ಮಹಿಳಾ ಆಶ್ರಯ ಕೇಂದ್ರಗಳಲ್ಲಿ ಆರೋಗ್ಯ ಸೇವೆ ಬಲಪಡಿಸಲು ಕ್ರಮ: ಆರೋಗ್ಯ, ಪೌಷ್ಟಿಕತೆ, ಸುರಕ್ಷತೆಗೆ ಆದ್ಯತೆ..!

ಬೆಂಗಳೂರಿನ ರಾಜ್ಯ ಮಹಿಳಾ ಆಶ್ರಯ ಕೇಂದ್ರಕ್ಕೆ ಮೂರನೇ ಬಾರಿ ಭೇಟಿ ನೀಡಿದ ಅವರು, ಅಲ್ಲಿನ ಸೌಲಭ್ಯಗಳು, ನಿವಾಸಿಗಳ ಆರೋಗ್ಯ ಹಾಗೂ ಜೀವನ ಪರಿಸ್ಥಿತಿಗಳನ್ನು ಪರಿಶೀಲಿಸಿದರು.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದಾದ್ಯಂತ ಇರುವ ಮಹಿಳಾ ಆಶ್ರಯ ಕೇಂದ್ರಗಳಲ್ಲಿ ಮೂಲಸೌಕರ್ಯ, ಆರೋಗ್ಯ ಸೇವೆ ಮತ್ತು ಸುರಕ್ಷತಾ ವ್ಯವಸ್ಥೆಗಳನ್ನು ಮತ್ತಷ್ಟು ಸುಧಾರಿಸಲು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕ್ರಮ ಕೈಗೊಳ್ಳುತ್ತಿದೆ ಎಂದು ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ತಿಳಿಸಿದ್ದಾರೆ.

ಬೆಂಗಳೂರಿನ ರಾಜ್ಯ ಮಹಿಳಾ ಆಶ್ರಯ ಕೇಂದ್ರಕ್ಕೆ ಮೂರನೇ ಬಾರಿ ಭೇಟಿ ನೀಡಿದ ಅವರು, ಅಲ್ಲಿನ ಸೌಲಭ್ಯಗಳು, ನಿವಾಸಿಗಳ ಆರೋಗ್ಯ ಹಾಗೂ ಜೀವನ ಪರಿಸ್ಥಿತಿಗಳನ್ನು ಪರಿಶೀಲಿಸಿದರು. ಈ ಹಿಂದೆ ನಡೆಸಿದ ಪರಿಶೀಲನೆ ವೇಳೆ ನೀಡಿದ್ದ ಸೂಚನೆಗಳ ಬಳಿಕ ಕೇಂದ್ರದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ ಎಂದು ಅವರು ಹೇಳಿದರು.

ಆಶ್ರಯ ಕೇಂದ್ರದಲ್ಲಿ ಕುಡಿಯುವ ನೀರು, ಬಿಸಿನೀರು ಹಾಗೂ ದೂರದರ್ಶನದ ಸೌಲಭ್ಯಗಳ ಕೊರತೆ ಕುರಿತು ಈ ಹಿಂದೆ ದೂರುಗಳು ಬಂದಿದ್ದವು. ಸಿಬ್ಬಂದಿಗಳು ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

ಪ್ರಸ್ತುತ ಕೇಂದ್ರದಲ್ಲಿ 39 ಮಂದಿ ನಿವಾಸಿಗಳಿದ್ದು, ಅವರಲ್ಲಿ 31 ಮಂದಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಅವರ ಆರೋಗ್ಯ ಮತ್ತು ಪೌಷ್ಟಿಕಾಂಶದ ಅಗತ್ಯತೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಆಯೋಗ ಅಧಿಕಾರಿಗಳಿಗೆ ಸೂಚಿಸಿದೆ.

ಜುಲೈ ತಿಂಗಳಿಂದ ನಿವಾಸಿಗಳಿಗೆ ವಾರಕ್ಕೊಮ್ಮೆ ಮಾಂಸಾಹಾರಿ ಆಹಾರ ನೀಡಲಾಗುತ್ತಿದೆ. ಅಪೌಷ್ಟಿಕತೆ ಹಾಗೂ ರಕ್ತಹೀನತೆ ತಡೆಗಟ್ಟಲು ಪ್ರತಿದಿನ ಮೊಟ್ಟೆ ನೀಡುವುದು ಮತ್ತು ಕಬ್ಬಿಣಾಂಶದ ಮಾತ್ರೆಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

File photo
ಕರ್ನಾಟಕದ ಹೊಸ ಮೈಲಿಗಲ್ಲು: 1.5 ಲಕ್ಷಕ್ಕೂ ಅಧಿಕ ದತ್ತಾಂಶ ಒಂದೇ ವೇದಿಕೆಯಲ್ಲಿ; ಏನಿದು Tathyakosh ಪೋರ್ಟಲ್? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..!

ವೈದ್ಯಕೀಯ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ನಿವಾಸಿಗಳನ್ನು ತ್ವರಿತವಾಗಿ ಆಸ್ಪತ್ರೆಗೆ ಕರೆದೊಯ್ಯಲು ಅನುಕೂಲವಾಗುವಂತೆ ಆಶ್ರಯ ಕೇಂದ್ರಕ್ಕೆ ವಾಹನ ಸೌಲಭ್ಯ ಒದಗಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.

ಇದರ ಜತೆಗೆ, ಆಶ್ರಯ ಕೇಂದ್ರಗಳಲ್ಲಿ ನಿರ್ವಹಿಸಲಾಗುತ್ತಿರುವ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆಗೂ ಆಯೋಗ ಒತ್ತು ನೀಡಿದೆ. ಸದ್ಯ ನಿವಾಸಿಗಳ ಚಿಕಿತ್ಸೆ, ರಜೆ ಹಾಗೂ ಬಿಡುಗಡೆಗೆ ಸಂಬಂಧಿಸಿದ ವಿವರಗಳನ್ನು ಕಾಗದದ ದಾಖಲೆಗಳ ಮೂಲಕ ನಿರ್ವಹಿಸಲಾಗುತ್ತಿದೆ.

ನಿವಾಸಿಗಳ ವಾಸ್ತವ್ಯ, ಚಿಕಿತ್ಸೆ ಹಾಗೂ ಪುನರ್ವಸತಿ ಸೇರಿದಂತೆ ಸಮಗ್ರ ಮಾಹಿತಿಯನ್ನು ಒಳಗೊಂಡ ಡಿಜಿಟಲ್ ದಾಖಲೆ ನಿರ್ವಹಣಾ ವ್ಯವಸ್ಥೆ ರೂಪಿಸುವಂತೆ ಆಶ್ರಯ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಮಹಿಳಾ ಆಶ್ರಯ ಕೇಂದ್ರಗಳ ಒಟ್ಟಾರೆ ವ್ಯವಸ್ಥೆಯನ್ನು ಬಲಪಡಿಸುವುದು, ನಿವಾಸಿಗಳಿಗೆ ಸುರಕ್ಷಿತ ವಾತಾವರಣ, ಸೂಕ್ತ ಆರೋಗ್ಯ ಸೇವೆ ಹಾಗೂ ಅಗತ್ಯ ಪೌಷ್ಟಿಕಾಂಶದ ಆಹಾರ ಒದಗಿಸುವುದು ಆಯೋಗದ ಪ್ರಮುಖ ಆದ್ಯತೆಯಾಗಿದೆ ಎಂದು ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com