

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರು ಹೊರವಲಯದ ಬಳಿ ಭೀಕರ ಅಪಘಾತ ಸಂಭವಿಸಿದೆ. ಪಂಚರ್ ಆಗಿ ನಿಂತಿದ್ದ ಕ್ಯಾಂಟರ್ ವಾಹನಕ್ಕೆ ಟಾಟಾ ಎಸ್ ಡಿಕ್ಕಿ ಹೊಡೆದು ಮೂವರು ಮೃತಪಟ್ಟಿದ್ದಾರೆ.
ಅತೀ ವೇಗದಲ್ಲಿ ಸಾಗುತ್ತಿದ್ದ ಟಾಟಾ ಏಸ್ ವಾಹನ ಡಿಕ್ಕಿಯಾಗಿದೆ. ಪರಿಣಾಮ ಟಾಟಾ ಏಸ್ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಡಿಕ್ಕಿ ಪರಿಣಾಮ ಚಾಲಕ ಹಾಗೂ ಸಹಾಯಕ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರ ಗಾಯಗೊಂಡಿದ್ದ ಮತ್ತೊಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗೆ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಟಾಟಾ ಏಸ್ ವಾಹನದಲ್ಲಿದ್ದ ಮೂವರು ಮೃತಪಟ್ಟಿದ್ದಾರೆ.
ಕೆ ಆರ್ ಪುರಂ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಮೇಡಹಳ್ಳಿ ಮೇಲ್ಸೇತುವೆ ಮೇಲೆ ಈ ಅಪಘಾತ ನಡೆದಿದೆ. ಕೋಲಾರದಿಂದ ಬೆಂಗಳೂರಿಗೆ ಆಲೂಗಡ್ಡೆ ತುಂಬಿಸಿಕೊಂಡು ಬಂದಿದ್ದ ಕ್ಯಾಂಟರ್ ವಾಹನ, ಪಂಚರ್ ಆಗಿ ಮೇಡಹಳ್ಳಿ ಮೇಲ್ಸೇತುವೆ ಮೇಲೆ ನಿಂತಿದೆ. ಹೀಗಾಗಿ ಕ್ಯಾಂಟರ್ ಚಾಲಕ ವಾಹನದ ಟೈಯರ್ ಬದಲಾಯಿಸಲು ಮುಂದಾಗಿದ್ದಾನೆ. ನಿಂತಿರುವ ಕ್ಯಾಂಟರ್ ಗಮನಿಸದೇ ಅತೀ ವೇಗವಾಗಿ ಸಾಗುತ್ತಿದ್ದ KA 53 AB 3498 ಟಾಟಾ ಏಸ್ ವಾಹನ ಭೀಕರವಾಗಿ ಅಪಘಾತಕ್ಕೀಡಾಗಿದೆ.
ಡಿಕ್ಕಿ ರಭಸಕ್ಕೆ ಇಬ್ಬರ ದೇಹಗಳು ಸಿಲುಕಿ ಛಿದ್ರಗೊಂಡಿದೆ. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದ. ಇಬ್ಬರ ಮೃತದೇಹಗಳನ್ನು ಕೆಆರ್ ಪುರಂ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಗಾಯದ ಪ್ರಮಾಣ ಹೆಚ್ಚಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಮೂರನೇ ವ್ಯಕ್ತಿ ಕೂಡ ಮೃತಪಟ್ಟಿದ್ದಾರೆ. ವೈಟ್‌ಫೀಲ್ಡ್ ನಿವಾಸಿಗಳಾದ ಮಣಿಕಂಠ, ಸುರೇಶ್, ಶ್ರೀನಿವಾಸ್ ಮೃತ ದುರ್ದೈವಿಗಳು. ಮೂವರು ಸುಮಾರು 25 -30 ವಯಸ್ಸಿನವರು ಎಂದು ಅಂದಾಜಿಸಲಾಗಿದೆ.
ದೇವನಹಳ್ಳಿ ಬಳಿ ಅಪಘಾತ, ಮೂವರು ಸಾವು
ದೇವನಹಳ್ಳಿ ಹೊರವಲಯದ ರಾಣಿ ಕ್ರಾಸ್ ಬಳಿ ಮಧ್ಯರಾತ್ರಿ ನಡೆದ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು ದಾರುಣವಾಗಿ ಮೃತಪಟ್ಟಿದ್ದಾರೆ. ಹೈವೆಯಿಂದ ಸರ್ವೀಸ್ ರಸ್ತೆಗೆ ಬರುತ್ತಿದ್ದ ಟಿಟಿಗೆ ಲಾರಿ ಡಿಕ್ಕಿಯಾದ ಪರಿಣಾಮ ವಾಹನದಲ್ಲಿದ್ದ 13 ಮಂದಿ ಪೈಕಿ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಯಮ್ಮ(60), ಯಶೋದಮ್ಮ(60), ಗಂಗಾ(38) ಮೃತರು. ಟಿಟಿ ವಾಹನ ಚಾಲಕ ಸೇರಿದಂತೆ 8 ಜನರಿಗೆ ಅಪಘಾತದಲ್ಲಿ ಗಾಯಗಳಾಗಿವೆ.
ದೇವನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಂಪಮ್ಮ ಎಂಬುವರು ಗಂಭೀರ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
15 ದಿನಗಳ ಪ್ರವಾಸಕ್ಕೆಂದು ಒಂದೇ ಏರಿಯಾದ ಜನರು ಹೊರಟಿದ್ದರು. ಸ್ತ್ರೀ ಶಕ್ತಿ ಸಂಘಟನೆ ಚೀಟಿ ಮೂಲಕ ಪ್ರವಾಸದ ಪ್ಲಾನ್ ಮಾಡಿದ್ದ 12 ಜನರ ತಂಡ ಇಂದು ಬೆಳಗ್ಗೆ 6 ಗಂಟೆಯ ಪ್ಲೈಟ್ ನಲ್ಲಿ ಕಾಶಿಗೆ ಟಿಕೆಟ್ ಬುಕ್ ಮಾಡಿತ್ತು. ಹೀಗಾಗಿ ತಿಪಟೂರಿನಿಂದ ಕೆಂಪೇಗೌಡ ಏರ್ಪೋರ್ಟ್ಗೆ ಟಿಟಿ ವಾಹನದ ಮೂಲಕ ರಾತ್ರಿ 10 ಗಂಟೆ ಸುಮಾರಿಗೆ ಹೊರಟಿದ್ದರು. ಏರ್ಪೋರ್ಟ್ನ ಟರ್ಮಿನಲ್ ದಾರಿಯ ಬಗ್ಗೆ ಸರಿಯಾಗಿ ತಿಳಿದಿರದ ಕಾರಣ ಗೂಗಲ್ ಮ್ಯಾಪ್ ಹಾಕಿಕೊಂಡು ಟಿಟಿ ಚಾಲಕ ವಾಹನ ಚಾಲನೆ ಮಾಡುತ್ತಿದ್ದ.
ಅಪಘಾತ ನಡೆದ ಸ್ಥಳಕ್ಕೂ ಹಿಂದೆಯೇ ಸರ್ವೀಸ್ ರಸ್ತೆಗೆ ಮೊದಲ ಟರ್ನಿಂಗ್ ಇತ್ತು. ಆದರೆ ಅದು ಗೊತ್ತಾಗದೆ ಮುಂದೆ ಪಾಸ್ ಆಗಿದ್ದ ಟಿಟಿ ವಾಹನ ಮುಂದಿನ ಟರ್ನಿಂಗ್ನಲ್ಲಿ ಯೂಟರ್ನ್ ಪಡೆಯುವ ವೇಳೆ ಲಾರಿ ಟಿಟಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಟಿಟಿಯ ಎಡಭಾಗ ಸಂಪೂರ್ಣ ಜಖಂ ಆಗಿದ್ದು, ಸಿಂಗಲ್ ಸೀಟ್ಗಳಲ್ಲಿ ಕುಳಿತಿದ್ದ ಮೂವರು ಮಹಿಳೆಯರ ದುರ್ಮರಣ ಹೊಂದಿದ್ದಾರೆ.
ರಸ್ತೆ ಅಪಘಾತದಲ್ಲಿ ಯುವಕ ಸಾವು
ಬೆಂಗಳೂರಿನ ಇಸ್ಕಾನ್ ಬಳಿ ಇರುವ ಕಮಲಮ್ಮನ ಗುಂಡಿ ಬಳಿ ಸಂಭವಿಸಿದ ಅಪಘಾತದಲ್ಲಿ 24ರ ಹರೆಯದ ಯುವಕ ಮೃತಪಟ್ಟ ಘಟನೆ ನಡೆದಿದೆ. ಡಿವೈಡರ್ಗೆ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಅತಿಯಾದ ವೇಗದಿಂದ ಅಪಘಾತ ಆಗಿದೆ ಎನ್ನಲಾಗುತ್ತಿದೆ. ಘಟನೆ ಸಂಬಂದ ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement