ಪಾಪು ಪ್ರಪಂಚದ ಐತಿಹಾಸಿಕ ದಾಖಲೆ

ಹೊರಗೆ ಒಂದೇ ಸವನೆ ಮಳೆ ಹೊಡೆಯುತ್ತಿತ್ತು. ಆಕಾಶಕ್ಕೆ ತೂತು ಬಿದ್ದಂತೆ ಭೀಕರವಾಗಿ ನೀರು ಹೊಯ್ಯುತ್ತಿತ್ತು. ಎಷ್ಟೇ ಮಳೆಯಾದರೂ...
ಪಾಪು ಪ್ರಪಂಚದ ಐತಿಹಾಸಿಕ ದಾಖಲೆ
Updated on: 

ಹೊರಗೆ ಒಂದೇ ಸವನೆ ಮಳೆ ಹೊಡೆಯುತ್ತಿತ್ತು. ಆಕಾಶಕ್ಕೆ ತೂತು ಬಿದ್ದಂತೆ ಭೀಕರವಾಗಿ ನೀರು ಹೊಯ್ಯುತ್ತಿತ್ತು. ಎಷ್ಟೇ ಮಳೆಯಾದರೂ, ನಮ್ಮ ಜನ ಸಂತೋಷಪಡುತ್ತಾರೆ. ಜನರನ್ನು ನಾಶಪಡಿಸುವ ಪ್ರಳಯ ಸದೃಶ್ಯವಾದ ಮಳೆಯಾದರೂ ಜನರು 'ಮಳೆ ಬಂದರೆ ತಪ್ಪಲ್ಲ; ಮಗ ಉಂಡರೆ ತಪ್ಪಲ್ಲ' ಎಂದು ಹೇಳುತ್ತಾರೆ, ಮಗನಷ್ಟೇ ಏಕೆ, ಮಗಳು ಉಂಡರೂ ತಪ್ಪಲ್ಲ. ಆದರೆ ಪುರುಷ ಪ್ರಧಾನ ಸಂಸ್ಕೃತಿ ಬರೀ ಮಗ ಉಣ್ಣಬೇಕೆಂದು ಹೇಳಿದೆ. ಮಗಳು ಉಂಡು ಗಟ್ಟಿಮುಟ್ಟಾಗಿದ್ರೆ, ಆಕೆ ಮಗನಿಗೆ ಉಣ್ಣಿಸಬಹುದೆಂಬ ಸತ್ಯವನ್ನು ಅದೇಕೋ ಗಾದೆ ಮಾತು ಮರೆಮಾಚಿದೆ. ನನ್ನ ಅಭಿಪ್ರಾಯದಲ್ಲಿ 'ಮಳೆಯೂ ಬರಬೇಕು, ಮಗನೂ ಉಣ್ಣಬೇಕು; ಮಗಳೂ ಉಣ್ಣಬೇಕು.'
ಇದು ಕನ್ನಡದ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರ ಆತ್ಮಕಥೆಯ ಮೊದಲ ಪ್ಯಾರಾಗ್ರಾಫ್.
ಕನ್ನಡದ ಮತ್ತೊಬ್ಬ ಹಿರಿಯ ಪತ್ರಕರ್ತ ಮತ್ತು ಸಾಹಿತಿ ಡಾ. ಸರಜೂ ಕಾಟ್ಕರ್ ಅವರ ನಿರೂಪಣೆಯಲ್ಲಿ ಈ ಕಥಾನಕ ಮೂಡಿಬಂದಿದೆ. ಪುಟ್ಟಪ್ಪನವರನ್ನು ತಮ್ಮ ಗುರು ಎಂದೇ ಭಾವಿಸಿರುವ ಕಾಟ್ಕರ್ ಈ ಕಥಾನಕವನ್ನು ರಚಿಸಲು ಮೂರು ವರ್ಷಗಳ ಕಾಲ ಅವರ ಸಂದರ್ಶನವನ್ನು ವಿವಿಧ ಸ್ಥಳಗಳಲ್ಲಿ ಮಾಡಿದ್ದಾರೆ. ಪುಟ್ಟಪ್ಪನವರು ಹೇಳಿದ್ದನ್ನು ದಾಖಲಿಸಿಕೊಂಡು ಅದಕ್ಕೆ ಅಕ್ಷರ ರೂಪವನ್ನು ನೀಡಿದ್ದಾರೆ. ಇದೊಂದು ಸವಾಲಿನ ಕೆಲಸವಾಗಿದ್ದು ಕಾಟ್ಕರ್ ಅದನ್ನು ಸರಿಯಾಗಿ ನಿಭಾಯಿಸಿದ್ದಾರೆ. ಕುಮಾರವ್ಯಾಸನ ಹಾಗೆ ತಾವೊಬ್ಬ ಲಿಪಿಕಾರ ಮಾತ್ರ ಎಂಬ ನಮ್ರಭಾವ ಕಾಟ್ಕರ್ ಅವರದು. ಕೃತಿಯ ಮೊದಲ ಪ್ಯಾರಾವನ್ನು ಇಲ್ಲಿ ಉಲ್ಲೇಖಿಸಿದ್ದರ ಕಾರಣ ಪುಟ್ಟಪ್ಪನವರ ಹೃದಯವೈಶಾಲ್ಯ ಮತ್ತು ಕಾಟ್ಕರ್ ಅವರ ಬರೆವಣಿಗೆಯ ಶೈಲಿಯನ್ನು ಪರಿಚಯಿಸುವುದು.
ತೊಂಬತ್ತು ದಾಟಿರುವ ಪಾಟೀಲ ಪುಟ್ಟಪ್ಪನವರು ಕರ್ನಾಟಕದ ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ನಿರ್ವಹಿಸಿದ ಪಾತ್ರ ವಿಸ್ತಾರವಾದದ್ದು. ಅವರ ಜೀವನವೇ ಈ ನಾಡಿನ ಇತಿಹಾಸದ ಒಂದು ಭಾಗ. ಕರ್ನಾಟಕದ ಏಕೀಕರಣದಲ್ಲಿ ಅವರು ಮಾಡಿದ ಹೋರಾಟಗಳು ನಂತರ ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಪಟ್ಟ ಸಿಗುವುದಕ್ಕಾಗಿ ನಡೆಸಿದ ಪ್ರಯತ್ನಗಳು, ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಮಾಡಿದ ಕೆಲಸಗಳು, ರಾಜ್ಯಸಭೆಯ ಸದಸ್ಯರಾಗಿ ನಿರ್ವಹಿಸಿದ ಪಾತ್ರ ಇವು ಒಂದೆಡೆಯಾದರೆ 'ಪ್ರಪಂಚ' ಪತ್ರಿಕೆಯ ಮೂಲಕ ಸಮಾಜಕ್ಕೆ ಮತ್ತು ಸರ್ಕಾರಕ್ಕೆ ಅವರು ಮಾಡುತ್ತಿದ್ದ ಮಾರ್ಗದರ್ಶನ ಇನ್ನೊಂದು ಕಡೆ. ಪುಟ್ಟಪ್ಪನವರಷ್ಟು ಪುಟಗಳನ್ನು ಬರೆದವರು ಮತ್ತೆ ಯಾರೂ ಇಲ್ಲ ಎಂಬ ಕಾಟ್ಕರ್ ಅವರ ಟಿಪ್ಪಣಿ ಅತಿಶಯೋಕ್ತಿಯದೇನಲ್ಲ.
 ಪಾಟೀಲ ಪುಟ್ಟಪ್ಪನವರು ಈ ಕೃತಿಯಲ್ಲಿ ತಮ್ಮ ಸಾಮಾಜಿಕ ಚಟುವಟಿಕೆಗಳ ವಿವರಗಳನ್ನು ನೀಡಿರುವುದರ ಜೊತೆಯಲ್ಲಿಯೇ ವೈಯಕ್ತಿಕ ಬದುಕಿನ ವಿವರಗಳನ್ನೂ ದಾಖಲಿಸಿದ್ದಾರೆ. ಪುಟ್ಟಪ್ಪನವರ ಹೃದಯ ಕದ್ದ ಇಂದುಮತಿ ಅವರ ಸೋದರ ಮಾವನ ಮಗಳೇ ಆಗಿದ್ದರು. ಅವರನ್ನು ಮದುವೆಯಾಗಲು ಇವರು ಮನಸ್ಸಿನಲ್ಲಿಯೇ ನಿರ್ಧರಿಸಿದ್ದು, ಮಾವನ ಮನೆಯವರಿಗೆ ಎರಡನೆ ಮಗಳನ್ನು ಕೊಡುವ ಇಷ್ಟವಿದ್ದುದು, ಕೊನೆಗೆ ಸ್ನೇಹಿತರ ಮೂಲಕ ಸಂಧಾನ ನಡೆಸಿ ಇಂದುಮತಿಯವರ ಕೈಯನ್ನೇ ಹಿಡಿಯುವಲ್ಲಿ ಯಶಸ್ವಿಯಾದ ಸಂಗತಿ ಸ್ವಾರಸ್ಯಕರವಾಗಿ ಮೂಡಿಬಂದಿದೆ. ಅನಕೃ ಜತೆಗೂಡಿ ಚಿಕ್ಕಪೇಟೆಗೆ ಹೋಗಿ ಮಧುವಿಗೆ ಆ ಕಾಲದಲ್ಲಿಯೇ 1200 ರುಪಾಯಿಯ ರೇಶ್ಮೆ ಸೀರೆಯನ್ನು ಕೊಂಡಿದ್ದನ್ನೂ, ಮದುವೆಯಲ್ಲಿ ತಾವು ಖಾದಿ ಅರಿವೆಯನ್ನೇ ಧರಿಸಿದ್ದನ್ನೂ ಪುಟ್ಟಪ್ಪ ದಾಖಲಿಸಿದ್ದಾರೆ.
ಭಾರತಕ್ಕೆ 1947ರ ಆಗಸ್ಟ್ 9ರಂದೇ ಸ್ವಾತಂತ್ರ್ಯ ಸಿಗಬೇಕಿತ್ತು. ಅದು 'ಕ್ವಿಟ್ ಇಂಡಿಯಾ' ಘೋಷಣೆಯಾದ ದಿನಾಂಕವಾಗಿತ್ತು. ಆದರೆ ಲಾರ್ಡ್ ಮೌಂಟ್ ಬ್ಯಾಟನ್ ಅವರು ಆಗಸ್ಟ್ 15ರ ದಿನವನ್ನು ನಿಗದಿ ಮಾಡಿದ್ದರು. ಏಕೆಂದರೆ ಅದು ಅವರ ಮದುವೆಯ ದಿನವಾಗಿತ್ತು. 1930 ಆಗಸ್ಟ್ 15ರಂದು ಅವರ ಮದುವೆಯಾಗಿತ್ತು. ತಮ್ಮ ಮದುವೆಯ ವಾರ್ಷಿಕೋತ್ಸವದ ದಿನವೇ ಭಾರತಕ್ಕೆ ಸ್ವಾತಂತ್ರ್ಯ ಎಂದು ಅವರು ನಿರ್ಧರಿಸಿದ್ದರು. ಇದಕ್ಕೆ ನೆಹರು ಒಪ್ಪಬಾರದಿತ್ತು ಎಂಬುದು ಬಹುಸಂಖ್ಯಾತ ಸ್ವಾತಂತ್ರ್ಯ ಸೇನಾನಿಗಳ ಅಭಿಪ್ರಾಯವಾಗಿತ್ತು. ಇಂದು ನಾವು ಆಗಸ್ಟ್ 15ರಂದು ಆಚರಿಸುವುದು ಮೌಂಟ್ ಬ್ಯಾಟನ್ ಅವರ ವಿವಾಹ ವಾರ್ಷಿಕೋತ್ಸವ ದಿನ ಎಂಬಂಥ ಅಪರೂಪದ ವಿವರಗಳೂ ಇದರಲ್ಲಿವೆ.
ಮುಂಬಯಿಯಲ್ಲಿ ಇದ್ದಾಗ ಪುಟ್ಟಪ್ಪನವರು ಬಾಗಲಕೋಟೆ ಸಿಮೆಂಟ್ ಕಂಪನಿಯ ಎ.ಜಿ. ತೆಂಡೂಲ್ಕರ್ ಜತೆಯಲ್ಲಿ ಸರ್ದಾರ್ ಪಟೇಲರನ್ನು ಭೇಟಿಯಾಗಿದ್ದರು. ಆ ಭೇಟಿಯ ಸಂದರ್ಭದಲ್ಲಿ ತೆಂಡೂಲ್ಕರ್ ಅವರು ಪುಟ್ಟಪ್ಪನವರನ್ನು ಪಟೇಲರಿಗೆ ಪರಿಚಯಿಸುತ್ತ, ಇವರು ತುಂಬಾ ಚೆನ್ನಾಗಿ ಬರೆಯುತ್ತಾರೆ. ನಮ್ಮ ಸ್ನೇಹಿತರು ಪ್ರಾರಂಭಿಸಲಿರುವ ಪತ್ರಿಕೆಗೆ ಇವರೇ ಸಂಪಾದಕರಾಗಲಿದ್ದಾರೆ ಎಂದರು. ಆಗ ಪಟೇಲರು ಪುಟ್ಟಪ್ಪನವರ ಬೆನ್ನು ತಟ್ಟುತ್ತ, 'ಅಯ್ಯಾ ಯಂಗ್ ಮನ್! ನಿಮ್ಮಂಥ ಬಿಸಿರಕ್ತದ ಹರಿತವಾದ ಲೆಕ್ಕಣಿಕೆಯ ಜನರು ಈ ದೇಶಕ್ಕೆ ಬೇಕಾಗಿದ್ದಾರೆ. ನೀವು ಖಂಡಿತವಾಗಿ ಈ ಕೆಲಸ ಒಪ್ಪಿಕೊಳ್ಳಿ. ಅದರಿಂದ ನೀವು ಬಹಳಷ್ಟು ಜನರನ್ನು ಬದಲಿಸಬಲ್ಲಿರಿ' ಎಂದು ಹೇಳಿದರು. ಇದು ಪುಟ್ಟಪ್ಪನವರ ಜೀವನದ ದಿಕ್ಕನ್ನೇ ಬದಲಿಸಿತು. ಜೀವನದುದ್ದಕ್ಕೂ ಕನ್ನಡ ಜನತೆಯ ಸಾಕ್ಷಿಪ್ರಜ್ಞೆಯಂತೆ ಅವರು ಕೆಲಸ ಮಾಡುತ್ತ ಬಂದರು. ಅಂಥ ಸಾವಿರಾರು ಸಂದರ್ಭಗಳ ಪ್ರಸ್ತಾಪ ಇದರಲ್ಲಿದೆ. 'ನಾನು ಪಾಟೀಲ ಪುಟ್ಟಪ್ಪ' ಭಾಗ- 1 ಈಗ ಮರುಮುದ್ರಣವಾಗಿದೆ. ಜತೆಗೆ ಅದರ ಎರಡನೆಯ ಭಾಗವೂ ಬಂದಿದೆ. ಕರ್ನಾಟಕದ ಚರಿತ್ರೆಯ ಭಾಗವೇ ಆಗಿರುವ ಈ ಕಥಾನಕವನ್ನು ನಾಡು ನುಡಿಯ ಬಗ್ಗೆ ಕಾಳಜಿ ಇರುವವರೆಲ್ಲ ಓದಲೇಬೇಕು.
ಪ್ರ: ಲೋಹಿಯಾ ಪ್ರಕಾಶನ, ಬಳ್ಳಾರಿ,
ಪುಟಗಳು 318/ 350, ಬೆಲೆ ರು. 250/ 250


-ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com