ಅದು 1957. ಆಗ ರಷ್ಯಾ ಮತ್ತು ಅಮೆರಿಕ ನಡುವೆ ಶೀತಲ ಸಮರ ನಡೆಯುತ್ತಿತ್ತು. ರಷ್ಯಾದಲ್ಲಿ ನಿಕಿಟಾ ಕ್ರುಶ್ಚೇವ್ ಅಧ್ಯಕ್ಷರಾಗಿದ್ದರು. ಕಮ್ಯುನಿಸಂನ ಬಿಗಿ ಹಿಡಿತ. ಬೋರಿಸ್ ಪಾಸ್ತರ್ನಾಕ್ ಎಂಬ ಕಾದಂಬರಿಕಾರ 'ಡಾಕ್ಟರ್ ಜಿವಾಗೋ' ಎಂಬ ಕಾದಂಬರಿಯನ್ನು ರಚಿಸಿದ. ಜಿವಾಗೋ ಎಂಬ ವೈದ್ಯ, ರೋಗಿಗಳ ಸೇವೆ ಮಾಡುತ್ತಲೇ ತನ್ನ ರಾಜಕೀಯ ಸಾಮಾಜಿಕ ಅಭಿಪ್ರಾಯಗಳಿಗೆ ಮುಕ್ತತೆಯ ಮಿಂಚಿನ ಸ್ಪರ್ಶ ಮಾಡಿಕೊಳ್ಳುವ ಕತೆಯದು. ಅದರಲ್ಲಿ ಕಮ್ಯುನಿಸಂ ಆಡಳಿತದಡಿ ಪ್ರಜೆಗಳ ದಾರುಣ ಅವಸ್ಥೆಯ ಚಿತ್ರಣವಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯಗಳನ್ನು ಪ್ರತಿಪಾದಿಸುವ ಈ ಕಾದಂಬರಿಯನ್ನು ರಷ್ಯಾದಲ್ಲಿ ಪ್ರಕಟಿಸುವಂತಿರಲಿಲ್ಲ. ಹಸ್ತಪ್ರತಿಯನ್ನು ಇಟಲಿಗೆ ಕದ್ದು ಸಾಗಿಸಿ, ಅಲ್ಲಿ ಪ್ರಕಟಿಸಲಾಯ್ತು. ಹೀಗೆ ಕದ್ದೊಯ್ದು ಪ್ರಕಟಿಸಲು ನೆರವು ನೀಡಿದ್ದು ಸಿಐಎ(ಅಮೆರಿಕದ ಗುಪ್ತಚರ ಇಲಾಖೆ).
ತದನಂತರ ಅದನ್ನು ಲಕ್ಷಾಂತರ ಪ್ರತಿಗಳಲ್ಲಿ ಮುದ್ರಿಸಿ, ವಿಶ್ವಾದ್ಯಂತ ವಿತರಿಸಿ ರಷ್ಯಾದ ಮಾನ ಹರಾಜಾಗುವಂತೆ ನೋಡಿಕೊಂಡಿತು ಸಿಐಎ. ರಷ್ಯದೊಳಗೂ ಸಾವಿರಾರು ಪ್ರತಿಗಳನ್ನು ಕದ್ದು ತೂರಿಸಿ, ಪ್ರಜೆಗಳ ತಲೆಗೆ ಹುಳ ಬಿಟ್ಟು ತಳಮಳ ಹುಟ್ಟುಹಾಕಿತು. ಇವೆಲ್ಲ ಸಂಗತಿಯನ್ನು ಈಗ ಖುದ್ದು ಸಿಐಎ ಹೇಳಿಕೊಂಡಿದೆ.
ಇಂಥ 'ಕಾದಂಬರಿ ಅಸ್ತ್ರ'ದ ಬಳಕೆ ಅಪರಿಚಿತವೆನ್ನುವಂತಿಲ್ಲ. ಬ್ರಿಟಿಷರ ಆಡಳಿತ ಕಾಲದಲ್ಲಿ ನಮ್ಮಲ್ಲೂ ಹೀಗಾಗಿತ್ತು. ಬಂಕಿಮಚಂದ್ರರ 'ಆನಂದಮಠ' ಕಾದಂಬರಿಯನ್ನು ಸ್ವಾತಂತ್ರ್ಯ ಹೋರಾಟಕ್ಕೆ ಬಳಸಿಕೊಳ್ಳಲಾಗಿತ್ತು. ವ್ಯತ್ಯಾಸವೆಂದರೆ, ಅದು ನಮ್ಮವರೇ ನಮ್ಮದೇ ಕಾದಂಬರಿಯನ್ನು ನಮಗಾಗಿಯೇ ಬಳಸಿಕೊಂಡದ್ದು. ಇದು, ಯಾರದೋ ನೆಲದ ಕಾದಂಬರಿಯನ್ನು ಆ ನೆಲದ ವಿರುದ್ಧವೇ ಇನ್ಯಾರೋ ಪ್ರಯೋಗಿಸಿದ್ದು. ಕ್ರಿಮಿಯಾ ಮೇಲೆ ರಷ್ಯಾ ಹಿಡಿತ ಸಾಧಿಸಿರುವ ಹೊತ್ತಲ್ಲೇ ಸಿಐಎ ಈ ದಾಖಲೆ ಬಿಡುಗಡೆ ಮಾಡಿರುವುದೂ ಕುತೂಹಲಕರ.
ಬೇರೆಯವರನ್ನು ಕೊಲ್ಲಲು ಕಾದಂಬರಿಯನ್ನು ಅಸ್ತ್ರವಾಗಿ ಬಳಸಬಹುದು ಎಂದು ಪ್ರತಿಪಾದಿಸಲು ಅಷ್ಟೆಲ್ಲ ದೂರ ಹೋಗಬೇಕೆ? ಭೈರಪ್ಪನವರ 900 ಪುಟಗಳ ಒಂದು ಕಾದಂಬರಿ ಸಣಕಲನೊಬ್ಬನನ್ನು ಸಾಯಿಸಲು ಸಾಕಲ್ಲವೆ ಎಂದು ನೀವು ಜೋಕ್ ಮಾಡಿದರೆ ನೋ ಕಾಮೆಂಟ್ಸ್.
= ಹರೀಶ್ ಕೇರ