

ಶಿವಮೊಗ್ಗ: ರಾಜ್ಯದಲ್ಲಿ ಆಕಾಲಿಕ ಮಳೆಯಿಂದ ಜಲ ಕಂಟಕ ಎದುರಾಗಿದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಸೊರಬ ತಾಲ್ಲೂಕಿನ ಜಡೆ ಸಂಸ್ಥಾನ ಮಠದ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ದೇಶದಲ್ಲಿ ಸಕಾಲಿಕವಾಗಿ ಮಳೆಯಾಗದೆ ಹೋದರೂ, ಅಕಾಲಿಕವಾಗಿ ಸುರಿಯುವ ಮಳೆಯಿಂದಾಗಿ ಜಲಕಂಟಕ ಎದುರಾಗಲಿದೆ. ಮಳೆ, ಗುಡುಗು ಮತ್ತು ಸಿಡಿಲಿನ ಆರ್ಭಟ ಹೆಚ್ಚಾಗಲಿದ್ದು, ಸಾಮಾನ್ಯವಾಗಿ ಮಳೆಗಾಲದ ನಿಗದಿತ ಅವಧಿಯಲ್ಲಿ ಮಳೆಯಾಗದೆ, ಅನಿರೀಕ್ಷಿತ ಸಮಯದಲ್ಲಿ ಸುರಿಯುವ ಮಳೆಯು ಕೃಷಿ ಮತ್ತು ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದರು.
ರಾಜ್ಯದಲ್ಲಿ ಮಳೆ ಮತ್ತು ಬೆಳೆ ಉತ್ತಮವಾಗಿರಲಿದೆ ಎಂಬ ಆಶಾದಾಯಕ ಮಾತನ್ನು ಹೇಳಿದರೂ ಸಹ, ಕೆಲವು ಆಕಸ್ಮಿಕ ಘಟನೆಗಳು ಆತಂಕ ಮೂಡಿಸಲಿವೆ. ವಿಶೇಷವಾಗಿ ದೊಡ್ಡ ದೊಡ್ಡ ನಗರಗಳು ಪ್ರಕೃತಿ ವಿಕೋಪ ಅಥವಾ ಆಕಸ್ಮಿಕ ಅನಾಹುತಗಳಿಂದ ಆಪತ್ತನ್ನು ಎದುರಿಸಲಿವೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಮತ್ತು ದೇಶದ ರಾಜಕಾರಣದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಉತ್ತರಿಸಿದ ಶ್ರೀಗಳು, ಅರಸನ ಅರಮನೆ ಕಳೆಗುಂದಿತು ಮತ್ತು ಪಟ್ಟದ ಆನೆ ಗಾಂಭೀರ್ಯದಿಂದ ನಡೆದೀತು ಎಂಬ ಅವರ ಮಾರ್ಮಿಕ ನುಡಿಗಳು ರಾಜಕೀಯ ವಲಯದಲ್ಲಿ ಹಲವು ಅರ್ಥಗಳನ್ನು ಕಲ್ಪಿಸುತ್ತಿವೆ. ಅಧಿಕಾರ ಕೇಂದ್ರಗಳಲ್ಲಿ ಬದಲಾವಣೆ ಅಥವಾ ಪ್ರಭಾವಿ ವ್ಯಕ್ತಿಗಳ ವರ್ಚಸ್ಸಿನಲ್ಲಿ ಏರುಪೇರಾಗುವ ಮುನ್ಸೂಚನೆಯನ್ನು ಈ ಸಾಲುಗಳು ನೀಡುತ್ತಿವೆ. ಪಟ್ಟದ ಆನೆಯ ಗಾಂಭೀರ್ಯದ ನಡಿಗೆಯು ಸ್ಥಿರತೆ ಅಥವಾ ಹೊಸ ನಾಯಕತ್ವದ ಉದಯವನ್ನು ಸೂಚಿಸುತ್ತಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಸತ್ಯವು ಯಾವಾಗಲೂ ಕಹಿಯಾಗಿರುತ್ತದೆ ಎಂದು ಮಾರ್ಮಿಕವಾಗಿ ಹೇಳಿದ ಶ್ರೀಗಳು, ಹಿಂದೆ ತಾವು ನುಡಿದಿದ್ದ ಭವಿಷ್ಯಗಳು ಹೇಗೆ ನಿಜವಾಗಿವೆ ಎಂಬುದನ್ನು ನೆನಪಿಸಿಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಪ್ರಭಾವಿ ವ್ಯಕ್ತಿಗಳ ಪತನ ಮತ್ತು ಯುದ್ಧದ ಭೀತಿಯ ಬಗ್ಗೆ ಅವರು ಈ ಹಿಂದೆ ನೀಡಿದ್ದ ಎಚ್ಚರಿಕೆಗಳು ಪ್ರಸ್ತುತ ವಿದ್ಯಮಾನಗಳಿಗೆ ಹೊಂದಿಕೆಯಾಗುತ್ತಿವೆ. ಎರಡು ಪ್ರಮುಖ ತಲೆಗಳು ಉರುಳಲಿವೆ ಎಂಬ ಅವರ ಹೇಳಿಕೆಯು ಅಂತರಾಷ್ಟ್ರೀಯ ರಾಜಕೀಯದಲ್ಲಿ ಸಂಭವಿಸಲಿರುವ ದೊಡ್ಡ ಬದಲಾವಣೆ ಅಥವಾ ನಾಯಕರ ನಿರ್ಗಮನವನ್ನು ಸೂಚಿಸುತ್ತದೆ.
Advertisement