ಖುಷಿ

ಕಾಸರವಳ್ಳಿ To ಭಾರತೀಪುರ

ಕಾಸರವಳ್ಳಿ To ಭಾರತೀಪುರ
Published On :

ನಿರ್ದೇಶಕ ಗಿರೀಶ್ ಕಾಸರವಳ್ಳಿ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ್ದಾರೆ. ಹಾಗಂತ 'ಪ್ರತಿ ವರ್ಷ ರಾಷ್ಟ್ರ ಪ್ರಶಸ್ತಿ ಪಟ್ಟಿ ಘೋಷಣೆ ಮಾಡಿದಾಗ ಕಾಸರವಳ್ಳಿ, ಶೇಷಾದ್ರಿ ಅವರ ಹೆಸರುಗಳು ಇದ್ದೇ ಇರುತ್ತವೆ. ಅದರಲ್ಲೇನು ವಿಶೇಷ?' ಎಂದು ಮಾತನಾಡುವವರಿಗೆ ಇದು ಸಂತಸದ ಸುದ್ದಿ ಆಗದಿರಬಹುದು. ಆದರೆ, ಪ್ರತಿವರ್ಷ ಪಿ. ಶೇಷಾದ್ರಿ, ಕಾಸರವಳ್ಳಿಯಂಥ ಮೇರು ನಿರ್ದೇಶಕರು ಕನ್ನಡ ಚಿತ್ರರಂಗಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ತಂದು ಕೊಡುತ್ತಿದ್ದಾರ ೆ ಎನ್ನುವ ಖುಷಿ ಮಾತ್ರ ಪ್ರತಿ ಕನ್ನಡಿಗನಿಗೂ ಇರುತ್ತದೆ ಬಿಡಿ. ಈ ಸಂಭ್ರಮದ ವಾತಾವರಣವನ್ನು ಪ್ರತಿ ಸಿನಿಮಾ ಪ್ರೇಕ್ಷಕನೂ ಅನುಭವಸುವಂಥ ವ್ಯವಸ್ಥೆ ನಿರ್ಮಾಣವಾದರೂ ಕಾಸರವಳ್ಳಿ ಅವರಂಥ ಸಾಧಕರ ಶ್ರಮಕ್ಕೆ ಮತ್ತಷ್ಟು ಬೆಲೆ ಸಿಗುತ್ತದೆ. ಅದು ಆದಷ್ಟು ಬೇಗ ಈಡೇರಲಿ. ಅಂದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುವ ಚಿತ್ರಗಳು ಪ್ರಶಸ್ತಿಗಳ ಆಚೆಗೂ ಪ್ರೇಕ್ಷಕರ ನಡುವೆ ಸಂಚರಿಸಲಿ.
ಕಾಸರವಳ್ಳಿ ಅವರು 'ಘಟಶ್ರಾದ್ಧ' ಚಿತ್ರದಿಂದ 'ಕೂರ್ಮಾವತಾರ' ತನಕ ಕನ್ನಡ ಚಿತ್ರೋದ್ಯಮವನ್ನು ಜಾಗತಿಕ ಮಟ್ಟದಲ್ಲಿ ಮಿಂಚಿಸಿದವರು. ಈಗ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್. ಅನಂತಮೂರ್ತಿ ಅವರ ಕುರಿತ ಸಾಕ್ಷ್ಯಚಿತ್ರಕ್ಕಾಗಿ ವಿಶೇಷ ಪ್ರಶಸ್ತಿಯನ್ನು ಪಡೆದಿರುವ ಅವರು ಕಥೆಯೇತರ ಚಿತ್ರದಲ್ಲೂ ತಮ್ಮತನ ತೋರಿಸಿದ್ದಾರೆ. ವ್ಯಕ್ತಿ ಕೇಂದ್ರಿತ ಸಾಕ್ಷ್ಯಚಿತ್ರಕ್ಕೆ ಮೊದಲ ಬಾರಿಗೆ ರಾಷ್ಟ್ರಮಟ್ಟದಲ್ಲಿ ವಿಶೇಷ ಪ್ರಶಸ್ತಿ ಪಡೆದಿರುವ ಕಾಸರವಳ್ಳಿ ಅವರೊಂದಿಗೆ ಒಂದಿಷ್ಟು ಮಾತು...

ಯು.ಆರ್. ಅನಂತಮೂರ್ತಿ ಅವರ ಬಗ್ಗೆ ಸಾಕ್ಷ್ಯಚಿತ್ರ ಮಾಡಬೇಕು ಅಂತ ಅನಿಸಿದ್ದು ಯಾಕೆ?
ಅವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಅಭಿಮಾನ. ಅವರ ಆದರ್ಶಗಳ ಬಗ್ಗೆ ನನಗೆ ನಂಬಿಕೆ ಇದೆ. ಅವರ ಆಲೋಚನೆಗಳನ್ನು ನಾನು ಮೆಚ್ಚುತ್ತೇನೆ. ಈ ಎಲ್ಲ ಕಾರಣಗಳಿಗಾಗಿ ಅನಂತಮೂರ್ತಿ ಅವರ ಬಗ್ಗೆ ಪ್ರೀತಿಯಿಂದ ಸಾಕ್ಷ್ಯ ಚಿತ್ರ ಮಾಡಿಕೊಟ್ಟಿದ್ದೇನೆ.

ಕಥೆಯೇತರ ಅಥವಾ ವ್ಯಕ್ತಿಗಳ ಮೇಲಿನ ಸಾಕ್ಷ್ಯಚಿತ್ರ ಮಾಡಿದ್ದು ಇದೇ ಮೊದಲಾ?
ಈ ಹಿಂದೆ ಕೆ.ಕೆ. ಹೆಬ್ಬಾರ್ ಮತ್ತು ನಿರಂಜನ್ ಅವರ ಕುರಿತು ಮಾಡಿದ್ದೆ. ಆದರೆ, ರಾಷ್ಟ್ರ ಮಟ್ಟದಲ್ಲಿ ಕಥೆಯೇತರ ಸಾಕ್ಷ್ಯಚಿತ್ರ ಪ್ರಶಸ್ತಿ ಪಡೆದಿದ್ದು ಮೊದಲು.

ಈ ಸಾಕ್ಷ್ಯಚಿತ್ರದ ವಿಶೇಷತೆಗಳೇನು?
ಅನಂತಮೂರ್ತಿಯವರ ಕುರಿತು ಇಲ್ಲಿವರೆಗೂ 8 ಸಾಕ್ಷ್ಯಚಿತ್ರಗಳು ಮೂಡಿಬಂದಿವೆ. ಆದರೆ, ನಾನು ಎಲ್ಲೂ ಅವರನ್ನು ಸಂದರ್ಶನ ರೂಪದಲ್ಲಿ ಬಿಂಬಿಸಲು ಹೋಗಿಲ್ಲ. ಅವರ ಆಲೋಚನೆ, ಬದುಕಿನ ರೀತಿ, ಬರವಣಿಗೆ, ಮಾತಿನ ಶಕ್ತಿ, ಆದರ್ಶಗಳು ಈ ಎಲ್ಲವನ್ನೂ ವಿಷ್ಯುವಲ್‌ನಲ್ಲಿ ಬಿಂಬಿಸಿದ್ದೇನೆ.

ನಿಮ್ಮ ಸಾಕ್ಷ್ಯ ಚಿತ್ರ ನೋಡಿದಾಗ ಅನಂತಮೂರ್ತಿ ಹೇಗೆ ಕಾಣಬಹುದು?
ಅದು ಗಿರೀಶ್ ಕಾಸರವಳ್ಳಿ ಕಂಡ ಅನಂತಮೂರ್ತಿಗಳನ್ನು ದರ್ಶಿಸಬಹುದು. ಯಾಕೆಂದರೆ ನಾನು ಸಾಕ್ಷ್ಯಚಿತ್ರದ ನಿರ್ದೇಶಕನಾಗಿರುವುದರಿಂದ ಇಲ್ಲಿ ಅನಂತಮೂರ್ತಿಗಳು ನನ್ನ ದೃಷ್ಟಿಯ ನೇರಕ್ಕೆ ಬಿಂಬಿತವಾಗಿರುತ್ತಾರೆ.

ಸಾಕ್ಷ್ಯಚಿತ್ರಗಳಿಂದ ಇಂಥ ಮೇರು ವ್ಯಕ್ತಿತ್ವಗಳನ್ನು ತೆರೆ ಮೇಲಿನ ಚೌಕಟ್ಟಿನಲ್ಲಿ ಪರಿಪೂರ್ಣವಾಗಿ ಕಟ್ಟಿ ಕೊಡಬಹುದೇ?
ಆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಒಬ್ಬ ವ್ಯಕ್ತಿ ಅಥವಾ ಸಾಧಕನ ಬದುಕಿನ ರೀತಿಯನ್ನು ಮಾತ್ರ ಇಲ್ಲಿ ನೋಡಬಹುದಷ್ಟೇ.

ಈ ಸಾಕ್ಷ್ಯಚಿತ್ರ ಎಷ್ಟು ಸಮಯ ತೆಗೆದುಕೊಂಡಿತ್ತು?
2012ರಲ್ಲಿ ಫಿಲ್ಮ್ ಡಿವಿಜನ್ ಅವರು ಸಾಕ್ಷ್ಯಚಿತ್ರ ಮಾಡುತ್ತೇವೆ ಎಂದು ಅನಂತಮೂರ್ತಿ ಅವರ ಬಳಿ ಹೋದಾಗ ಅವರೇ ನನ್ನ ಹೆಸರು ಸೂಚಿಸಿದರಂತೆ. ನಾನು ಬೇಗ ಮುಗಿಸಬಹುದು ಅಂತ ಒಪ್ಪಿಕೊಂಡು 2013ರ ಮಾರ್ಚ್‌ನಲ್ಲಿ ಶುರುಮಾಡಿದೆ. ಆದರೆ, ಬಹಳ ಕಾಲ ಹಿಡಿಯಿತು.

ಮುಂದೆ ನಿಮ್ಮ ನಿರ್ದೇಶನದಲ್ಲಿ ಹೀಗೆ ವ್ಯಕ್ತಿ ಕೇಂದ್ರಿತ ಸಾಕ್ಷ್ಯಚಿತ್ರಗಳು ಬರಬಹುದೇ?
ಸದ್ಯಕ್ಕೆ ಅಡೂರು ಗೋಪಾಲಕೃಷ್ಣ ಅವರ ಬಗ್ಗೆ ಒಂದು ಸಾಕ್ಷ್ಯಚಿತ್ರ ಮಾಡುತ್ತಿದ್ದೇನೆ.

-ಆರ್. ಕೇಶವಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.