ಕಲಬುರಗಿ ನಗರವನ್ನು 1,685 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹೇಳಿದರು. ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ, ಕಲ್ಯಾಣಪಥ ಯೋಜನೆಯಡಿ ರಾಜ್ಯ ಸರ್ಕಾರ 1,000 ಕೋಟಿ ವೆಚ್ಚದಲ್ಲಿ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ 1,150 ಕಿ.ಮೀ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ 2.0 ಅಡಿಯಲ್ಲಿ ಕಲಬುರಗಿ-ಬಳ್ಳಾರಿ ಮಹಾನಗರ ಪಾಲಿಕೆಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ತಲಾ 200 ಕೋಟಿ ನೀಡಲಾಗುತ್ತದೆ. ಅಲ್ಲದೆ ರಾಯಚೂರಿನಲ್ಲಿ ಏಮ್ಸ್ ಆರಂಭಿಸಲು ಕೇಂದ್ರ ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಗುತ್ತಿಗೆದಾರರೊಬ್ಬರಿಗೆ ಜೀವ ಬೆದರಿಕೆ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ರಾಜರಾಜೇಶ್ವರಿನಗರ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರನ್ನು ಒಂದು ದಿನ ನ್ಯಾಯಾಂಗ ಬಂಧನ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಮುನಿರತ್ನ ಅವರ ಪೊಲೀಸ್ ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಆರೋಪಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಹಾಜರುಪಡಿಸಲಾಯಿತು. ಶಾಸಕ ಮುನಿರತ್ನ ಪರ ಹಿರಿಯ ವಕೀಲ ಅಶೋಕ್ ಹಾರನಳ್ಳಿ ಅವರು ವಾದ ಮಂಡಿಸಿದರು. ಈಮಧ್ಯೆ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮತ್ತು ಇತರೆ ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯು ಸೆಪ್ಟೆಂಬರ್ 30ರವರೆಗೂ ವಿಸ್ತರಣೆಯಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಆರ್ ಪಾಟೀಲ್ ಯತ್ನಾಳ್ ವಿರುದ್ಧ ಕರ್ನಾಟಕ ಕಾಂಗ್ರೆಸ್ ಮಂಗಳವಾರ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದೆ. ರಾಹುಲ್ ಗಾಂಧಿ ಅಮೇರಿಕಾ ಪ್ರವಾಸ ಕೈಗೊಂಡು ದೇಶವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಅವರು ಯಾವ ಜಾತಿಯಲ್ಲಿ ಜನಿಸಿದರು ಎಂಬುದು ತಿಳಿದಿಲ್ಲ, ಆದರೆ ಅವರು ಜಾತಿ ಸಮೀಕ್ಷೆಯನ್ನು ಕೈಗೊಳ್ಳಲು ಬಯಸುತ್ತಾರೆ. ಅವರು ಮುಸ್ಲಿಮರಿಗೆ ಅಥವಾ ಕ್ರಿಶ್ಚಿಯನ್ನರಿಗೆ ಹುಟ್ಟಿದ್ದಾರೆಯೇ ಎಂದು ಖಚಿತವಾಗಿಲ್ಲ ಎಂದು ಯತ್ನಾಳ್ ಹೇಳಿದ್ದರು.
ಬೆಂಗಳೂರಿನ ಜ್ಞಾನಭಾರತಿ ಉಲ್ಲಾಳದ ಬಳಿ ನಡುರಸ್ತೆಯಲ್ಲಿ ಯುವಕನೊಬ್ಬನನ್ನು ವಿವಸ್ತ್ರಗೊಳಿಸಿ ಹಲ್ಲೆಗೈದಿದ್ದ ರೌಡಿಶೀಟರ್ ಪವನ್ ಅಲಿಯಾಸ್ ಕಡುಬುನನ್ನು ಪೋಲಿಸರು ಬಂಧಿಸಿದ್ದಾರೆ. ಇಂದು ಬೆಳಂಬೆಳಿಗ್ಗೆ ರೌಡಿ ಶೀಟರ್ ಪವನ್ ನನ್ನು ಬಂಧಿಸಲು ಪೊಲೀಸರು ಮುಂದಾದಾಗ ಆತ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದನು. ಈ ವೇಳೆ ಗೋವಿಂದರಾಜ ನಗರದ ಇನ್ಸ್ ಪೆಕ್ಟರ್ ಸರ್ವಿಸ್ ರಿವಾಲ್ವರ್‌ನಿಂದ ಪವನ್ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಬಂಧನದ ವಾರಂಟ್ ಇದ್ದರೂ ಪವನ್ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈಮಧ್ಯೆ ಯುವಕನೊಬ್ಬನನ್ನು ನಡು ರಸ್ತೆಯಲ್ಲಿ ನಗ್ನಗೊಳಿಸಿ, ಹಲ್ಲೆ ಮಾಡಿದ್ದ ವಿಡಿಯೋ ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ನಮ್ಮ ಮೆಟ್ರೋ ಜ್ಞಾನ ಭಾರತಿ ನಿಲ್ದಾಣದಲ್ಲಿ ಯುವಕನೊಬ್ಬ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಬಿಹಾರ ಮೂಲದ 30 ವರ್ಷದ ಸಿದ್ದಾರ್ಥ್ ಎಂಬಾತ ಮೆಟ್ರೋ ಹಳಿಗೆ ಹಾರಿದ್ದು ಕೂಡಲೇ ಎಚ್ಚೆತ್ತ ಸಿಬ್ಬಂದಿಗಳು ಆತನನ್ನು ರಕ್ಷಿಸಿದ್ದಾರೆ. ಇದರಿಂದಾಗಿ ಕೆಲಕಾಲ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ರೈಲು ಬರುತ್ತಿದ್ದಂತೆ ಯುವಕ ಹಳಿಗೆ ಜಿಗಿದಿದ್ದನು ಕಂಡ ಸಿಬ್ಬಂದಿ ತುರ್ತು ನಿರ್ವಹಣಾ ಬಟನ್ ಒತ್ತಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದ್ದರು. ರೈಲಿನ ಕೆಳಗೆ ಸಿಲುಕಿದ ಯುವಕ ಹೊರ ಬರಲಾರದೇ ಪರದಾಡುತ್ತಿದ್ದನು. ಈ ವೇಳೆ ಸಿಬ್ಬಂದಿಗಳು ಆತನನ್ನ ಸುರಕ್ಷಿತವಾಗಿ ಹಳಿಯಿಂದ ಹೊರಕ್ಕೆ ತಂದಿದ್ದಾರೆ. ಸಾಲಬಾಧೆಯಿಂದ ಸಿದ್ಧಾರ್ಥ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ವ್ಯಕ್ತಿಗಳು ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಬಳಿ ಸಂಭವಿಸಿದೆ. ಮೃತರು ತುಮಕೂರು ಜಿಲ್ಲೆಯ ಕುಣಿಗಲ್ ಮೂಲದವರೆಂದು ತಿಳಿದುಬಂದಿದೆ. ಮತ್ತೊಂಡೆದೆ ಚಾಮರಾಜನಗರದಲ್ಲಿ ಟಿಪ್ಪರ್ ಹರಿದು ಕೇರಳ ಮೂಲದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಬೈಕ್ ನಲ್ಲಿ ಮೂವರು ತೆರಳುತ್ತಿದ್ದಾಗ ಟಿಪ್ಪರ್ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಆಯಾತಪ್ಪಿ ಕೆಳಗೆ ಬಿದ್ದ ಮೂವರ ಮೇಲೆ ಟಿಪ್ಪರ್ ಲಾರಿ ಹರಿದು ಮೃತಪಟ್ಟಿದ್ದಾರೆ.
Advertisement