ಅಂತರಿಕ್ಷದಲ್ಲಿ ಭಾರತದ ಹೊಸ ಇತಿಹಾಸಕ್ಕೆ ಮುನ್ನುಡಿ: 2035ಕ್ಕೆ ಸ್ಪೇಸ್ ಸ್ಟೇಷನ್, 2040ಕ್ಕೆ ಚಂದ್ರನ ಮೇಲೆ ಮಾನವ; ISRO ಘೋಷಣೆ

ತುಮಕೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವು ಐತಿಹಾಸಿಕ ಮೈಲಿಗಲ್ಲುಗಳನ್ನು ಸ್ಥಾಪಿಸಲು ಸಜ್ಜಾಗುತ್ತಿದ್ದು, 2040ರ ವೇಳೆಗೆ ಭಾರತೀಯ ಗಗನಯಾತ್ರಿಯನ್ನು ಚಂದ್ರನ ಮೇಲೆ ಇಳಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಇಸ್ರೋ ಸಕ್ರಿಯವಾಗಿ ಶ್ರಮಿಸುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಡಾ. ವಿ. ನಾರಾಯಣನ್ ಹೇಳಿದ್ದಾರೆ.
ನವೆಂಬರ್ 28ರಂದು ತುಮಕೂರಿನ ಶ್ರೀ ಸಿದ್ಧಾರ್ಥ ಉನ್ನತ ಶಿಕ್ಷಣ ಅಕಾಡೆಮಿಯ (SSAHE) 15ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಪದವೀಧರರನ್ನು ಉದ್ದೇಶಿಸಿ ಮಾತನಾಡುವ ಸಂಧರ್ಭದಲ್ಲಿ ಡಾ. ವಿ. ನಾರಾಯಣನ್ ಅವರು ಈ ಘೋಷಣೆ ಮಾಡಿದರು.
ಹಳೆಯ ಸೈಕಲ್‌ಗಳಲ್ಲಿ ರಾಕೆಟ್ ಬಿಡಿಭಾಗಗಳನ್ನು ಸಾಗಿಸುತ್ತಿದ್ದ ಮತ್ತು ಎತ್ತಿನಗಾಡಿಗಳಲ್ಲಿ ಉಪಗ್ರಹಗಳ ಪ್ರಯೋಗ ನಡೆಸುತ್ತಿದ್ದ ಹಂತದಿಂದ ಇಂದು 34 ದೇಶಗಳ 434 ಉಪಗ್ರಹಗಳನ್ನು ಉಡಾವಣೆ ಮಾಡುವ ಮಟ್ಟಕ್ಕೆ ಭಾರತ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮಹತ್ತರ ಸಾಧನೆ ಮಾಡಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ. ಭಾರತದ ಸಾಧನೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ.
ಒಂದು ಕಾಲದಲ್ಲಿ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಶಕ್ತಿಯಾಗಿ ಬೆಳೆಯುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಆದರೆ, ಇಂದು ಭಾರತದ ನೆಲದಿಂದಲೇ 34 ದೇಶಗಳ 434 ಉಪಗ್ರಹಗಳನ್ನು ಉಡಾವಣೆ ಮಾಡಿದ್ದೇವೆ. ಇದರಲ್ಲಿ 6,000 ಕೆ.ಜಿ. ತೂಕದ ಅತ್ಯಾಧುನಿಕ ವಾಣಿಜ್ಯ ಉಪಗ್ರಹಗಳೂ ಸೇರಿವೆ.
2035ರ ವೇಳೆಗೆ ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವುದು ಹಾಗೂ 2040ರ ವೇಳೆಗೆ ಭಾರತೀಯನೊಬ್ಬನನ್ನು ಚಂದ್ರನ ಮೇಲೆ ಇಳಿಸುವ ಗುರಿಯೊಂದಿಗೆ ಇಸ್ರೋ ಕಾರ್ಯನಿರ್ವಹಿಸುತ್ತಿದೆ. ಗಗನಯಾನ ಮಾನವ ಸಹಿತ ಬಾಹ್ಯಾಕಾಶ ಯಾನ ಯೋಜನೆಯೂ ಪ್ರಗತಿಯಲ್ಲಿದೆ. ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಈಗಾಗಲೇ ಸುಮಾರು 450 ನವೋದ್ಯಮಗಳು ಕಾರ್ಯನಿರ್ವಹಿಸುತ್ತಿವೆ ಹೇಳಿದರು.
ಇದೇ ವೇಳೆ ಪದವಿ ಪಡೆದ ವಿದ್ಯಾರ್ಥಿಗಳಿಗೆ ನಿರಂತರ ಕಲಿಕೆಯನ್ನು ಜೀವನದ ಭಾಗವಾಗಿಸಿಕೊಳ್ಳುವಂತೆ ಸಲಹೆ ನೀಡಿದ ಅವರು, ನಿಮ್ಮ ಪದವಿ ಮುಂದಿನ ವರ್ಷಗಳಲ್ಲಿ ಸಮಾಜಕ್ಕೆ ಮೌಲ್ಯವನ್ನು ನೀಡುವಂತಿರಲಿ. ಈ ಜಗತ್ತಿನ ಅತ್ಯಂತ ಸುಂದರವಾದ ಸಂಗತಿಯೆಂದರೆ ಹೆತ್ತವರ ಮುಖದಲ್ಲಿ ಸಂತೋಷವನ್ನು ನೋಡುವುದು. ಅವರ ಜೀವನದುದ್ದಕ್ಕೂ ಸಂತೋಷವಾಗಿರುವಂತೆ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ವಿಭಾಗಗಳ ಒಟ್ಟು 1,347 ವಿದ್ಯಾರ್ಥಿಗಳಿಗೆ ಪರಮೇಶ್ವರ್ ಪದವಿ ಪ್ರದಾನ ಮಾಡಿದರು. 18 ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಪಡೆದರು.
ಇದೇ ಸಂದರ್ಭದಲ್ಲಿ 18 ಪಿಎಚ್‌ಡಿ ಪದವಿಗಳು ಹಾಗೂ ಎಂಟು ಫೆಲೋಶಿಪ್ ಪದಕಗಳನ್ನು ಪ್ರದಾನ ಮಾಡಲಾಯಿತು. ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ. ಲಿಂಗೇಗೌಡ ವಾರ್ಷಿಕ ಪ್ರಗತಿ ವರದಿಯನ್ನು ಮಂಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



