ಖಾನಾಪುರದಲ್ಲಿ ಅಕ್ರಮ ಶಸ್ತ್ರಾಸ್ತ್ರ ಜಾಲ ಭೇದಿಸಿದ ಪೊಲೀಸರು: 13 ಮಂದಿ ಬಂಧನ, 9 ಬಂದೂಕು ವಶಕ್ಕೆ..!

2024ರಿಂದ ಕತ್ಗಲಿ ಗ್ರಾಮದ ಮಾರುತಿ ಶ್ರೀಕಾಂತ್ ಸುತಾರ್ ಎಂಬಾತ ಅಕ್ರಮವಾಗಿ ದೇಶೀ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು.
Maruti Shrikant Sutar
ಮಾರುತಿ ಶ್ರೀಕಾಂತ್ ಸುತಾರ್
Updated on

ಬೆಳಗಾವಿ: ಖಾನಾಪುರ ತಾಲೂಕಿನ ಕತ್ಗಲಿ ಗ್ರಾಮದಲ್ಲಿ ಅಕ್ರಮವಾಗಿ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಖಾನಾಪುರ ಪೊಲೀಸರು ಭೇದಿಸಿದ್ದು, 13 ಮಂದಿಯನ್ನು ಬಂಧಿಸಿ 9 ದೇಶೀ ಬಂದೂಕುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಸಾಮಗ್ರಿಯನ್ನು ವಶಪಡಿಸಿಕೊಂಡಿದ್ದಾರೆ.

2024ರಿಂದ ಕತ್ಗಲಿ ಗ್ರಾಮದ ಮಾರುತಿ ಶ್ರೀಕಾಂತ್ ಸುತಾರ್ ಎಂಬಾತ ಅಕ್ರಮವಾಗಿ ದೇಶೀ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು.

ಇದರ ಆಧಾರದ ಮೇಲೆ ಮೇ 11ರಂದು ಸ್ವಯಂಪ್ರೇರಿತ (ಸುವೋ ಮೋಟು) ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು, ಮಾರುತಿ ಸುತಾರ್‌ನನ್ನು ಬಂಧಿಸಿ ಆತ ತಯಾರಿಸುತ್ತಿದ್ದ ದೇಶೀ ಬಂದೂಕನ್ನು ವಶಪಡಿಸಿಕೊಂಡರು.

ತನಿಖೆಯಲ್ಲಿ ಬಯಲಾಯ್ತು ಅಕ್ರಮ ಜಾಲ

ಮುಂದಿನ ತನಿಖೆಯಲ್ಲಿ ಮಾರುತಿ ಸುತಾರ್‌ನಿಂದ ಅಕ್ರಮ ಶಸ್ತ್ರಾಸ್ತ್ರ ಖರೀದಿಸಿದ್ದ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ ಮತ್ತಷ್ಟು 8 ದೇಶೀ ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಮಾರ್ಕಂಡೇಯನಗರದ ಸೋಮನಾಥ ಚೌಗುಲೆ, ಸಂತೋಷ ನಾಯಕ್, ಮಾರುತಿ ಗುಡದ್ಯಾಗೋಳ, ಬಾಳು ನಾಯಕ್, ಲಕ್ಷ್ಮಣ ಗುಜನಾಳ ಹಾಗೂ ಮುದಿಕೊಪ್ಪದ ಬಸವರಾಜ ಸಾಲೋಟಗಿ, ಬಸವಂತ ಯಾರ್ಮಲ್ಕರ್ ಮತ್ತು ಲಕ್ಷ್ಮಣ ಗುರವ್ ಎಂದು ಗುರ್ತಿಸಲಾಗಿದೆ.

ಇದೇ ಪ್ರಕರಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿಕೆಗೆ ಆರ್ಥಿಕ ನೆರವು ನೀಡಿದ್ದ ಆರೋಪದಡಿ ಮರಿಯಪ್ಪ ನಾಯಕ್‌ ಎಂಬಾತನನ್ನೂ ಬಂಧನಕ್ಕೊಳಪಡಿಸಿದ್ದಾರೆ.

Maruti Shrikant Sutar
ವಿಜಯಪುರ: ಆರು ಮಂದಿಯ ಬರ್ಬರ ಹತ್ಯೆ; 12 ಮಂದಿ ವಿರುದ್ಧ FIR ದಾಖಲು

ಬುಕ್‌ಸ್ಟಾಲ್ ಮಾಲೀಕ ಸೇರಿ ಮತ್ತಿಬ್ಬರ ಬಂಧನ

ಈ ನಡುವೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ಬುಕ್‌ಸ್ಟಾಲ್ ಮಾಲೀಕ ವಿಶ್ವನಾಥ ಅಲಿಯಾಸ್ ಸಂತೋಷ್ ದೇಸಾಯಿ ಅಕ್ರಮ ಶಸ್ತ್ರಾಸ್ತ್ರ ಭಾಗಗಳು ಮತ್ತು ಗುಂಡು-ಸಿಡಿಮದ್ದು ಪೂರೈಸುತ್ತಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ.

ಆತನಿಂದ 21 ಟ್ರಿಗರ್‌ಗಳು, 5 ಗನ್ ಹೆಡ್‌ಗಳು, 15 ನಿಪಲ್‌ಗಳು, 34 ಪ್ಯಾಕೆಟ್ ಗನ್‌ಪೌಡರ್, 449 ಸೀಸದ ಗುಂಡುಗಳು, 420 ಪರ್ಕಷನ್ ಕ್ಯಾಪ್‌ಗಳು, 48 ಜೀವಂತ ಕಾರ್ಟ್ರಿಡ್ಜ್‌ಗಳು ಹಾಗೂ ವೆಲ್ಡಿಂಗ್ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದಲ್ಲದೆ, ಬೆಳಗಾವಿಯ ಖಂಜರ್ ಗಲ್ಲಿಯಲ್ಲಿರುವ ‘ಅವಿಸ್ ಗನ್‌ಶಾಪ್’ ಮಾಲೀಕ ವಿಜಯ್ ಅಂಗೋಲ್ಕರ್‌ನನ್ನೂ ಬಂಧಿಸಲಾಗಿದೆ.

2021ರಲ್ಲೇ ಪರವಾನಗಿ ಅವಧಿ ಮುಗಿದಿದ್ದರೂ ಆತ ಅಕ್ರಮವಾಗಿ ಶಸ್ತ್ರಾಸ್ತ್ರ ಸಾಮಗ್ರಿ ಹಾಗೂ ಮದ್ದುಗುಂಡುಗಳನ್ನು ಮಾರಾಟ ಮಾಡುತ್ತಿದ್ದನೆಂದು ತನಿಖೆಯಲ್ಲಿ ತಿಳಿದುಬಂದಿದೆ.

ವೆಲ್ಡಿಂಗ್ ಅಂಗಡಿ ಮಾಲೀಕನೂ ಅರೆಸ್ಟ್

ದೇಶೂರ್ ಗ್ರಾಮದ ವೆಲ್ಡಿಂಗ್ ಅಂಗಡಿ ಮಾಲೀಕನೊಬ್ಬ ಬಂದೂಕುಗಳ ಬ್ಯಾರೆಲ್ ವೆಲ್ಡಿಂಗ್ ಮಾಡಿ ಅಕ್ರಮ ಶಸ್ತ್ರಾಸ್ತ್ರ ತಯಾರಿಕೆಗೆ ನೆರವಾಗಿದ್ದಾನೆ ಎಂಬ ಆರೋಪದ ಮೇಲೆ ಆತನನ್ನೂ ಪೊಲೀಸರು ಬಂಧಿಸಿದ್ದಾರೆ. ಆತನಿಂದ ವೆಲ್ಡಿಂಗ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ

ಎಲ್ಲ 13 ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯನ್ನು ಖಾನಾಪುರ ಪೊಲೀಸ್ ಇನ್ಸ್‌ಪೆಕ್ಟರ್ ಎಲ್.ಎಚ್. ಗೌಂಡಿ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com