

ಬೆಂಗಳೂರು: ಬೆಂಗಳೂರಿನ ಬಸವನಗರ ಮುಖ್ಯ ರಸ್ತೆಯಲ್ಲಿ ಅಕ್ಟೋಬರ್ 10, 2026 ರಿಂದ 20 ದಿನಗಳ ಕಾಲ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಎಚ್‌ಎಎಲ್ ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ವಿಭೂತಿಪುರ ಕೆರೆಯ ಮಳೆನೀರು ಕಾಲುವೆಗೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಈ ರಸ್ತೆಯಲ್ಲಿ ಸಂಚಾರ ಮಾರ್ಪಾಡು ಮಾಡಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ನಿರ್ಬಂಧವ್ಯಾಕೆ?
ಜಿಬಿಎ ವತಿಯಿಂದ ವಿಭೂತಿಪುರ ಕೆರೆಯ ಮಳೆನೀರು ಕಾಲುವೆಗೆ ಹೊಸದಾಗಿ ಕಾಂಕ್ರೀಟ್ ಸೇತುವೆ ನಿರ್ಮಿಸಲಾಗುತ್ತಿದೆ. ಈ ರಸ್ತೆಯು ಅತ್ಯಂತ ಕಿರಿದಾಗಿರುವುದರಿಂದ ಹಾಗೂ ಭಾರಿ ಯಂತ್ರೋಪಕರಣಗಳನ್ನು ಬಳಸುತ್ತಿರುವುದರಿಂದ, ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.
ಸಂಚಾರ ನಿರ್ಬಂಧದ ವಿವರಗಳು
ಮಾರ್ಗ 1: ಮಾರತ್ತಹಳ್ಳಿ, ಎಚ್‌ಎಎಲ್, ವಿಭೂತಿಪುರ ಹಾಗೂ ಬಸವನಗರ ಕಡೆಯಿಂದ ವಿಜ್ಞಾನ ನಗರ, ಕಗ್ಗದಾಸಪುರ, ಮಲ್ಲೇಶಪಾಳ್ಯ ಮತ್ತು ಬಿಇಎಂಎಲ್ ಕಡೆಗೆ ಹೋಗುವ ಭಾರಿ ಸರಕು ವಾಹನಗಳು, ಬಿಎಂಟಿಸಿ ಬಸ್‌ಗಳು, ಶಾಲಾ ಬಸ್‌ಗಳು ಹಾಗೂ ಲಘು ಸರಕು ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಮಾರ್ಗ 2: ವಿಜ್ಞಾನ ನಗರ, ಕಗ್ಗದಾಸಪುರ, ಮಲ್ಲೇಶಪಾಳ್ಯ ಹಾಗೂ ಬಿಇಎಂಎಲ್ ಕಡೆಯಿಂದ ವಿಭೂತಿಪುರ, ಬಸವನಗರ, ಎಚ್‌ಎಎಲ್ ಮತ್ತು ಮಾರತ್ತಹಳ್ಳಿ ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಹಾಗಾದ್ರೆ, ಪೊಲೀಸರು ಸೂಚಿಸಿರುವ ಪರ್ಯಾಯ ಮಾರ್ಗಗಲ್ಯಾವುವು?
ವಾಹನ ಸವಾರರು ದಟ್ಟಣೆಯನ್ನು ತಪ್ಪಿಸಲು ಹಳೆ ವಿಮಾನ ನಿಲ್ದಾಣ ರಸ್ತೆ ಮತ್ತು ಸುರಂಜನ್‌ದಾಸ್ ರಸ್ತೆ ಮಾರ್ಗಗಳನ್ನು ಬಳಸಲು ಸೂಚಿಸಲಾಗಿದೆ.
ಮಾರತ್ತಹಳ್ಳಿ/ಎಚ್‌ಎಎಲ್ ಕಡೆಯಿಂದ ಹೋಗುವವರು: ಬಸವನಗರ ಮುಖ್ಯ ರಸ್ತೆ ಜಂಕ್ಷನ್ ಮೂಲಕ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಾಗಿ, ಸುರಂಜನ್‌ದಾಸ್ ರಸ್ತೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಬಿಇಎಂಎಲ್ ಮುಖ್ಯ ರಸ್ತೆ ತಲುಪಿ ಮುಂದೆ ಸಾಗಬಹುದು.
ವಿಜ್ಞಾನ ನಗರ/ಕಗ್ಗದಾಸಪುರ ಕಡೆಯಿಂದ ಬರುವವರು: ಬಿಇಎಂಎಲ್ ಮುಖ್ಯ ರಸ್ತೆ ಮೂಲಕ ಸುರಂಜನ್‌ದಾಸ್ ರಸ್ತೆಯನ್ನು ತಲುಪಿ, ಅಲ್ಲಿಂದ ಹಳೆ ವಿಮಾನ ನಿಲ್ದಾಣ ರಸ್ತೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಮಾರತ್ತಹಳ್ಳಿ ಅಥವಾ ಎಚ್‌ಎಎಲ್ ಕಡೆಗೆ ಪ್ರಯಾಣಿಸಬಹುದು.