ಗೇಟ್ ತುಂಡಾಗಿ ಬರಿದಾಗುತ್ತಿದ್ದಾಳೆ ತುಂಗೆ; ಈ ಬಾರಿ ಅದ್ದೂರಿ ಮೈಸೂರು ದಸರಾ; ಪಕ್ಷೇತರರಾಗಿ ಸಿಪಿ ಯೋಗೇಶ್ವರ್ ಸ್ಪರ್ಧೆ! ಇವು ಇಂದಿನ ಪ್ರಮುಖ ಸುದ್ದಿಗಳು 12-08-24

ಗೇಟ್ ತುಂಡಾಗಿ ಬರಿದಾಗುತ್ತಿದ್ದಾಳೆ ತುಂಗೆ; ಈ ಬಾರಿ ಅದ್ದೂರಿ ಮೈಸೂರು ದಸರಾ; ಪಕ್ಷೇತರರಾಗಿ ಸಿಪಿ ಯೋಗೇಶ್ವರ್ ಸ್ಪರ್ಧೆ! ಇವು ಇಂದಿನ ಪ್ರಮುಖ ಸುದ್ದಿಗಳು 12-08-24

1. ರಾಜ್ಯದ ಎಲ್ಲಾ ಅಣೆಕಟ್ಟುಗಳ ಸ್ಥಿತಿಗತಿ ಪರಿಶೀಲಿಸಲು ತಜ್ಞರ ಸಮಿತಿ ರಚನೆ

ತುಂಗಾಭದ್ರಾ ಜಲಾಶಯದ ಕ್ರೆಸ್ಟ್ ಗೇಟ್‌ಗಳ ಪೈಕಿ ಒಂದು ಕೊಚ್ಚಿಹೋಗಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ರಾಜ್ಯದಲ್ಲಿನ ಎಲ್ಲಾ ಅಣೆಕಟ್ಟುಗಳ ಸ್ಥಿತಿಗತಿಯನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸಲಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೋಮವಾರ ಹೇಳಿದ್ದಾರೆ. ತುಂಗಭದ್ರಾ ಅಣೆಕಟ್ಟಿನ ಕ್ರೆಸ್ಟ್ ಗೇಟ್ ನ್ನು ಪುನಃಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ 19ನೇ ಗೇಟ್ ಕೊಚ್ಚಿಕೊಂಡು ಹೋಗಿದ್ದು, ಭಾರಿ ಪ್ರಮಾಣದಲ್ಲಿ ನೀರು ಹೊರಹೋಗುತ್ತಿರುವುದರಿಂದ ಸುತ್ತಲಿನ ತಗ್ಗು ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗುತ್ತಿಗೆದಾರರೊಂದಿಗೆ ಮಾತನಾಡಿ ವಿನ್ಯಾಸಗಳನ್ನು ಕಳುಹಿಸಿದ್ದೇವೆ. ನಾಲ್ಕೈದು ದಿನಗಳಲ್ಲಿ ದುರಸ್ತಿ ಮಾಡಲು ಪ್ರಯತ್ನಿಸುತ್ತೇವೆ. ಕನಿಷ್ಠ ಒಂದು ಬೆಳೆ ಉಳಿಸಲು ಪ್ರಯತ್ನಿಸುತ್ತೇವೆ. ನಾಳೆ ಮುಖ್ಯಮಂತ್ರಿಗಳು ಸಹ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ ಎಂದು ತಿಳಿಸಿದರು.

2. ಗೇಟ್ ತುಂಡಾಗಿ ಬರಿದಾಗುತ್ತಿದ್ದಾಳೆ ತುಂಗೆ

ಈಮಧ್ಯೆ, ತುಂಗಾಭದ್ರ ಜಲಾಶಯದಲ್ಲಿ ಒಂದು ಗೇಟ್‌ ಮುರಿದಿರುವುದರಿಂದ ನೀರಿನ ಒತ್ತಡವನ್ನು ಕಡಿಮೆ ಮಾಡಲು ಎಲ್ಲಾ 33 ಕ್ರೆಸ್ಟ್ ಗೇಟ್‌ಗಳನ್ನು ತೆರೆದು ನೀರನ್ನು ನದಿಗೆ ಬಿಡಲಾಗಿದೆ. ಭಾನುವಾರ ಒಂದು ಲಕ್ಷ ಕ್ಯೂಸೆಕ್ಸೂ ಗೂ ಹೆಚ್ಚಿನ ನೀರು ಬಿಡಲಾಗಿದೆ. ಇದರಿಂದಾಗಿ ಬಳ್ಳಾರಿ, ಕೊಪ್ಪಳ, ವಿಜಯನಗರ ರಾಯಚೂರು ಮತ್ತು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಗಳ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಅನೇಕ ಕೃಷಿ ಕ್ಷೇತ್ರಗಳು ಜಲಾವೃತವಾಗುವ ಸಾಧ್ಯತೆಯಿದೆ. ಮುರಿದು ಬಿದ್ದಿರುವ ಕ್ರೆಸ್ಟ್ ಗೇಟ್‌ನ ಶೀಘ್ರ ದುರಸ್ತಿ ಮಾಡಲು ಹೊರಹರಿವನ್ನು 3 ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಲು ಅಧಿಕಾರಿಗಳು ಯೋಜಿಸಿದ್ದಾರೆ. ನೀರು 3 ಲಕ್ಷ ಕ್ಯೂಸೆಕ್‌ಗೆ ತಲುಪಿದರೆ ಹೆಚ್ಚಿನ ಕೃಷಿ ಭೂಮಿಯಲ್ಲಿ ಬೆಳೆ ನಷ್ಟವಾಗುವ ಭೀತಿ ಎದುರಾಗಲಿದೆ ಎನ್ನುತ್ತಾರೆ ರೈತರು. ಈ ಮಧ್ಯೆ ಆಂಧ್ರ ಪ್ರದೇಶದ ಜಲ ಸಂಪನ್ಮೂಲ ಸಚಿವ ನಿಮ್ಮಲ ರಾಮನಾಯ್ಡು ಸೋಮವಾರ ಜಲಾಶಯಕ್ಕೆ ಭೇಟಿ ನೀಡಿದರು. ಗೇಟ್ ದುರಸ್ತಿ ಕಾರ್ಯವನ್ನು ಪರಿಶೀಲಿಸಿದ ಸಚಿವರು, ನೂತನ ಗೇಟ್ ಅಳವಡಿಕೆ ಕುರಿತು ಎಂಜಿನಿಯರ್ ಗಳು ಹಾಗೂ ತಜ್ಞರೊಂದಿಗೆ ಮಾತನಾಡಿದರು.

3. ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ

ಚನ್ನಪಟ್ಟಣ ಉಪ ಚುನಾವಣೆಯ ಟಿಕೆಟ್ ವಿಚಾರದಲ್ಲಿ ಎನ್ ಡಿಎ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ. ಚನ್ನಪಟ್ಟಣದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಸಿಪಿ ಯೋಗೇಶ್ವರ್ ಅವರನ್ನು ಬಿಜೆಪಿ ಹೈಕಮಾಂಡ್ ಮಾತುಕತೆಗೆ ಬರುವಂತೆ ದೆಹಲಿಗೆ ಕರೆದಿದೆ. ಇಂದು ದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೇಶ್ವರ್, ನಾನು ಚನ್ನಪಟ್ಟಣ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು ಎನ್ನುವ ಆಸೆ ಇದೆ. ಈಗಾಗಲೇ ನಮ್ಮ ಕ್ಷೇತ್ರದ ಜನ ಹಲವು ಬಾರಿ ಸ್ವತಂತ್ರವಾಗಿ ನಿಂತರೂ ನನ್ನನ್ನು ಗೆಲ್ಲಿಸಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಲು ಸಾಧ್ಯವಿಲ್ಲ ಎಂದಾದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಹೊರತು ಕಾಂಗ್ರೆಸ್‌ ಸೇರಲ್ಲ ಎಂದು ಸ್ಪಷ್ಟಪಡಿಸಿದರು.

4. ಬೆಂಗಳೂರಿನಲ್ಲಿ ತಡರಾತ್ರಿ 52 ಮಿ.ಮೀ ಮಳೆ: ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳ ಪರದಾಟ

ಬೆಂಗಳೂರಿನಲ್ಲಿ ಭಾನುವಾರ ತಡರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೆ 52 ಮಿ.ಮೀ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಯಿತು. ಈ ಮಧ್ಯೆ ಮಾರುತಿ ಸೇವಾ ನಗರದಲ್ಲಿ ಭಾರೀ ಮಳೆಗೆ ಬೃಹತ್ ಗಾತ್ರದ ಮರದ ಕೊಂಬೆಯೊಂದು ಉರುಳಿಬಿದ್ದು ನಾಲ್ವರು ಮಕ್ಕಳು ಸೇರಿ 6 ಮಂದಿ ಗಾಯಗೊಂಡಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

5. ಈ ಬಾರಿ ಅದ್ದೂರಿ ಮೈಸೂರು ದಸರಾ

ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಇಂದು ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ರಾಜ್ಯದಲ್ಲಿ ಬರ ಇದ್ದ ಕಾರಣಕ್ಕೆ ಕಳೆದ ಬಾರಿ ವಿಜೃಂಭಣೆಯಿಂದ ಆಚರಣೆ ಮಾಡಲಾಗಲಿಲ್ಲ, ಆದರೆ ಈ ಬಾರಿಯ ಅದ್ಧೂರಿಯಾಗಿ ದಸರಾ ಆಚರಣೆಗೆ ಸೂಚನೆ ನೀಡಿದರು. ದಸರಾ ಉತ್ಸವ ಜನರ ಉತ್ಸವ ಆಗಬೇಕು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ‌ ಅವಕಾಶ ನೀಡಬೇಕು. ಸ್ತಬ್ಧಚಿತ್ರಗಳು, ದೀಪಾಂಲಕಾರ ಸೇರಿ ಪ್ರತಿಯೊಂದೂ ಆಕರ್ಷಣೀಯ ಮತ್ತು ಅರ್ಥಪೂರ್ಣ ಆಗಿರಬೇಕು. ಈ ಬಾರಿ 21 ದಿನ ದೀಪಾಲಂಕಾರ ಇರಲಿ ಎಂದರು. 'ಕರ್ನಾಟಕ ಸಂಭ್ರಮ -50' ನವೆಂಬರ್ ವರೆಗೂ ನಡೆಯಲಿದೆ. ದಸರಾ ಉದ್ಘಾಟನೆ ಯಾರಿಂದ ಮಾಡಿಸಬೇಕು ಎನ್ನುವ ತೀರ್ಮಾನವನ್ನು ಮುಖ್ಯಮಂತ್ರಿಗಳಿಗೆ ಒಪ್ಪಿಸಿ ಸಭೆ ನಿರ್ಧರಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com