ನಟ ದ್ವಾರಕೀಶ್ ವಿಧಿವಶ: ಸಿಎಂ, ಡಿಸಿಎಂ ಸೇರಿ ಹಲವು ಗಣ್ಯರ ಸಂತಾಪ

ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್ ಅವರು ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್ ಅವರು ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಟ, ನಿರ್ದೇಶಕ, ನಿರ್ಮಾಪಕರಾಗಿ ಬಹುಕಾಲ ಕನ್ನಡ ಚಿತ್ರರಂಗದ ಸೇವೆಗೈದ ಕನ್ನಡಿಗರ ಪ್ರೀತಿಯ 'ಪ್ರಚಂಡ ಕುಳ್ಳ' ದ್ವಾರಕೀಶ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಡಾ. ರಾಜ್‌ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರಂತಹ ಮೇರು ನಟರೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದರೂ ಹಾಸ್ಯಭರಿತ ನಟನೆಯ ಮೂಲಕ ನೋಡುಗರ ಮನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ದ್ವಾರಕೀಶ್ ಅವರ ನಿಧನದಿಂದ ಕನ್ನಡ ಚಿತ್ರರಂಗ ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.

ಡಿಕೆ.ಶಿವಕುಮಾರ್ ಅವರು ಟ್ವೀಟ್ ಮಾಡಿ, ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾದ ಶ್ರೀ ದ್ವಾರಕೀಶ್‌ ಅವರು ನಿಧನರಾದ ಸಂಗತಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಯಿತು. 1964ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ಹಾಸ್ಯ ಕಲಾವಿದ, ನಾಯಕ ಹಾಗೂ ಪೋಷಕ ನಟನಾಗಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕನ್ನಡ ಚಿತ್ರರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿದ ದ್ವಾರಕೀಶ್‌ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಭಗವಂತನು ಅವರ ಕುಟುಂಬಕ್ಕೆ ಅಗಲಿಕೆಯ ನೋವು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ಬಂಗಲೆ ಶಾಮ ರಾವ್ ದ್ವಾರಕನಾಥ್, ದ್ವಾರಕೀಶ್ ಆಗಿದ್ದು ಹೇಗೆ?

ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಟ್ವೀಟ್ ಮಾಡಿ, ಕನ್ನಡ ಚಿತ್ರರಂಗ ಕಂಡ ಖ್ಯಾತ ಕಲಾವಿದ, ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಶ್ರೀ ದ್ವಾರಕೀಶ್ ವಿಧಿವಶರಾದ ಸುದ್ದಿ ಅತ್ಯಂತ ಆಘಾತ ಉಂಟುಮಾಡಿದೆ. ನಾಡಿನ ದಿಗ್ಗಜ ಕಲಾವಿದರೊಂದಿಗೆ ನಟಿಸಿ, ಅವರ ಸಿನಿಮಾಗಳನ್ನು ನಿರ್ಮಿಸಿದ್ದ ದ್ವಾರಕೀಶ್ ಅವರ ನಿಧನದಿಂದ ಚಿತ್ರರಂಗ ಒಬ್ಬ ಸಾಧಕ ಕಲಾವಿದನನ್ನು ಕಳೆದುಕೊಂಡಿದೆ. ಅಗಲಿದ ಆ ಹಿರಿಯ ಕಲಾಚೇತನಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರಿಗೆ, ಆಪ್ತೇಷ್ಟರಿಗೆ, ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ದಯಪಾಲಿಸಲಿ ಎಂದು ಕೋರುತ್ತೇನೆ. ಓಂ ಶಾಂತಿ ಎಂದು ತಿಳಿಸಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್'ಡಿ.ಕುಮಾರಸ್ವಾಮಿಯವರು ಟ್ವೀಟ್ ಮಾಡಿ, ಕನ್ನಡದ ಹಿರಿಯ ನಟರಾದ ಶ್ರೀ ದ್ವಾರಕೀಶ್ ಅವರ ಅಗಲಿಕೆ ನನಗೆ ಬಹಳ ನೋವುಂಟು ಮಾಡಿದೆ. ಕಲಾವಿದರಾಗಿ ಅಷ್ಟೇ ಅಲ್ಲದೆ; ನಿರ್ಮಾಪಕರಾಗಿ, ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಅವರು ಸಲ್ಲಿಸಿರುವ ಅನುಪಮ ಸೇವೆ ಆವಿಸ್ಮರಣೀಯ.

ವರನಟ ಡಾ. ರಾಜ್‌ಕುಮಾರ್‌, ಡಾ. ವಿಷ್ಣುವರ್ಧನ್‌, ಶ್ರೀ ಅಂಬರೀಶ್‌ರಂಥ ದಿಗ್ಗಜರ ಜತೆ ನಟಿಸಿದ್ದ ಅವರು, ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಿನಿಮಾ ಅಸ್ತಿಯಾಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ

ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ಟ್ವೀಟ್ ಮಾಡಿ, ಕನ್ನಡ ಸಿನಿಮಾ ರಂಗದಲ್ಲಿ ಹಲವು ಪ್ರಥಮಗಳಿಗೆ ಎದೆಯೊಡ್ಡಿದ ಸಾಹಸಿ ನಿರ್ಮಾಪಕ, ನಿರ್ದೇಶಕ, ಅಪ್ರತಿಮ ನಟ, ನಮ್ಮೆಲ್ಲರ ಪ್ರೀತಿಯ "ಕರ್ನಾಟಕದ ಪ್ರಚಂಡ ಕುಳ್ಳ" ಶ್ರೀ ದ್ವಾರಕೀಶ್ ಅವರ ನಿಧನದ ಸುದ್ದಿ ತೀವ್ರ ಬೇಸರ ತಂದಿದ್ದು, ಕನ್ನಡ ಚಿತ್ರರಂಗದ ಹಿರಿಯ ಕೊಂಡಿಯೊಂದು ಕಳಚಿ ಬಿದ್ದಂತಾಗಿದೆ. ದ್ವಾರಕೀಶ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರು, ಬಂಧು-ಮಿತ್ರರು ಹಾಗೂ ಅಭಿಮಾನಿಗಳಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಟ್ವೀಟ್ ಮಾಡಿ, ಕನ್ನಡ ಚಿತ್ರರಂಗಕ್ಕೆ ಮರೆಯಲಾರದ ಕೊಡುಗೆಗಳನ್ನು ನೀಡಿರುವ ನಟ, ನಿರ್ಮಾಪಕ, ನಿರ್ದೇಶಕ ಶ್ರೀ ದ್ವಾರಕೀಶ್ ಅವರ ಅಗಲಿಕೆ ಸುದ್ದಿ ಕೇಳಿ ಮನಸ್ಸಿಗೆ ತುಂಬ ನೋವುಂಟಾಯಿತು. ಹಾಸ್ಯ ಕಲಾವಿದರಾಗಿ, ಪೋಷಕ ನಟರಾಗಿ ನೂರಾರು ಚಲನ ಚಿತ್ರಗಳಲ್ಲಿ ನಟಿಸಿರುವ ಇವರ ಅಗಲಿಕೆ ಕರುನಾಡಿಗೆ, ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ಹಾಗೂ ಅಭಿಮಾನಿ ಬಳಗಕ್ಕೆ ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುವೆ. ಓಂ ಶಾಂತಿ ಎಂದು ಹೇಳಿದ್ದಾರೆ.

ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಟ್ವೀಟ್ ಮಾಡಿ, ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಶ್ರೀ ದ್ವಾರಕೀಶ್ ಅವರ ನಿಧನದ ಸಂಗತಿ ತಿಳಿದು ಮನಸ್ಸಿಗೆ ಅಪಾರ ದುಃಖವಾಯಿತು. ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದ ಪ್ರತಿಭಾವಂತನನ್ನು ನಾವು ಕಳೆದುಕೊಂಡಿದ್ದೇವೆ. ಮೃತರ ಆತ್ಮಕ್ಕೆ ಸದ್ಗತಿ ಕೋರಿ ಪ್ರಾರ್ಥಿಸುವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com