

ಬೆಂಗಳೂರು: ನಗರದ ಪೊಲೀಸ್ ಕಮಿಷನರ್ ಕಚೇರಿಯ ಹೊರಗೆ ಚಲಿಸುತ್ತಿದ್ದ ಕಾರೊಂದರ ಇಂಜಿನ್‌ನಲ್ಲಿ ದಿಢೀರನೆ ಭೀಕರ ಬೆಂಕಿ ಕಾಣಿಸಿಕೊಂಡು ಭಾಗಶಃ ಸುಟ್ಟು ಹೋದ ಘಟನೆ ಇನ್‌ಫೆಂಟ್ರಿ ರಸ್ತೆಯಲ್ಲಿ ಇಂದು ಶನಿವಾರ ಬೆಳಗ್ಗೆ ನಡೆದಿದೆ. ಸಮಯಪ್ರಜ್ಞೆಯಿಂದ ಚಾಲಕ ತಕ್ಷಣವೇ ಕಾರಿನಿಂದ ಕೆಳಗಿಳಿದ ಕಾರಣ ಜೀವಾಪಾಯದಿಂದ ಪಾರಾಗಿದ್ದಾರೆ.
ಶಬ್ಬೀರ್ ಎಂಬುವವರು ತಮ್ಮ ಟೊಯೋಟಾ ಕಂಪನಿಯ 'ಟೈಸರ್' (Toyota Taisor) ಮಾಡೆಲ್ ಕೆಂಪು ಬಣ್ಣದ ಕಾರಿನಲ್ಲಿ ಇನ್‌ಫೆಂಟ್ರಿ ರಸ್ತೆಯ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದರು. ಕಾರಿನಲ್ಲಿ ಒಬ್ಬರೇ ಇದ್ದರು. ಕಮಿಷನರ್ ಕಚೇರಿ ಮುಂಭಾಗ ಬರುತ್ತಿದ್ದಂತೆ ಕಾರಿನ ಇಂಜಿನ್ ಭಾಗದಿಂದ ದಿಢೀರನೆ ದಟ್ಟ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿತು. ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅಪಾಯವನ್ನು ಅರಿತ ಮಾಲೀಕ ಶಬ್ಬೀರ್, ತಡಮಾಡದೇ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ತಕ್ಷಣ ಕೆಳಗಿಳಿದು ಸಹಾಯಕ್ಕಾಗಿ ಕೇಳಿಕೊಂಡರು.
ನಡುರಸ್ತೆಯಲ್ಲಿ ಕಾರು ಹೊತ್ತಿ ಉರಿಯುತ್ತಿದ್ದನ್ನು ಕಂಡ ತಕ್ಷಣವೇ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸ್ ಸಿಬ್ಬಂದಿ, ಸಾರ್ವಜನಿಕರು ಹಾಗೂ ಸಮೀಪದಲ್ಲಿದ್ದ ಸ್ಪರ್ಶ್ ಆಸ್ಪತ್ರೆಯ ಸಿಬ್ಬಂದಿ ಧಾವಿಸಿ ಬಂದರು. ಆಸ್ಪತ್ರೆ ಹಾಗೂ ಸುತ್ತಮುತ್ತಲ ಕಟ್ಟಡಗಳಲ್ಲಿ ಇದ್ದ 'ಫೈರ್ ಎಕ್ಸ್‌ಟಿಂಗ್ಯುಷರ್' ಬಳಸಿ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತರಲಾಯಿತು.
ಸಮಯಕ್ಕೆ ಸರಿಯಾಗಿ ಬೆಂಕಿ ನಂದಿಸಿದ್ದರಿಂದ ಅಕ್ಕಪಕ್ಕದ ವಾಹನಗಳಿಗೆ ಹಾಗೂ ಸಾರ್ವಜನಿಕರಿಗೆ ಅನಾಹುತ ಸಂಭವಿಸಿಲ್ಲ. ಈ ಬೆಂಕಿ ಅವಘಡದಲ್ಲಿ ಕಾರಿನ ಮುಂಭಾಗದ ಇಂಜಿನ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಭಾರೀ ಹಾನಿಯಾಗಿದೆ. ಇಂಜಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಅಥವಾ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.