ಟಿವಿ ಎದುರೇ ಓದು
ನನ್ನ ಮಗನಿಗೆ 9 ವರ್ಷ. ಟಿವಿ ಹಾಕ್ಕೊಂಡು ಓದುವ, ಬರೆಯುವ ಅಭ್ಯಾಸವಿದೆ. ಈ ಅಭ್ಯಾಸ ಬಿಡಿಸಿದರೆ, ಕಡಿಮೆ ಅಂಕ ತೆಗೆಯುತ್ತಾನೆ. ದಾರಿ ಏನೆಂದು ತಿಳಿಯುತ್ತಿಲ್ಲ.
- ಕಲ್ಪನಾ ಶ್ರೇಷ್ಠಿ, ಗಾಡಿಕೊಪ್ಪ
ಇದನ್ನು ನೀವು ಸಮಸ್ಯೆ ಎಂದು ಯಾಕೆ ಪರಿಗಣಿಸಿದ್ದೀರಿ ಎಂಬುದೇ ಗೊತ್ತಾಗುತ್ತಿಲ್ಲ. ನಿಮ್ಮ ಮಗ ಮಲ್ಟಿ ಟಾಲೆಂಟ್. ಮನರಂಜನೆ ಅನುಭವಿಸುತ್ತಾ, ಪಠ್ಯವನ್ನೂ ಗ್ರಹಿಸುತ್ತಾನೆಂದರೆ ಅದೊಂದು ಅದ್ಭುತ ತಾಕತ್ತೇ. ಆ ಚಟ ಆತನೊಳಗೆ ಜೀರ್ಣವಾಗಿ ಹೋಗಿದೆ. ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.
ನಾನವಳನ್ನು ನಂಬಲಾ?
ನಾನೊಬ್ಬಳನ್ನು ಎರಡು ವರ್ಷದಿಂದ ಪ್ರೀತಿಸುತ್ತಿದ್ದೇನೆ. ಈ ಒಂದು ವರ್ಷದಲ್ಲಿ ಆಕೆ ನನ್ನೊಂದಿಗೆ ಇದ್ದಾಗಲೂ ಬೇರೆ ಯಾರಿಗೋ ಮೆಸೇಜು ಸಂಪರ್ಕದಲ್ಲಿರುತ್ತಾಳೆ. ಗುಟ್ಟು ಬಿಟ್ಟುಕೊಡುತ್ತಿಲ್ಲ. ನಾನವಳನ್ನು ನಂಬಲಾ?
- ಪ್ರಸಾದ್ ಪಿ.ಕೆ., ಪಣಂಬೂರು
ನಿಮ್ಮ ಪ್ರೀತಿ ಮುಕ್ತವಾಗಿದೆ ಎಂದರೆ ಆಕೆ ಮೆಸೇಜು ಮಾಡುವವರ ಹೆಸರನ್ನು ಹೇಳಲೇಬೇಕಿತ್ತು. ಆದಷ್ಟು ಪಾರದರ್ಶಕವಾಗಿ ವರ್ತಿಸಲು ಹೇಳಿ. ಅಥವಾ ಕೂಡಲೇ ಮದುವೆ ಪ್ರಸ್ತಾಪ ಎತ್ತಿ, ಪರೀಕ್ಷಿಸಿ. ಆಗ ಆಕೆಯ ಪ್ರತಿಕ್ರಿಯೆಯಲ್ಲೇ ನಿಜಾಂಶ ವ್ಯಕ್ತವಾಗುತ್ತದೆ.
ಬೆಡ್‌ರೂಮಿನ ವಿಚಾರ ಹೇಳ್ತಾಳೆ!
ದೊಡ್ಡ ದೊಡ್ಡ ಸಮಾರಂಭಗಳಲ್ಲಿ ನನ್ನ ಹೆಂಡತಿಗೆ ಹೇಗಿರಬೇಕಂತಲೇ ಗೊತ್ತಾಗುವುದಿಲ್ಲ. ನಮ್ಮ ಬೆಡ್‌ರೂಮಿನ ವಿಚಾರಗಳನ್ನೆಲ್ಲ ಇತರರಿಗೆ ಹೇಳಿ, ನನಗೆ ಸಿಟ್ಟು ಬರಿಸುತ್ತಾಳೆ. ಅವಳ ಬೋಲ್ಡ್ ನೀತಿ ಸಹಿಸಿಕೊಳ್ಳುವುದು ಹೇಗೆ?
- ರಮಾಕಾಂತ್ ಆಚಾರ್ಯ, ಲಕ್ಕವಳ್ಳಿ
ಕೆಲವು ಹುಡುಗಿಯರು ಹಾಗಿರುತ್ತಾರೆ. ಅದಕ್ಕ್ಯಾಕೆ ನೀವು ಅಷ್ಟು ಕಸಿವಿಸಿಗೊಳ್ಳುತ್ತೀರಿ? ಏನೂ ಮಾತನಾಡದೆ, ಸುಮ್ಮನೆ ನಕ್ಕುಬಿಡಿ. ಅದೇ ಪರಿಹಾರ. ಈ ಜಗತ್ತಿನಲ್ಲಿ ಯಾವುದೂ ಗೌಪ್ಯ ಅಲ್ಲವಲ್ಲ. ಅದರಲ್ಲೂ ಈಗಿನ ಪೀಳಿಗೆಯ ಮಾತುಕತೆಯ ಮುಖ್ಯವಸ್ತುವೇ ಅಂಥವಾಗಿರುತ್ತವೆ.