

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮತ್ತೆ ಶಾಕ್ ನೀಡಿದ್ದು, ʻದಾಸʼ ಇನ್ನೂ ಒಂದು ವರ್ಷ ಜೈಲಿನಲ್ಲೇ ಕಾಲ ಕಳೆಯುವುದು ಅನಿವಾರ್ಯವಾಗಿದೆ.
ಒಂದು ವರ್ಷದವರೆಗೆ ಜಾಮೀನಿಗೆ ಅರ್ಜಿ ಸಲ್ಲಿಸುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ಅದೇಶ ಮರು ಪರಿಶೀಲನೆ ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ಇಂದು ವಜಾಗೊಂಡಿದೆ. ಇದರ ಬೆನ್ನಲ್ಲೇ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಹಂಚಿಕೊಂಡಿರುವ ಇನ್‌ಸ್ಟಾಗ್ರಾಂ ಸ್ಟೋರಿ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
“ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ… ಅದು ವಸ್ತುವಾಗಲಿ, ವ್ಯಕ್ತಿಯಾಗಲಿ” ಎಂದು ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದು, ಈ ಒಂದು ಸಾಲಿನ ಪೋಸ್ಟ್ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಿಜಯಲಕ್ಷ್ಮಿ ಅವರು ಈ ಸಾಲುಗಳನ್ನು ಯಾರನ್ನು ಉದ್ದೇಶಿಸಿ ಬರೆದಿದ್ದಾರೆ? ಇದರ ಹಿಂದಿನ ಅರ್ಥವೇನು? ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿದೆ. ಆದರೆ ಈ ಸ್ಟೋರಿಯ ಬಗ್ಗೆ ವಿಜಯಲಕ್ಷ್ಮಿ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಈ ಪೋಸ್ಟ್ ಈಗ ಸಿನಿ ವಲಯದಲ್ಲಿ ಹಾಗೂ ಅಭಿಮಾನಿಗಳ ನಡುವೆ ಚರ್ಚೆಯ ವಿಷಯವಾಗಿದೆ.