ಬೋ.ಪಾ. ವೆಂಕಟೇಶ್, ಬೆಂಗಳೂರು
ಕಚಗುಳಿಗೂ ಕುಚೋದ್ಯಕ್ಕೂ ವ್ಯತ್ಯಾಸವೇನು?
- ಕಚಗುಳಿಗೆ ನಗ್ತಾರೆ, ಕುಚೋದ್ಯಕ್ಕೆ ಇಕ್ತಾರೆ!
ವಿ. ಹೇಮಂತಕುಮಾರ್, ಬೆಂಗಳೂರು
ಮಂತ್ರಿಗಳಿಗೆ ಹಾಕಿದ ಹಾರವನ್ನು ಅವರ ಕಾರಿಗೆ ಹಾಕ್ತಾರೆ ಏಕೆ?
- ಆಮೇಲೆ ಅದನ್ನು ಕತ್ತೆಗೆ ಹಾಕ್ತಾರೆ ಅನ್ನುವ ಭಯ!
ಬಿ.ಎಂ. ಪರಶಿವಮೂರ್ತಿ, ಬೆಂಗಳೂರು
ನಮ್ಮ ಏರಿಯಾದ ಪಾರ್ಕಿಗೆ ನಿಮ್ಮ ಹೆಸರಿಡೋಣ ಅಂದುಕೊಂಡಿದ್ದೇನೆ?
- ಇಡಿ, ಆದರೆ ಅಧಿಕಾರಿಗಳಿಗೆ ಏನು ಉತ್ತರ ಕೊಡ್ತೀರಿ?
ಡಬ್ಲ್ಯು.ಕೆ. ವೆಂಕಟೇಶಮೂರ್ತಿ, ಬೆಂಗಳೂರು
ಹಿಂದೆ ಸನ್ಯಾಸಿಗಳು ತಪಸ್ಸು ಮಾಡುತ್ತಿದ್ದರಂತೆ, ಇಂದಿನ ಸನ್ಯಾಸಿಗಳು ಏಕೆ ತಪಸ್ಸು ಮಾಡುವುದಿಲ್ಲ?
- ಈಗ ದೇವರೂ ಆನ್‌ಲೈನ್‌ನಲ್ಲೇ ಪ್ರತ್ಯಕ್ಷನಾಗ್ತಾನೆ!
ಕೆ.ಜೆ. ರಾಮಪ್ರಸಾದ್, ಕಡೂರು
ಪೌರಾಣಿಕ ಧಾರಾವಾಹಿಗಳಿಗಿಂತ ಮೆಗಾ ಧಾರಾವಾಹಿಗಳನ್ನು ಹೆಚ್ಚಾಗಿ ಜನ ನೋಡುವುದೇಕೆ?
- ಪೌರಾಣಿಕ ಧಾರಾವಾಹಿಗಳಲ್ಲಿ ಮುಂದೇನು ಅನ್ನುವುದು ಜನರಿಗೆ ಗೊತ್ತಿರುತ್ತಲ್ಲ!
ನೇರಲಗುಡ್ಡ ಶಿವಕುಮಾರ್, ಶಿರಾ
'ನಖರಾ' ಮಾಡುವುದು ಹೆಣ್ಣಿನ ಸಹಜ ಗುಣವಂತೆ ಹೌದಾ?
- ಅದು 'ಬಕರ' ಗಂಡುಗಳ ಆರೋಪ!
ಸ್ವಾಮಿ ನಿರ್ಮಲಾ, ಉಡಿಗಾಲ
ಬೆಂಗಳೂರಲ್ಲಿ ಸೈಟ್ ರಿಜಿಸ್ಟ್ರೇಷನ್ ಆಗಿದ್ರೆ ಮಾತ್ರ ಮದುವೆ ಆಗ್ತೀನಿ ಅಂತಾಳೆ?
- ಹಾಗಾದ್ರೆ, ನಿಮ್ಮದು ಮ್ಯಾರೇಜ್ ಎಟ್ ಫಸ್ಟ್ ಸೈಟ್!
ಕಬ್ಬಳ್ಳಿ ಬಿ. ಚನ್ನಬಸಪ್ಪ, ಯಲಹಂಕ ಉಪನಗರ
ದೆಹಲಿಯಲ್ಲಿ ಮುಖ್ಯಮಂತ್ರಿಯಾಗಿದ್ದವರು ಕೇಜ್ರಿವಾಲರೋ ಕ್ರೇಜಿವಾಲರೋ?
- ಬರೀ ಜೀರೋವಾಲ!
- ಎಸ್.ವಿ. ಪದ್ಮನಾಭ