಆಸ್ತಿಪಾಸ್ತಿಗಳ ಉಳಿಸಿಕೊಳ್ಳುವ ಸಲುವಾಗಿ ಕಾರ್ಯಾಚರಣೆ ಅಂತ್ಯಗೊಳ್ಳಬೇಕೆಂದು ಬಯಸಿದ್ದಾರೆಂದು ತಿಳಿಸಿದ್ದಾರೆ.
"ಬಿಬಿಎಂಪಿ ಕೂಡ ಸಣ್ಣಪುಟ್ಟ ಭೂಮಿ ಅತಿಕ್ರಮಣದಾರರ ಮೇಲಷ್ಟೇ ಕಾರ್ಯಾಚರಣೆ ಆರಂಭಿಸಿದೆ. ಪ್ರಭಾವಿ ಮಾಲೀಕರ ಆಸ್ತಿಗಳ ಮೇಲೆ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸಿಲ್ಲ. ಕೇವಲ ಕಾಂಪೌಂಡ್ ಗೋಡೆಗಳನ್ನು ಮಾತ್ರ ಬುಲ್ಡೋಜರ್ ಬಳಸಿ ತೆಗೆದುಹಾಕಿದೆ. ಈ ಮೂಲಕ ಅಧಿಕಾರಿಗಳ ಬಳಿ ತಾವು ಗಂಭೀರವಾಗಿ ಕೆಲಸ ಮಾಡುತ್ತಿರುವುದಾಗಿ ತೋರ್ಪಡಿಸಿಕೊಂಡಿದೆಯಷ್ಟೇ. ಶೀಘ್ರದಲ್ಲೇ ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ನಿರತರಾಗುತ್ತಾರೆ. ಮುಂದಿನ ವರ್ಷ ನಗರವು ಮತ್ತೆ ಜಲಾವೃತವಾದಾಗ ಈ ಸಮಸ್ಯೆಯತ್ತ ಗಮನಹರಿಸಲಾಗುತ್ತದೆ ಎಂದು ಮತ್ತೊಬ್ಬ ನಿವಾಸಿ ಹೇಳಿದ್ದಾರೆ.
ಇದನ್ನೂ ಓದಿ: ದಂಡ ಮನ್ನಾ ಮಾಡಿ, ಬಾಡಿಗೆ ಪಡೆಯಿರಿ: ಬಿಬಿಎಂಪಿಗೆ ಶಿವಾಜಿನಗರದ ವ್ಯಾಪಾರಿಗಳ ಮನವಿ
ವೆಟ್‌ಲ್ಯಾಂಡ್ ಕಾರ್ಯಕರ್ತ ಮತ್ತು ಬೆಂಗಳೂರು ಅಜೆಂಡಾ ಫಾರ್ ಮೊಬಿಲಿಟಿ ಸಂಚಾಲಕ ಸಂದೀಪ್ ಅನಿರುಧನ್ ಅವರು ಮಾತನಾಡಿ, ಈ ವಿಧಾನವು ರೋಗಲಕ್ಷಣಗಳನ್ನು ಪರಿಹರಿಸುತ್ತದೆಯೇ ಹೊರತು ಮೂಲ ಕಾರಣವಲ್ಲ. "2010 ರಲ್ಲಿ ಮೊದಲ ಬಾರಿಗೆ ಹೊರಡಿಸಲಾದ ಮತ್ತು 2017 ರಲ್ಲಿ ಮರು ಹೊರಡಿಸಿದ ವೆಟ್ಲ್ಯಾಂಡ್ ನಿಯಮಗಳು ಎಲ್ಲಾ ಜೌಗು ಪ್ರದೇಶಗಳನ್ನು ಗುರುತಿಸಲು, ರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸಲು ರಾಜ್ಯ ವೆಟ್ಲ್ಯಾಂಡ್ ಪ್ರಾಧಿಕಾರವನ್ನು ರಚಿಸಬೇಕು ಎಂದು ಸ್ಪಷ್ಟವಾಗಿ ಆದೇಶಿಸುತ್ತದೆ. ಅದನ್ನು ಜಾರಿಗೆ ತರಲು ಸರ್ಕಾರ ಏಕೆ ಇಷ್ಟು ಸಮಯ ತೆಗೆದುಕೊಳ್ಳುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಬಿಬಿಎಂಪಿ, ಎಸ್‌ಡಬ್ಲ್ಯುಡಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮಾಲತಿ ಆರ್ ಅವರು ಮಾತನಾಡಿ, ಪಾಲಿಕೆಯು ಕೆಲವು ಪ್ರಕರಣಗಳಲ್ಲಿ ವಿಚಾರಣೆ ಮುಕ್ತಾಯಗೊಳ್ಳಲು ಕಾಯುತ್ತಿದೆ ಮತ್ತು ಬೆಂಗಳೂರು ಪೂರ್ವ ತಾಲ್ಲೂಕಿನ ಪಾಣತ್ತೂರು, ಚಲ್ಲಘಟ್ಟ, ಬೆಳತ್ತೂರು, ಬೆಳ್ಳಂದೂರು, ಕಲ್ಕೆರೆ ಮತ್ತು ಇತರ ಗ್ರಾಮಗಳಲ್ಲಿ ಅಧಿಕಾರಿಗಳು ಕಾರ್ಯಾಚರಣ ನಡೆಸುತ್ತಿದ್ದಾರೆ. “ಮರು ಸಮೀಕ್ಷೆ ವರದಿಯನ್ನು ತಹಶೀಲ್ದಾರ್ ಪರಿಶೀಲಿಸಬೇಕು. ಮಳೆನೀರು ಚರಂಡಿ ಒತ್ತುವರಿ ಮಾಡಿಕೊಂಡಿರುವ ಮಾಲೀಕರನ್ನು ವಿಚಾರಣೆ ವೇಳೆ ಸಮನ್ಸ್ ಜಾರಿಗೊಳಿಸಬೇಕು. ನಂತರ ಕಾರ್ಯಾಚರಣೆ ನಡೆಸಬಹುದಾಗಿದೆ ಎಂದು ಹೇಳಿದ್ದಾರೆ.