ಡಾಲರ್ ಆನೆ

ಯಾರು ಯಾರಿಂದ ಕದ್ದರು? ಅಮೆರಿಕದ ರಿಪಬ್ಲಿಕನ್ ಪಾರ್ಟಿಯ ಚಿಹ್ನೆಯನ್ನೇ ನಮ್ಮ ಬಿಎಸ್ಪಿ ಇಟ್ಟುಕೊಂಡಿದೆಯಲ್ಲ. 1984ರಲ್ಲಿ ಹುಟ್ಟಿದ ಬಿಎಸ್ಪಿಗೆ ಬೇರೆ ಚಿಹ್ನೆ ಸಿಗಲಿಲ್ಲವೆ ಎಂದು ನೀವಿಂದು ಮೇಲೆಲ್ಲೋ ಹಾರಾಡುತ್ತಿರುವ ಕಾನ್ಷಿರಾಂ ಅವರ ಆತ್ಮವನ್ನು ಕೇಳಿದರೆ ಏನು ಪ್ರಯೋಜನ? ಅಮೆರಿಕನ್ನರನ್ನೇ ಕೇಳೋಣ... ಆನೆಯ ಸಂತತಿಯೇ ಇಲ್ಲದ ನಿಮ್ಮಲ್ಲಿ ರಿಪಬ್ಲಿಕನ್ ಪಕ್ಷದ ಚಿಹ್ನೆ ಆನೆಯಾಗಿದ್ದು ಹೇಗೆ? ಝೂಗಳಲ್ಲಿ 50 ಸಂಖ್ಯೆಯಲ್ಲಿಟ್ಟುಕೊಂಡಿರುವ ನಿಮಗಿಂತ 29,000 ಆನೆಗಳನ್ನು ಸಾಕುತ್ತಿರುವ ನಾವೆಷ್ಟು ಅಗರ್ಭ ಶ್ರೀಮಂತರು! ಆಗ ಆನೆಗಳನ್ನು ಸಾಕಲಾಗಲಿಲ್ಲ, ಈಗ ಆರ್ಥಿಕ ಹೊರೆಯಿಂದ ಪ್ರಜೆಗಳನ್ನು ಸಾಕಲಾಗುತ್ತಿಲ್ಲವಲ್ಲ... ನಿಮ್ಮದೆಂಥ ಸ್ಥಿತಿ?
ಇವತ್ತಿಗೆ ಸರಿಯಾಗಿ 218 ವರ್ಷದ ಹಿಂದೆ ಅಮೆರಿಕ ಜಗತ್ತಿನ ಮೊದಲ ಅದ್ಭುತವೆಂಬಂತೆ ಆನೆಯ ಮೈ ನೇವರಿಸಿತ್ತು. ಕಲ್ಕತ್ತಾದಿಂದ ಹೋದ ಹಡಗು 1796 ಏಪ್ರಿಲ್ 13ರಂದು ನ್ಯೂಯಾರ್ಕಿನ ಬಂದರಿನಲ್ಲಿಳಿದ ಕೂಡಲೇ ಎಲ್ಲ ಸಂಬಾರ ಪದಾರ್ಥಗಳ ಮೂಟೆಗಳನ್ನು ನೆಗ್ಗಿ ಕೆಳಗಿಳಿಸಿದರು ಹಮಾಲಿಗಳು. ಆದರೆ, ಗಬ್ಬು ನಾತ ಬೀರುತ್ತಿದ್ದ ಕಾಮನ್ ಟಾಯ್ಲೆಟ್ಟಿನ ಪಕ್ಕದಲ್ಲಿದ್ದ ಪುಟ್ಟ ಕೋಣೆಯ ಸುದ್ದಿಗೆ ಅವರ್ಯಾರೂ ಹೋಗಲಿಲ್ಲ. ಕಾರಣ, ಅದು ಹಡಗಿನ ಕ್ಯಾಪ್ಟನ್ ಜಾಕಬ್ ಕ್ರೌನಿನ್ಷೀಲ್ಡ್ನ ಸ್ವತ್ತು. 103 ದಿನಗಳಿಂದ ಹಡಗು ಓಡಿಸಿ ಸುಸ್ತಾದರೂ ಸಣ್ಣ ಆಕಳಿಕೆ ಕೂಡ ತೆಗೆದುಕೊಳ್ಳದೆ ಡ್ರೈವರ್ ಕ್ಯಾಬೀನ್ನಿಂಂದ ಇಳಿದುಬಂದಿದ್ದ ಜಾಕಬ್. ಅವನಿಗೊಂದು ಹೆಮ್ಮೆ. ಅಮೆರಿಕಕ್ಕೆ ಆನೆಯನ್ನು ಕರೆತಂದ ಮೊಟ್ಟ ಮೊದಲಿಗ ತಾನಾದೆಯೆಂಬುದು! ಅಮೆರಿಕಕ್ಕೆ ಆನೆ ಕೊಟ್ಟವರು ನಾವೇ!
ಆ ಯಾನದ ಮಜಾ ಕೇಳಿದರೆ 'ಲೈಫ್ ಆಫ್ ಪೈ' ಸಿನಿಮಾದಲ್ಲಿ ಇದೊಂದು ದೃಶ್ಯವನ್ನು ಸೇರಿಸಿಕೊಳ್ಳಬಹುದಿತ್ತಲ್ಲ ಅಂತನ್ನಿಸುತ್ತದೆ. ಕಲ್ಕತ್ತಾದಲ್ಲಿ 450 ಡಾಲರ್ ಕೊಟ್ಟು ಎರಡು ವರ್ಷದ ಹೆಣ್ಣಾನೆಯನ್ನು ಖರೀದಿಸಿದ ಜಾಕಬ್ಗೆ ಅದರ ಆರೈಕೆ ಹೇಗೆಂಬುದೇ ಗೊತ್ತಿರಲಿಲ್ಲ. ಮಾವುತ ಪಳಗಿಸಿದ ಆನೆ. ನಾವು ನೀವು ಕೂತಹಾಗೆ ಕೂರುತ್ತದೆ; ಮಲಗುತ್ತದೆ; ಸರಪಳಿಯನ್ನು ಬಿಗಿಮಾಡಿದರೆ ಸಾಕೆಂದುಕೊಂಡವ ಬಂಗಾಳಕೊಲ್ಲಿಯ ಅರ್ಧದಾರಿಯಲ್ಲೇ ಹಡಗನ್ನು ನಿಲ್ಲಿಸಿಬಿಟ್ಟ. ಮಲಗೀ ಮಲಗಿ ಬೇಜಾರಾದ ಆನೆ ಸರಪಳಿಯನ್ನು ತುಂಡುಮಾಡಿಕೊಂಡು ಹಡಗಿನ ಒಳಗಿದ್ದ ವಸ್ತುಗಳು ಎಷ್ಟು ಗಟ್ಟಿಯಿವೆ ಅಂತ ಗುಣಮಟ್ಟದ ಪರೀಕ್ಷೆಗಿಳಿಯಿತು. ಕುಂಬಳಕಾಯಿ ಮೂಟೆಗಳನ್ನು ನೆಲಕ್ಕೆ ಜಪ್ಪಿ ಆ ಕಾಲದಲ್ಲೇ ಅಷ್ಟು ಚೆನ್ನಾಗಿ ಫುಟ್ಬಾಲ್ ಆಡಿತಲ್ಲಾ ಅಂತ ಇವತ್ತಿನ ನಮ್ಮ ಫ್ಲಾಪ್ ಫುಟ್ಬಾಲ್ ತಂಡ ನಾಚಿಕೆ ಪಟ್ಟುಕೊಳ್ಳಬೇಕು. ಹಡಗೊಳಗಿದ್ದ ಪ್ರಯಾಣಿಕರೆಲ್ಲ ಜೀವ ಉಳಿಸಿಕೊಳ್ಳಲು ಮೇಲಂತಸ್ತನ್ನು ಹೊಕ್ಕರು.
ಅಷ್ಟಕ್ಕೂ ಆನೆ ಹೀಗೆಲ್ಲ ವರ್ತಿಸಲು ಕಾರಣ ಇನ್ನೊಂದಿತ್ತು. ಅಲ್ಲಿದ್ದ ಖತರ್ನಾಕ್ ಹಮಾಲಿಯೊಬ್ಬ ಆನೆಗೆ ಆರು ಟಿನ್ ಬಿಯರ್ ಕುಡಿಸಿದ್ದ. ತುಸು ಅಮಲೇರಿದ ಆನೆಯನ್ನು ನಿಯಂತ್ರಿಸಲು ಯಾರಿಂದಲೂ ಆಗಲಿಲ್ಲ. ಕೊನೆಗದು ಟಾಯ್ಲೆಟ್ಟಿನ ಪಕ್ಕದ ಕೋಣೆ ಹೊಕ್ಕಮೇಲೆ ಜಾಕಬ್ ಅದನ್ನು ಬಂಧಿಸಿ ಬಲವಾದ ಬೀಗ ಜಡಿದ. ಈ ರಸಯಾತ್ರೆಯನ್ನು 'ಪ್ರೈವೇಟ್ ಆರ್ಮ್ಡ್ ಶಿಪ್' ಅಧಿಕಾರಿ ನ್ಯಾಥನೀಲ್ ಹಾತ್ರೋನ್ ಒಂದು ಡೈರಿಯಲ್ಲಿ ದಾಖಲಿಸಿಡುತ್ತಾನೆ.
ಭಾರತದ ಆನೆಯಂತೂ ಅಮೆರಿಕಕ್ಕೆ ಬಂತು. ಆದರದು ಇಲ್ಲಿನ ವಾತಾವರಣಕ್ಕೆ ಒಗ್ಗುತ್ತದಾ ಎಂಬುದು ಪ್ರಶ್ನೆಯಾಯಿತು. ಕೇಪ್ ಮತ್ತು ಸೇಂಟ್ ಹೆಲೆನಾದಲ್ಲಿ ನೀರಿಗೇನೂ ಕೊರತೆ ಇಲ್ಲದಿದ್ದರಿಂದ ಅದನ್ನು ಅಲ್ಲಿಗೆ ಸಾಗಿಸಲಾಯಿತು. ಬೈಲಿ ಸರ್ಕಸ್ ಕಂಪನಿಯ ಮಾಲೀಕ ಹ್ಯಾಕಲೀಹ್ ಬೈಲಿ ಈ ಆನೆಯನ್ನು ಖರೀದಿಸಿದ. ಅವನ ಸರ್ಕಸ್ ತಂಡದ ನಾಯಿ, ಹಂದಿ, ಕುದುರೆ, ಕರಡಿಗಳಿಗಿಂತ ಭಾರತದ ಆನೆ ಹೆಚ್ಚು ಆಕರ್ಷಣೆಯಾಯಿತು. ಇದರ ಜನಪ್ರಿಯತೆ ನೋಡಿ ಬೈಲಿ ಮೆಸ್ಸಾಚುಸೆಟ್ಸ್, ಬೋಸ್ಟಾನ್, ಫಿಲಿಡೆಲ್ಫಿಯಾದ ಪತ್ರಿಕೆಗಳಲ್ಲಿ ಜಾಹೀರಾತು ನೀಡತೊಡಗಿದ. ಕೇವಲ ಆನೆಯನ್ನು ನೋಡುವುದಕ್ಕೇ ಜನ 50 ಸೆಂಟ್ಸ್ (ಅರ್ಧ ಡಾಲರ್) ಕೊಟ್ಟು ಬರುತ್ತಿದ್ದರಂತೆ ಅಂತ ಚಿಕಾಗೋದ ಪತ್ರಿಕೆ ಹೇಳುತ್ತದೆ.
ಆದರೆ, ಈ ಆನೆ ಹೆಣ್ಣೇ ಆಗಿದ್ದರೂ ಗಂಡಾನೆ ಅಂತಲೇ ಅಮೆರಿಕನ್ನರು ತಿಳಿದುಕೊಂಡಿದ್ದರು. ಒಂದೇ ಕುರ್ಚಿಯಲ್ಲಿ ನಾಲ್ಕು ಕಾಲಿನ ಮೇಲೆ ನಿಂತು ಸೊಂಡಿಲಿನ ಸಂದಿಯಲ್ಲಿ ಸಿಲುಕಿಸಿದ ಕೋಲಿನಿಂದ ಪ್ರೇಕ್ಷಕರೆಡೆ ಕೆಂಪು ಬಾವುಟ ಹಾರಿಸಿ ಪೋಸು ಕೊಡಿಸುತ್ತಿತ್ತು. ಕೆಮಿಕಲ್ ತುಂಬಿದ ಕೊಳವೆಯನ್ನು ಬಾಯಿಯೊಳಗಿಟ್ಟುಕೊಂಡು ಬಿಳೀ ಹೊಗೆಯ ರಿಂಗುಗಳನ್ನು ಸೃಷ್ಟಿಸುತ್ತಿತ್ತು. ಜಮೈಕಾದ ಕಪ್ಪು ಮನುಷ್ಯನೊಬ್ಬ ಅದರ ಮೇಲೆ ಕೂತು, ಡೈರೆಕ್ಷನ್ ಕೊಡುತ್ತಿದ್ದ.
ಅಮೆರಿಕಕ್ಕೆ ಹೋದ ಎಷ್ಟೋ ವರುಷಗಳ ಬಳಿಕ ಈ ಆನೆಗೆ 'ಓಲ್ಡ್ ಬೆಟ್' ಅಂತ ಹೆಸರಿಡಲಾಯಿತು.
ಓಲ್ಡ್ ಬೆಟ್ನಿಂದ ಸರ್ಕಸ್ ಮಾಲೀಕ ಬೈಲಿ ದಿನೇ ದಿನೇ ಆದಾಯ ಹೆಚ್ಚಿಸಿಕೊಂಡ. ಇದನ್ನು ಸಹಿಸದ ಕೆಲವು ಪುಂಡರು 1816ರಲ್ಲಿ ರ್ಹೋಡ್ ಐಲೆಂಡಿನ ಬೀದಿಯಲ್ಲಿ ಓಲ್ಡ್ ಬೆಟ್ನ ಕಣ್ಣಿಗೆ, ತಲೆಗೆ ಎಡೆಬಿಡದೆ ಗುಂಡಿಕ್ಕಿ ಸಾಯಿಸುತ್ತಾರೆ. ಈ ಅಮಾನವೀಯ ಕೊಲೆಯನ್ನು ನೂರಾರು ಜನ ಅಸಹಾಯಕರಾಗಿ ನೋಡಿದರು ಅಂತ 'ಬೋಸ್ಟನ್ ಹೆರಾಲ್ಡ್' ಪತ್ರಿಕೆ ಮುಖಪುಟದಲ್ಲೇ ವಿಷಾದ ಮುದ್ರಿಸುತ್ತದೆ.
ಓಲ್ಡ್ ಬೆಟ್ ಸಾಯುವಾಗ ಅದರ ವಯಸ್ಸು ಇಪ್ಪತ್ತು. ನಂತರ ಬೈಲಿ ಅದರ ಅಸ್ಥಿಪಂಜರವನ್ನು ಸಾರ್ವಜನಿಕ ದರ್ಶನಕ್ಕಿಟ್ಟೂ ದುಡ್ಡುಮಾಡಿದ. ಕೊನೆಗೆ ಆ ಮೂಳೆಗಳನ್ನು ನ್ಯೂಯಾರ್ಕಿನ ಮ್ಯೂಸಿಯಮ್ಮಿಗೆ ಬಿಟ್ಟುಕೊಟ್ಟ. ನಂತರ ಬೈಲಿ 'ಓಲ್ಡ್ ಜಾನ್', 'ಮೊಘಲ್', 'ಜಂಬೋ' ಆನೆಗಳನ್ನು ಸರ್ಕಸ್ಸಿಗೆ ಪರಿಚಯಿಸಿದ.
ಇವತ್ತೂ ಅಮೆರಿಕದ ಕಾಡುಗಳಲ್ಲಿ ಆನೆಗಳ ಸಂತತಿ ಇಲ್ಲ. ಅಮೆರಿಕದ ವಿಶಿಷ್ಟ ವಾತಾವರಣ ಆನೆಗಳಿಗೂ ಹಿಡಿಸುವುದಿಲ್ಲವೇನೋ? ಝೂಗಳಲ್ಲೇ ಆನೆಗಳನ್ನು ಸಾಕಿ, ಫ್ರಾನ್ಸ್ ರೀತಿ 'ಆನೆಯ ವೀರ್ಯ ಬ್ಯಾಂಕ್' ಸ್ಥಾಪಿಸಲು ಮುಂದಾಗಿದೆ. ಆ ಮೂಲಕ ಸಂತತಿಯನ್ನು ಬೆಳೆಸುವ ಆಲೋಚನೆ ಅಮೆರಿಕದ್ದು. ಜೈವಿಕ ಸಮತೋಲನಕ್ಕಾಗಿ ನೂರಿನ್ನೂರು ಆನೆಗಳನ್ನು ಆಫ್ರಿಕ, ಏಷ್ಯಾದಿಂದ ತರಿಸಿಕೊಳ್ಳುವ ಅಮೆರಿಕದ ಪ್ರಸ್ತಾಪ ಇಂದಿಗೂ ಜೀವಂತವಿದೆ. ಇಲ್ಲಿನ ದೇಶಗಳಿಗೆ ಆನೆಗಳನ್ನು ಅಮೆರಿಕಕ್ಕೆ ದಾಟಿಸುವುದು ಇಷ್ಟವಿಲ್ಲ. ಇವತ್ತು ಆನೆ ಅಲ್ಲಿನ ಪ್ರಮುಖ ವಿರೋಧ ಪಕ್ಷ ರಿಪಬ್ಲಿಕನ್ನ ಲಾಂಛನ. ಆ ಪಕ್ಷದ ಧ್ವಜದಲ್ಲಿನ ಆನೆಯ ಹೊಟ್ಟೆ ಮೇಲೆ ಮಿನುಗುವ ಮೂರು ನಕ್ಷತ್ರಗಳಿವೆ. ಈ ಲಾಂಛನ 1874ರಲ್ಲಿ 'ಹಾರ್ಪರ್ಸ್ ವೀಕ್ಲಿ'ಯಲ್ಲಿ ಪ್ರಕಟಗೊಂಡ ಥಾಮಸ್ ನ್ಯಾಸ್ಟ್ನ ವ್ಯಂಗ್ಯಚಿತ್ರದ ಪ್ರೇರಣೆ. 'ಆನೆಯ ಘೀಳಿಗೆ ಕತ್ತೆ (ಕತ್ತೆ ಅಲ್ಲಿನ ಡೆಮಾಕ್ರೆಟಿಕ್ ಪಕ್ಷದ ಚಿಹ್ನೆ), ನರಿ ಇತರೆ ಪಶುಪಕ್ಷಿಗಳೆಲ್ಲ ಓಡಿಹೋಗುತ್ತಿವೆ' ಎಂಬ ಧ್ವನಿ ಆ ಚಿತ್ರದಲ್ಲಿತ್ತು. ನಂತರ ಪಕ್ಷ ಆ ಆನೆಯನ್ನೇ ಚಿಹ್ನೆಯನ್ನಾಗಿ ಮಾಡಿಕೊಂಡಿತು.
ಥಾಮಸ್ ನ್ಯಾಸ್ಟ್ನ ಕಲ್ಪನೆಯಲ್ಲಿ ಅರಳಿದ ದಂಡೆತ್ತಿ ಹೋದ ಆನೆ ಇತ್ತಲ್ಲ, ಅದು ಯಾವುದಿರಬಹುದು? ಅದು ಅವತ್ತಿನ ಸಮಾಜ ಸ್ಥಿತಿಯ ಹೋಲಿಕೆಯೇ ಆಗಿರಬಹುದು. ಇನ್ನೊಂದು ದೃಷ್ಟಿಯಲ್ಲಿ ನೋಡುವುದಾದರೆ, ಅದು ಹಡಗಿನಲ್ಲಿ ಸಿಟ್ಟಿಗೆದ್ದು ರಂಪಾಟ ಮಾಡಿದ ಭಾರತದಿಂದ ಹೊರಟ ಆನೆಯೂ ಆಗಿರಬಹುದು!
ಅದು ನಿಜವಾ? ಒಗಟು ಬಿಡಿಸಲು ನ್ಯಾಸ್ಟ್ ಬದುಕಿಲ್ಲ. ಅಮೆರಿಕ ಮಾತಾಡಬೇಕು!
= ಕೀರ್ತಿ ಕೋಲ್ಗಾರ್
kolgarkeerthi@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


