ಬದಲುಮಾಡಿ ನೋಡೋಣವೇ?

ಬೀಡಿಯ ಪ್ಯಾಕೇಟು ಮತ್ತು ಚಿಲ್ಲರೆಯನ್ನು ಬೀಡಾ ಅಂಗಡಿಯ ಚೌರಸಿಯಾ ಅವರು ಭೂಮಾನೀದೀನನ ಕೈಗೆ ಹಾಕುತ್ತಾ ಹೀಗೆ ಕೇಳಿದರು; 'ಭೂಮಾಜಿ, ಸಿಎಂ ಸಾಹೇಬರ ವಿಷಯದ ಬಗ್ಗೆ ಏನ್ ನಡೀತಿದೆ? ಅವರೇ ಮುಂದುವರಿಯುತ್ತಾರೋ ಅಥವಾ ಹೋಗ್ತಾರೋ?'. ಭೂಮಾನೀದೀನ ಮೊದಲು ಬೀಡಿ ಹಚ್ಚಿದ, ನಂತರ ಈ ಗಹನ ಪ್ರಶ್ನೆಗೆ ಯೋಗ್ಯ ಉತ್ತರ ಕೊಡಲು ಸ್ವಲ್ಪ ಸಮಯ ತೆಗೆದುಕೊಂಡ. ಬೀಡಿ ಹೊತ್ತಿಸಲು ಸಮಯ ಬೇಕಾಗುತ್ತೆ, ಅಲ್ಲದೆ ಈ ಪ್ರಶ್ನೆ ಅನೇಕ ಬಾರಿ, ಅನೇಕ ರೀತಿಯಲ್ಲಿ ಉದ್ಭವಿಸುತ್ತಿರುತ್ತದೆ. ಹೀಗಾಗಿ ಈ ಬಗ್ಗೆ ಪ್ರತಿ ಸಲವೂ ಹೊಸ ವಿಧಾನದಲ್ಲಿ ಹೇಳಲು ಸಮಯ ಬೇಕಾಗುತ್ತದೆ. ಭೂಮಾನೀದೀನ ಸ್ವಲ್ಪ ಹೊತ್ತು ಯೋಚಿಸಿ, ಎರಡು ಸಲ ದಮ್ ಎಳೆದು ಹೊಗೆಯನ್ನು ಗಾಳಿಯಲ್ಲಿ ತೇಲಿಸುತ್ತಾ ಹೇಳಿದ; 'ಹೋಗೋದಕ್ಕೆ ಸಿದ್ಧತೆ ಆಗ್ತಿದೆ' ಅಂತ ತಿಳೀರಿ. ಭೂಮಾನೀದೀನ ವಿಧಾನಸೌಧದ ಚಪರಾಸಿ. ಸಿಎಂ ಅವರ ಭವಿಷ್ಯದ ಬಗ್ಗೆ ಟಿಪ್ಪಣಿ ಮಾಡಲು ಸಮರ್ಥ ಅಧಿಕಾರಿ! ವಿಧಾನಸೌಧದಲ್ಲಿ ಚಪರಾಸಿಯ ಸಾಮರ್ಥ್ಯವನ್ನು ಕಡಿಮೆಮಾಡಿ ಅಳೆಯುವುದು ಮೂರ್ಖತನವಾಗುತ್ತದೆ. ಚೌರಸಿಯು ಮೂರ್ಖರಲ್ಲ.
ನಮ್ಮ ಪ್ರದೇಶದಲ್ಲಿ ಒಂದು ಯಕ್ಷ ಪ್ರಶ್ನೆ. ಇದು ಜನರನ್ನು ವರ್ಷವಿಡೀ ಕಾರ್ಯತತ್ಪರತೆಯಲ್ಲಿಡುತ್ತದೆ. ವರ್ಷಗಳಿಂದ ಪ್ರಶ್ನೆಯ ಒಂದು ಕಡಗೋಲು ಇದ್ದು ಅದು ನಮ್ಮೆಲ್ಲ ಸಮಸ್ಯೆಗಳನ್ನು ಕಡೆಯುತ್ತಿರುತ್ತದೆ; ಅಂದರೆ, ಸಿಎಂ ಇರುವರೋ? ಹೋಗುವರೋ? ಎಂಬ ಪ್ರಶ್ನೆ! ಈ ಪ್ರದೇಶದ ಸಮಸ್ಯೆ ರಸ್ತೆಗಳು, ವಿದ್ಯುತ್, ನೀರು, ಅಭಿವೃದ್ಧಿ, ಹಸಿವು ಅಥವಾ ನಿರುದ್ಯೋಗವಲ್ಲ, ನಮ್ಮ ಚಿಂತೆ ಮತ್ತು ಚಿಂತನೆಯ ಕೇಂದ್ರದಲ್ಲಿ 'ಅವರು ಉಳಿಯುತ್ತಾರೋ ಅಥವಾ ಕಿತ್ತು ಹಾಕಲ್ಪಡುತ್ತಾರೋ?' ಎಂಬುದೇ ಮೂಲ ಸಮಸ್ಯೆ. ಮೊದಲು ಈ ಸಮಸ್ಯೆ ಬಗೆಹರಿದರೆ ನಂತರ ಇನ್ನೊಂದು ಸಮಸ್ಯೆಯನ್ನು ಬಗೆಹರಿಸಲು ಯತ್ನಿಸಬಹುದು! ಇಲ್ಲಿ ಯಾರು, ಯಾರನ್ನೇ ಭೇಟಿಯಾದರೂ ವಿಷಯ ಅಡ್ಡಾಡಿ ಮತ್ತೆ 'ಏನ್ ಸಾರ್, ನೀವೇನು ಹೇಳ್ತೀರಾ? ಇವರು ಉಳಿತಾರೋ ಅಥವಾ ಇವರನ್ನು ತೆಗೆದು ಹಾಕ್ತಾರೋ?' ಎಂಬ ಪರಮ ಪ್ರಶ್ನೆಯ ಮೇಲೆ ಬಂದು ನಿಲ್ಲುತ್ತದೆ. ಉತ್ತರಿಸುವವರು ಯಥಾಪ್ರಕಾರ ಗಂಭೀರವಾಗಿ ವಿಶ್ಲೇಷಿಸಿ ಹೇಳುತ್ತಾರೆ. ಅವರು ಏನು ಬೇಕಾದರೂ ಹೇಳಬಹುದು... 'ಸಾರ್, ಎಲ್ಲಾ ಗಾಳಿ ಸುದ್ದಿ. 15ನೇ ತಾರೀಖಿನ ನಂತರ ಪಕ್ಕ ಅಂತ ತಿಳೀರಿ! ಹೈಕಮಾಂಡ್ ಸಿಂಗ್ ಸಾಹೇಬರಿಗೆ ಸಂಜ್ಞೆ ಮಾಡಿ ಹೇಳಿದೆ, ಹಾಗಂತ ಅವರೂ ಸುಮ್ಮನಿಲ್ಲ... ಮತ್ತೆ ಇವರ ಪ್ರಯತ್ನವೂ ಕಡಿಮೆ ಇಲ್ಲ- ಎಲ್ಲರ ಎಳೆದಾಟದಲ್ಲಿ ಇವರೇ ಗಟ್ಟಿಯಾಗಿ ಉಳಿಯಲೂಬಹುದು...' ಇಂಥ ಮಾತು... ಮಾತು... ಅಂದಾಜು... ಗಾಳಿ ಸುದ್ದಿಗಳು... ಪ್ರತಿಯೊಬ್ಬರಿಗೂ ದಿಲ್ಲಿಯವರೆಗೆ ಹಿಡಿತವಿದೆ. ವಿಷಯದ ನಾಡಿಯ ಮೇಲೆ ಎಷ್ಟೊಂದು ಜನರ ಕೈ ಇದೆ ಅಂದರೆ ನಾಡಿ ಹಿಡಿಯಲು ಸ್ಥಳವೇ ಉಳಿದಿಲ್ಲ!
ಭೂಮಾನೀದೀನ ಬೀಡಿ ಸೇದುತ್ತಾ ಅಲ್ಲಿಯೇ ನಿಂತಿದ್ದಾನೆ. ಅವನು ಪೇಟೆಯ ಗದ್ದಲವನ್ನು ನೋಡುತ್ತಿದ್ದಾನೆ. ರಾತ್ರಿ ಇಳಿದುಬಂದಿದೆ, ದೀಪಗಳು ಹೊತ್ತಿಕೊಂಡಿವೆ. ಗಿರಾಕಿಗಳು ಬೀಡಾ ಅಂಗಡಿಗೆ ಬಂದು ಹೋಗುತ್ತಿದ್ದಾರೆ. ಅಂಗಡಿಗೆ ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳು, ನೌಕರರು, ವ್ಯಾಪಾರಿಗಳು ಬರುತ್ತಿದ್ದಾರೆ. ಚೌರಸಿಯಾ ಎಲ್ಲರೆದುರು ಒಂದೇ ಪ್ರಶ್ನೆ ಹಾಕುತ್ತಾರೆ; 'ಸಾರ್, ಸಿ.ಎಂ. ಹೋಗ್ತಾರೋ? ಉಳಿತಾರೋ?'
...ಬದಲುಮಾಡಿ
ನೋಡೋಣವೇ?... 2
ಉತ್ತರದಲ್ಲಿ ಕೆಲವರು ನಕ್ಕರು. ಕೆಲವರು ಮುಖ ಸಿಂಡ್ರಿಸಿ, 'ಏನ್ ಹೇಳೋದೋ ಏನೋ? ನಿತ್ಯ ಇವರ ಜಗಳ
ನೋಡಿ- ನೋಡಿ ಸಾಕಾಯ್ತು. ಅವರೂ ಕೆಲಸ ಮಾಡಲ್ಲ, ಮಾಡೋದಕ್ಕೂ ಬಿಡಲ್ಲ' ಎಂದರು. ಒಬ್ಬರಂತೂ, 'ನೋಡಿ, ಈ ರಂಪಾಟದಲ್ಲಿ ನಮ್ಮ ಫೈಲ್ ಮುಂದಕ್ಕೆ ಹೋಗ್ತಿಲ್ಲ. ಮಂತ್ರಿಗಳ ಸಹಿ ಆಗಬೇಕಿತ್ತು. ಆದರೆ ಅವರು ಒಂದೇ ಸಮನೆ ಓಡಾಡುತ್ತಿದ್ದಾರೆ. ಸಿಎಂ ಹೋದರೆ ತಮ್ಮ ಪೊಜಿಶನ್ ಏನಾಗುತ್ತೆ? ನನ್ನ ಫೈಲ್ ಬಗ್ಗೆಯೇ ನನಗೆ ತಿಳೀತಿಲ್ಲ, ಇನ್ನು ನಿಮ್ಮ ಫೈಲನ್ನು ಹೇಗೆ ಮುಂದುವರಿಸಲಿ?' ಎಂದು ಮಂತ್ರಿಗಳು ಹೇಳ್ತಿದ್ದಾರೆ. ಅಧಿಕಾರಿಗಳು ಹೊಸ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಸ ಸೆಟಿಂಗ್ ಸಿದ್ಧಮಾಡಬೇಕು. ಸಿಎಂ ಬಗ್ಗೆ ಒಂದು ನಿರ್ಧಾರವಾದರೆ ಅಭಿವೃದ್ಧಿ ಬಗ್ಗೆ ಯೋಚಿಸಬಹುದು.
ವಿದ್ಯಾರ್ಥಿಗಳು ಹೇಳಿದರು; 'ನೋಡಿ, ಹೊಸದಾಗಿ ಯಾರು ಬೇಕಾದರೂ ಸಿಎಂ ಆಗಿ ಬರಲಿ. ನಾವಂತೂ ಅವರ
ಪ್ರತಿಕೃತಿ ಸುಡಬೇಕು. ಕಳೆದ ಸಲದ ಒಂದು ಪ್ರತಿಕೃತಿ ಉಳಿದಿದೆ, ಅದು ಸುಮ್ಮನೆ ಹಾಗೇ ಬಿದ್ದಿದೆ'. 'ಸಿಎಂ ಯಾರಾದ್ರೂ ಆಗ್ಲಿ, ನಮಗೇನು? ಏನ್ ಸಾರ್?' ಇನ್ನೊಬ್ಬ ಕೇಳಿದ.
ಮತ್ತೊಬ್ಬರಿಗೆ ಈ ಎಲ್ಲರ ಮಾತಿನ ಬಗ್ಗೆ ಆಕ್ಷೇಪಣೆ ಇತ್ತು. ಅವರು ಹೇಳಿದರು, 'ಅವರನ್ನು ಹೇಗೆ ತೆಗೆದು ಹಾಕ್ತೀರ? ತಲೆಗೊಂದರಂತೆ ಮಾತಾಡ್ತಾರಲ್ಲ, ರಾಜ್ಯ ಅವರ ಅಪ್ಪಂದ? ಸಿಎಂ ಒಳ್ಳೆ ಕೆಲ್ಸ ಮಾಡ್ತಿದ್ದಾರೆ. ನೀವೇ ನೋಡಿ. ರಸ್ತೆಗಳನ್ನು ನೋಡಿ, ವಿದ್ಯುತ್ ಸೌಕರ್ಯ ನೋಡಿ...'.
ಎರಡು-ಮೂರು ಗುಂಪುಗಳಾದವು. ಚರ್ಚೆಯ ಆದರ್ಶ ಸ್ಥಿತಿ! ಅವರನ್ನು ತೆಗೆದು ಹಾಕಿದಾಗಲೇ ಅವರು ಹೋಗ್ತಾರೆ. ಆದರೆ ಈಗ ಇಲ್ಲಿ ಚಪ್ಪಲಿಗಳು ಕೈಗೆ ಬರುವಂಥ ಪರಿಸ್ಥಿತಿ. ಚರ್ಚೆ... ಚರ್ಚೆ... ಮತ್ತು ಚಪ್ಪಲಿಗಳ ಆವೇಶ- ಸಿಎಂ ಬದಲಾವಣೆಯ ವಿಷಯ ಬಂದಾಗ ಹೈಕಮಾಂಡ್ನಲ್ಲಿ ಆಗ ಆಗುತ್ತಿತೇನೋ. ಈಗ ಇಲ್ಲೂ...
'ನೀವು ಹೇಗೆ ತೆಗೆದು ಹಾಕ್ತೀರ?... ಒಂದುವೇಳೆ ಅವರನ್ನು ಕೆಳಗಿಳಿಸಿದರೆ ನಮ್ಮ ನಂಬರ್ ನೆನಪಿಟ್ಟುಕೊಳ್ಳಿ, ಸಾರ್! ಪ್ರತಿ ಸಲವೂ ನಮ್ಮ ಹೆಸರನ್ನು ಹಿಂದಕ್ಕೆ ಸರಿಸಿಬಿಡ್ತಾರೆ. ನಮ್ಮನ್ನು ಮಹಾಸಚಿವರು, ಅಧ್ಯಕ್ಷರು- ಉಪಾಧ್ಯಕ್ಷರು ಅಂತ ಎಲ್ಲ ಮಾಡಿಯಾಯ್ತು. ಈಗ ಇವರು ನಮ್ಮನ್ನು ಇಂಥವರು ಅಂತ ಹೇಳಿ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ನಾವು ಯಾರಿಂದ ಹೇಳಿಸಬೇಕು ಹೇಳಿ? ಅವರಿಂದಲೂ ಹೇಳಿಸ್ತೀವಿ.'
ಚೌರಸಿಯಾ ವಾದ ಕೇಳುವುದರಲ್ಲಿ ಮತ್ತು ಬೀಡಾ ಕಟ್ಟುವುದರಲ್ಲಿ ಮಗ್ನರಾಗಿದ್ದರು. ವಾದಕ್ಕೆ ಯೋಗ್ಯ ದಿಕ್ಕು ಕೊಡಲು ಅಕಸ್ಮಾತ್ ಅವರಿಗೆ ಬಳಿಯೇ ನಿಂತು ಬೀಡಿ ಸೇದುತ್ತಿದ್ದ ಭೂಮಾನೀದೀನ ಕಂಡ.
'ಇವರನ್ನು ಕೇಳಿ, ಸರಿಯಾದ ವಿಷಯ ಹೇಳ್ತಾರೆ.'
'ಇವರು ಯಾರು?' ಒಬ್ಬ ಕೇಳಿದ.
'ವಿಧಾನಸಭೆಯಲ್ಲಿ ಪ್ಯೂನ್ ಆಗಿದ್ದಾರೆ. ಸಿಎಂ ಚೇಂಬರ್ ಹೊರಗೆ ಸ್ಟೂಲ್ ಹಾಕಿ ಕೂರ್ತಾರೆ. ಆದರೆ ಒಳಗಿನ
ವಿಷಯವೆಲ್ಲಾ ತಿಳಿದಿರುತ್ತೆ...'
ಈಗ ಭೂಮಾನೀದೀನ ಇದ್ದಕ್ಕಿದ್ದಂತೆ ಚರ್ಚೆಗೆ ಕೇಂದ್ರಬಿಂದುವಾದ. ಅವನು ಬೀಡಿಯನ್ನು ಇಲ್ಲಿಯೇ ಹೊತ್ತಿಸಿ ಸೈಕಲ್ ಮೇಲೆ ಕೂತು ಸೇದಬೇಕೋ ಅಥವಾ ಕ್ವಾರ್ಟರ್ಗೆ ಹೋಗಿ ಬೀಡಿ ಹೊತ್ತಿಸುವುದು ಸರಿಯೋ ಎಂಬ ಬಗ್ಗೆ ಇನ್ನೂ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಆದರೆ, ಅವನು ಪಬ್ಲಿಕ್ಗೆ ಹೇಳಿದ; 'ಸಿಎಂ ಚಿಂತೆಯಲ್ಲಿರುವಂತೆ ಕಂಡಿತು. ಅವರ ಮುಖವೇ ಚಿಂತೆ ಮಾಡುತ್ತಿರುವಂತಿದೆ. ಅವರು ಕೋಣೆಯಿಂದ ಹೊರಟಾಗ ಮುಖ ಸೊರಗಿತ್ತು. ಸಿಎಂ ಕುರ್ಚಿಯಿಂದ ಕೆಳಗಿಳಿದಾಗ ಅವರನ್ನು ಯಾರೂ ಕೇಳಲ್ಲ'. ಭೂಮಾನೀದೀನ ತುಂಬಾ ಹೊತ್ತು ಮಾತನಾಡಿದ. ಜನ ಕೇಳುತ್ತಲೇ ಇದ್ದರು. ಕಡೆಗೆ...
ಬದಲು ಮಾಡಿ ನೋಡೋಣವೆ?...3
ಹಾಗಂತ ಸಾಹೇಬರ ಪೊಜಿಶನ್ ಸಹ ಸ್ಟ್ರಾಂಗ್ ಇದೆ. ಅವರು ಕುರ್ಚಿಯಲ್ಲಿ ಉಳಿದರೆ ಅಚ್ಚರಿಬೇಡಿ' ಎಂದು ಹೇಳಿ
ತನ್ನ ಮಾತನ್ನು ಮುಗಿಸಿದ.
ಅತ್ಯಂತ ಅಂತರಂಗ ಮತ್ತು ವಿಶ್ವಾಸನೀಯ ಮೂಲಗಳ ಪ್ರಕಾರ ಸಿಎಂ ಹೋಗುವವರಿದ್ದಾರೆ ಎಂಬ ವಿಷಯ ನಡುರಾತ್ರಿಗೆ ಇಡೀ ಪ್ರದೇಶದಲ್ಲಿ ವ್ಯಾಪಿಸಿತು. ಆದರೆ ಅವರು ಉಳಿಯಲೂಬಹುದು. ಕೆಲವರು, 'ನಾವು ಇದನ್ನು ಮೊದಲಿನಿಂದಲೂ ಹೇಳುತ್ತಿದ್ದೇವೆ' ಎಂದರು. ಇನ್ನು ಕೆಲವರು, 'ನಾವಂತೂ ನಿತ್ಯ ಇದನ್ನು ಕೇಳಿ-ಕೇಳಿ ನಮ್ಮ ಕಿವಿಗಳು
ಹಾಳಾಗಿವೆ' ಎಂದರು.
ಇತ್ತ, ನಡುರಾತ್ರಿಗೆ, ಈ ಅಂತರಂಗ ಮತ್ತು ವಿಶ್ವಸನೀಯ ಮೂಲ ನಿದ್ರಿಸುವ ಮುನ್ನದ ಕೊನೆಯ ಬಿಡಿಯ
ದಮ್ ಎಳೆಯುತ್ತಾ ಯೋಚಿಸಿತು; 'ಈಚೆಗೆ ಬೀಡಿಯಲ್ಲಿ ಹಿಂದಿನ ಮಜಾ ಬರ್ತಿಲ್ಲ!'.
'ಬೀಡಿಯ ಬ್ರಾಂಡ್ ಬದಲುಮಾಡಿ ನೋಡೋಣವೇ?' ಹೀಗೆಂದು ಯೋಚಿಸುತ್ತಾ ಅವನು ನಿದ್ರೆಗೆ ವಶನಾದ.
- ಮೂಲ: ಜ್ಞಾನ್ ಚತುರ್ವೇದಿ
- ಕನ್ನಡಕ್ಕೆ: ಡಿ.ಎನ್. ಶ್ರೀನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


