

ಇಂದು (ಫೆ.2) ವಿಶ್ವ ವಿವಾಹ ದಿನ. ಸಮಾಜದ ಅವಿಭಾಜ್ಯ ಅಂಗವಾಗಿರುವ ಕುಟುಂಬ, ಆ ಕುಟುಂಬದ ಬುನಾದಿಯಾಗಿರುವ ಪತಿ ಮತ್ತು ಪತ್ನಿಯನ್ನು ಗೌರವಿಸುತ್ತದೆ ಈ ದಿನ. ಹಾಗಿದ್ದರೆ ನಮ್ಮ ಸುತ್ತಮುತ್ತಲಿನ ಅನೇಕ ದೇಶಗಳ, ಜನಾಂಗಗಳ ವಿವಾಹಪದ್ಧತಿ ಹೇಗಿದೆ? ಒಂದು ಸುತ್ತು ಹಾಕಿ ಬರೋಣ ಬನ್ನಿ...
ವಿವಾಹ ಮಹೋತ್ಸವ. ಹೋಮಧೂಮದಲ್ಲಿ ಮಿಂದೆದ್ದ ವಧೂವರರು. ಏಳು ಹೆಜ್ಜೆಗಳನ್ನು ಜೊತೆಯಾಗಿ ತುಳಿಯುವಾಗ, ಏಳೇಳು ಜನ್ಮಗಳಲ್ಲೂ ಜೊತೆಯಾಗಿರುತ್ತೇನೆ ಎಂಬ ವಾಗ್ದಾನ. ದಾಂಪತ್ಯಕ್ಕೆ ಬದ್ಧತೆಯ ಸಂಕೇತವಾಗಿ ಕಾಲುಂಗುರ, ತಾಳಿ. ಓಕುಳಿಯಲ್ಲಿ ಪರಸ್ಪರ ಮೈಮರೆಸುವ , ಮೈ ತೆರೆಸುವ ಸ್ಪರ್ಶ. ಇವಿಷ್ಟಿಲ್ಲದೆ ಹಿಂದೂ ವೈದಿಕ ಮದುವೆಯಿಲ್ಲ.
ಈಶಾನ್ಯ ಭಾರತದ, ಕರ್ನಾಟಕದ ದಕ್ಷಿಣದ ಕೆಲ ಬುಡಕಟ್ಟುಗಳಲ್ಲಿ ಹುಡುಗನೂ ಹುಡುಗಿಯೂ ಕಾಡಿಗೆ ಓಡಿಹೋಗುತ್ತಾರೆ. ಅಲ್ಲಿ ಆತ ತಾನು ಪುರುಷನೆಂದೂ, ಆಕೆ ತಾನು ಸ್ತ್ರೀಯೆಂದೂ ಪರಸ್ಪರ ರುಜುವಾತುಪಡಿಸಿಕೊಳ್ಳಬೇಕು. ಆತ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬಲ್ಲನೆಂದು ದೃಢಪಡಿಸಬೇಕು. ಆಮೇಲಷ್ಟೇ ಹಾರ ವಿನಿಮಯ.
ಯಾವುದು ಸರಿ? ಯಾವುದು ತಪ್ಪು?
ಇಲ್ಲಿ ಸರಿ, ತಪ್ಪಿನ ಪ್ರಶ್ನೆಯೇ ಇಲ್ಲ. ಒಂದೊಂದು ವರ್ಗ, ಜಾತಿ, ಬುಡಕಟ್ಟು, ಧರ್ಮಕ್ಕೂ ಒಂದೊಂದು ಪದ್ಧತಿ. ಇದು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋದಾಗ ಇನ್ನೂ ವಿಚಿತ್ರವಾದ ಮಾರ್ಪಾಡುಗಳನ್ನು ತಾಳುತ್ತದೆ. ನಮ್ಮದು ಹೀಗೆ, ಅವರದು ಹಾಗೆ ಎನ್ನುವುದಷ್ಟೇ ನಿಜ. ಮದುವೆ ವಿವಿಧ ಸಮಾಜಗಳಲ್ಲಿ, ವಿವಿಧ ರೀತಿಯಲ್ಲಿ ನಡೆದರೂ ಉದ್ದೇಶ ಮಾತ್ರ ಒಂದೇ. ಕೆಲವು ವಿವಾಹ ಆಚರಣೆಗಳು ವಿಚಿತ್ರವೆನಿಸಿದರೂ ಆಯಾ ಸಮಾಜಗಳಲ್ಲಿ, ದೇಶಗಳಲ್ಲಿ ಅವಕ್ಕೆ ಕಾನೂನು ಒಪ್ಪಿಗೆಯಿದೆ.
ಪ್ರತಿ ವರ್ಷ ಫೆಬ್ರವರಿ ತಿಂಗಳಿನ ಎರಡನೆಯ ಭಾನುವಾರವನ್ನು ವಿಶ್ವ ವಿವಾಹ ದಿನವೆಂದು
ಆಚರಿಸಲಾಗುತ್ತದೆ. ವಿವಾಹದ ಮಹತ್ವಕ್ಕೆ ಮತ್ತಷ್ಟು ಒತ್ತು ನೀಡುವುದೇ ಇದರ ಹಿಂದಿನ ಉದ್ದೇಶ. ವಿಶ್ವ ವಿವಾಹ ದಿನ, ಸಮಾಜದ ಅವಿಭಾಜ್ಯ ಅಂಗವಾಗಿರುವ ಕುಟುಂಬ, ಆ ಕುಟುಂಬದ ಬುನಾದಿಯಾಗಿರುವ ಪತಿ ಮತ್ತು ಪತ್ನಿಯನ್ನು ಗೌರವಿಸುತ್ತದೆ. ವೈವಾಹಿಕ ಜೀವನದಲ್ಲಿ ಪ್ರತಿ ದಿನವೂ ಅವರಿಬ್ಬರು ಮಾಡುವ ತ್ಯಾಗ, ಅವರು ತೋರುವ ನಿಷ್ಠೆ ಮತ್ತು ಅವರು ಹಂಚಿಕೊಳ್ಳುವ ಸಂತಸವನ್ನು ಗೌರವಿಸುತ್ತದೆ.
ಹಾಗಿದ್ದರೆ ನಮ್ಮ ಸುತ್ತಮುತ್ತಲಿನ ಅನೇಕ ದೇಶಗಳ, ಜನಾಂಗಗಳ ವಿವಾಹಪದ್ಧತಿ ಹೇಗಿದೆ? ಒಂದು ಸುತ್ತು ಹಾಕಿ ಬರೋಣ ಬನ್ನಿ...
ಕೊರಿಯಾ
ಮದುವೆಯಾದ ಬಳಿಕ ವರನ ಗೆಳೆಯರು ಆತನ ಕಾಲುಚೀಲ ತೆಗೆದು, ಕಾಲುಗಳನ್ನು ಹಗ್ಗದಿಂದ ಕಟ್ಟಿ ಪಾದವನ್ನು ಒಣಗಿದ ಹಳದಿ ಕೊರೊವಿನ ಎನ್ನುವ ಮೀನಿನಿಂದ ಹೊಡೆಯುತ್ತಾರೆ. ಮೊದಲ ರಾತ್ರಿಯ ಮುನ್ನ ಕೊರೊವಿನ ಏಟು ತಿಂದರೆ ವರ ಗಟ್ಟಿಮುಟ್ಟಾಗುತ್ತಾನೆನ್ನುವುದು ಕೊರಿಯನ್ನರ ನಂಬಿಕೆ.
ವಿವಾಹದಲ್ಲಿ ವರ ಬಹಳ ಮುಗುಳ್ನಗುತ್ತಿದ್ದರೆ ಆತನ ಮೊದಲ ಮಗು ಹೆಣ್ಣಾಗಿರುತ್ತದೆ ಎಂದು ಪ್ರತೀತಿ. ಮದುವೆಯ ಬಳಿಕ ವರನ ಪೋಷಕರು ವಧುವಿನ ಮೇಲೆ ಗೋಡಂಬಿ ಮತ್ತು ದ್ರಾಕ್ಷಿಗಳನ್ನು ಎಸೆಯುತ್ತಾರೆ. ವಧುವಿನ ಕೈಗೆ ಗೋಡಂಬಿಗಳು ಸಿಕ್ಕಲ್ಲಿ ಆಕೆಗೆ ಗಂಡು ಮಕ್ಕಳಾಗುತ್ತವೆ ಎನ್ನುವುದು ಅವರ ನಂಬಿಕೆ.
ಮದುವೆಗೆ ಬಂದ ಸಂಬಂಧಿಗಳು ನವದಂಪತಿಯ ಮೇಲೆ ಚೆಸ್ಟ್ನಟ್ (ಗೌರವವನ್ನು ಸೂಚಿಸುತ್ತದೆ) ಮತ್ತು ಒಣಗಿದ ಕೆಂಪು ಖರ್ಜೂರ (ಪರಿಶ್ರಮವನ್ನು ಸೂಚಿಸುತ್ತದೆ)ಗಳನ್ನು ಒಳ್ಳೆಯದಾಗಲಿ ಎಂದು ಹರಸಿ ಎಸೆಯುವ ಸಂಪ್ರದಾಯವಿದೆ.
ಜಪಾನ್
ಸಾನ್ ಸಾನ್ ಕೂಡೋ ನೊ ಸಕಾಜುಕಿ ಅಥವಾ ಸಕಾಜುಕಿ ಗೊಟೋ ಎನ್ನುವ ಆಚರಣೆಯನ್ನು ವಿವಾಹದ ಸಂದರ್ಭ ಜಪಾನಿಯರು ನಡೆಸುತ್ತಾರೆ. ಜಪಾನೀ ಭಾಷೆಯಲ್ಲಿ ಸಾನ್ ಸಾನ್ ಕೂಡೋ ಎಂದರೆ ಮೂರು, ಮೂರು, ಒಂಬತ್ತು ಸಲ. ಮೂರು ವಿವಿಧ ಸೈಜಿನ ಸಕಾಜುಕಿ ಕಪ್ಪುಗಳಲ್ಲಿ ಕಷಾಯ ನೀಡಲಾಗುತ್ತದೆ. ದಂಪತಿಗಳು ಪ್ರತಿಯೊಂದು ಕಪ್ಪಿನಿಂದಲೂ ಮೂರು ಗುಟುಕು (ಒಟ್ಟಾರೆ ಒಂಭತ್ತು ಗುಟುಕು) ಕಹಿ ಕಷಾಯ ಕುಡಿಯುತ್ತಾರೆ. ಜೀವನದಲ್ಲಿ ಕಷ್ಟ ಸುಖಗಳೆರಡೂ ಬರುತ್ತವೆ, ಅವನ್ನು ಒಗ್ಗಟ್ಟಾಗಿ ಧೈರ್ಯದಿಂದ ಎದುರಿಸಬೇಕೆಂದು ಈ ಕಹಿ ಕಷಾಯವನ್ನು ಕುಡಿಸಲಾಗುತ್ತದೆ. ಸಂಖ್ಯೆ ಮೂರನ್ನು ಭಾಗಿಸಲಾಗದು, ಆದ್ದರಿಂದಲೇ ಮೂರು ಬೌದ್ಧರಿಗೆ ಬಹಳ ಪವಿತ್ರ ಸಂಖ್ಯೆ. ಒಂಬತ್ತು ಅವರ ಲೆಕ್ಕದಲ್ಲಿ ಮೂರು ಪಟ್ಟು ಹೆಚ್ಚು ಸಂತಸವನ್ನು ನೀಡುವ ಸಂಖ್ಯೆ.
ಸ್ಕಾಟ್ಲೆಂಡ್
ಸ್ಕಾಟ್ಲೆಂಡ್ನಲ್ಲಿ ಕಾಲು ತೊಳೆಯುವ ಪ್ರಾಚೀನ ಸಂಪ್ರದಾಯವಿದೆ. ಮದುವೆಯ ಹಿಂದಿನ ರಾತ್ರಿ ವಧುವಿನ ಕಾಲು ತೊಳೆಯಲಾಗುತ್ತದೆ. ಮದುವೆಯಾದ ಮಹಿಳೆಯೊಬ್ಬಳ ಉಂಗುರವನ್ನು ಕಾಲು ತೊಳೆಯುವ ನೀರಿನ ಟಬ್ಬಿನಲ್ಲಿ ಹಾಕಲಾಗುತ್ತದೆ. ಅದನ್ನು ಮೊದಲು ಹೊರತೆಗೆಯುವ ಹುಡುಗಿಯ ಮದುವೆ ಶೀಘ್ರದಲ್ಲಿ ನಡೆಯುತ್ತದೆ ಎನ್ನುವ ನಂಬಿಕೆ ಸ್ಕಾಟಿಷ್ ಜನರದು.
ಹಳೆಯ ಸ್ಕಾಟಿಷ್ ಮದುವೆಯ ಆಚರಣೆ ಪ್ರಕಾರ ವರ ಕಲ್ಲುಗಳು ತುಂಬಿದ ಬುತ್ತಿಯೊಂದನ್ನು ತನ್ನ ಹೆಗಲ ಮೇಲೆ ಹೊತ್ತು ನಡೆಯಬೇಕು. ವಧು ಬಂದು ಆತನಿಗೆ ಚುಂಬನ ನೀಡುವವರೆಗೂ ಆತ ನಡೆಯುತ್ತಿರಲೇಬೇಕು.
ವಧುವಿಗೆ ಕಪ್ಪು ಹಚ್ಚುವ ಕಾರ್ಯಕ್ರಮವನ್ನೂ ಸ್ಕಾಟಿಷ್ ಜನ ಆಯೋಜಿಸುತ್ತಾರೆ. ಮದುವೆಗೆ ಮುನ್ನ ವಧುವಿನ ಗೆಳತಿಯರು ಮತ್ತು ಸಂಬಂಧಿಗಳು ಆಕೆಯನ್ನು ಅಪಹರಿಸಿ ಆಕೆಯ ಮೇಲೆ ಕೆಟ್ಟ ವಾಸನೆ ಬರುವ ಕೆಲವು ವಸ್ತುಗಳನ್ನು- ಒಡೆದ ಮೊಟ್ಟೆಗಳು, ವಿವಿಧ ಸಾಸ್ಗಳು, ಬೆಣ್ಣೆ, ಖೋವಾ, ನೂಡಲ್ಸ್, ಮೀನು, ಕ್ಯಾರೆಟ್ ಮತ್ತು ಇತರೆ ಕೊಳೆತ ತರಕಾರಿಗಳನ್ನು ಸುರಿದು ಜನರೆಲ್ಲ ಆಕೆಯನ್ನು ಕಾಣುವಂತೆ ಪಟ್ಟಣದ ಬೀದಿಗಳಲ್ಲಿ ಕೊಂಡೊಯ್ಯುತ್ತಾರೆ.
ಜರ್ಮನಿ
ವಧು ಮತ್ತು ವರನ ಗೆಳೆಯರು ವಧುವನ್ನು ಅಪಹರಿಸುತ್ತಾರೆ. ಕಾಣೆಯಾದ ವಧುವನ್ನು ಶೋಧಿಸುವ ಕಾರ್ಯ ವರನದು. ಆಕೆಯನ್ನು ಹುಡುಕುತ್ತಾ ಆತ ಮೊದಲು ಅಲ್ಲಿನ ಸ್ಥಳೀಯ ಪಬ್ಗೆ ಹೋಗುತ್ತಾನೆ, ತನ್ನ ನೆರವಿಗೆ ಬರುವಂತೆ ಅಲ್ಲಿದ್ದವರಿಗೆಲ್ಲಾ ಮದ್ಯ ಕುಡಿಸುತ್ತಾನೆ.
ಜರ್ಮನ್ನರಲ್ಲಿ ಪೋಲ್ತೆರಾಬೆಂಡ್ ಎನ್ನುವ ಸಂಪ್ರದಾಯವಿದೆ. ವಧುವಿನ ಗೆಳೆಯರು ಮದುವೆಯ ಹಿಂದಿನ ಸಾಯಂಕಾಲ ಬಂದು ಆಕೆಯ ಮನೆಯ ಮುಂಬಾಗಿಲ ಎದುರು ತಟ್ಟೆ, ಕಪ್ಪು- ಸಾಸರ್ಗಳನ್ನು ಒಡೆಯುತ್ತಾರೆ. ಹೀಗೆ ಮಾಡುವುದರಿಂದ ವಧುವಿನ ವೈವಾಹಿಕ ಜೀವನ ಯಶಸ್ವಿಯಾಗುತ್ತದೆಂದು ಅವರ ನಂಬಿಕೆ. ವಧು ತನ್ನ ಗೆಳೆಯರಿಗೆ ಕೃತಜ್ಞಾತಾಪೂರ್ವಕವಾಗಿ ವೈನ್ ಮತ್ತು ಬಿಸ್ಕತ್ತುಗಳನ್ನು ನೀಡಿ ಸತ್ಕರಿಸುತ್ತಾಳೆ.
ತನ್ನ ಹೊಸ ಜೀವನ ಸಮೃದ್ಧವಾಗಿರಬೇಕೆಂದು ಮದುವೆಯ ದಿನ ಜರ್ಮನ್ ವಧು ತನ್ನ ಪಾಕೇಟಿನಲ್ಲಿ ಸ್ವಲ್ಪ ಬ್ರೆಡ್ ಮತ್ತು ಉಪ್ಪನ್ನು ಕೊಂಡೊಯ್ಯುತ್ತಾಳೆ. ವೈವಾಹಿಕ ಜೀವನದಲ್ಲಿ ಜಯ ದೊರಕಲೆಂದು ವರ ತನ್ನ ಪಾಕೇಟಿನಲ್ಲಿ ಸ್ವಲ್ಪ ಕಾಳುಗಳನ್ನು ಕೊಂಡೊಯ್ಯುತ್ತಾನೆ.
ನೆದರ್ಲೆಂಡ್
ಸಾಂಪ್ರದಾಯಕವಾಗಿ ಬ್ರೂಯಿಡ್ ಸ್ರಾನೆನ್ (ವಧುವಿನ ಕಣ್ಣೀರು) ಎನ್ನುವ ಮದ್ಯ ಮತ್ತು ಬ್ರೂಯಿಡ್ ಸೂಯಿಕಾಸ್ (ವಧುವಿನ ಸಕ್ಕರೆ) ಎನ್ನುವ ಸಿಹಿ ತಿನಿಸನ್ನು ತಿನ್ನುತ್ತಾರೆ. ಮದುವೆಗೆ ಬಂದ ಅತಿಥಿಗಳಿಗೆ ಬ್ರೂಯಿಡ್ ಸೂಯಿಕಾಸ್ನ ಐದು ಚೂರುಗಳನ್ನು- ಪ್ರೀತಿ, ಸಂತಸ, ನಂಬಿಕೆ, ಸಮೃದ್ಧಿ ಮತ್ತು ಪಾವಿತ್ರ್ಯದ ಸಂಕೇತ- ಒಂದು ಸಣ್ಣ ಬ್ಯಾಗಿನಲ್ಲಿ ಹಾಕಿ ನೀಡಲಾಗುತ್ತದೆ.
ಕಜಕ್ಸ್ತಾನ್
ವರನ ಪೋಷಕರು ವಧುವಿಗೆ ಕಿವಿಯೋಲೆ ಹಾಕಿದ ಮೇಲೆ ಅಧಿಕೃತವಾಗಿ ನಿಶ್ಚಿತಾರ್ಥವಾಗಿದೆ ಎಂದು ಘೋಷಿಸಲಾಗುತ್ತದೆ. ಮದುವೆಯ ಮುನ್ನ ತೋಯ್ (ಔತಣಕೂಟ) ಮುಗಿದ ಮೇಲೆ ವಧುವಿಗೆ ಉಜಾತು ತೋಯ್ (ಬೀಳ್ಕೊಡುಗೆ ಸಮಾರಂಭ) ನೀಡಲಾಗುತ್ತದೆ. ವಧು ವರನ ಮನೆಗೆ ಬಂದ ಮೇಲೆ ಬೆತಷರ್ ಎನ್ನುವ ಆಚರಣೆಯಲ್ಲಿ ವರನ ಮನೆಯವರಿಗೆ ಮೊದಲ ಬಾರಿಗೆ ವಧುವಿನ ಮುಖವನ್ನು ತೋರಿಸಲಾಗುತ್ತದೆ.
ಚೀನಾ
ಮಧ್ಯ ಚೀನಾದಲ್ಲಿ ನೆಲೆಸಿರುವ ಟುಜಿಯಾ ಜನರ ವಿವಾಹದಲ್ಲಿ ಅಳು ಅವಿಭಾಜ್ಯ ಅಂಗ. ಮದುವೆಯ ಒಂದು ತಿಂಗಳು ಮುನ್ನ ವಧು ಪ್ರತಿ ದಿನವೂ ಒಂದು ಗಂಟೆ ಅಳುತ್ತಾಳೆ. ಹತ್ತು ದಿನಗಳ ಬಳಿಕ ವಧುವಿನ ಜೊತೆಗೆ ಆಕೆಯ ತಾಯಿಯೂ ಸೇರಿಕೊಂಡು ದಿನವೂ ಒಂದು ಗಂಟೆ ಅಳುತ್ತಾಳೆ. ಮತ್ತೆ ಹತ್ತು ದಿನಗಳ ಬಳಿಕ ಆಕೆಯ ಅಜ್ಜಿಯರು, ಸಹೋದರಿಯರು ಮತ್ತು ಚಿಕ್ಕಮ್ಮ- ದೊಡ್ಡಮ್ಮಂದಿರೂ ಸೇರಿಕೊಂಡು ದಿನವೂ ಒಂದು ಗಂಟೆ ಅಳುತ್ತಾರೆ. ಹೀಗೆ ಅಳುವಾಗ ವಧು ರಾಗವಾಗಿ ಅಳುತ್ತಾಳೆ. ಇದನ್ನು ಅಳುವ ಮದುವೆಯ ಹಾಡು ಎಂದು ಕರೆಯಲಾಗುತ್ತದೆ. ಸ್ಥಳೀಯರ ನಂಬಿಕೆಯಂತೆ ಈ ಅಳು ನವದಂಪತಿಯ ಸುಖಮಯ ಜೀವನಕ್ಕೆ ನಾಂದಿ ಹಾಡುತ್ತದೆ. ಕಣ್ಣೀರು, ಕಷ್ಟ- ಕಾರ್ಪಣ್ಯಗಳೆಲ್ಲಾ ಮದುವೆಯ ಮುನ್ನವೇ ಕೊನೆಗೊಳ್ಳಲಿ ಎಂಬುದು ಅವರ ಆಶಯ.
ಚೀನಾದ ಗನ್ಸು ಪ್ರಾಂತ್ಯದಲ್ಲಿರುವ ಯುಗುರ್ ಜನರ ಮದುವೆಗಳಲ್ಲಿ ವರ ವಧುವಿಗೆ ಮೂರು ರಬ್ಬರ್ ಬಾಣಗಳನ್ನು ಬಿಡುತ್ತಾನೆ. ಮದುವೆಯ ಬಳಿಕ ಬಿಲ್ಲು ಮತ್ತು ಬಾಣಗಳನ್ನು ವರ ಮುರಿದುಹಾಕುತ್ತಾನೆ. ಇದು ಶಾಶ್ವತ ಪ್ರೀತಿ ಮತ್ತು ಮುರಿಯಲಾರದ ಬಂಧನವನ್ನು ಸಂಕೇತಿಸುತ್ತದೆ.
ಚೀನಾದ ಮಂಗೋಲಿಯಾ ಮತ್ತು ಹೀಲಾಂಗ್ ಜಿಯಾಂಗ್ ಪ್ರಾಂತದಲ್ಲಿ ನೆಲೆಸಿರುವ ದೌರ್ ಜನರ ವಿವಾಹ ನಿಶ್ಚಯ ಬಹಳ ಕುತೂಹಲಕರ. ಮದುವೆಯಾಗಬೇಕಾದ ವರ ಮತ್ತು ವಧು ಇಬ್ಬರೂ ಸೇರಿ ಕೋಳಿಯನ್ನು ಕೊಂದು ಅದರ ಯಕೃತ್ತನ್ನು ಪರಿಶೀಲಿಸುತ್ತಾರೆ. ಯಕೃತ್ತು ಸರಿಯಾಗಿದ್ದರೆ ವಿವಾಹ ನಿಶ್ಚಯವಾಗುತ್ತದೆ. ಇಲ್ಲವಾದಲ್ಲಿ ಸರಿಯಾದ ಯಕೃತ್ತು ದೊರೆಯುವವರೆಗೂ ಕೋಳಿಗಳನ್ನು ಕೊಲ್ಲುತ್ತಲೇ ಹೋಗುತ್ತಾರೆ.
ನೈಋತ್ಯ ಚೀನಾದಲ್ಲಿನ ಯುನ್ನಾನ್ ಪ್ರಾಂತ್ಯದಲ್ಲಿರುವ ಲಹು ಜನರು ವಿವಾಹವಾದ ಬಳಿಕ ತಲೆ ಬೋಳಿಸಿಕೊಳ್ಳುತ್ತಾರೆ. ಅವಿವಾಹಿತ ಹುಡುಗಿಯರು ಮಾತ್ರ ಕೂದಲು ಹೊಂದಿರುತ್ತಾರೆ. ಮದುವೆಯ ನಂತರ ನೆತ್ತಿಯ ಮೇಲೊಂದು ಎಳೆ ಕೂದಲನ್ನು ಬಿಟ್ಟು ಉಳಿದ ಕೂದಲನ್ನು ಬೋಳಿಸಿಕೊಳ್ಳುತ್ತಾರೆ. ಹೀಗೆ ಉಳಿದ ಒಂದು ಎಳೆ ಕೂದಲನ್ನು ಹುನ್ಮಾವೋ ಅಥವಾ ಆತ್ಮದ ಕೂದಲು ಎಂದು ಕರೆಯುತ್ತಾರೆ. ಇತ್ತೀಚೆಗಿನ ದಿನಗಳಲ್ಲಿ ಈ ಸಂಪ್ರದಾಯ ಅಪರೂಪ.
ನೈಋತ್ಯ ಚೀನಾದ ಗುಯಿಜೌ ಪ್ರಾಂತ್ಯದಲ್ಲಿ ನೆಲೆಸಿರುವ ಗೆಲೌ (ಗೆಲೋ) ವಧು ತನ್ನ ಗಂಡನ ಮನೆಗೆ ಮೊದಲ ಬಾರಿಗೆ ಬಂದಾಗ ಮನೆಯವರ ಮೇಲೆಲ್ಲಾ ನೀರನ್ನು ಚಿಮುಕಿಸುತ್ತಾಳೆ.
ವಿಯೆಟ್ನಾಂ
ವರನ ತಾಯಿ ವಧುವಿನ ಮನೆಗೆ ಗುಲಾಬಿ ಬಣ್ಣದ ಸೀಮೆಸುಣ್ಣ ಮತ್ತು ಅಡಕೆ ತೆಗೆದುಕೊಂಡು ಹೋಗುತ್ತಾಳೆ. ಸೀಮೆಸುಣ್ಣ ಸಂತಸಭರಿತ ಭವಿಷ್ಯದ ಸಂಕೇತವಾದರೆ, ಅಡಿಕೆ ವರ ಮತ್ತವನ ಕುಟುಂಬದ ಮೇಲಿನ ಗೌರವದ ಸಂಕೇತ. ಈ ಆಚರಣೆಯ ನಂತರವೇ ವರ ಮತ್ತು ಆತನ ಕುಟುಂಬದ ಇನ್ನಿತರ ಸದಸ್ಯರು ವಧುವಿನ ಮನೆಗೆ ಹೋಗಬಹುದು. ಮದುವೆಯ ಹಿಂದಿನ ರಾತ್ರಿ ವಧುವಿನ ತಾಯಿ ಮಗಳ ಕೂದಲನ್ನು ಹಲವು ಬಾಚಣಿಗೆಗಳಿಂದ ಬಾಚಿ ಸಿಂಗರಿಸುತ್ತಾಳೆ. ಪ್ರತಿಯೊಂದು ಬಾಚಣಿಗೆಗೂ ಒಂದೊಂದು ವಿಶೇಷತೆಯಿದೆ, ಅದರಲ್ಲೂ ಮೂರನೆಯ ಬಾಚಣಿಗೆಯಿಂದ ಬಾಚುವಾಗ ಮಗಳು ಭವಿಷ್ಯದಲ್ಲಿ ಸುಖವಾಗಿರಲೆಂದು ತಾಯಿ ದೇವರಲ್ಲಿ ಕೇಳಿಕೊಳ್ಳುತ್ತಾಳೆ.
ಕಾಂಬೋಡಿಯಾ
ಟೆಂ ಅಥವಾ ಗಂಟಿನ ಆಚರಣೆಯೊಂದಿದೆ. ಇದರಲ್ಲಿ ಗಂಟು ಹಾಕಿದ ಬ್ರೇಸ್ಲೆಟ್ ಒಂದನ್ನು ವಧು ವರರಿಗೆ ನೀಡಲಾಗುತ್ತದೆ. ಈ ಗಂಟುಗಳು ನವದಂಪತಿಗಳಿಗೆ ಹಿರಿಯರು ನೀಡುವ ಆಶೀರ್ವಾದ. ಮದುವೆಗೆ ಬಂದ ಅತಿಥಿಗಳು ನವದಂಪತಿಗಳನ್ನು ಆಶೀರ್ವದಿಸಲು ಮೇಣದ ಬತ್ತಿಯನ್ನು ಉರಿಸುತ್ತಾರೆ. ಗಾಟ್ಸಾ (ಕೂದಲು ಕತ್ತರಿಸುವುದು) ಕಾಂಬೋಡಿಯಾದ ವಿವಾಹಗಳಲ್ಲಿ ಮತ್ತೊಂದು ಆಸಕ್ತಿಕರ ಆಚರಣೆ. ನವದಂಪತಿಯನ್ನು ಅಕ್ಕಪಕ್ಕ ಕೂರಿಸಿ ಅವರ ಸುತ್ತ ಇಬ್ಬರು ಗಾಯಕರು ಹಾಡುತ್ತಾ, ನರ್ತಿಸುತ್ತಾ, ಅವರಿಬ್ಬರ ಕೂದಲುಗಳನ್ನು ಕತ್ತರಿಸಿ ಅವರ ಮೇಲೆ ಸುಗಂಧ ದ್ರವ್ಯಗಳನ್ನು ಪ್ರೋಕ್ಷಿಸುತ್ತಾರೆ.
ಥಾಯ್ಲೆಂಡ್
ದಕ್ಷಿಣ ಥಾಯ್ಲೆಂಡ್ನಲ್ಲಿ 21 ವರ್ಷವಾದಾಗ ಪುರುಷ ಮರವೊಂದರ ಜೊತೆಗೆ ವಿವಾಹ ಮಾಡಿಕೊಳ್ಳುತ್ತಾನೆ. ಮರ ಪ್ರಾಣಶಕ್ತಿಯ ಸಂಕೇತ ಮತ್ತು ಹೀಗೆ ಮಾಡುವುದರಿಂದ ಆತನನ್ನು ಬುದ್ಧ ಮತ್ತು ಆತನ ಪೂರ್ವಜರು ಆಶೀರ್ವದಿಸುತ್ತಾರೆ.
ಮಲೇಷ್ಯಾ
ಮದುವೆಯ ಬೆಳಗ್ಗೆ ಮಲೇಷಿಯಾದ ಮಕ್ಕಳು ಟ್ರೇಗಳಲ್ಲಿ ಊಟ ಮತ್ತು ಪ್ರಾಣಿ ಅಥವಾ ಹೂವಿನ ಆಕಾರದಲ್ಲಿರುವ ಕವರುಗಳಲ್ಲಿ ಹಣ ಹಾಕಿ ವಧುವಿನ ಮನೆಗೆ ಕೊಂಡೊಯ್ಯುತ್ತಾರೆ. ಮದುವೆಗೆ ಬಂದ ಅತಿಥಿಗಳಿಗೆ ಬೇಯಿಸಿದ ಅಲಂಕಾರಿಕ ಮೊಟ್ಟೆಗಳನ್ನು (ಫಲವತ್ತತೆಯ ಸಂಕೇತ) ನೀಡಲಾಗುತ್ತದೆ.
ಮಲೇಷಿಯಾದ ಸಬಾ ಪ್ರಾಂತ್ಯ ಮತ್ತು ಇಂಡೋನೇಷಿಯಾದ ಪೂರ್ವ ಕಲಿಮಂತನ ಪ್ರಾಂತ್ಯದಲ್ಲಿ ನೆಲೆಸಿರುವ ಟಿಡಾಂಗ್ ಬುಡಕಟ್ಟು ಜನರಲ್ಲಿ ನವದಂಪತಿಗಳು 71 ಗಂಟೆ ಕಾಲ ಶೌಚಾಲಯಕ್ಕೆ ಹೋಗುವಂತಿಲ್ಲ! ಅವರು ಶೌಚಾಲಯ ಬಳಸದಂತೆ ಮನೆಯವರು ಕಾವಲಿರುತ್ತಾರೆ. ಮಾತ್ರವಲ್ಲ ಬಹಳ ಸಣ್ಣ ಪ್ರಮಾಣದಲ್ಲಿ ಆಹಾರ ಮತ್ತು ನೀರು ನೀಡುತ್ತಾರೆ. ಜನರ ಕಣ್ಣು ತಪ್ಪಿಸಿ ಶೌಚಕ್ಕೆ ಹೋಗುವಂತೆಯೂ ಇಲ್ಲ. ಹಾಗೊಂದು ವೇಳೆ ಮಾಡಿದರೆ ಅಪಶಕುನವಾಗುತ್ತದೆ, ಭವಿಷ್ಯದಲ್ಲಿ ಅವರ ಮಕ್ಕಳು ಎಳೆ ವಯಸ್ಸಿನಲ್ಲೇ ಮರಣವನ್ನಪ್ಪುತ್ತಾರೆ ಎನ್ನುವುದು ಅವರ ಪ್ರಬಲ ನಂಬಿಕೆ.
ಫ್ರಾನ್ಸ್
ವಧು ಚಾಪೆಲ್ಗೆ ಹೋಗುವಾಗ ಮಕ್ಕಳು ಆಕೆಯ ಮದುವೆಯ ಗೌನಿನಲ್ಲಿರುವ ಬಿಳಿಯ ರಿಬ್ಬನ್ಗಳನ್ನು ಸಾಂಪ್ರದಾಯಿಕವಾಗಿ ಎಳೆಯುತ್ತಾರೆ. ಅದರ ಬಳಿಕ ವಧು ಅವುಗಳನ್ನು ಕತ್ತರಿಸುತ್ತಾಳೆ. ಚರಿವಾರಿ (ಶಿವಾರಿ ಅಥವಾ ಚಿವಾರಿ) ಎನ್ನುವ ಸಂಪ್ರದಾಯ ಫ್ರೆಂಚ್ ಜನರಲ್ಲಿದೆ. ನವದಂಪತಿಯ ಮೊದಲ ರಾತ್ರಿ ಅವರಿಬ್ಬರ ಕುಟುಂಬ ಮತ್ತು ಗೆಳೆಯರು ಮನೆಯ ಮುಂದೆ ನೆರೆದು ಜೋರಾಗಿ ಸದ್ದು ಮಾಡುತ್ತಾರೆ. ಆ ಸದ್ದು ತಾಳಲಾರದೆ ನವದಂಪತಿ ಹೊರಗೆ ಬಂದು ಅವರಿಗೆ ಮದ್ಯವನ್ನೋ, ಸಿಹಿ ತಿನಿಸುಗಳನ್ನೋ ನೀಡುತ್ತಾರೆ.
ಮದುವೆಯಲ್ಲಿ ನವದಂಪತಿ ಕೌಪ್ ಡಿ ಮ್ಯಾರೇಜ್ (ಮದುವೆಯ ಕಪ್) ಎನ್ನುವ ಎರಡು ಕೈಗಳಿರುವ ಒಂದೇ ಕಪ್ಪಿನಿಂದ ವೈನ್ ಕುಡಿಯುತ್ತಾರೆ, ಇದು ಅವರ ಪ್ರೀತಿಯ ಸಂಕೇತ. ಮದುವೆಯ ಬಳಿಕ ಹೊರಹೊರಟ ಅವರ ದಾರಿಯಲ್ಲಿ ನೆರೆದ ಅತಿಥಿಗಳು, ಅವರ ಮುಂದಿನ ಜೀವನ ಸುಖಮಯವಾಗಿರಲೆಂದು ಹರಸಿ, ಲಾರೆಲ್ ಎಲೆಗಳನ್ನು ಹಾಕುತ್ತಾರೆ.
ಇಟಲಿ
ವಧು ಏನಾದರೂ ನೀಲಿ, ಏನಾದರೂ ಹಳೆಯದು, ಏನಾದರೂ ಎರವಲು ಪಡೆದದ್ದು ಮತ್ತು ಏನಾದರೂ ಹೊಸದು ಧರಿಸಬೇಕು. ಮದುವೆಯ ಹಿಂದಿನ ರಾತ್ರಿ ವಧು ಹಸಿರು ಬಣ್ಣದ ಉಡುಗೆ ಧರಿಸಿದರೆ ಅದೃಷ್ಟ ಮತ್ತು ಮದುವೆಯಲ್ಲಿ ಕೇವಲ ವಧು ಮಾತ್ರ ಬಿಳಿಯ ಉಡುಗೆ ಧರಿಸಬೇಕು ಎಂದು ಇಟಲಿಯ ಜನ ನಂಬುತ್ತಾರೆ. ನೇರಳೆ ಬಣ್ಣದ ಉಡುಗೆಯನ್ನು ವಧು ಮತ್ತು ವರ ಯಾವುದೇ ಕಾರಣಕ್ಕೂ ಧರಿಸುವಂತಿಲ್ಲ.
ಇಟಲಿಯ ದಕ್ಷಿಣ ಭಾಗದಲ್ಲಿ ಮೇ ತಿಂಗಳಿನಲ್ಲಿ ಮದುವೆಗಳು ಜರುಗುವುದಿಲ್ಲ, ಕೆಟ್ಟದಾಗುತ್ತದೆ ಎಂದು ಅವರ ನಂಬಿಕೆ. ಮದುವೆಯಲ್ಲಿ ಚಿನ್ನದ ಒಡವೆ ಧರಿಸಿದರೆ ದುರದೃಷ್ಟವಂತೆ.
ಮದುವೆಯ ಚಾಪೆಲ್ಗೆ ಹೊರಟ ವಧುವಿನ ದಾರಿಯಲ್ಲಿ ಜನ ಹಲವು ಅಡೆತಡೆಗಳನ್ನು ಮುಂದಿಟ್ಟು, ಆಕೆಯ ಪ್ರತಿಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಪ್ರತಿ ಅಡಚಣೆಗೆ ಆಕೆ ತೋರುವ ಪ್ರತಿಕ್ರಿಯೆ ಆಕೆ ಭವಿಷ್ಯದಲ್ಲಿ ಹೇಗೆ ಬಾಳುತ್ತಾಳೆ ಎನ್ನುವುದನ್ನು ನಿರ್ಧರಿಸುತ್ತದೆ ಎಂದು ಪ್ರತೀತಿ.
ಮತ್ತೊಂದು ಪ್ರಮುಖ ಆಚರಣೆ ಬಸ್ಟೆ. ವಧು ಲಾ ಬೋರ್ಸಾ ಎನ್ನುವ ಸ್ಯಾಟಿನ್ ಬ್ಯಾಗೊಂದನ್ನು ನೆರೆದ ಅತಿಥಿಗಳ ಮುಂದೆ ತೆಗೆದುಕೊಂಡು ಹೋಗುತ್ತಾಳೆ. ಮಹಿಳಾ ಅತಿಥಿಗಳು ಆ ಬ್ಯಾಗಿಗೆ ಹಣವಿರುವ ಕವರುಗಳನ್ನು ಹಾಕುತ್ತಾರೆ, ಪುರುಷರು ಹಣ ನೀಡಿ ಆಕೆಯೊಂದಿಗೆ ನರ್ತಿಸುವ ಆಸೆ ವ್ಯಕ್ತಪಡಿಸುತ್ತಾರೆ. ಕೆಲವು ಬಾರಿ ಈ ಹಣವನ್ನು ವಧುವಿನ ಅಜ್ಜಿ ಸಂಗ್ರಹಿಸುತ್ತಾಳೆ.
ವರನ ಟೈ ಕತ್ತರಿಸುವ ಶಾಸ್ತ್ರವಿದೆ. ಆತನ ಟೈಯನ್ನು ಸಣ್ಣ ಚೂರುಗಳನ್ನಾಗಿ ಕತ್ತರಿಸಿ ನೆರೆದ ಅತಿಥಿಗಳಿಗೆ ಹಂಚಲಾಗುತ್ತದೆ. ಪ್ರತಿಯೊಂದು ಚೂರು ಪಡೆದ ಅತಿಥಿಗಳು ಮರಳಿ ಹಣವನ್ನು ನೀಡುತ್ತಾರೆ. ಸಂಗ್ರಹಿಸಿದ ಮೊತ್ತವನ್ನು ನವದಂಪತಿಗೆ ನೀಡಲಾಗುತ್ತದೆ. ಮದುವೆಯಾದ ಬಳಿಕ ವರ ಮತ್ತು ವಧು ಒಂದು ಹೂವಿನ ಹೂಜಿಯನ್ನು ಒಡೆದು ಹಾಕುತ್ತಾರೆ. ಒಡೆದ ಚೂರುಗಳನ್ನು ಆಧರಿಸಿ ನವದಂಪತಿ ಎಷ್ಟು ಕಾಲ ದಾಂಪತ್ಯ ಜೀವನ ನಡೆಸುತ್ತಾರೆಂದು ನಿರ್ಧರಿಸಲಾಗುತ್ತದೆ.
ಆಸ್ಟ್ರಿಯಾ
ನವದಂಪತಿ ಮನೆಯ ಹೊಸ್ತಿಲು ದಾಟುವ ಮುನ್ನ ಅವರ ಕೈ ಕಟ್ಟಿ, ಸ್ವಲ್ಪ ಬ್ರೆಡ್ ಮತ್ತು ವೈನ್ ಕುಡಿಸಲಾಗುತ್ತದೆ. ಬಳಿಕ ವರ ಆ ವೈನ್ ಗ್ಲಾಸನ್ನು ಮನೆಯ ಚಾವಣಿಯ ಮೇಲೆಸೆಯುತ್ತಾನೆ. ಇದರಿಂದ ನವದಂಪತಿಗೆ ಅದೃಷ್ಟ ದೊರಕುತ್ತದೆ ಎಂದು ನಂಬಿಕೆ.
ಸ್ಪೇನ್
ಕಿತ್ತಳೆ ಬಣ್ಣ ಸ್ಪೇನ್ನಲ್ಲಿ ವಿವಾಹದೊಂದಿಗೆ ಹಾಸುಹೊಕ್ಕಾಗಿ ಬೆರೆತುಬಿಟ್ಟಿದೆ. ವಿವಾಹದ ಹೂಗುಚ್ಛದಲ್ಲಿ ಸಾಮಾನ್ಯವಾಗಿ ಕಿತ್ತಳೆಯ ಬಣ್ಣದ ಹೂವುಗಳು ಇದ್ದೇ ಇರುತ್ತವೆ. ವಧು ತನ್ನ ಮುಡಿಯಲ್ಲಿ ಕಿತ್ತಳೆಯ ಬಣ್ಣದ ಹೂಗಳನ್ನು ಮುಡಿದಿರುತ್ತಾಳೆ.
ಪೋರ್ಚುಗಲ್
ವಧು ತನ್ನ ಶೂಗಳನ್ನು ಕಳಚಿ ನೆರೆದ ಅತಿಥಿಗಳಿಗೆ ನೀಡುತ್ತಾಳೆ. ನೆರೆದ ಜನ ಅದರಲ್ಲಿ ಹಣವನ್ನು ಹಾಕುತ್ತಾರೆ, ನವದಂಪತಿ ಆ ಮೊತ್ತವನ್ನು ತಮ್ಮ ಮಧುಚಂದ್ರಕ್ಕಾಗಿ ಬಳಸಿಕೊಳ್ಳುತ್ತಾರೆ.
ನವದಂಪತಿ ವಿವಾಹವಾದ ಬಳಿಕ ಮದುವೆಯ ಸ್ಥಳವನ್ನು ಆದಷ್ಟು ಬೇಗ ಬಿಡಲು ಹಾತೊರೆಯುತ್ತಾರೆ. ಆದರೆ ಹಾಗೆ ತಪ್ಪಿಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಅತಿಥಿಗಳು ಅವರಿಬ್ಬರನ್ನೂ ತಮ್ಮ ಮಾತುಕತೆಗಳಲ್ಲಿ ಕಟ್ಟಿ ಹಾಕಿರಿಸಿಕೊಂಡಿರುತ್ತಾರೆ, ಮಾತ್ರವಲ್ಲ ಅವರಿಬ್ಬರೂ ಅಲ್ಲಿಂದ ಕಣ್ತಪ್ಪಿಸಿಕೊಂಡು ಹೋಗದಂತೆ ನಿಗಾ ವಹಿಸಲು ಅವರ ಬಟ್ಟೆಬರೆಗಳನ್ನು ಅಥವಾ ಕಾರನ್ನು ಬಚ್ಚಿಡುತ್ತಾರೆ.
ಮೆಕ್ಸಿಕೋ
ವರ ವಧುವಿಗೆ ಅರ್ರಾಸ್ ಅಥವಾ 13 ನಾಣ್ಯಗಳನ್ನು ನೀಡುತ್ತಾನೆ. ಇವು ಕ್ರಿಸ್ತ ಮತ್ತು ಆತನ ಹನ್ನೆರಡು ಶಿಷ್ಯರ ಸಂಕೇತ. ಪಾದ್ರಿ ಆ ನಾಣ್ಯಗಳನ್ನು ಆಶೀರ್ವದಿಸುತ್ತಾನೆ, ಇದು ವರ ಜೀವಮಾನ ಪೂರ್ತಿ ವಧುವನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆಂಬುದರ ಸಂಕೇತ. ಮದುವೆಯ ಸಂದರ್ಭ ವಧು ಮತ್ತು ವರನ ಕತ್ತಿನ ಸುತ್ತ ಬಿಳಿಯ ರಿಬ್ಬನ್ ಅಥವಾ ಲಾಸೋ ಎನ್ನುವ ಮಣಿಸರವನ್ನು ಈಗಾಗಲೇ ಸುಖವಾಗಿ ಮದುವೆಯಾಗಿ ಜೀವಿಸುತ್ತಿರುವ ದಂಪತಿಗಳು ಕಟ್ಟುತ್ತಾರೆ. ಇದು ಅವರಿಬ್ಬರ ಐಕ್ಯತೆಯ ಸಂಕೇತ. ವಧು ಮುತ್ತಿನ ಯಾವುದೇ ಒಡವೆ ಧರಿಸುವುದಿಲ್ಲ. ಮೆಕ್ಸಿಕನ್ನರಿಗೆ ಮುತ್ತು ಕಣ್ಣೀರಿನ ಸಂಕೇತ.
ಐರ್ಲೆಂಡ್
ಐರಿಷ್ ಜನರ ಮದುವೆಗಳಲ್ಲಿ ವಿವಿಧ ಆಚರಣೆಗಳಿವೆ. ದುಷ್ಟ ಶಕ್ತಿಗಳಿಂದ ದೂರವಿರಿಸಲು ಮದುವೆಯ ಔತಣಕೂಟದಲ್ಲಿ ಮೂರು ಹಿಡಿ ಓಟ್ಸ್ ಮತ್ತು ಉಪ್ಪನ್ನು ನವದಂಪತಿಗೆ ತಿನ್ನಿಸಲಾಗುತ್ತದೆ. ಮದುವೆಯ ನಿಶ್ಚಿತಾರ್ಥದ ಉಂಗುರ 'ಕ್ಲದ್ದಾಗ್' ಐರಿಷ್ರಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. 17ನೇ ಶತಮಾನದಲ್ಲಿ ಮಹಾರಾಣಿ 2ನೇ ಮೇರಿಯ ಆಳ್ವಿಕೆ ವೇಳೆ ಮೊದಲ ಬಾರಿಗೆ ಈ ಉಂಗುರ ಮೀನುಗಾರರ ಹಳ್ಳಿ ಕ್ಲದ್ದಾಗ್ನಲ್ಲಿ ಉದಯಿಸಿತು. ಈ ಉಂಗುರದಲ್ಲಿ 2 ಕೈಗಳು ಕಿರೀಟ ಹೊತ್ತ ಹೃದಯವನ್ನು ಹಿಡಿದಿರುತ್ತವೆ. ಸ್ಥಳೀಯ ನಂಬಿಕೆಯ ಪ್ರಕಾರ ಅವಿವಾಹಿತ ಮಹಿಳೆ ಕಿರೀಟ ಒಳಗಿರುವ ಹಾಗೆ ಉಂಗುರ ಧರಿಸಬೇಕು ಮತ್ತು ಪ್ರೇಮಪಾಶದಲ್ಲಿ ಬಿದ್ದಿರುವ ಮಹಿಳೆ ಕಿರೀಟ ಹೊರಗಿರುವ ಹಾಗೆ ಉಂಗುರ ಧರಿಸಬೇಕು. ಮದುವೆ ವೇಳೆ ವಧು ಪಿಂಗಾಣಿಯ ಕುದುರೆ ಲಾಳವನ್ನು ತನ್ನೊಂದಿಗೆ ಕೊಂಡೊಯ್ಯುತ್ತಾಳೆ. ಮದುವೆಯ ನಂತರ ಆ ಲಾಳವನ್ನು ಮನೆಯ ಮುಂಭಾಗದ ಬಾಗಿಲಿನ ಮೇಲೆ ನೇತುಹಾಕಲಾಗುತ್ತದೆ. ಲಾಳದ ಎರಡೂ ತುದಿಗಳು ಮೇಲೆ ನೋಡುತ್ತಿದ್ದರೆ ಅದೃಷ್ಟ ತರುತ್ತದಂತೆ. ಮದುವೆಗೆ ಬಂದ ಅತಿಥಿಗಳು ಹೊರಡುವಾಗ ನವದಂಪತಿಗಳತ್ತ ಚಾಕೊಲೇಟಿನ ನಾಣ್ಯಗಳನ್ನು ಎಸೆಯುತ್ತಾರೆ. ಈ ನಾಣ್ಯಗಳು ನವದಂಪತಿಗೆ ಸಮೃದ್ಧತೆ ತರುತ್ತದೆ ಎಂಬ ನಂಬಿಕೆ.
ಬಲ್ಗೇರಿಯಾ
ಮದುವೆಯ ಆಹ್ವಾನ ಪತ್ರಿಕೆಯೊಂದಿಗೆ ಪುಟ್ಟ ಕೇಕ್ಗಳನ್ನು ವಿತರಿಸಲಾಗುತ್ತದೆ. ಮದುವೆಯಲ್ಲಿ ವಧು ವಿವಾಹಿತೆಯರ ಉಂಗುರಗಳನ್ನು ಚುಂಬಿಸುತ್ತಾಳೆ, ಅದಕ್ಕೆ ಬದಲಾಗಿ ಅವರೆಲ್ಲ ಅವಳಿಗೆ ಒಂದೊಂದು ಅಂಜೂರದ ಹಣ್ಣನ್ನು ನೀಡುತ್ತಾರೆ. ವರನ ಜೊತೆಯಲ್ಲಿ ಹೋಗುವ ಅವನ ಗೆಳೆಯ ವಿಶೇಷ ಮದುವೆಯ ಬ್ಯಾನರ್ ಹಿಡಿದಿರುತ್ತಾನೆ. ಕಡ್ಡಾಯವಾಗಿ ಕೆಲವು ನಿಯಮಗಳನ್ನೂ ಈ ಬ್ಯಾನರ್ ಮಾಡುವಾಗ ಅನುಸರಿಸುತ್ತಾರೆ. ಈ ಬ್ಯಾನರ್ಗೆ ಬೇಕಾದ ಕೋಲನ್ನು ಹಣ್ಣು ಬಿಡುವ ಮರದಿಂದಲೇ ಕತ್ತರಿಸಬೇಕು, ಕೋಲಿಗೆ ಬೇಕಾದ ರೆಂಬೆಯನ್ನು ಒಂದೇ ಏಟಿಗೆ ಕತ್ತರಿಸಬೇಕು. ಕೋಲಿನ ತುದಿಗೆ ಸೇಬು ಅಥವಾ ಈರುಳ್ಳಿಯನ್ನು ಸಿಕ್ಕಿಸಬೇಕು. ಇದಲ್ಲದೆ ಕೋಲಿಗೆ ಕರವಸ್ತ್ರ, ಬಳ್ಳಿ ಮತ್ತು ರಿಬ್ಬನ್ಗಳನ್ನೂ ಸುತ್ತಲಾಗುತ್ತದೆ.
ರಷ್ಯಾ
ಮೇ ತಿಂಗಳಿನಲ್ಲಿ ಮದುವೆಯಾಗುವುದು ಕೆಟ್ಟದು ಎನ್ನುವುದು ರಷ್ಯನ್ನರ ನಂಬಿಕೆ. ಮೇ ತಿಂಗಳಲ್ಲಿ ನೆರಳು ಹತ್ತಿರವಾಗುವುದರಿಂದ, ಈ ವೇಳೆ ಮದುವೆಯಾದ ದಂಪತಿ ಜೀವಮಾನಪೂರ್ತಿ ನರಳುತ್ತಾರೆಂಬುದು ಪ್ರತೀತಿ. ನವಜೋಡಿಗೆ ಬ್ರೆಡ್ ಮತ್ತು ಉಪ್ಪನ್ನು ನೀಡಲಾಗುತ್ತದೆ. ಇದರಿಂದ ಅವರ ಜೀವನ ಸುಖಮಯ ಮತ್ತು ಸಮೃದ್ಧಿಯಾಗಿರುತ್ತದಂತೆ.
ರಷ್ಯನ್ ವಧು ತನ್ನ ಎಡ ಚಪ್ಪಲಿಯ ಹಿಮ್ಮಡಿಯ ಅಡಿಯಲ್ಲಿ ಅದೃಷ್ಟ ತರಲಿಯೆಂದು ನಾಣ್ಯವನ್ನು ಹಾಕಿಕೊಳ್ಳುತ್ತಾಳೆ. ವರ ತನ್ನ ಶೂಗಳಲ್ಲಿ ಹಣ ಹಾಕಿಕೊಂಡು ಮದುವೆಯ ಹಿಂದಿನ ರಾತ್ರಿ ಅದನ್ನು ವಧುವಿಗೆ ನೀಡುತ್ತಾನೆ. ರಷ್ಯಾದಲ್ಲಿ ಮದುವೆ ಎರಡು ದಿನ ನಡೆಯುತ್ತದೆ. ಸಮಾರಂಭ ಶುಕ್ರವಾರ ಶುರುವಾಗಿ ಭಾನುವಾರ
ಮುಕ್ತಾಯ. ವರ ವಧುವಿನ ಮನೆಗೆ ಬಂದಾಗ ಆಕೆಯ ಮನೆಯವರು ಇನ್ನಿಲ್ಲದಂತೆ ಕಿರುಕುಳ
ನೀಡುತ್ತಾರೆ. ಆತನಿಗೆ ವಧುವನ್ನು ನೋಡಲೂ ಬಿಡುವುದಿಲ್ಲ. ಆಕೆಯ ದರ್ಶನ ಮಾಡಲು ಅವರಿಗೆ ಆತ ಲಂಚ ನೀಡುತ್ತಾನೆ. ವಧುವಿನ ಪೋಷಕರು ಒಬ್ಬ ವ್ಯಕ್ತಿಯನ್ನು ವಧುವಿನಂತೆ ಅಲಂಕರಿಸಿ ಮುಖವನ್ನು ಬಟ್ಟೆಯಿಂದ ಮುಚ್ಚಿ ಕರೆತರುತ್ತಾರೆ. ತನಗೆ ಮೋಸವಾಗಿದೆ ಎಂದು ಅರಿತ ವರ ಮತ್ತೆ ವಧುವನ್ನು ತೋರಿಸಬೇಕೆಂದು ಕೋರುತ್ತಾನೆ. ವಧುವಿನ ಪೋಷಕರು ಈ ಬಾರಿ ಹೆಚ್ಚು ಹಣ ಕೇಳುತ್ತಾರೆ. ಕೊನೆಗೆ ಮಾತುಕತೆ ಮುಗಿದು, ಅದಕ್ಕೊಪ್ಪಿದ ವರ ಅವರು ಕೇಳುವ ಮೊತ್ತವನ್ನು ಅವರಿಗೊಪ್ಪಿಸುತ್ತಾನೆ. ವಧು ಅವನ ಮುಂದೆ ಬಂದು ನಿಲ್ಲುತ್ತಾಳೆ. ಬಳಿಕ ಮದುವೆ ಧಾರ್ಮಿಕವಾಗಿ ಇಲ್ಲವೇ ಸಿವಿಲ್ ರೀತಿಯಲ್ಲಿ ಜರುಗುತ್ತದೆ. ಸಿವಿಲ್ ಮದುವೆಯಲ್ಲಿ ನವದಂಪತಿ 2 ಗಾಜಿನ ಗ್ಲಾಸುಗಳನ್ನು ಒಡೆದುಹಾಕುತ್ತಾರೆ. ಒಡೆದ ಚೂರಿನ ಸಂಖ್ಯೆಗಳು ಅವರಿಬ್ಬರ ವೈವಾಹಿಕ ಜೀವನದ ವರ್ಷಗಳೆಷ್ಟು ಎಂಬುದನ್ನು ನಿರ್ಧರಿಸುತ್ತವೆ. ಮದುವೆಯ ಔತಣಕೂಟದಲ್ಲಿ ಹಲವು ರೌಂಡ್ ಮದ್ಯ ಸೇವಿಸಲಾಗುತ್ತದೆ. ನವದಂಪತಿ ಮೊದಲ ಗುಟುಕು ವೈನ್ ಕುಡಿದಾಗ ಅತಿಥಿಗಳು 'ಗೋರ್ಕೋ, ಗೋರ್ಕೋ, ಗೋರ್ಕೋ...' ಅಂದರೆ ಕಹಿ ಎಂದು ಕೂಗುತ್ತಾರೆ. ಮದ್ಯವನ್ನು ಸಿಹಿ ಮಾಡಲು ನವದಂಪತಿ ದೀರ್ಘವಾಗಿ ಚುಂಬಿಸುತ್ತಾರೆ. ನೆರೆದ ಅತಿಥಿಗಳು ಒಂದು, ಎರಡು, ಮೂರು, ನಾಲ್ಕು, ಐದು... ಎಂದು ಎಣಿಸತೊಡಗುತ್ತಾರೆ
ಬೆಲಾರಸ್
ವಿವಾಹದ ಟವೆಲ್ಗಳು ಬೆಲಾರಸ್ನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಇವುಗಳ ಬಣ್ಣ ಮತ್ತು ಡಿಸೈನ್ ವ್ಯತ್ಯಾಸವಾಗುತ್ತಾ ಹೋಗುತ್ತವೆ. ಹಿಂದಿನ ದಿನಗಳಲ್ಲಿ ವಧು ತನ್ನ ಕೈ ಸುತ್ತ ಟವೆಲ್ ಕಟ್ಟಿಕೊಂಡಿರುತ್ತಿದ್ದಳು. ಚರ್ಚಿಗೆ ಹೋಗುವ ದಾರಿಯಲ್ಲಿ ನೆಲದ ಮೇಲೆ ತನ್ನ ಕೈಯಲ್ಲಿರುವ ಟವೆಲ್ಲಿನಿಂದ ಎಳೆದುಕೊಂಡು ಹೋಗುತ್ತಿದ್ದಳು. ಭವಿಷ್ಯದಲ್ಲಿ ಮದುವೆಯಾಗುವ ತನ್ನ ಗೆಳತಿಯರಿಗೆ ಆಕೆ ಹಾಕಿಕೊಡುತ್ತಿದ್ದ ದಾರಿ ಅದು! ಮದುವೆಯಾದ ಬಳಿಕವೂ ಅದೇ ಟವೆಲ್ಲಿನಿಂದ, ಅದೇ ಉದ್ದೇಶಕ್ಕಾಗಿ ಬಲಿಪೀಠದ ಸುತ್ತ ಎಳೆದುಕೊಂಡು ಹೋಗುತ್ತಿದ್ದಳು.
ಫಿನ್ಲೆಂಡ್
ಮದುವೆಯ ಮುನ್ನ ನವದಂಪತಿ ಉಪ್ಪು ಹಾಕಿದ ಸೌನಾ ಸ್ನಾನ ಮಾಡುತ್ತಾರೆ. ವಧು ಚಿನ್ನದ ಕಿರೀಟ ಧರಿಸಿ ಮನೆ-ಮನೆಗೆ ಮದುವೆಯ ಉಡುಗೊರೆಗಳನ್ನು ಪಡೆಯಲು ಹೋಗುತ್ತಾಳೆ. ದೊರೆತ ಗಿಫ್ಟ್ಗಳನ್ನು ತಲೆ ದಿಂಬಿನ ಕವರಿನಲ್ಲಿ ಕಲೆಹಾಕುತ್ತಾಳೆ. ಆಕೆಯೊಂದಿಗೆ ಒಬ್ಬ ವಯಸ್ಸಾದ ವ್ಯಕ್ತಿ ಕೊಡೆ ಹಿಡಿದು ನಡೆಯುತ್ತಾನೆ. ಕೊಡೆ ಆಕೆಯನ್ನು ರಕ್ಷಿಸುವ ಸಂಕೇತವಾಗಿದೆ. ವಿವಾಹದಲ್ಲಿ ನವದಂಪತಿಗಳ ಮೇಲೆ ಅಕ್ಕಿಯನ್ನು ಎರಚಲಾಗುತ್ತದೆ. ವಧುವಿನ ತಲೆಯ ಮೇಲೆ ಕುಳಿತ ಅಕ್ಕಿ ಕಾಳುಗಳನ್ನು ಎಣಿಸಿ ಆಕೆಗೆ ಭವಿಷ್ಯದಲ್ಲಿ ಎಷ್ಟು ಮಕ್ಕಳಾಗುತ್ತವೆ ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಫಿನ್ನಿಷ್ ವಧು ತನ್ನ ಜೊತೆಯಲ್ಲಿ ಬೆಂಕಿಪೊಟ್ಟಣವನ್ನು ಇಟ್ಟುಕೊಂಡಿರುತ್ತಾಳೆ. ಕಾರಣ ಬೆಂಕಿಪೊಟ್ಟಣದ ಹಾಗೆ ಅವರಿಬ್ಬರ ಪ್ರೀತಿ ಸದಾ ಉರಿಯುತ್ತಿರಬೇಕೆನ್ನುವುದು ನಂಬಿಕೆ. ಸ್ವೀಡಿಷ್ ವಧುವಿನ ಎಡ ಶೂನಲ್ಲಿ ಆಕೆಯ ತಂದೆ ಬೆಳ್ಳಿಯ ನಾಣ್ಯ ಹಾಕಿದರೆ, ಆಕೆಯ ತಾಯಿ ಬಲ ಶೂನಲ್ಲಿ ಚಿನ್ನದ ನಾಣ್ಯ ಹಾಕುತ್ತಾಳೆ. ವಧು- ವರನನ್ನು ಚುಂಬಿಸಲು ಅತಿಥಿಗಳು ಕಾಯುತ್ತಿರುತ್ತಾರೆ. ಒಂದು ವೇಳೆ ವಧು ತನ್ನ ಸ್ಥಾನ ಬಿಟ್ಟು ಆಚೀಚೆ ಕದಲಿದರೆ ವರನನ್ನು ಚುಂಬಿಸಲು ಮಹಿಳೆಯರ ಗುಂಪು ಸಾಲುಗಟ್ಟುತ್ತದೆ. ಒಂದು ವೇಳೆ ವರ ಅತ್ತಿತ್ತ ಹೋದರೆ ವಧುವನ್ನು ಚುಂಬಿಸಲು ಪುರುಷರ ಗುಂಪು ಸಾಲುಗಟ್ಟುತ್ತದೆ.
ದಕ್ಷಿಣ ಅಮೆರಿಕ
ಗುಲಾಮಗಿರಿಯ ಕಾಲದಲ್ಲಿ ಆಫ್ರಿಕನ್- ಅಮೆರಿಕನ್ನರಿಗೆ ಮದುವೆಯಾಗಲು ಅವಕಾಶವಿರಲಿಲ್ಲ. ಆದರೂ ತಮ್ಮದೇ ರೀತಿಯಲ್ಲಿ ಅವರು ವಿವಾಹವಾಗುತ್ತಿದ್ದರು. ತಮಟೆಗಳ ಸದ್ದಿನೊಂದಿಗೆ ವಧು ಮತ್ತು ವರ ಪೊರಕೆಯನ್ನು ದಾಟಿ ಸತಿ-ಪತಿಗಳಾಗುತ್ತಿದ್ದರು. ಹೊಸದಾಗಿ ಸಂಸಾರ ಹೂಡಲು ಪೊರಕೆ ಅತ್ಯವಶ್ಯ ಸಾಧನವಾದ್ದರಿಂದ ಪೊರಕೆಯನ್ನು ದಾಟಿದರೆ, ವಿವಾಹವಾದಂತೆ ಎನ್ನುವುದು ಅವರ ನಂಬಿಕೆಯಾಗಿತ್ತು.
ದಕ್ಷಿಣ ಆಫ್ರಿಕ
ಸಾಂಪ್ರದಾಯಿಕ ಜುಲು ವಿವಾಹಗಳಲ್ಲಿ ನವದಂಪತಿಗಳ ಎರಡೂ ಕುಟುಂಬಗಳು ನರ್ತಿಸುತ್ತವೆ. ಮದುವೆಯಾದ ಬಳಿಕ ವರನ ಕುಟುಂಬ ವಧುವನ್ನು ಮನೆ ತುಂಬಿಸಿಕೊಳ್ಳಲು ಹಸುವನ್ನು ಬಲಿ ಕೊಡುತ್ತದೆ. ವಧು ಹಸುವಿನ ಹೊಟ್ಟೆಯ ಒಳಗೆ ನಾಣ್ಯ ಇರಿಸಿ ತಾನು ವರನ ಮನೆಯ ಹೊಸ ಸದಸ್ಯೆ ಎಂದು ಘೋಷಿಸುತ್ತಾಳೆ. ಆಫ್ರಿಕದ ಕೆಲವು ಹಳ್ಳಿಗಳಲ್ಲಿ ನವದಂಪತಿಗೆ ಮೊದಲ ರಾತ್ರಿಯಲ್ಲಿ ನಿರ್ದೇಶನ ನೀಡಲು ಹಳ್ಳಿಯ ಹಿರಿಯ ಮಹಿಳೆ ಅಥವಾ ವಧುವಿನ ತಾಯಿ ಅವರೊಂದಿಗಿರುತ್ತಾಳೆ.
ಕೀನ್ಯಾ
ಕೀನ್ಯಾದ ಮಸಾಯಿ ಪಂಗಡದ ವಿವಾಹಗಳಲ್ಲಿ ಸಾಂಪ್ರದಾಯಿಕವಾಗಿ ವಧುವಿನ ತಂದೆ ಆಕೆಯ ತಲೆ ಮತ್ತು ಎದೆಯ ಮೇಲೆ ಉಗುಳಿ ಆಕೆಯನ್ನು ಪತಿಯೊಂದಿಗೆ ಕಳುಹಿಸಿಕೊಡುತ್ತಾನೆ.
ಕಾಂಗೋ
ಕಾಂಗೋದಲ್ಲಿ ಮದುವೆ ವೇಳೆ ವಧು- ವರ ನಗುವಂತಿಲ್ಲ.
ತೈವಾನ್
ವರ ವಧುವಿಗೆ 12 ಉಡುಗೊರೆಗಳನ್ನು- ಶೂ, ಒಡವೆ ಮತ್ತು ಪಗೋಡ ರೂಪದ ಚಾಕೊಲೇಟುಗಳು- ನೀಡುತ್ತಾನೆ. ಬಳಿಕ ಆತ ಆಕೆಗೆ ಬರೆದ ನಿಶ್ಚಿತಾರ್ಥದ ಪತ್ರವನ್ನು ಜೋರಾಗಿ ಓದುತ್ತಾರೆ. ಪತ್ರ ಓದಿದ ನಂತರ ವಧು ವರನಿಗೆ 12 ಉಡುಗೊರೆಗಳನ್ನು- ಗೋಲ್ಡ್ಫಿಶ್ ಮತ್ತು ಚಾಪ್ಸ್ಟಿಕ್- ಕಳುಹಿಸಿಕೊಡುತ್ತಾಳೆ.
ಸ್ವಿಜ್ಜರ್ಲೆಂಡ್
ವಧು ಹೂವಿನಿಂದ ಮಾಡಿದ ಕಿರೀಟ ಧರಿಸಿರುತ್ತಾಳೆ, ಅದು ಆಕೆಯ ಕನ್ಯತ್ವದ ಸಂಕೇತ. ಮದುವೆಯಾದ ಬಳಿಕ ಆ ಹೂವಿನ ಕಿರೀಟವನ್ನು ಸುಟ್ಟು ಹಾಕಲಾಗುತ್ತದೆ. ಅದು ಬೇಗನೆ ಸುಟ್ಟು ಹೋದರೆ ವಧುವಿಗೆ ಅದೃಷ್ಟ ತರುತ್ತದೆ ಎಂದು ನಂಬಿಕೆ. ವಧುವಿನ ಜೊತೆ ಮದುವೆಯ ಚಾಪೆಲ್ಗೆ ಬರುವ ಆಕೆಯ ಗೆಳತಿಯರು ಬಣ್ಣ ಬಣ್ಣದ ಕರವಸ್ತ್ರಗಳನ್ನು ನೆರೆದ ಅತಿಥಿಗಳತ್ತ ಎಸೆಯುತ್ತಾರೆ. ಕರವಸ್ತ್ರ ಯಾರ ಮೇಲೆ ಬೀಳುತ್ತದೋ ಆತ ವಧು ಮತ್ತು ವರನಿಗೆ ಹಣ ನೀಡುತ್ತಾನೆ.
ಗ್ರೀಸ್
ಮದುವೆ ಶುರುವಾಗುವ ಮುನ್ನ ವರ ಮತ್ತು ವಧುವಿನ ತಂದೆ ಮೊದಲ ರಾತ್ರಿಯ ಹಾಸಿಗೆಯ ಮೇಲೆ ಹಣ ಹಾಕುತ್ತಾರೆ. ಅವರ ಬಳಿಕ ನವದಂಪತಿಗಳ ಗೆಳೆಯರು ಮತ್ತು ಸಂಬಂಧಿಕರು ಹಣ ಹಾಕುತ್ತಾರೆ. ಅದರ ನಂತರ ಮಗುವೊಂದನ್ನು ಹಾಸಿಗೆಯ ಮೇಲೆ ಮಲಗಿಸುತ್ತಾರೆ. ಇದರಿಂದ ನವಜೋಡಿಗೆ ಸಂತಾನ ಭಾಗ್ಯ ಮತ್ತು ಅದೃಷ್ಟ ದೊರಕುತ್ತದೆನ್ನುವ ನಂಬಿಕೆ ಗ್ರೀಕರದ್ದು. ಸಾಂಪ್ರದಾಯಿಕವಾಗಿ ಗ್ರೀಕರು ಅವಿವಾಹಿತೆಯರ ಹೆಸರುಗಳನ್ನ ಮದುವೆಯ ಮುನ್ನ ವಧುವಿನ ಚಪ್ಪಲಿಯ ಮೇಲೆ ಬರೆಯುತ್ತಾರೆ. ಮದುವೆ ಮುಗಿದ ಬಳಿಕ ವಧುವಿನ ಚಪ್ಪಲಿಯನ್ನು ಗಮನಿಸಲಾಗುತ್ತದೆ, ಯಾರ ಹೆಸರು ಅಳಿಸಿ ಹೋಗಿರುತ್ತದೋ ಅವರ ವಿವಾಹ ಬಹಳ ಬೇಗ ನಡೆಯುತ್ತದಂತೆ.
ಸೂಡಾನ್
ದಕ್ಷಿಣ ಸೂಡಾನಿನಲ್ಲಿರುವ ನ್ಯೂರ್ ಪಂಗಡದಲ್ಲಿ ವಧು ಇಬ್ಬರು ಮಕ್ಕಳಿಗೆ ಜನ್ಮ ನೀಡುವವರೆಗೂ ವಿವಾಹ ಸಂಪನ್ನವಾಗುವುದಿಲ್ಲ. ಒಂದು ವೇಳೆ ಆಕೆ ಎರಡು ಮಕ್ಕಳಿಗೆ ಜನ್ಮ ನೀಡಲು ವಿಫಲವಾದರೆ, ವರ ಆಕೆಯನ್ನು ತ್ಯಜಿಸಿ ಇನ್ನೊಂದು ವಿವಾಹವಾಗಬಹುದು.
ಪೋಲೆಂಡ್
ನವದಂಪತಿಯ ಎದುರು ಎರಡು ಚೂರು ಬ್ರೆಡ್, ಸ್ವಲ್ಪ ಉಪ್ಪು, ಒಂದು ಬೆಳ್ಳಿ ನಾಣ್ಯ ಮತ್ತು ಎರಡು ಗ್ಲಾಸ್ ವೈನ್ ಇರುವ ಒಂದು ಚಿಕ್ಕ ಮೇಜನ್ನು ಇರಿಸಲಾಗುತ್ತದೆ. ದಂಪತಿಗಳು ಮೊದಲು ಬ್ರೆಡ್ ತಿನ್ನುತ್ತಾರೆ. ಇದು ಭವಿಷ್ಯದಲ್ಲಿ ಹಸಿವೆ ಇರುವುದಿಲ್ಲ ಎನ್ನುವುದರ ಸಂಕೇತ. ಅದಾದ ನಂತರ ಸ್ವಲ್ಪ ವೈನ್ ಕುಡಿಯುತ್ತಾರೆ, ಇದು ಜೀವನದಲ್ಲಿ ಬರುವ ಸಿಹಿ ಘಟನೆಗಳ ಸಂಕೇತ. ಬಳಿಕ ಇಬ್ಬರೂ ಚಿಟಿಕೆ ಉಪ್ಪನ್ನು ತಮ್ಮ ನಾಲಿಗೆಗೆ ಸೋಕಿಸುತ್ತಾರೆ, ಇದು ಜೀವನದಲ್ಲಿ ಬರುವ ಕಹಿ ಘಟನೆಗಳ ಸಂಕೇತ. ಇದಾದ ನಂತರ ಇಬ್ಬರೂ ತಮ್ಮ ಬಲಗೈಯಲ್ಲಿ ಬೆಳ್ಳಿ ನಾಣ್ಯವನ್ನು ಇರಿಸಿಕೊಳ್ಳುತ್ತಾರೆ, ಇದು ಅವರ ಮುಂದಿನ ಜೀವನದಲ್ಲಿ ಆರ್ಥಿಕತೆಯ ತೊಂದರೆ ಎಂದೂ ಬರಬಾರದೆನ್ನುವುದರ ಸಂಕೇತ. ಕೊನೆಗೆ ನವದಂಪತಿಯ ಪೋಷಕರು ಇಬ್ಬರನ್ನೂ ಚುಂಬಿಸಿ ತಮ್ಮ ಕುಟುಂಬಕ್ಕೆ ನವ ಸದಸ್ಯನ/ಳ ಸ್ವಾಗತ ಮಾಡುತ್ತಾರೆ.
ನಾರ್ವೆ
ನಾರ್ವೆಯಲ್ಲಿ ವಿವಾಹವಾದ ಬಳಿಕ ಗೆಳೆಯರು ಮತ್ತು ನೆರೆಹೊರೆಯವರು ನವದಂಪತಿ ಮನೆಯ ಅಕ್ಕಪಕ್ಕ ಎರಡು ದೇವದಾರು ಗಿಡಗಳನ್ನು ನೆಡುತ್ತಾರೆ, ಇದು ಫಲವತ್ತತೆಯ ಸಂಕೇತ. ವಧು ಸಾಂಪ್ರದಾಯಿಕವಾಗಿ ಬಿಳಿ ಅಥವಾ ಬೂದು ಬಣ್ಣದ ಉಡುಗೆ ಧರಿಸಿ, ತಲೆಗೆ ಚಿನ್ನ ಅಥವಾ ಬೆಳ್ಳಿಯ ಕಿರೀಟ ಧರಿಸುತ್ತಾಳೆ. ಮದುವೆಯ ಕೊಠಡಿಯಲ್ಲಿ ಚಾವಣಿಯಿಂದ ಸಣ್ಣ ಬಳೆಗಳನ್ನು ನೇತುಹಾಕಲಾಗುತ್ತದೆ. ವಧುವಿನ ಕಿರೀಟ ಬಳೆಗಳಿಗೆ ತಾಕಿ ಹೊರಹೊಮ್ಮುವ ಸುಮಧುರ ನಾದ ದುಷ್ಟ ಶಕ್ತಿಗಳನ್ನು ಹೊಡೆದೋಡಿಸುತ್ತದಂತೆ.ಈಸ್ಟೋನಿಯಾ
ವಿವಾಹದಲ್ಲಿ ವರನ ಕಣ್ಣು ಕಟ್ಟಿ ಆತನ ಸುತ್ತ ಅವಿವಾಹಿತ ಪುರುಷರನ್ನು ನಿಲ್ಲಿಸಲಾಗುತ್ತದೆ. ವರನನ್ನು ಒಂದು ಸುತ್ತ ತಿರುಗಿಸಿ ಒಬ್ಬನ ಮೇಲೆ ಟೋಪಿ ಹಾಕುವಂತೆ ಹೇಳಲಾಗುತ್ತದೆ. ವರ ಯಾರ ತಲೆಯ ಮೇಲೆ ಟೋಪಿ ಹಾಕುತ್ತಾನೆಯೋ, ಆತನ ವಿವಾಹ ಮುಂದೆ ಜರುಗುತ್ತದೆ ಎನ್ನುವುದು ನಂಬಿಕೆ.
= ಚೈತ್ರಾ ಅರ್ಜುನಪುರಿ
carjunp@gmail.com