

ಬೆಂಗಳೂರು: ನಗರದ ಮಹದೇವಪುರದಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಮಹೀಂದ್ರಾ ಶೋರೂಂಗೆ ಸೇರಿದ ಟೆಸ್ಟ್ ಡ್ರೈವ್ ಕಾರೊಂದು ಅತಿ ವೇಗವಾಗಿ ಬಂದು ರಸ್ತೆಯಲ್ಲಿದ್ದ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದಿದೆ.
ಮಹದೇವಪುರದ ಮುಖ್ಯರಸ್ತೆಯಲ್ಲಿರುವ ಮಹೀಂದ್ರಾ ಶೋರೂಂನಿಂದ ಟೆಸ್ಟ್ ಡ್ರೈವ್‌ಗಾಗಿ ಕಾರನ್ನು ಹೊರತರಲಾಗಿತ್ತು. ಈ ವೇಳೆ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಕುಡಿದ ಅಮಲಿನಲ್ಲಿದ್ದ ಎನ್ನಲಾಗಿದ್ದು, ವಾಹನದ ಮೇಲಿನ ನಿಯಂತ್ರಣ ತಪ್ಪಿ ಸಾಲು ಸಾಲು ವಾಹನಗಳಿಗೆ ಗುದ್ದಿದ್ದಾನೆ. ಅಪಘಾತದ ರಭಸಕ್ಕೆ ರಸ್ತೆಯಲ್ಲಿದ್ದ ನಾಲ್ಕು ವಾಹನಗಳು ಜಖಂಗೊಂಡಿವೆ.
ದುರ್ಘಟನೆಯಲ್ಲಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಓರ್ವ ಪಾದಚಾರಿಗೆ ಗಂಭೀರ ಗಾಯಗಳಾಗಿವೆ. ಅಪಘಾತದ ತೀವ್ರತೆಗೆ ಪಾದಚಾರಿಯ ಕಾಲು ಮುರಿದಿದ್ದು, ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಬೆನ್ನಲ್ಲೇ ಶೋರೂಂ ಸಿಬ್ಬಂದಿಯ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೆಸ್ಟ್ ಡ್ರೈವ್ ನೀಡುವ ಮುನ್ನ ಚಾಲಕನ ಸ್ಥಿತಿಯನ್ನು ಗಮನಿಸದೆ ಕಾರು ನೀಡಿ, ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ. ಕುಡಿದ ಅಮಲಿನಲ್ಲಿದ್ದ ವ್ಯಕ್ತಿಗೆ ವಾಹನ ನೀಡಿದ್ದೇ ಈ ಅನಾಹುತಕ್ಕೆ ಮುಖ್ಯ ಕಾರಣ ಎಂದು ಆರೋಪಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಮಹದೇವಪುರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
Advertisement