ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಹಾಗೂ ಬಂಟ್ವಾಳ ಟಿಎಂಸಿ ಮಾಜಿ ಅಧ್ಯಕ್ಷ ಮೊಹಮ್ಮದ್ ಶರೀಫ್ ಪ್ರಚೋದನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಮಂಗಳೂರು ಹೊರವಲಯದ ಬಿಸಿ ರೋಡ್‌ನಲ್ಲಿ ಇಂದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಗಣೇಶ ಚತುರ್ಥಿ ಮೆರವಣಿಗೆಯ ದಿನದಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಕೋಮು ಘರ್ಷಣೆಯನ್ನು ಖಂಡಿಸಿ ತಾವು ಪ್ರತಿಭಟನೆ ನಡೆಸುತ್ತಿದ್ದು, ಈದ್ ಮಿಲಾದ್ ರ್ಯಾಲಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದ ಶರಣ್ ಪಂಪ್‌ವೆಲ್, ಈದ್ ಮೆರವಣಿಗೆಯನ್ನು ಬೇಕಾದರೆ ನಿಲ್ಲಿಸಬಹುದು ಎಂದು ಹೇಳಿದ್ದರು. ಶರಣ್ ಪಂಪ್‌ವೆಲ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಶರೀಫ್ ತಾಕತ್ತಿದ್ದರೆ ಈದ್ ರ್ಯಾಲಿಯನ್ನು ತಡೆಯಿರಿ ಎಂದು ಸವಾಲು ಹಾಕಿದ್ದರು. ಈ ಸವಾಲನ್ನು ಸ್ವೀಕರಿಸಿದ ಶರಣ್ ಪಂಪ್‌ವೆಲ್, ಪುನೀತ್ ಅತ್ತಾವರ್ ಸೇರಿದಂತೆ ಹಲವು ಹಿಂದುತ್ವ ಕಾರ್ಯಕರ್ತರು ಬಿಸಿ ರೋಡ್ ಚಲೋ ನಡೆಸಿದರು. ಇದರಿಂದಾಗಿ ಪೊಲೀಸರು ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಿ, ಬಿಸಿ ರೋಡ್ ಮೂಲಕ ಈದ್ ಮಿಲಾದ್ ಮೆರವಣಿಗೆಗೆ ಹೋಗಲು ಅನುಮತಿ ನಿರಾಕರಿಸಿದರು. ಈ ಮಧ್ಯೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು, ಬಂಟ್ವಾಳ ಟಿಎಂಸಿ ಮಿತಿಯಲ್ಲಿ ಮುಂದಿನ 48 ಗಂಟೆಗಳ ಕಾಲ ಮದ್ಯ ಮಾರಟಕ್ಕೆ ನಿಷೇಧ ಹೇರಿದ್ದಾರೆ.
ಮಂಗಳೂರು ಹೊರವಲಯದ ಸುರತ್ಕಲ್‌ನಲ್ಲಿರುವ ಮಸೀದಿಯೊಂದಕ್ಕೆ ಕಳೆದ ರಾತ್ರಿ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಆರು ಮಂದಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಸುರತ್ಕಲ್‌ನ ಕಾನಕಟ್ಲ ನಿವಾಸಿ ಭರತ್ ಶೆಟ್ಟಿ, ಚೆನ್ನಪ್ಪ ಶಿವಾನಂದ ಚಲವಾದಿ, ನಿತಿನ್ ಹಡಪದ, ಸುಜಿತ್ ಶೆಟ್ಟಿ, ಅಣ್ಣಪ್ಪ ಮತ್ತು ಪ್ರೀತಂ ಶೆಟ್ಟಿ ಎಂದು ತಿಳಿದುಬಂದಿದೆ. ಕಾಟಿಪಳ್ಳದ 3ನೇ ಬ್ಲಾಕ್‌ನಲ್ಲಿರುವ ಮಜಿದುಲ್ಲಾ ಹುದಾಜುಮ್ಮ ಮಸೀದಿಯ ಅಧ್ಯಕ್ಷ ಕೆ ಎಚ್ ಅಬ್ದುಲ್ ರಹಿಮಾನ್ ದೂರು ನೀಡಿದ್ದು ಮಸೀದಿಯ ಹಿಂಬದಿಯ ಜನತಾ ಕಾಲೋನಿಯ ಸಮಾಧಿ ಕಡೆಯಿಂದ ಎರಡು ಬೈಕ್‌ಗಳಲ್ಲಿ ಆಗಮಿಸಿದ ದುಷ್ಕರ್ಮಿಗಳು ಮಸೀದಿಗೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಈ ಘಟನೆ ನಂತರ ಬಂಧಿತ ಆರೋಪಿಗಳಿಂದ ಒಂದು ಕಾರು, ಎರಡು ಬೈಕ್ ಹಾಗೂ ನಾಲ್ಕು ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯ ಪರೀಕ್ಷೆಯನ್ನು ಪ್ರಾರಂಭಿಸಿದೆ. ಈ ಮೂಲಕ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೆ ಪ್ರಯಾಣಿಕರ ಪರೀಕ್ಷೆಗಾಗಿ ಕೆಐಎನಲ್ಲಿ ನಾಲ್ಕು ಮೀಸಲಾದ ಕಿಯೋಸ್ಕ್ಗಳನ್ನು ಸ್ಥಾಪಿಸಿದೆ. ಆಫ್ರಿಕನ್ ದೇಶಗಳಿಂದ ಆಗಮಿಸುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದೆ ಎಂದು BIAL ವಕ್ತಾರರು ತಿಳಿಸಿದ್ದಾರೆ. ಈ ಮಧ್ಯೆ ಬೆಂಗಳೂರಿನಲ್ಲಿ ಓದುತ್ತಿದ್ದ ಕೇರಳದ ಮಲಪ್ಪುರಂ ಮೂಲದ 24 ವರ್ಷದ ವಿದ್ಯಾರ್ಥಿಯೊಬ್ಬ ನಿಫಾ ವೈರಸ್ ನಿಂದ ಮೃತಪಟ್ಟಿದ್ದಾನೆ. ಮೃತ ವಿದ್ಯಾರ್ಥಿ ಬೆಂಗಳೂರಿನಲ್ಲಿ ನೆಲೆಸಿದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಆತಂಕ ಮನೆ ಮಾಡಿದೆ. ಹೀಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ವಿದ್ಯಾರ್ಥಿ ದಾಖಲಾಗಿದ್ದ ಕಾಲೇಜು ಹಾಗೂ ಆತ ವಾಸಿಸುತ್ತಿದ್ದ ಮನೆ ಮತ್ತಿತರ ಪ್ರದೇಶಗಳಲ್ಲಿ ವಾಸಿಸುತ್ತಿರುವವರ ತಪಾಸಣೆಗೊಳಪಡಿಸಲು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕನ್ನಡ ಚಿತ್ರರಂಗದಲ್ಲಿಯೂ ಮಹಿಳೆಯರ ರಕ್ಷಣೆಗಾ ಸಮಿತಿ ರಚನೆಯಾಗಬೇಕು ಎಂಬ ಒತ್ತಾಯಗಳು ಕೇಳಿಬಂದಿದ್ದು, ಈ ನಿಟ್ಟಿನಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ನೇತೃತ್ವದಲ್ಲಿ ನಡೆದ ಕಲಾವಿದರು ಹಾಗೂ ಫಿಲ್ಮ್ ಚೇಂಬರ್ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಚಿತ್ರರಂಗದಲ್ಲಿ ಮಹಿಳೆಯರಿಗೆ ಆಗುತ್ತಿರುವ ಕಿರುಕುಳ, ಸಮಸ್ಯೆಗಳ ಬಗ್ಗೆ ಸ್ಪಂದಿಸಲು ಒಂದು ಸಮಿತಿ ರಚನೆಯಾಗಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ಮಹಿಳಾ ಕಲಾವಿದರು, ನಿರ್ದೇಶಕರು ಸೇರಿದಂತೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕನ್ನಡ ಚಿತ್ರರಂಗದಲ್ಲಿ ಪಾಶ್ ಕಮಿಟಿ ಮಾಡಲಾಗುತ್ತದೆ ಎಂದು ನಾಗಲಕ್ಷ್ಮೀ ತಿಳಿಸಿದ್ದಾರೆ.
ಪ್ಯಾಲೆಸ್ಟೈನ್ ಬಾವುಟ ಹಿಡಿದು ಬೈಕ್ ನಲ್ಲಿ ಚಿಕ್ಕಮಗಳೂರಿನಲ್ಲಿ ತಿರುಗಾಡಿದ್ದ ನಾಲ್ವರು ಅಪ್ರಾಪ್ತರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಬಾಲಕರಿಗೆ ಪ್ಯಾಲೆಸ್ಟೈನ್ ಭಾವುಟ ಸಿಕ್ಕಿದ್ದು ಹೇಗೆ? ಧ್ವಜ ನೀಡಿ ನಗರದಾದ್ಯಂತ ಓಡಾಟ ನಡೆಸಲು ಯಾರು ಸೂಚನೆ ನೀಡಿದ್ದು? ಇಲ್ಲವೇ ತಾವೇ ಸ್ವತ: ಹೀಗೆ ಮಾಡಿದ್ರಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement