ಕೋವಿಡ್ ಜೊತೆಗೆ ರಾಜ್ಯದಲ್ಲಿ ಹೆಚ್ಚಿದ ಫ್ಲೂ ವೈರಸ್ ಗಳ ಕಾಟ: ಆತಂಕ ಬೇಡ, ಎಚ್ಚರಿಕೆ ವಹಿಸಿ ಎಂದ ಆರೋಗ್ಯ ಇಲಾಖೆ!

ಕೋವಿಡ್ ಸಾಂಕ್ರಾಮಿಕ ರೋಗವು ಜಗತ್ತನ್ನು ಅಪ್ಪಳಿಸಿದಾಗಿನಿಂದಲೂ ಒಂದಲ್ಲ ಒಂದು ರೀತಿ ವಿಕಸನಗೊಂಡು ಸಂಕಷ್ಟವನ್ನು ತಂದಿಡುತ್ತಲೇ ಇದೆ. SARS-CoV-2 ವೈರಸ್. XBB 1.16 ರೂಪಾಂತರಗಳಾಯಿತು. ಇದೀಗ ಫ್ಲೂ ವೈರಸ್ ಗಳ ಕಾಟ ಹೆಚ್ಚಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗವು ಜಗತ್ತನ್ನು ಅಪ್ಪಳಿಸಿದಾಗಿನಿಂದಲೂ ಒಂದಲ್ಲ ಒಂದು ರೀತಿ ವಿಕಸನಗೊಂಡು ಸಂಕಷ್ಟವನ್ನು ತಂದಿಡುತ್ತಲೇ ಇದೆ. SARS-CoV-2 ವೈರಸ್. XBB 1.16 ರೂಪಾಂತರಗಳಾಯಿತು. ಇದೀಗ ಫ್ಲೂ ವೈರಸ್ ಗಳ ಕಾಟ ಹೆಚ್ಚಾಗಿದೆ.

ಫ್ಲೂ ವೈರಸ್ ಗಳಿಂದ ಆತಂಕ ಉಲ್ಬಣಗೊಳ್ಳುತ್ತಿದ್ದು, ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೆಲ ದಿನಗಳ ಹಿಂದಷ್ಟೇ ಉನ್ನತ ಮಟ್ಟದ ಸಭೆ ಕರೆ, ಆಯಾ ರಾಜ್ಯಗಳಿಗೆ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.

ರಾಜ್ಯದಲ್ಲಿ ಸಾರಿ, ಐಎಲ್ಐ, H3N2 ವೈರಸ್, H1N1 (ಹಂದಿ ಜ್ವರ) ಮತ್ತು ಅಡೆನೊವೈರಸ್ ಸೋಂಕು ಪ್ರಕರಣಗಳು ಹೆಚ್ಚಾಗಿದ್ದು, ಸಾಕಷ್ಟು ಜನರನ್ನು ಬಾಧಿಸುತ್ತಿದೆ.

ಜನವರಿ ಆರಂಭಿಕ ವಾರಗಳಲ್ಲಿ ಹವಾಮಾನ ಬದಲಾವಣೆಗಳು ಕಂಡು ಬಂದ ಬೆನ್ನಲ್ಲೇ, ಫ್ಲೂ ವೈರಸ್ ಆರ್ಭಟ ಹೆಚ್ಚಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಎರಡಲ್ಲೂ ಜ್ವರ ಹಾಗೂ ಕೋವಿಡ್ ರೀತಿಯ ಲಕ್ಷಣಗಳಿಂದಾಗಿ ದಾಖಲಾಗುತ್ತಿರುವ ಸಂಖ್ಯೆಯಲ್ಲಿ ಹೆಚ್ಚಳಗಳು ಕಂಡು ಬಂದಿದೆ.

ಆರೋಗ್ಯ ಇಲಾಖೆ ಹೈ ಅಲರ್ಟ್
ಫ್ಲೂ ವೈರಸ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಫ್ಲೂ ವೈರಸ್ ಜೊತೆಗೆ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಕೂಡ ಹೆಚ್ಚಳವಾಗುವ ಸಾಧ್ಯತೆಗಳಿವೆ. ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ದ ಮಾಹಿತಿಯ ಪ್ರಕಾರ, ಜನವರಿಯಿಂದ ಮಾರ್ಚ್‌ವರೆಗೆ 349 ಮಾದರಿಗಳಲ್ಲಿ XBB 1.16 ರೂಪಾಂತರದೊಂದಿಗಳು ಕಂಡು ಬಂದಿವೆ ಎಂದು ಹೇಳಿದೆ.

ಕೇಂದ್ರ ಸರ್ಕಾರದ ಆರೋಗ್ಯ ಮಾಹಿತಿ ಪೋರ್ಟಲ್'ನಲ್ಲಿ ಕರ್ನಾಟಕದಲ್ಲಿ ಜನವರಿಯಿಂದ ಇಲ್ಲಿಯವರೆಗೆ 70,000 ಸಾರಿ ಹಾಗೂ ಐಎಲ್ಐ ಪ್ರಕರಣಗಳು ಕಂಡು ಬಂದಿದೆ ಎಂದು ಹೇಳಿದೆ.

XBB 1.16 ರೂಪಾಂತರದ ಮೊದಲ ಪ್ರಕರಣವು ಜನವರಿಯಲ್ಲಿ ಪತ್ತೆಯಾಗಿತ್ತು. ತಂದ ನಂತರ ರಾಜ್ಯದಲ್ಲಿ 61 ಪ್ರಕರಣಗಳು ಪತ್ತೆಯಾದವು. ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲೂ ಈ ಸೋಂಕು ಹೆಚ್ಚಾಗಿ ಕಂಡು ಬಂದಿದೆ.

ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಪೂರೈಕೆಯನ್ನು ಹೆಚ್ಚಿಸುವಂತೆ ರಾಜ್ಯ ಆರೋಗ್ಯ ಇಲಾಖೆ ಕೇಂದ್ರಕ್ಕೆ ಮನವಿ ಮಾಡಿದೆ.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (BMCRI) ವೈದ್ಯರು ಕಳೆದ ಕೆಲವು ವಾರಗಳಲ್ಲಿ, ರೂಪಾಂತರಗಳಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿವೆ ಎಂದು ಹೇಳಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಸಾರಿ/ಐಎಲ್ಐ ಪ್ರಕರಣಗಳಲ್ಲಿ ಹೆಚ್ಚಳ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾರಿ ಹಾಗೂ ಐಎಲ್ಐ ಪ್ರಕರಣಗಳಲ್ಲಿ ಹೆಚ್ಚಳಗಳು ಕಂಡು ಬಂದಿವೆ. ಹಲವಾರು ವಾರಗಳ ಬಳಿಕ ಸಕ್ರಿಯ ಪ್ರಕರಣಗಳಲ್ಲಿ ಹೆಚ್ಚಳಗಳುಕಂಡು ಬಂದಿದೆ. ಇದರ ಜೊತೆಗೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡು ಬಂದಿದೆ. ರಾಜ್ಯದಲ್ಲಿ ಒಟ್ಟು 600 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 400 ಸಕ್ರಿಯ ಪ್ರಕರಣಗಳು ಬೆಂಗಳೂರು ನಗರವೊಂದರಲ್ಲೇ ದಾಖಲಾಗಿದೆ. ಇದರೊಂದಿಗೆ ಪಾಸಿಟಿವಿಟಿ ದರ ಶೇ.8ರ ಗಡಿ ದಾಟಿದೆ. ಮಾರ್ಚ್ ವೊಂದರಲ್ಲಿಯೇ ನಗರದಲ್ಲಿ ಕೋವಿಡ್ ನಿಂದಾಗಿ 3 ಸಾವುಗಳು ವರದಿಯಾಗಿವೆ.

ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ಮಾತನಾಡಿ, ಕಳೆದ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಕೋವಿಡ್ ಜೊತೆಗೆ ಎಚ್3ಎನ್2 ಮತ್ತು ಎಚ್1ಎನ್1 ಪ್ರಕರಣಗಳಲ್ಲಿ ಹೆಚ್ಚಳಗಳು ಕಂಡು ಬಂದಿದೆ ಎಂದು ಹೇಳಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ತಮಿಳುನಾಡು ಮತ್ತು ಕೇರಳದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಇದ್ದು, ಐಸಿಯು ದಾಖಲಾತಿಯಲ್ಲಿ ಹೆಚ್ಚಳಗಳು ಕಂಡುಬಂದಿರುವುದು ಕಳವಳಕಾರಿ ವಿಚಾರವಾಗಿದೆ ಎಂದು ತಿಳಿಸಿದ್ದಾರೆ.

ILI/SARI ವೈರಸ್‌ಗಳು SARS-COV-2 ನಂತಹ ಗುಣಗಳನ್ನು ಹೊಂದಿಲ್ಲ. ಇದರಿಂದ ಸಾವುಗಳು ಕಡಿಮೆ. ತೀವ್ರತರ ಪರೀಕ್ಷೆಯು ಸೋಂಕಿತ ವ್ಯಕ್ತಿಯಲ್ಲಿ ವಿವಿಧ ವೈರಸ್‌ಗಳನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತದೆ. ಇದರೊಂದಿಗೆ ಸೋಂಕನ್ನು ನಿಯಂತ್ರಿಸಬಹುದು. ಬೇಸಿಗೆ ಸಂಪೂರ್ಣವಾಗಿ ಪ್ರಾರಂಭವಾದ ನಂತರ ಸೋಂಕು ಪ್ರಕರಣಗಳು ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.

ಆರೋಗ್ಯ ತಜ್ಞರು ಮಾತನಾಡಿ, H3N2 ಮತ್ತು H1N1 ವೈರಸ್‌ಗಳ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಈ ಸೋಂಕುಗಳು ಸಾಮಾನ್ಯವಾಗಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರ ಮೇಲೆ ಪರಿಣಾಮ ಬೀರುತ್ತವೆ. ಹೆಚ್ಚಿನ ಜನರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿರುವುದರಿಂದ ಆತಂಕಕ್ಕೆ ಯಾವುದೇ ಕಾರಣವಿಲ್ಲ ಎಂದು ಹೇಳಿದ್ದಾರೆ.

ಕೆಸಿ ಜನರಲ್ ಆಸ್ಪತ್ರೆಯ ಡಾ.ಲಕ್ಷ್ಮೀಪತಿ ಮಾತನಾಡಿ, ಬಹುತೇಕ ಆಸ್ಪತ್ರೆಗಳು ಎಲ್ಲಾ ಮಾದರಿಗಳನ್ನು ಪರೀಕ್ಷಿಸುತ್ತಿಲ್ಲ ಏಕೆಂದರೆ, ಇದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಪರೀಕ್ಷಾ ವೆಚ್ಚ ದುಬಾರಿಯಾಗಿದೆ. ರೋಗಿಗಳ ರೋಗಲಕ್ಷಣಗಳನ್ನು ನೋಡಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಪ್ರಕರಣಗಳನ್ನು ಮಾತ್ರ ದಾಖಲಿಸಿಕೊಳ್ಳಲಾಗುತ್ತಿದೆ. ಹೀಗಾಗಿಯೇ ಸೋಂಕು ಪ್ರಕರಣಗಳಲ್ಲಿ ಕಡಿಮೆ ಸಂಖ್ಯೆಗಳು ಕಂಡು ಬರುತ್ತಿವೆ ಎಂದು ಹೇಳಿದ್ದಾರೆ.

ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಆತಂಕ ಬೇಡ: ಸಚಿವ ಸುಧಾಕರ್
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಆರೋಗ್ಯ ಇಲಾಖೆ ತೀವ್ರ ನಿಗಾ ಇರಿಸಿದ್ದು, ನಾಗರಿಕರು ಭಯಭೀತರಾಗದೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಆರೋಗ್ಯ ಕಾರ್ಯಕರ್ತರು ಮತ್ತು ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಎಲ್ಲರಿಗೂ ಮಾಸ್ಕ್'ನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ಫ್ಲುಯೆನ್ಸ ವೈರಸ್ ಕುರಿತು ಮಾತನಾಡಿ, ಆರೋಗ್ಯ ಅಧಿಕಾರಿಗಳು ಪರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಈ ಪರೀಕ್ಷೆಗಲನ್ನು ಕೈಗೆಟುಕುವ ರೀತಿ ಮಾಡಲಾಗಿದೆ. ಇನ್‌ಫ್ಲುಯೆನ್ಸ ವಿರೋಧಿ ಲಸಿಕೆ ದುಬಾರಿಯಾಗಿರುವುದರಿಂದ ಮತ್ತು ಪ್ರತಿ ವರ್ಷ ಈ ಲಸಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಸಾರ್ವತ್ರಿಕ ಪ್ರತಿರಕ್ಷಣೆ ಕಾರ್ಯಕ್ರಮದಲ್ಲಿ ಈ ಲಸಿಕೆಯನ್ನು ಸೇರ್ಪಡೆಗೊಳಿಸಲಾಗಿಲ್ಲ. ಜನರಿಗೆ ಲಸಿಕೆಯನ್ನು ಪಡೆಯಲು ಸಾಧ್ಯವಾದರೆ ಈ ಲಸಿಕೆಯನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ವಾರದೊಳಗೆ ಗುಣಮುಖವಾಗಬಹುದು: ವೈದ್ಯರು
ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯ ಸಾಂಕ್ರಾಮಿಕ ರೋಗ ಮತ್ತು ಟ್ರಾವೆಲ್ ಮೆಡಿಸಿನ್ ಸಲಹೆಗಾರರಾದ ಡಾ ಸ್ವಾತಿ ರಾಜಗೋಪಾಲ್ ಅವರು ಮಾತನಾಡಿ, ಓಮಿಕ್ರಾನ್ ಸಂತತಿಗಳಾದ ಎಕ್ಸ್‌ಬಿಬಿ 1.15 ಮತ್ತು ಎಕ್ಸ್‌ಬಿಬಿ 1.16 ಯಿಂದಾಗಿ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರಬಹುದು. ಆದರೆ, ಈ ಸೋಂಕುಗಳು ವಾರಗಳಲ್ಲಿ ಕಡಿಮೆಯಾಗಲಿದೆ. ಆದರೆ, ರೋಗ ನಿರೋಧಕ ಶಕ್ತಿ ಇಲ್ಲಿ ಪ್ರಮುಖ ಅಂಶವಾಗಲಿದೆ ಎಂದು ಹೇಳಿದ್ದಾರೆ.

ಕೋವಿಡ್-19, ಇನ್ಫ್ಲುಯೆನ್ಸ A, B ಮತ್ತು ಉಪ-ವೇರಿಯಂಟ್ H3N2 ಜೊತೆಗೆ ಸಿನ್ಸಿಟಿಯಲ್ ವೈರಸ್ (RSV) ಮತ್ತು ಅಡೆನೊವೈರಸ್ ಸೋಂಕುಗಳು ಕಳೆದ ತಿಂಗಳು ಹೆಚ್ಚು ವರದಿಯಾಗಿವೆ. ಕೋವಿಡ್‌ಗೆ ಹೆಚ್ಚು ಒತ್ತು ನೀಡಿದ್ದರಿಂದ ಕಳೆದ ಮೂರು ವರ್ಷಗಳಿಂದ ಇನ್ಫ್ಲುಯೆನ್ಸ ಪ್ರಕರಣಗಳತ್ತ ಗಮನಹರಿಸಲಾಗಿರಲಿಲ್ಲ ಎಂದು ತಿಳಿಸಿದ್ದಾರೆ.

"ಇಲ್ಲಿಯವರೆಗೆ, ವರದಿಯಾದ ಹೆಚ್ಚಿನ ಪ್ರಕರಣಗಳು ಸೌಮ್ಯವಾದ ಲಕ್ಷಣಗಳು ಹೊಂದಿರುವುದು ಕಂಡು ಬಂದಿವೆ. ಹೀಗಾಗಿ ಈ ಸೋಂಕುಗಳು ವಾರದೊಳಗೆ ಕಡಿಮೆಯಾಗಲಿವೆ. ಆದಾಗ್ಯೂ, ರೋಗ ನಿರೋಧ ಶಕ್ತಿ ಕಡಿಮೆ ಹೊಂದಿರುವವರು, ಇತರೆ ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವವರು ಹೆಚ್ಚು ಜಾಗರೂಕರಾಗಿರಬೇಕಿದೆ. ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಿದ್ದಾರೆ.

ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆದುಕೊಳ್ಳಬೇಕು. ಸೋಂಕು ತಪ್ಪಿಸಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರಗಳನ್ನು ಕಾಯ್ದುಕೊಳ್ಳುವುದು, ಹೆಚ್ಚು ಜನರು ಸೇರುವ ಕಡೆ ಹೋಗದಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಚಳಿಗಾಲದಲ್ಲಿ ಉಸಿರಾಟ ವೈರಲ್ ಸೋಂಕುಗಳು ಸಾಮಾನ್ಯವಾಗಿರುತ್ತವೆ. ಈ ಸಮಯದಲ್ಲಿ ಎಚ್ಚರವಾಗಿರುವುದು ಅತ್ಯಗತ್ಯ. ಆದರೆ, ಆತಂಕ ಪಡಬಾರದು. ಮುಂಜಾಗ್ರಾತ ಕ್ರಮಗಳ ಕೈಗೊಳ್ಳಬೇಕು ಎಂದಿದ್ದಾರೆ.

ಸಕ್ರಾ ವರ್ಲ್ಡ್ ಆಸ್ಪತ್ರೆಯ ವಿಭಾಗದ ಮುಖ್ಯಸ್ಥ (ಪೀಡಿಯಾಟ್ರಿಕ್ಸ್) ಡಾ ರಜತ್ ಅಥ್ರೇಜಾ ಮಾತನಾಡಿ, ಹೆಚ್ಚಿನ ರೋಗಿಗಳು ಜ್ವರ, ನೆಗಡಿ ಮತ್ತು ಕೆಮ್ಮಿನ ಲಕ್ಷಣಗಳನ್ನು ಹೊಂದಿದ್ದಾರೆ. ಜನವರಿಯಲ್ಲಿ ಐಎಲ್‌ಐ ರೋಗಲಕ್ಷಣಗಳೊಂದಿಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳಗಳು ಕಂಡು ಬಂದಿವೆ. ದಿನಕ್ಕೆ ಸುಮಾರು 100 ರೋಗಿಗಳು ಶೀತ, ಕೆಮ್ಮು ಮತ್ತು ಜ್ವರದಂತಹ ಲಕ್ಷಣಗಳೊಂದಿಗೆ ಬರುತ್ತಿದ್ದರು. ಆದಾಗ್ಯೂ, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕಡಿಮೆಯೇ ಇದೆ. ಗಂಭೀರ ಲಕ್ಷಣಗಳಿರುವವರನ್ನು ಮಾತ್ರ ದಾಖಲು ಮಾಡಿಕೊಂಡು ಪರೀಕ್ಷೆಗೊಳಪಡಿಸಲಾಗಿದೆ ಎಂದು ಹೇಳಿದ್ದಾರೆ.

ಮಾರ್ಚ್ 10 ರಂದು ಭಾರತದಲ್ಲಿ H3N2 ವೈರಸ್‌ನಿಂದ ರಾಜ್ಯದಲ್ಲಿ ಮೊದಲ ಸಾವು ವರದಿಯಾಗಿತ್ತು. ಹಾಸನದ 87 ವರ್ಷದ ವ್ಯಕ್ತಿಯೊಬ್ಬರು ಮಾರ್ಚ್ 1 ರಂದು ಸಾವನ್ನಪ್ಪಿದ್ದು. ವ್ಯಕ್ತಿಯಲ್ಲಿ ಜ್ವರ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಗಳು ಕಂಡು ಬಂದಿತ್ತು. ವ್ಯಕ್ತಿಯು ಅಸ್ತಮಾ ಮತ್ತು ಇತರೆ ದೀರ್ಘಕಾಲಿಕ ರೋಗ. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಜನವರಿಯಿಂದ ಮಾರ್ಚ್ 2023 ರವರೆಗೆ 16 H3N2 ಪ್ರಕರಣಗಳು ಮತ್ತು 2018 ರಿಂದ ಮಾರ್ಚ್ 2023 ರವರೆಗೆ 4,700 H1N1 ಪ್ರಕರಣಗಳನ್ನು ವರದಿಯಾಗಿವೆ. ಒಟ್ಟಾರೆಯಾಗಿ, 201 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಭಾರತದ ಮೊದಲ ಕೋವಿಡ್ ಸಾವು ರಾಜ್ಯದಲ್ಲಿಯೂ ವರದಿಯಾಗಿತ್ತು, ಮಾರ್ಚ್ 10, 2020 ರಂದು ಕಲಬುರಗಿಯ 76 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

ಐಎಲ್‌ಐ ಹಾಗೂ ಸಾರಿ ಪ್ರಕರಣಗಳಿಗೆ ಇರುವ ವ್ಯತ್ಯಾಸವೇನು..?
ಕೊರೊನಾ ವೈರಸ್‌ ಸೋಂಕು ಹರಡಲು ಶುರುವಾದಾಗಿನಿಂದ ಕೇಳಿಬರುತ್ತಿರುವ ಶಬ್ಧವೇ ಈ ಐಎಲ್ಐ ಹಾಗೂ ಸಾರಿ. ಆದರೆ, ಈ ಶಬ್ದಗಳನ್ನು ಮೊದಲಿನಿಂದಲೂ ವೈದ್ಯಕೀಯ ವಿಭಾಗದಲ್ಲಿ ಬಳಸುತ್ತಾರೆ. ಇವೆರಡೂ ಕೂಡಾ ಕಫ, ಉಸಿರಾಟದ ಸಮಸ್ಯೆ ಗುರುತಿಸಲು ಬಳಸುವ ಶಬ್ದ. ಹಾಗಾಗಿ ಐಎಲ್‌ ಐ ಹಾಗೂ ಸಾರಿ ಪ್ರಕರಣಗಳ ಬಗ್ಗೆ ಕೆಲವರಿಗೆ ಗೊಂದಲವಿದೆ. ಆದರೆ ಇವರೆಡೂ ಹೆಚ್ಚು-ಕಡಿಮೆ ಒಂದೇ ಲಕ್ಷಣದ ಪ್ರಮಾಣೀಕರಣವಾಗಿದೆ ಎಂಬುದನ್ನು ಸಹ ನಾವು ತಿಳಿದುಕೊಳ್ಳಬೇಕು.

ಸಾರಿ/ಐಎಲ್ಐ ನಿಂದ ಬಳಲುತ್ತಿರುವ ವ್ಯಕ್ತಿಯ ಸೀನು ಅಥವಾ ಉಗುಳುವಿಕೆಯ ಸಣ್ಣ ಹನಿ ಮತ್ತೊಬ್ಬ ವ್ಯಕ್ತಿಯ ಮೇಲೆ ಬಿದ್ದರೂ, ಆತ ಕೂಡ ಸೋಂಕಿಗೊಳಗಾಗುತ್ತಾರೆ. ಇದು ಕೂಡ ಸಾಂಕ್ರಾಮಿಕ ರೋಗವಾಗಿದೆ. ಈ ಸೋಂಕು ಸಾಮಾನ್ಯವಾಗಿ 5-7 ದಿನಗಳ ಕಾಲ ಇರುತ್ತವೆ. ರೋಗ ಲಕ್ಷಣ ತೀವ್ರತರವಾಗಿರದ ಕಾರಣ ಮರಣ ಪ್ರಮಾಣ ಕಡಿಮೆಯಿರುತ್ತದೆ. ಆದರೆ, ನವಜಾತ ಶಿಶು, ವೃದ್ಧರು, ಗರ್ಭಿಣಿಯರು ಹಾಗೂ ದೀರ್ಘಕಾಲಿಕ ರೋಗದಿದ ಬಳಲುತ್ತಿರುವವರು ಸೋಂಕಿಗೊಳಗಾದರೆ, ಹೆಚ್ಚು ಅಪಾಯಕ್ಕೆ ಸಿಲುಕುತ್ತಾರೆ.

BB 1.16 ಎಂದರೇನು? ಸೋಂಕಿಗೊಳಗಾದರೆ ಆಂತಕ ಪಡಬೇಕೇ?
XBB 1.16ಯ ರೂಪಾಂತರಿ ವೈರಲ್ BB 1.16 ಆಗಿದೆ. ಪ್ರಸ್ತುತ ಭಾರತ ಮತ್ತು ವಿದೇಶಗಳಲ್ಲಿ ತಲೆದೋರಿರುವ ಕೋವಿಡ್‌ನ ಅನೇಕ XBB ವಂಶಾವಳಿಗಳಲ್ಲಿ ಇದೂ ಕೂಡ ಒಂದಾಗಿದೆ. ಈ ಹೊಸ ರೂಪಾಂತರವು ಹೆಚ್ಚು ಸಾಂಕ್ರಾಮಿಕವಾಗಿದೆ. ಇದು ಮನುಷ್ಯನಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಇದರ ಲಕ್ಷಣಗಳೆಂದರೆ, ಮೂಗು ಕಟ್ಟುವುದು, ಗಂಟಲು ನೋವು, ತಲೆನೋವು, ಜ್ವರ, ಸ್ನಾಯು ನೋವು ಮತ್ತು ಇತರ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ ಎಂದರು ತಜ್ಞರು ಮಾಹಿತಿ ನೀಡಿದ್ದಾರೆ.

ಆದರೆ, ಈ ಸೋಂಕಿಗೊಳಗಾದವರು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುವುದಿಲ್ಲ. 5-7 ದಿನಗಳಲ್ಲಿ ಗುಣಮುಖರಾಗುತ್ತಾರೆಂದು ವೈದ್ಯರು ಹೇಳಿದ್ದಾರೆ. ಆದರೆ, ವಯಸ್ಸಾದವರು ಹೆಚ್ಚು ಜಾಗರೂಕರಾಗಿರಬೇಕೆಂದು ಸಲಹೆ ನೀಡಿದ್ದಾರೆ.

ಈ ರೀತಿ ಎಚ್ಚರಿಕೆ ವಹಿಸಿ...

  • ಕೆಮ್ಮುವಾಗ/ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ
  • ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ಕೈಗಳನ್ನು ತೊಳೆಯಿರಿ
  • ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಿ ಹಾಗೂ ಹೆಚ್ಚೆಚ್ಚು ಜನಸಂದಣಿ ಇರುವ ಪ್ರದೇಶಗಳಿಗೆ ಹೋಗುವುದನ್ನು ನಿಯಂತ್ರಿಸಿ.
  • ಹೆಚ್ಚೆಚ್ಚು ನೀರು ಕುಡಿಯಿರಿ, ಪೌಷ್ಟಿಕ ಆಹಾರವನ್ನು ಸೇವಿಸಿ
  • ಕಣ್ಣು ಮತ್ತು ಮೂಗನ್ನು ಆಗಾಗ್ಗೆ ಮುಟ್ಟುವುದನ್ನು ತಪ್ಪಿಸಿ
  • ಸಾರ್ವಜನಿಕವಾಗಿ ಉಗುಳಬೇಡಿ
  • ಒಟ್ಟಿಗೆ ಕೂತು ಊಟ ಮಾಡಬೇಡಿ
  • ವೈದ್ಯರನ್ನು ಸಂಪರ್ಕಿಸದೆ ಆ್ಯಂಟಿಬಯೋಟಿಕ್ಸ್ ಗಳನ್ನು ತೆಗೆದುಕೊಳ್ಳಬೇಡಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com