ಟೆನೆಸ್ಸಿಯಲೊಂದು ಪುಟ್ಟ ಜಗಳ

ನಗರದ ನಾಮೀ ನ್ಯಾಯವಾದಿ ಒಮ್ಮೆ ಟೆನೆಸ್ಸಿಯಲ್ಲಿ ಕಾಡುಬಾತುಕೋಳಿಯ ಬೇಟೆಯಾಡಲು ಹೋದ. ಬಹಳ ಕಾಲ ಕಾದು ಕುಳಿತಿದ್ದು ಕಡೆಗೆ ಕಾಡುಬಾತುಕೊಳಿಗಳ ಗುಂಪನ್ನು ಆಗಸದಲ್ಲಿ ಕಂಡ. ಅವನು ಹಾರಿಸಿದ ಗುಂಡು ಒಂದು ಬಾತುಕೊಳಿಗೆ ತಾಗಿ ಅದು ಕೆಳಗೆ ಬಿದ್ದಿತು. ಆದರೆ ದುರದೃಷ್ಟವಶಾತ್ ಅದು ಅವನ ಜಾಗದ ಬೇಲಿಯ ಆಚೆಯ ಬದಿಯಲ್ಲಿ ಬಿದ್ದಿತ್ತು. ಲಾಯರ್ ಬೇಲಿ ಹಾರಿ ಅದನ್ನು ಹುಡುಕುತ್ತಿದ್ದಾಗ ಆ ಹೊಲದ ರೈತ ಟ್ರ್ಯಾಕ್ಟರಿನಲ್ಲಿ ಅವನ ಬಳಿಗೆ ಬಂದ. ನನ್ನ ಹೊಲದಲ್ಲಿ ಏನು ಮಾಡುತ್ತಿರುವೆಯೆಂದು ಕೇಳಿದ. 'ನಾನೊಂದು ಬಾತುಕೋಳಿಯನ್ನು ಬೇಟೆಯಾಡಿದೆ. ಅದು ಈ ಹೊಲದಲ್ಲಿ ಬಿದ್ದಿದೆ. ನಾನದನ್ನು ಹುಡುಕಿ ತೆಗೆದುಕೊಂಡು ಹೋಗುತ್ತೇನೆ.'
ಮುದುಕ ರೈತ ಹೇಳಿದ: 'ನೋಡು, ಇದು ನನ್ನ ಹೊಲ. ನೀನು ಇಲ್ಲಿಗೆ ಬರುವಂತಿಲ್ಲ.'
ಇದರಿಂದ ಕೋಪಗೊಂಡ ವಕೀಲ ಹೇಳಿದ: ನಾನು ಯಾರೆಂಬುದು ಗೊತ್ತೇ? ನಾನು ಈ ದೇಶದ ಪ್ರಸಿದ್ಧ ಲಾಯರ್. ನೀನು ಆ ಬಾತುಕೊಳಿಯನ್ನು ತೆಗೆದುಕೊಂಡು ಹೋಗಲು ಬಿಡದಿದ್ದರೆ ನಾನು ನಿನ್ನ ಮೇಲೆ ಮೊಕದ್ದಮೆ ಹೂಡಿ ನಿನ್ನ ಸರ್ವಸ್ವವನ್ನೂ ಕಿತ್ತುಕೊಳ್ಳುತ್ತೇನೆ. ನಿನ್ನ ಬಳಿ ಒಂದು ಸೆಂಟ್ ಸಹ ಇರದಂತೆ ಮಾಡುತ್ತೇನೆ.'
ಇದನ್ನು ಕೇಳಿದ ವೃತ್ತ ರೈತ ನಕ್ಕು ಹೇಳಿದ. 'ನೀನಿಲ್ಲಿಗೆ ಹೊಸಬನೆಂದು ತೋರುತ್ತದೆ. ಟೆನೆಸ್ಸಿಯಲ್ಲಿ ನಾವು ರೈತರು ಸಣ್ಣ ಪುಟ್ಟ ಜಗಳಗಳನ್ನು ಹೇಗೆ ಪರಿಸಿಕೊಳ್ಳುತ್ತೇವೆಂಬುದು ನಿನಗೆ ತಿಳಿಯದೆಂದು ಗೊತ್ತಾಯಿತು. ನಾವು ಮೂರು ಒದೆಗಳನ್ನು ನಿಯಮದ ಪ್ರಕಾರ ನಮ್ಮ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುತ್ತೇವೆ.
ಈ 'ಮೂರು ಒದೆಗಳ ಕ್ರಮ' ಎಂದರೇನು? ವಕೀಲ ಪ್ರಶ್ನಿಸಿದ.
ತಕರಾರು ಬಂದಾಗ ಒಬ್ಬ ಮತ್ತೊಬ್ಬನಿಗೆ ಮೂರು ಒದೆಗಳನ್ನು ಕೊಡುತ್ತಾನೆ. ಅನಂತರ ಎರಡನೆಯವನು ಮೊದಲನೆಯವನಿಗೆ ಮೂರು ಒದೆಗಳನ್ನು ಕೊಡುತ್ತಾನೆ. ಅನಂತರ ಮೊದಲನೆಯವನು ಮತ್ತೆ ಮೂರು ಬಾರಿ ಒದೆಯುತ್ತಾನೆ. ಸರದಿ ಪ್ರಕಾರ ಇದು ನಡೆಯುತ್ತದೆ. ಇಬ್ಬರಲ್ಲಿ ಒಬ್ಬನು ಸೋಲನ್ನು ಒಪ್ಪಿಕೊಂಡಾಗ ವ್ಯಾಜ್ಯ ಮುಕ್ತಾಯವಾಗುತ್ತದೆ. ನೀನು ಇದಕ್ಕೆ ಒಪ್ಪಿಕೊಂಡರೆ ನಾವು ಬಗೆಹರಿಸಿಕೊಳ್ಳಬಹುದು. ನನ್ನ ಜಾಗದಲ್ಲಿ ನೀನು ಅತಿಕ್ರಮಣ ಮಾಡುತ್ತಿರುವುದರಿಂದ, ನಾನು ಮೊದಲು ನಿನಗೆ ಮೂರು ಒದೆ ಕೊಡುತ್ತೇನೆ. ಅನಂತರ ನೀನು ನನಗೆ ಮೂರು ಬಾರಿ ಒದೆಯಬಹುದು. ನಮ್ಮಲ್ಲಿ ಒಬ್ಬರು ಸೋಲನ್ನು ಒಪ್ಪಿಕೊಳ್ಳುವವರೆ ಸರದಿ ಪ್ರಕಾರ ಮೂರು- ಮೂರು ಒದೆತಗಳು ನಡೆಯುತ್ತವೆ. ಅಟಾರ್ನಿ ಮನದಲ್ಲೇ ಬಲಾಬಲಗಳನ್ನು ತರ್ಕಿಸಿದ. ವೃತ್ತ ಕೃಶಕಾಯ, ತಾನು ಬಲಿಷ್ಠ. ಬಲುಬೇಗ ಈ ಮುದುಕನನ್ನು ಸೋಲಿಸಬಹುದೆಂಬ ದೃಢ ನಂಬಿಕೆಯಿಂದ ರೈತನ ಸವಾಲನ್ನು ಸ್ವೀಕರಿಸಿದ.
ರೈತ ಟ್ರ್ಯಾಕ್ಟರಿನಿಂದ ಮೆಲ್ಲನೆ ಇಳಿದು ವಕೀಲನನ್ನು ಸಮೀಪಿಸಿದ. ಅವನ ಉಕ್ಕಿನ ತುದಿಯ ಬೂಟಿನ ಒದೆತ ವಕೀಲನ ಮರ್ಮಸ್ಥಳಕ್ಕೆ ಬಿದ್ದಿತು. ವಕೀಲ ಮಂಡಿಯೂರಿ ಕುಳಿತುಕೊಳ್ಳಬೇಕಾಯಿತು. ರೈತನ ಎರಡನೆಯ ಒದೆ ಲಾಯರನ ವಪೆಗೆ ಬಿತ್ತು. ವಕೀಲನ ಬಾಯಿಯಿಂದ ಅಂದು ತಿಂದುದೆಲ್ಲ ಹೊರಬಂದಿತು. ಮುದುಕನ ಮೂರನೆಯ ಪಾದಪ್ರಹಾರ ವಕೀಲನ ಹಿಂಭಾಗಕ್ಕೆ ಬಿದ್ದಾಗ ಅವನ ಪಕ್ಕದಲ್ಲಿದ್ದ ಹಸುವಿನ ಸಗಣಿಯ ಗುಂಡಿಗೆ ಬಿದ್ದ. ವಕೀಲ ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ ಎದ್ದು ನಿಂತ. ತನ್ನ ಮುಖಕ್ಕೆ ಅಂಟಿದ್ದ ಸಗಣಿಯನ್ನು ತನ್ನ ಜಾಕೆಟಿನಿಂದ ಒರೆಸಿಕೊಂಡ.
'ಮುದುಕಪ್ಪಾ! ಈಗ ನಿನ್ನ ಸರಿದಿಯಪ್ಪಾ. ನಾನು ನಿನ್ನನ್ನು ಹೇಗೆ ಹಣ್ಣುಗಾಯಿ ನೀರುಗಾಯಿ ಮಾಡುತ್ತೇನೆಂಬುದನ್ನು ನೋಡುತ್ತಿರು' ವಕೀಲ ಆವೇಶದಿಂದ ಹೇಳಿದ.
ವೃದ್ಧ ರೈತ ನಗುತ್ತ ಹೇಳಿದ. 'ನಾನು ಸೋಲು ಒಪ್ಪುಕೊಳ್ಳುತ್ತಿದ್ದೇನೆ. ನೀನೇ ಗೆದ್ದವನು. ನೀನು ನಿನ್ನ ಬೇಟೆಯನ್ನು ಹುಡುಕಿ ತೆಗೆದುಕೊಂಡು ಹೋಗಬಹುದು. ರೈತ ತನ್ನ ಉಳುವ ಯಂತ್ರವನ್ನೇರಿ ಅಲ್ಲಿಂದ ಕಣ್ಮರೆಯಾದ.
ವಕೀಲ ಅವಾಕ್ಕಾಗಿ ನಿಂತ!
-ಪಿ.ವಿ. ರಾಮಚಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


