

ಬೆಂಗಳೂರು: ರಾಜ್ಯದಲ್ಲಿ ಕ್ರಿಮಿನಲ್ ಪ್ರಕರಣಗಳ ತನಿಖೆಗೆ ಸಿಬಿಐಗೆ ನೀಡಲಾಗಿದ್ದ ಮುಕ್ತ ಸಮ್ಮತಿಯನ್ನು ಹಿಂಪಡೆಯುವ ತಮ್ಮ ಪಕ್ಷ ಅಧಿಕಾರದಲ್ಲಿರುವ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಎಂ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಸಿದ್ದಾರೆ. ಅದು ತನ್ನ ಅಧಿಕಾರ ವ್ಯಾಪ್ತಿಯಲ್ಲಿದೆ ಎಂದು ಹೇಳಿದ್ದಾರೆ.
ವಿವಿಧ ಪ್ರಕರಣಗಳಲ್ಲಿ ಸಿಬಿಐ ತನ್ನ ತನಿಖೆಯಲ್ಲಿ ಪಕ್ಷಪಾತ ಮತ್ತು ಪೂರ್ವಾಗ್ರಹ ಪೀಡಿತವಾಗಿದೆ ಎಂದು ಆರೋಪಿಸಿದ ಸರ್ಕಾರ, ರಾಜ್ಯದಲ್ಲಿ ಪ್ರಕರಣಗಳ ತನಿಖೆಗೆ ಸಿಬಿಐಗೆ ನೀಡಿದ್ದ ಮುಕ್ತ ಸಮ್ಮತಿಯನ್ನು ನಿನ್ನೆ ಹಿಂಪಡೆದಿದೆ.
ದೇವರಾಜ್ ಅರಸ್ ಅವರು ಸಿಎಂ ಆಗಿದ್ದಾಗಲೂ ಸಿಬಿಐ ಸಂಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದಾಗ ಸಿಬಿಐಗೆ ನೀಡಿದ್ದ ಮುಕ್ತ ತನಿಖೆಯ ಸಮ್ಮತಿಯನ್ನು ಹಿಂಪಡೆಯಲಾಗಿತ್ತು. ಆದ್ದರಿಂದ ಇದು ಸಾಮಾನ್ಯ ಪ್ರಕ್ರಿಯೆ ಎಂದು ಮಲ್ಲಿಕಾರ್ಜುನ ಖರ್ಗೆಯವರು ಇಂದು ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಹೇಳಿದರು.
ನಾನು ಗೃಹ ಸಚಿವನಾಗಿದ್ದಾಗ ಕಾಡುಗಳ್ಳ ವೀರಪ್ಪನ್ ಪ್ರಕರಣದಲ್ಲಿ ಸ್ಟಾಂಪ್ ಪೇಪರ್ ವೆಂಡರ್ ಅಬ್ದುಲ್ ಕರೀಂ ತೆಲಗಿ ಪ್ರಕರಣ ಮತ್ತು ಕೋಲಾರದ ಇನ್ನೊಂದು ಪ್ರಕರಣದಲ್ಲಿ ನಾನು ಸಿಬಿಐಗೆ ಉಲ್ಲೇಖಿಸಿದ್ದಾಗ ಪ್ರಕರಣದ ವಿಚಾರಣೆ ಈಗಾಗಲೇ ನಡೆಯುತ್ತಿದೆ, ಸರ್ಕಾರದಿಂದ ಹೊಸದಾಗಿ ಪ್ರಕರಣದ ವಿಚಾರಣೆ ನಡೆಸುವುದಿಲ್ಲ ಎಂದು ಹೇಳಿತ್ತು.
ನೂರಾರು ಜನರನ್ನು ಕೊಂದ ವೀರಪ್ಪನ್ ಮತ್ತು ಕೋಟ್ಯಂತರ ರೂಪಾಯಿ ಲೂಟಿ ಮಾಡಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ ತೆಲಗಿ ಪ್ರಕರಣವನ್ನು ಸಿಬಿಐಗೆ ಉಲ್ಲೇಖಿಸಿದ್ದ ಸಂದರ್ಭದಲ್ಲಿ ಮೂರು ಪ್ರಕರಣಗಳನ್ನು ಕೈಗೆತ್ತಿಕೊಳ್ಳುವಂತೆ ಕೇಳಿದ್ದೆ. ಇದು ಅಂತಾರಾಜ್ಯ ಪ್ರಕರಣವಾಗಿರುವುದರಿಂದ ಪ್ರಕರಣವನ್ನು ಹಿಂಪಡೆಯುವುದು ಅಥವಾ ಉಲ್ಲೇಖಿಸುವುದು ಸರ್ಕಾರದ ಅಧಿಕಾರ ಎಂದು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಹೇಳಿದರು.