ದಾವಾ ಹಾಕಬಹುದು
ಸುಜಾತಾ, ಬೆಂಗಳೂರು
ತಂದೆ ತಾಯಿ ಇಲ್ಲ. ಊರಿನಲ್ಲಿರುವ ಪಿತ್ರಾರ್ಜಿತ ಆಸ್ತಿಯನ್ನು ಸಹೋದರ ನೋಡಿಕೊಳ್ಳುತ್ತಿದ್ದ. ಇತ್ತೀಚೆಗೆ ನಮಗೆ ತಿಳಿಸದೆ ಗೌಪ್ಯವಾಗಿ ಕೆಲವು ಆಸ್ತಿಗಳನ್ನು ಮಾರಿದ್ದಾನೆ. ನಾವು ನಮ್ಮ ಪಾಲಿನ ಆಸ್ತಿಗೆ ದಾವಾ ಹಾಕಬಹುದೆ?
- ಹಿಂದೂ ಉತ್ತರಾಧಿಕಾರ ಕಾಯ್ದೆ, ಕಲಂ 6ರಂತೆ ಎಲ್ಲ ಹೆಣ್ಣುಮಕ್ಕಳಿಗೂ ಗಂಡುಮಕ್ಕಳಂತೆಯೇ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲಿದೆ. ನ್ಯಾಯಾಲಯದಲ್ಲಿ ದಾವಾ ಹೂಡಿ ಎಲ್ಲ ಆಸ್ತಿ ವಿಭಜನೆ ಮಾಡಿಸಲು ಕೇಳಿ. ಜತೆಗೆ ಆಸ್ತಿ ಖರೀದಿ ಮಾಡಿದವರನ್ನೂ ಪ್ರತಿವಾದಿಯನ್ನಾಗಿ ಮಾಡಿ.
ಆರ್ಯಸಮಾಜದಲ್ಲಿ ಬದಲಾಗಬಹುದು
ಹೆಸರು ಬೇಡ, ಹೊಸಪೇಟೆ
ನಾನು ಹಿಂದೂ ಹೆಂಗಸಾಗಿದ್ದು, ಮುಸಲ್ಮಾನನೊಂದಿಗೆ 1991ರಲ್ಲಿ ಮದುವೆಯಾಯಿತು. 2005ರಲ್ಲಿ ವಿವಾಹ ಮುರಿದುಬಿತ್ತು. ಈಗ ನನಗೆ ಇಬ್ಬರು ಮಕ್ಕಳಿದ್ದು ಶಾಲೆಯಲ್ಲಿ ಮುಸಲ್ಮಾನ ತಂದೆಯ ಹೆಸರೇ ಇದೆ. ನ್ಯಾಯಾಲಯ ಅದನ್ನು ಬದಲಿಸಲು ನಿರಾಕರಿಸಿದೆ. ಹಾಗಾದರೆ ನಾವು ಹಿಂದೂ ಹೆಸರನ್ನಿಟ್ಟುಕೊಳ್ಳುವುದು ಹೇಗೆ?
- ನೀವು ಆರ್ಯಸಮಾಜದಲ್ಲಿ ಹಿಂದೂವಾಗಿ ಬದಲಾದಂತೆ ನಿಮ್ಮ ಮಕ್ಕಳೂ ಬದಲಾಗಬಹುದು. ತದನಂತರ ಪತ್ರಿಕೆಗಳಲ್ಲಿ ಇದನ್ನು ಪ್ರಕಟಪಡಿಸಿದ ನಂತರ ಹಿಂದೂ ಹೆಸರನ್ನು ಇಟ್ಟುಕೊಳ್ಳಬಹುದು. ಆದರೆ ಸಮಸ್ಯೆಯೇನೆಂದರೆ, ನಿಮ್ಮ ಮಕ್ಕಳ ಶಾಲಾ ದಾಖಲಾತಿಗಳನ್ನು ತಿದ್ದಲಾಗುವುದಿಲ್ಲ. ಅದಕ್ಕೆ ಪೂರಕವಾಗಿ ಪತ್ರಿಕಾ ಪ್ರಕಟಣೆ ಹಾಗೂ ಅಫಿಡವಿಟ್ನ ನಕಲನ್ನು ಪ್ರತಿ ಸಂದರ್ಭದಲ್ಲಿಯೂ ಹಾಜರುಪಡಿಸಬಹುದು. ಆದರೆ ನಿಮ್ಮ ಪತಿಯ ಹೆಸರನ್ನು ಬದಲಾವಣೆ ಮಾಡಲು ಬರುವುದಿಲ್ಲ.
ಲೋಕಾಯುಕ್ತರ ವ್ಯಾಪ್ತಿಗೆ ಬರುವುದಿಲ್ಲ
ಲಕ್ಷ್ಮಿನರಸಯ್ಯ, ಬೆಂಗಳೂರು
ನಿರಾಶ್ರಿತರ ಕೇಂದ್ರದಲ್ಲಿದ್ದಾಗ ಹಣ ದುರುಪಯೋಗದ ದೂರಿನ ಮೆಲೆ ನನಗೆ ಮೆಮೋ ಕೊಟ್ಟು, ನನ್ನ ವಿವರಣೆ ಪರಿಗಣಿಸಿ ವಾಗ್ದಂಡನೆ ನೀಡಲಾಗಿದೆ. ಇದರ ವಿರುದ್ಧ ಒಬ್ಬರು ಲೋಕಾಯುಕ್ತರಿಗೆ ದೂರು ನೀಡಿ ಹೆಚ್ಚಿನ ಶಿಕ್ಷೆ ಕೊಡಬೇಕೆಂದು ದೂರು ನೀಡಿದ್ದರ ಮೇಲೆ ಲೋಕಾಯುಕ್ತರು ಸರ್ಕಾರದ ಕಾರ್ಯದರ್ಶಿಯವರ ವಿವರಣೆ ಕೇಳಿದಾಗ ಅವರು ಶಿಕ್ಷೆ ಸರಿಯಾಗಿದೆ ಎಂದು ತಿಳಿಸಿದ್ದಾರೆ. ಈಗ ಇದರಿಂದ ನನಗೆ ತೊಂದರೆಯಾಗಬಹುದೇ?
- ಕಾನೂನು ಕ್ರಮಗಳಲ್ಲಿ ಮೇಲ್ಮನವಿಗೆ ಅವಕಾಶವಿರುವಾಗ ಹಾಗೂ ನ್ಯಾಯಾಲಯದಲ್ಲಿರುವ ಪ್ರಕರಣಗಳಲ್ಲಿ ಲೋಕಾಯುಕ್ತರಿಗೆ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲ. ಆದ್ದರಿಂದ ಇದು ಲೋಕಾಯುಕ್ತರ ವ್ಯಾಪ್ತಿಗೆ ಬರುವುದಿಲ್ಲ. ಅವರು ಸರ್ಕಾರವನ್ನು ಕೇಳಿದ್ದೇ ಅವರ ವ್ಯಾಪ್ತಿಗೆ ಮೀರಿದ್ದು.
- ಎಚ್.ಆರ್. ಕಸ್ತೂರಿರಂಗನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

