ಬೆಂಗಳೂರು: ಅಪ್ರಾಪ್ತ ಬಾಲಕಿಯೊಂದಿಗೆ ಓಡಿ ಹೋಗುವಾಗ ಆಕೆಯ ತಂದೆ ಕೈಗೆ ಬಿಕ್ಕಿಬಿದ್ದ ಯುವಕನೋರ್ವ ಆತಂಕದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ದಬ್ಬಾಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ರಾಮನಗರದ ಬಿಡದಿ ಮೂಲದ ಸಂತೋಷ್ (22) ಆತ್ಮಹತ್ಯೆಗೆ ಶರಣಾದ ಯುವಕ, ಈ ತುಮಕೂರಿನ ಶಿವಗಂಗೆ ಬಳಿಯ ಮಠದ ಹಾಸ್ಟೆಲ್ ನಲ್ಲಿ ಪಿಯುಸಿ ಓದುತ್ತಿದ್ದ ಸಂತೋಷ್ ಫೇಲ್ ಆದ ಬಳಿಕ ಹಾಸ್ಟೆಲ್ ತೊರೆದು ಶಿವಗಂಗೆಯ ಹೊಸಪಾಳ್ಯದಲ್ಲಿ ತಂಗಿದ್ದ. ಊರಿನಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ.
ಬಳಿಕ ಒಂದು ವರ್ಷದಿಂದ ಹೊಸಪಾಳ್ಯದಲ್ಲಿರುವ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಲು ಆರಂಭಿಸಿದ್ದ. ನಾಲ್ಕು ತಿಂಗಳ ಹಿಂದಷ್ಟೇ ಬಾಲಕಿಯ ಮನೆಯಲ್ಲಿ ಕೆಲಸಕ್ಕೂ ಸೇರಿದ್ದ. ನಂತರ ಬಾಲಕಿಯ ಪೋಷಕರ ಬಳಿ ವಿವಾಹ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಇದಕ್ಕೆ ವಿರೋಧ ವ್ಯಕ್ತವಾದಾಗ ಶನಿವಾರ ರಾತ್ರಿ ಬಾಲಕಿಯೊಂದಿಗೆ ಓಡಿಹೋಗಲು ಮುಂದಾಗಿದ್ದಾನೆ.
ಈ ವೇಳೆ ಬಾಲಕಿಯ ತಂದೆ ಕೈಗೆ ಸಿಕ್ಕಿಬಿದ್ದಿದ್ದು, ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಸಾಕಷ್ಟು ಮಾತಿನ ಚಕಮಕಿ ನಡೆಸಿದ್ದಾನೆ. ವಾಗ್ಯುದ್ಧದ ಬಳಿಕ ಬಾಲಕಿಯ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ವೇಳೆ ಹೆದರಿದ ಸಂತೋಷ್ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ನಡುವೆ ಸ್ಥಳಕ್ಕೆ ಬಂದ ಪೊಲೀಸರಿಗೆ ಸಂತೋಷ್ ಸಿಕ್ಕಿಲ್ಲ. ಪರಿಶೀಲನೆ ನಡೆಸಿದಾಗ ಮರುದಿನ ಅದೇ ಪ್ರದೇಶದಲ್ಲಿದ್ದ ರವಿಕುಮಾರ್ ಎಂಬುವವರ ಮನೆಯ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಬಾಲಕಿಯ ತಂದೆ ಪೊಲೀಸರಿಗೆ ವಿಚಾರ ತಿಳಿಸಿದ ಹಿನ್ನೆಲೆಯಲ್ಲಿ ಆತಂಕದಲ್ಲಿ ಸಂತೋಷ್ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಹೇಳಲಾಗುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ಆತ್ಮಹತ್ಯೆಗಳ ಕುರಿತು ಚರ್ಚಿಸುವುದೂ ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ ಮತ್ತು ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿ ಇದ್ದರೆ ಕರೆ ಮೂಲಕ ಸ್ನೇಹ ಫೌಂಡೇಶನ್ - 04424640050, ಟೆಲಿ ಮನಸ್ - 14416 (ಲಭ್ಯವಿದೆ 24x7) ಅಥವಾ ಐಕಾಲ್, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್' ಸಹಾಯವಾಣಿ - 02225521111 (ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ಲಭ್ಯವಿರಲಿದೆ)ಯನ್ನು ಸಂಪರ್ಕಿಸಿ.
Advertisement