''ನೋರು ಬಾಗುಂಟೆ ಊರು ಬಾಗುಂಟುಂದಿ'' ಸುಳ್ಳು ಕೇಸ್ ವಿರುದ್ಧ ಕಾನೂನು ಹೋರಾಟ, ವಕೀಲರ ಸಂಪೂರ್ಣ ವೆಚ್ಚವನ್ನು ನಾನೇ ಭರಿಸುತ್ತೇನೆ- ಡಾ.ಕೆ. ಸುಧಾಕರ್!

ನಮ್ಮ ಕಾರ್ಯಕರ್ತರ ವಿರುದ್ಧ ದಾಖಲಿಸಲಾಗಿರುವ ಪ್ರಕರಣಗಳ ಕಾನೂನು ಹೋರಾಟಕ್ಕೆ ಅಗತ್ಯವಿರುವ ವಕೀಲರ ಸಂಪೂರ್ಣ ವೆಚ್ಚವನ್ನು ನಾನೇ ಭರಿಸುತ್ತೇನೆ ಎಂದು ಸಂಸದ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
MP Dr. k. Sudhakar
ಸಂಸದ ಡಾ.ಕೆ. ಸುಧಾಕರ್
Updated on

ಬೆಂಗಳೂರು: ಚಿಕ್ಕಬಳ್ಳಾಪುರದಲ್ಲಿ ಶನಿವಾರ ನಡೆದ ಕೆಂಪೇಗೌಡ ಜಯಂತಿ ಆಚರಣೆ ವೇಳೆಯಲ್ಲಿ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಚಪ್ಪಲಿ ಎಸೆತ ಪ್ರಯತ್ನವನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ. ಈ ಮಧ್ಯೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಮೇಲೆ ಹಾಕಿರುವ ಕೇಸ್ ಗಳ ವಿರುದ್ಧ ಹೋರಾಡಲು ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ ಎಂದು ಸಂಸದ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ನಮ್ಮ ಕಾರ್ಯಕರ್ತರ ವಿರುದ್ಧ ದಾಖಲಿಸಲಾಗಿರುವ ಪ್ರಕರಣಗಳ ಕಾನೂನು ಹೋರಾಟಕ್ಕೆ ಅಗತ್ಯವಿರುವ ವಕೀಲರ ಸಂಪೂರ್ಣ ವೆಚ್ಚವನ್ನು ನಾನೇ ಭರಿಸುತ್ತೇನೆ. ಬಿಜೆಪಿ–ಜೆಡಿಎಸ್‌ನ ಪ್ರತಿಯೊಬ್ಬ ಕಾರ್ಯಕರ್ತರ ಪರವಾಗಿ ನಾನು ಸದಾ ದೃಢವಾಗಿ ನಿಲ್ಲುತ್ತೇನೆ. ನಿಮ್ಮೊಂದಿಗಿದ್ದೇನೆ... ಮುಂದೆಯೂ ಇರುತ್ತೇನೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಟ್ವೀಟ್ ಮಾಡಿದ ಡಾ. ಸುಧಾಕರ್, ಹಿರಿಯರಾದ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಬಗ್ಗೆ ತುಚ್ಚವಾಗಿ ಮಾತನಾಡುವ ಅವಶ್ಯಕತೆ ಏನಿತ್ತು? ಎಂದು ಪ್ರಶ್ನಿಸಿದ್ದಾರೆ. "ಬಾಯಿ ಸರಿ ಇದ್ದರೆ ಊರು ಸರಿಯಾಗಿರುತ್ತದೆ. ಮಾತು ಬಲ್ಲವನಿಗೆ ಜಗಳವಿಲ್ಲ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವಂತೆ, ಈ ಗಾದೆಗಳು ಸಾರ್ವಕಾಲಿಕ ಸತ್ಯವನ್ನು ಸಾರುತ್ತವೆ. ಅದರಲ್ಲೂ ಸಾರ್ವಜನಿಕ ಜೀವನದಲ್ಲಿರುವವರು, ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ತಮ್ಮ ಮಾತು ಮತ್ತು ನಡವಳಿಕೆಯಲ್ಲಿ ಸಂಯಮ ಹಾಗೂ ಸೌಜನ್ಯ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ ಎಂದಿದ್ದಾರೆ.

ರಾಜಕಾರಣದಲ್ಲಿ ಟೀಕೆ, ವಿಮರ್ಶೆ, ಆರೋಪಗಳು ಸಹಜ. ಅವಕ್ಕೆ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ತಾಳ್ಮೆಯಿಂದ, ವಾದ ಮತ್ತು ವಿಚಾರಗಳ ಮೂಲಕ ಉತ್ತರ ನೀಡುವುದು ಒಬ್ಬ ಸುಸಂಸ್ಕೃತ ನಾಯಕನ ಲಕ್ಷಣ. ಆದರೆ ಭಾಷೆಯಲ್ಲಿ ಸಂಯಮ ಕಳೆದು, ಪ್ರಚೋದನಕಾರಿ ವರ್ತನೆಗೆ ಇಳಿದಾಗ ಅದರ ದುಷ್ಪರಿಣಾಮವನ್ನು ಅನಿವಾರ್ಯವಾಗಿ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಚಿಕ್ಕಬಳ್ಳಾಪುರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಮ್ಮ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದೆ. ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಶಾಸಕರ ಪ್ರಚೋದನಕಾರಿ ನಡೆ ಮತ್ತು ಹೇಳಿಕೆಗಳೇ ಕಾರಣವೆಂಬುದು ಸ್ಪಷ್ಟವಾಗಿದೆ. ಘಟನೆಯ ನಂತರ ಒಂದು ಕಡೆ ಅಮಾಯಕ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿ, ಮತ್ತೊಂದು ಕಡೆ ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿದವರ, ಪ್ರಚೋದನೆಗೆ ಕಾರಣರಾದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಪೊಲೀಸ್ ಇಲಾಖೆಯ ನಿಷ್ಪಕ್ಷಪಾತತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ ಎಂದು ಆರೋಪಿಸಿದ್ದಾರೆ.

ಜನರಿಂದ ಆಯ್ಕೆಯಾದ ಪ್ರತಿನಿಧಿಯೊಬ್ಬರು ಅಧಿಕಾರದ ಮದದಲ್ಲಿ ತೊಡೆ ತಟ್ಟುವುದು, ಮೀಸೆ ತಿರುವುವುದು, ಭುಜ ತಟ್ಟಿಕೊಳ್ಳುವಂತಹ ಪ್ರಚೋದನಕಾರಿ ವರ್ತನೆ ಪ್ರದರ್ಶಿಸುವುದು ಯಾವುದೇ ರೀತಿಯಲ್ಲೂ ಶೋಭೆ ತರುವುದಿಲ್ಲ ಎಂದಿದ್ದಾರೆ.

MP Dr. k. Sudhakar
ತೊಡೆ ತಟ್ಟೋದು, ಪ್ರಚೋದನೆ ಕೊಡೋದು ತಪ್ಪು,ಪ್ರದೀಪ್ ಈಶ್ವರ್ ವಿರುದ್ಧ ದಾಳಿ ಪ್ರಯತ್ನ ಸರಿಯಲ್ಲ: ಪ್ರಿಯಾಂಕ್ ಖರ್ಗೆ

ಶಾಸಕರು ನಡೆದುಕೊಂಡ ರೀತಿಯಿಂದ ಇಂದು ಇಡೀ ಚಿಕ್ಕಬಳ್ಳಾಪುರದ ಜನತೆ ತಲೆ ತಗ್ಗಿಸುವಂತಾಗಿದೆ. ಸಮಾಜವನ್ನು ಒಗ್ಗೂಡಿಸಬೇಕಾದ ಸ್ಥಾನದಲ್ಲಿರುವವರು ಜಾತಿ-ಜಾತಿಗಳ ನಡುವೆ ವೈಮನಸ್ಸು ಮೂಡಿಸುವ ಪ್ರಯತ್ನ ಮಾಡುವುದು ಅತ್ಯಂತ ದುರದೃಷ್ಟಕರ.

ನಮ್ಮ ಯಾವುದೇ ಅಮಾಯಕ ಕಾರ್ಯಕರ್ತನಿಗೂ ಅನ್ಯಾಯವಾಗಲು ನಾನು ಅವಕಾಶ ನೀಡುವುದಿಲ್ಲ. ಅವರ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣಗಳ ವಿರುದ್ಧ ಕಾನೂನು ಹೋರಾಟ ನಡೆಸಲು ಅಗತ್ಯವಿರುವ ಸಂಪೂರ್ಣ ವೆಚ್ಚವನ್ನು ನಾನೇ ಭರಿಸುತ್ತೇನೆ. ಪೊಲೀಸ್ ಇಲಾಖೆ ಘಟನೆಗೆ ಕಾರಣವಾದವರ ಪಾತ್ರವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ, ನಮ್ಮ ಕಾರ್ಯಕರ್ತರ ನ್ಯಾಯಯುತವಾದ ಹಕ್ಕುಗಳನ್ನು ರಕ್ಷಿಸಲು ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com