ಖುಷಿ

ದೇವನೂರು ಮಹಾದೇವಿ

ದೇವನೂರು ಮಹಾದೇವಿ
Published On :

ಎಪ್ಪತ್ತರ ದಶಕದ ಆರಂಭ. ನಾನು ಮೈಸೂರು ಮಹಾರಾಜ ಕಾಲೇಜಿನಲ್ಲಿ ಸೋಷಿಯಾಲಜಿ ಲೆಕ್ಚರರ್. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಮಹಾದೇವ ಎಲ್ಲ ನನ್ನ ಸ್ಟೂಡೆಂಟ್ಸು. ಮಹಾದೇವನಿಗೆ ಸೋಷಿಯಾಲಜಿ ಮೈನರ್ ಸಬ್ಜೆಕ್ಟ್.
ಮಹಾದೇವ ಒಂದು ದಿನ 'ಕಥೆ ಬರೆದಿದ್ದೀನಿ' ಅಂತ ತಂದು ತೋರಿಸಿದ. 'ಮೇಡಂ ಚೆನ್ನಾಗಿದೆಯಾ?' ಅಂತ ಕೇಳ್ದ. ' ಇಷ್ಟವಾಗ್ಲಿಲ್ಲ' ಅಂದೆ. ಇದ್ದಕ್ಕಿದ್ದಂತೆ ಒಂದು ದಿನ ಪ್ರೊಪೋಸ್ ಮಾಡಿದ. ನಮ್ದು ಹಳ್ಳಿ ಜೀವನ. ಹುಡ್ಗ ತಮಾಷೆಗೆ ಹೇಳಿರ್ಬೇಕು ಅಂತ ಆ ಕಡೆ ಗಮನ ಕೊಡಲಿಲ್ಲ. ಮಹಾದೇವ ಬಿ.ಎ. ಮುಗಿಸಿ ಗಂಗೋತ್ರಿಯಲ್ಲಿ ಎಂ.ಎ.ಗೆ ಸೇರಿಕೊಂಡ. ಒಂದು ವರ್ಷ ಕಳೆದ ಮೇಲೆ ಮತ್ತೆ ಪ್ರೊಪೋಸ್ ಮಾಡಿದ. ಅಷ್ಟೊತ್ತಿಗಾಗಲೇ ನನಗೆ ಜೀವನದಲ್ಲಿ ಕಹಿ ಅನುಭವವಾಗಿತ್ತು. ಹೆಂಗ್ಸು ಒಂಟಿಯಾಗಿ ಬಾಳೋದು ಕಷ್ಟ ಎಂಬುದು ಗೊತ್ತಾಗಿತ್ತು. ನಾನು 'ಹ್ಞೂಂ' ಅಂದೆ. 1974 ರಲ್ಲಿ ರಿಜಿಸ್ಟರ್ಡ್ ಮದ್ವೆ ಆಯ್ತು.
ಮಹಾದೇವನ ಬ್ರಾಡ್ ಮೈಂಡೆಡ್‌ನೆಸ್ ಇಷ್ಟ. ಅವನಿಗೆ ತಾರತಮ್ಯ ಗೊತ್ತಿಲ್ಲ. ವಿಶಾಲ ಮನೋಭಾವ ತುಂಬಾ ಇಷ್ಟವಾಯ್ತು. ಮದ್ವೆಯಾದಾಗ ಮಹಾದೇವ ಇನ್ನೂ ವಿದ್ಯಾರ್ಥಿ. ಕೆಲ್ಸ ಇರಲಿಲ್ಲ. ಆದ್ರೆ ಮಹಾದೇವ ನನ್ನ ಯಾವುದೇ ವಿಚಾರ ಕೇಳಲಿಲ್ಲ. ಆಗ ಈ ಹುಡ್ಗ ಹಿಂಗಾದ್ರೆ ಹೆಂಗೆ ಎಂಬ ಯೋಚನೆಯೂ ಬಂದಿತ್ತು. ಆದರೆ ನಮ್ಮದು ಸಮೀಪದೃಷ್ಟಿಯಾದರೆ ಆತನದು ಬೇರೆಯದೇ ಕ್ಯಾನ್ವಾಸ್. ನನಗೆ ಮೊದಲೆಲ್ಲ ಸಹನೆ ಇರಲಿಲ್ಲ. ಬುಸ್ ಬುಸ್ ಅಂತಿದ್ದವಳು. ಒಂದು ಸಣ್ಣ ತಪ್ಪನ್ನೂ ಸಹಿಸುತ್ತಿರಲಿಲ್ಲ. ಇವತ್ತು ನನ್ನ ಆ ಸ್ಥಿತಿ ಇಲ್ಲ. ಒಂದಿಪ್ಪತ್ತೈದು ಪರ್ಸೆಂಟ್ ಕಡಿಮೆ ಮಾಡಿಕೊಂಡಿದ್ದೇನೆ. ಈ ಸಹನಶೀಲತೆಗೆ ಮಹಾದೇವನೆ ಕಾರಣ.
ನಾವು ಈ ಏರಿಯಾದಲ್ಲಿ (ಮೈಸೂರಿನ ಕುವೆಂಪುನಗರದ ನವಿಲು ರಸ್ತೆ) ಮನೆ ಕಟ್ಟಿದಾಗ ನೀರಿಗೆ ಬಹಳ ತೊಂದರೆ. ಮಧ್ಯಾಹ್ನ 2.30ಕ್ಕೆ ನೀರು ಬಿಡ್ತಿದ್ರು. ನಾನು ಕಾಲೇಜಿನಿಂದ ಬಂದು ನೀರು ಹಿಡಿದು ಹೋಗಬೇಕಿತ್ತು. ಒಂದು ದಿನ ಮಧ್ಯಾಹ್ನ ಇದೇ ರೀತಿ ನೀರು ಹಿಡಿಯಲು ಬಂದೆ. ಆಗ ಮಹಾದೇವ ಮನೆಯಲ್ಲೇ ಇದ್ದ. ನಾನು ಬಂದ ತಕ್ಷಣ ನಾಲ್ಕೈದು ಪುಟಗಳನ್ನು ಕೊಟ್ಟು 'ಇದು ಹೇಗಿದೆ ಓದಿ ಹೇಳು ಪ್ಲೀಸ್‌' ಅಂತ ಕೇಳಿದ. ನೀರು ಹಿಡಿಯುವುದು ಬಿಟ್ಟು ಅದನ್ನು ಓದಿದೆ. ಭೂಮಿ- ಆಕಾಶ ಎರಡೂ ಒಂದಾಗುವಂತೆ ಕುಣಿದು, ಕುಪ್ಪಳಿಸಿದೆ. ಅವತ್ತು ನನಗೆ ತುಂಬಾ ಸಂತೋಷ ಆಯ್ತು. ಮಹಾದೇವ ಒಳ್ಳೆ ರೈಟರ್ ಆಗಬೇಕು ಅಂತ ನನ್ನ ಆಸೆ ಆಗಿತ್ತು. ಅದು ಈಡೇರುವಂತೆ ಮಹಾದೇವನ ಬರವಣಿಗೆಯ ಶೈಲಿ ಇತ್ತು. ಟಾಲ್‌ಸ್ಟಾಯ್ ಮಟ್ಟದ ಬರವಣಿಗೆಯಿಂದ ಕೂಡಿದ್ದ ಅದುವೇ ಮುಂದೆ 'ಕುಸುಮಬಾಲೆ' ಕಾದಂಬರಿಯಾಯಿತು. ಮಹಾದೇವ ಯಾವುದಾದರೂ ಪತ್ರಿಕೆಯ ಎಡಿಟರ್ ಆಗ್ಬೇಕು ಅನ್ನೋದು ನನ್ನ ಮತ್ತೊಂದು ಆಸೆ. ಕಳೆದವರ್ಷ ಮಹಾದೇವ 'ಪ್ರಜಾವಾಣಿ'ಯಲ್ಲಿ ಏಕ್ ದಿನ್‌ಕ ಸುಲ್ತಾನ್ (ಅತಿಥಿ ಸಂಪಾದಕ) ಆಗಿದ್ದ. ಅವತ್ತೂ ತುಂಬಾ ಖುಷಿಯಾಯ್ತು.
ನಾವಿಬ್ಬರೂ ಸಮಾನಾಂತರ ರೇಲ್ವೆ ಹಳಿಗಳಿದ್ದಂತೆ. ವಾದ- ವಿವಾದ ಇದ್ದದ್ದೆ. ಆದರೆ ಯಾವ್ದು ಕಾಯಂ ಅಲ್ಲ. ಜಗಳ ಯಾವಾಗ್ ಆಯ್ತು ಅಂತಾನೆ ಮರೆತೋಗಿರುತ್ತೆ. ಮಹಾದೇವನಿಗೆ ನನಗೆ ಎಷ್ಟು ಸಂಬ್ಳ ಬರ್ತಿತ್ತು. ಬ್ಯಾಂಕ್ ಖಾತೇಲಿ ಎಷ್ಟು ದುಡ್ಡಿದೆ. ಯಾವುದೂ ಗೊತ್ತಿರಲಿಲ್ಲ. ಇವತ್ತಿಗೂ ಗೊತ್ತಿಲ್ಲ. ಈ ಬಗ್ಗೆ ಒಂದು ದಿನಾನು ಕೇಳಿಲ್ಲ. ಹಾಗೆಂದ ಮಾತ್ರಕ್ಕೆ ನಾನೇನು ಬೇಕಾಬಿಟ್ಟಿ ಖರ್ಚು ಮಾಡಲ್ಲ. ಮಹಾದೇವ ಏನೂ ಕೇಳುವುದೇ ಇಲ್ವಲ್ವ ಎಂಬ ಭಯ. ಆತಂಕ ಅಂತೂ ಇದ್ದೇ ಇದೆ.
ಮನೆಗೆ ಯಾರೇ ಬರಲಿ, ಅವರನ್ನು ಮನೆಯೋರ್ ಥರಾನೆ ಟ್ರೀಟ್ ಮಾಡ್ಬೇಕು. ಆತ ಭಿಕ್ಷುಕ ಇರಲಿ, ಮ್ಯಾನ್‌ಹೋಲ್ ಕ್ಲೀನ್ ಮಾಡೋನು ಇರಲಿ. ಸ್ವಲ್ಪ ವ್ಯತ್ಯಾಸ ಆಗಿದೆ ಅಂತ ಗೊತ್ತಾದ್ರೆ ಸಾಕು, 'ಛೇ' ಅಂತಾನೆ. ಅಷ್ಟಂದ್ರೆ ಸಾಕು, ಮಹಾದೇವನಿಗೆ ಬೇಜಾರಾಗಿದೆ. ನಾನು ಮಾಡಿದ ಕೆಲ್ಸ ಹಿಡಿಸಿಲ್ಲ ಅಂತ ಗೊತ್ತಾಗಿಬಿಡುತ್ತೆ. ಅದಕ್ಕೆ ನಾವು ಅದಕ್ಕೆ ಅವಕಾಶ ಕೊಡದಂತೆ ಯಾರೇ ಬಂದ್ರೂ ಒಂದೇ ಥರ ಟ್ರೀಟ್ ಮಾಡ್ತೀವಿ.
ಈ ಮಹಾದೇವನ ಜೊತೆ ಟೂರ್ ಹೋಗೋಕೆ ಭಯ ಕಣ್ರೀ. ಏಕೆಂದರೆ ಅವನ ಜೊತೆಯಲ್ಲಿದ್ದರೂ ಏಕಾಂತದಲ್ಲಿದ್ದಂತೆ ಇರುತ್ತಾನೆ. ಒಂದ್ಸಲ ಏನಾಯ್ತು ಗೊತ್ತಾ... ಆಗಷ್ಟೆ ಮದ್ವೆಯಾಗಿದ್ವಿ. ಡೆಲ್ಲಿ ಯುಪಿಎಸ್ಸಿಲಿ ಲೆಕ್ಚರರ್ ಪೋಸ್ಟ್‌ಗೆ ಇಂಟರ್‌ವ್ಯೂ ಇತ್ತು. ಆ ಬಾರಿ ಸೆಲೆಕ್ಟ್ ಆಗಲಿಲ್ಲ ಬಿಡ್ರಿ. ಆಲ್ಭಾಬಿಟ್ ಕೇಳಿದ್ರೂ ಮಹಾದೇವ ಹೇಳಿರಲಿಲ್ಲ. ಅದಿರಲಿ. ಮಹಾದೇವನಿಗೆ ಮೊದಲಿದ್ಲು ಟೀ, ಸಿಗರೇಟು ಚಟ. ಬೇಕೆನಿಸಿದಾಗಲೆಲ್ಲಾ ಹೇಳದೆ ಕೇಳದೆ ಹೊರಟ್ ಬಿಡ್ತಾನೆ. ನಾವು ಹೋಗಿದ್ದು ರೈಲಲ್ಲಿ. ಒಂದೆಡೆ ಇಳಿದ ಮಹಾದೇವ ರೈಲು ಹೊರಟ್ರೂ ಹತ್ತಿರಲಿಲ್ಲ. ಆಗ ನಾನು ಕೆಳಕ್ಕೆ ಇಳಿಯಲು ಹೋದೆ. ರೇಲ್ವೆ ಗಾರ್ಡ್‌ಗಳು ಬಿಡಲಿಲ್ಲ. ಕೊನೆಗೆ ಏನ್ ಮಾಡೋದು? ಗಾಬರಿಯಿಂದ ಕುಳಿತಿದ್ದೆ. ಬೋಗಿಯಲ್ಲಿದ್ದವರು ಬೇರೆ ದೃಷ್ಟಿಯಿಂದ ನೋಡುತ್ತಿದ್ದರು. ಟಿಕೆಟ್ ಚೆಕ್ಕಿಂಗ್ ಬೇರೆ ನಡೀತಿತ್ತು. ಟಿಕೆಟ್ ನನ್ನ ಗಂಡನ ಬಳಿ ಇದೆ ಅಂದ್ರು ನಂಬದ ಸ್ಥಿತಿ ಇತ್ತು. ಕೊನೆ ಬೋಗಿಯಲ್ಲಿ ಹತ್ತಿಕೊಂಡಿದ್ದ ಮಹಾದೇವ 15-20 ನಿಮಿಷ ಬಿಟ್ಟು ನಾನಿದ್ದ ಬೋಗಿಗೆ ಬಂದ. ಆಗ ಹೋದಜೀವ ಬಂದಂಗ್ಹಾಯ್ತು.
ಆಗ್ಲೆ ತಾಜ್‌ಮಹಲ್ ನೋಡಕ್ಕೂ ಹೋಗಿದ್ದೋ ಕಣ್ರಿ. ಅಲ್ಲಿಗೆ ಸೈಕಲ್ ರಿಕ್ಷಾದಲ್ಲಿ ಹೋಗಬೇಕಿತ್ತು. ಆದ್ರೆ ಮಹಾದೇವ ಒಪ್ಪಲಿಲ್ಲ. ಆ ರಿಕ್ಷಾ ಓಡಿಸುವವನು ಕಾರಣ ಕೇಳಿದ, ಮಹಾದೇವ ಹೇಳಿದ್ದನ್ನು ನಾನು ಅವರಿಗೆ ಹರುಕುಮುರುಕು ಹಿಂದಿಯಲ್ಲಿ ಹೇಳಿದೆ. ನಾವು ಸೈಕಲ್ ರಿಕ್ಷಾದಲ್ಲಿ ಕೂರುವುದು, ಆತ ತುಳಿದು ಶ್ರಮಪಡುವುದು ಇಷ್ಟವಿರಲಿಲ್ಲ. ಇದನ್ನು ಕೇಳಿದ ಆ ರಿಕ್ಷಾವಾಲ ಮಹಾದೇವನ ಕಾಲಮುಟ್ಟಿ ನಮಸ್ಕರಿಸಲು ಬಂದ. ಇಂಥ ವ್ಯಕ್ತಿ ನೋಡಿಯೇ ಇಲ್ಲ ಅಂತ ಹೇಳಿ ಕಾಡಿಬೇಡಿ ಕರೆದುಕೊಂಡು ಹೋದ. ಮಹಾದೇವನ ಹಠ ರಿಕ್ಷಾವಾಲನ ಪ್ರೀತಿ ಎದುರು ಕರಗಿತ್ತು. ಹೆಚ್ಚು ದುಡ್ಡು ಕೊಟ್ಟು ಸಮಾಧಾನ ಮಾಡಿಕೊಂಡ್ವಿ.
ಮಹಾದೇವ ಎರಡನೇ ಬಾರಿ ಡೆಲ್ಲಿಗೆ ಇಂಟರ್‌ವ್ಯೂಗೆ ಹೋದಾಗ ನಾನು ಹೋಗಲಿಲ್ಲ ಕಣ್ರಿ. ಮೊದಲ ಅನುಭವನೇ ಸಾಕಾಗಿತ್ತು. ಆದರೆ, ಆ ಬಾರಿ ಮೈಸೂರಿನಲ್ಲೇ ಇರುವ ಸಿಐಐಎಲ್ (ಭಾರತೀಯ ಭಾಷಾ ಸಂಸ್ಥೆ) ಲೆಕ್ಚರರ್ ಆಗಿ ಸೆಲೆಕ್ಟ್ ಆದ. ನಾನು ಬೆಸ್ಟ್ ಲೆಕ್ಚರರ್ ಅಂಥ ಹೆಸರು ಮಾಡ್ದೋಳು. ಮಹಾದೇವ ಹೇಗೆ ಪಾಠ ಮಾಡ್ತಾನೆ ಅಂತ ತಿಳಿಯಲು ಒಮ್ಮೆ ಅವನ ಸ್ಟೂಡೆಂಟ್ಸ್‌ನ ಕೇಳ್ದೆ. 'ಹೀ ಈಸ್ ಟೀಚಿಂಗ್ ಹೌ ಟು ಟೀಚ್ ಬ್ಯಾಡ್ಲಿ' ಅಂದ್ರು. ಹಾಗೂ ಹೀಗೂ ಕೆಲ್ಸ ಮಾಡಿ 11 ವರ್ಷ ಆದ ಮೇಲೆ ಬಿಟ್ರು. ಮಹಾದೇವನಿಗೆ ಬೆಲ್ ಆದಾಗ ಕ್ಲಾಸ್‌ಗೆ ಹೋಗೋದು. ಬೆಲ್ ಆದಾಗ ನಿಲ್ಸೋದು. ಇವೆಲ್ಲಾ ಇಷ್ಟವಿಲ್ಲ. ಒಂಥರಾ ಫ್ರೀಲಾನ್ಸರ್ ಇದ್ದಂಗೆ. ಮದ್ವೆಯಾಗಿ 40 ವರ್ಷ ಆದ್ರೂ ನಾವು ಇವತ್ತಿಗೂ ಫ್ರೆಂಡ್ಸ್ ಥರ ಇದ್ದೇವೆ. ಇಬ್ಬರ ದೃಷ್ಟಿಕೋನವೂ ಒಂದೇ. ಇಬ್ಬರಿಗೂ ಮೌಲ್ಯಧಾರಿತ ಜೀವನ ಅಂದ್ರೆ ಇಷ್ಟ. ನನ್ನ ಮೇಲೆ ಮಹಾದೇವನ ಜೊತೆಗೆ ಅಜ್ಜಿ, ತಂದೆ- ತಾಯಿ, ಶಿಕ್ಷಕರು ಪ್ರಭಾವ ಬೀರಿದ್ದಾರೆ. ನನಗೆ ಅಜ್ಜಿಯೇ ಗಾಡ್‌ಫಾದರ್. ಆಕೆ ನೀತಿಪಾಠ ಹೇಳಿಕೊಡುತ್ತಿದ್ದಳು. ಆಕೆ ಓದಿದ್ದು ನಾಲ್ಕನೇ ಕ್ಲಾಸು. ಗಂಡಸರನ್ನು ನಂಬಬೇಡ ಅಂತ ಹೇಳಿದ್ರು. ಆಗಿನಿಂದಲೂ ನಾನು ಪುರುಷದ್ವೇಷಿ. ಆದ್ರೆ ಮಹಾದೇವನ ನೋಡಿದ ಮೇಲೆ ಬದಲಾಯ್ತು. ತಾಯಿ ಶಿಸ್ತು ಕಲಿಸಿದರು. ರೇಲ್ವೆ ಸ್ಟೇಷನ್ ಮಾಸ್ಟರ್ ಆಗಿದ್ದ ತಂದೆ ಗಾಂಧಿವಾದಿಯಾಗಿದ್ದರು.
ನನಗೆ ಸಾಹಿತ್ಯ ತುಂಬಾ ಇಷ್ಟ. ಸೋಷಿಯಾಲಜಿ ಲೆಕ್ಟರರ್ ಆದ್ರು ಕನ್ನಡಾಭಿಮಾನಿ. ನಾವೆಲ್ಲ ಸ್ನೇಹಿತೆಯರು ಒಟ್ಟಿಗೆ ಕನ್ನಡ ಸಿನಿಮಾಗಳಿಗೆ ಹೋಗ್ತಿದ್ವಿ. ಸಿನಿಮಾದಲ್ಲಿ ಯಾವುದೇ ಮೌಲ್ಯ ಇಲ್ಲ, ಕಥೆ ಚೆನ್ನಾಗಿಲ್ಲ ಅಂದ್ರು. ಏಯ್ ನಾವು ಸಿನಿಮಾಕ್ಕೆ ಕಾಸ್ ಕೊಟ್ಟಿಲ್ಲ. ಕನ್ನಡಕ್ಕೆ ಕೊಟ್ಟಿದ್ದೇವೆ ಎಂದು ಹೆಮ್ಮೆ ಪಟ್ಟುಕೊಳ್ಳುತ್ತಿದ್ದೆವು. ಕುವೆಂಪು, ಪ್ರೊ. ಸುಧಾಕರ, ಪ್ರೊ. ಶ್ರೀನಿವಾಸ ಅವರ ಬಗ್ಗೆ ಅಪಾರ ಗೌರವವಿತ್ತು.
ಹರವೆ (ಲೇಖಕರು) ತೀರಿಕೊಂಡಾಗ ತುಂಬಾ ಬೇಜಾರಾಗಿತ್ತು. ಇಬ್ರೂ ಮದ್ರಾಸ್‌ಗೆ ಹೋಗಿದ್ವಿ. ಅಲ್ಲಿ ಸಮುದ್ರ ದಂಡೆಯಲ್ಲಿ ಕುಳಿತು ನೀರಿನ ಅಲೆಯನ್ನು ನೋಡುತ್ತಾ ದುಃಖನ ಕಡಿಮೆ ಮಾಡಿಕೊಂಡ್ವಿ. ನಾನು ಮಹಾದೇವರ ಎಲ್ಲ ಪುಸ್ತಕಗಳನ್ನೂ ಓದಿದ್ದೇನೆ. ನಾನು ಮಹಾದೇವನೊಂದಿಗೆ ಹೆಚ್ಚು ಹೊರಗೆ ಹೋಗಲ್ಲ. ಏಕೆಂದರೆ ಆವನಿಗೆ ಅಭಿಮಾನಿಗಳು ಜಾಸ್ತಿ. ಲೆಟ್ ಅಸ್ ಎಂಜಾಯ್. ಮಹಾದೇವ ನನ್ನನ್ನು ಕರೆಯೋದು ಮಿತ್ರಿ ಅಂತ. ಕೆಲವೊಮ್ಮೆ ತುಂಬಾ ಅಂತಾನೂ ಕರೀತಾನೆ. ನನ್ನದು ಮೊದಲಿನಿಂದಲೂ ಏರುಧ್ವನಿ. ಆತ ಮಿತಭಾಷಿ.
ಈಗ ಮಹಾದೇವ ಮಾತನಾಡಲು ಶುರುಮಾಡಿದ್ದಾನೆ. ನಾನು ಮಾತು ಕಡಿಮೆ ಮಾಡಿದ್ದೇನೆ. ಮೊದಲೆಲ್ಲ ಹೆಚ್ಚು ಹೆಚ್ಚು ಭಾಷಣಗಳಿಗೆ ಹೋಗುತ್ತಿದ್ದೆ. ಮಹಿಳೆಯರು, ಶೋಷಣೆ, ಅಸ್ಪೃಶ್ಯತೆಯ ಬಗ್ಗೆ ಹಲವು ಲೇಖನಗಳನ್ನು ಬರೆದಿದ್ದೇನೆ. ನಾನು ಲಲಿತಕಲಾ ಕಾಲೇಜಿನ ಪ್ರಾಂಶುಪಾಲೆಯಾಗಿ ನಿವೃತ್ತಿಯಾದೆ. ಆ ಕಾಲೇಜಿನಲ್ಲಿದ್ದಾಗ ತುಂಬಾ ಎಂಜಾಯ್ ಮಾಡ್ದೆ. ಯಾಕೆಂದರೆ ನನಗೆ ಸಂಗೀತ ಅಂದ್ರೆ ತುಂಬಾ ಇಷ್ಟ. ಜೊತೆಗೆ ಯೋಗ, ಪ್ರಕೃತಿ ಚಿಕಿತ್ಸೆಯ ಬಗ್ಗೆಯೂ ಆಸಕ್ತಿ. ಸ್ಪೋರ್ಟ್ಸ್ ಬಗ್ಗೆ ಕೂಡ ಆಸಕ್ತಿ. ನನ್ನಿಂದಾಗಿ ಮಹಾದೇವನಿಗೂ ಸಂಗೀತದ ಬಗ್ಗೆ ಆಸಕ್ತಿ ಬಂದಿದೆ. ನಾನು ಹಿಂದೂಸ್ತಾನಿ ಸಂಗೀತ ಇಷ್ಟಪಟ್ಟರೆ ಆತನಿಗೆ ಕರ್ನಾಟಕ ಸಂಗೀತ ಇಷ್ಟ.
ಮಹಾದೇವನಿಗೆ ನಾನು ಮಾಡುವ ನಾನ್‌ವೆಜ್, ಕಿಚಡಿ, ಕೊಬ್ಬರಿ ಮಿಠಾಯಿ, ಪಲ್ಯ, ತೆಂಗಿನ ಅನ್ನ ಇಷ್ಟ. ಆದ್ರೆ ಮೂಲಂಗಿ ಸಾರು, ಬೆಂಡೆಕಾಯಿ ಗೊಜ್ಜು ಅಂದ್ರೆ ಆಗಲ್ಲ. ನನ್ಗೆ ಇಷ್ಟ. ಅಡುಗೆ ಹೆಂಗಿದೆ ಅಂತ ಮಹಾದೇವ ಯಾವತ್ತೂ ಹೇಳಿದವನಲ್ಲ. ಉಪ್ಪು- ಖಾರ ಏನ್ ಕಡಿಮೆಯಾಗಿದೆ ಅಂತ ಗೊತ್ತಾಗಬೇಕಾದ್ರೆ ನಾನೇ ಊಟ ಮಾಡ್ಬೇಕು. ಇದೇ ಬೇಕು ಅಂತ ಯಾವತ್ತೂ ಕೇಳಿಲ್ಲ. ಯಾವಾಗಲಾದ್ರು ಹೋಟೆಲ್‌ಗೆ ಹೋಗ್ತೀವಿ.
ಮಹಾದೇವ ಮೊದಲೆಲ್ಲ ದಿನಕ್ಕೆ 18 ಗಂಟೆ ನಿದ್ದೆ ಮಾಡೋನು. ನನ್ಗೆ ಭಯ ಆಗಿತ್ತು. ಏನಪ್ಪ, ಈ ಮನುಷ್ಯನ ಕಥೆ ಅಂತ. ಹಿಂಗೆ ನಿದ್ದೆ ಮಾಡಿದ್ರೆ ಡೈವೋರ್ಸ್ ಕೊಡ್ತೀನಿ ಅಂತ ಹೆದರಿಸ್ತಿದ್ದೆ. ಈಗ ಕಡಿಮೆ ಮಾಡಿದ್ದಾನೆ. ಅಂದ್ರೆ 10 ಗಂಟೆ ನಿದ್ದೆ ಮಾಡ್ತಾರೆ. ಬೆಳಗ್ಗೆ 9.30ಕ್ಕೆ ಎದ್ದು ಟೀ ಕುಡೀತಾನೆ. ಏನಾದ್ರು ಓದು, ಬರಹ ಮಾಡ್ತಾನೆ. ಹೊರಗೆ ಹೋಗ್ತಾನೆ. ರಾತ್ರಿ ಪುಸ್ತಕಗಳನ್ನು ಓದ್ತಾನೆ. ಇಂಗ್ಲಿಷ್ ಸಿನಿಮಾಗಳನ್ನು ನೋಡ್ತಾನೆ. ಅವನಿಗೆ ಇಷ್ಟವಾಗುವ ಇಂಗ್ಲಿಷ್ ಪುಸ್ತಗಳನ್ನು ತಂದು ನನಗೆ ಅರ್ಥವಾಗಿಲ್ಲ, ಓದೇಳು ಅಂತ ಕೊಡ್ತಾನೆ. ನಾನು ಓದಿ ಹೇಳ್ತೇನೆ. ಕೆಲವೊಮ್ಮೆ ರಾಮಸ್ವಾಮಿ ಹತ್ರ ಹೋಗ್ತಾನೆ.
ಒಂದು ವಿಷಯವನ್ನು ಮಹಾದೇವ ನೋಡುವ ದೃಷ್ಟಿಕೋನಕ್ಕೂ ಇತರರು ನೋಡುವ ದೃಷ್ಟಿಕೋನಕ್ಕೂ ವ್ಯತ್ಯಾಸ ಇರುತ್ತೆ. ಅವನ ದೃಷ್ಟಿಕೋನ ವಿಭಿನ್ನ, ಜನಪರ- ಮಾನವಪರ ಇರುತ್ತೆ. ಅದು ನನ್ಗೆ ಇಷ್ಟವಾಗುತ್ತೆ. ಡಾ.ಎಂ.ಬಿ. ಬೊಮ್ಮಯ್ಯ ಅವ್ರು ಅಂಬೇಡ್ಕರ್ ಅವರ 'ಗೀತಾಂಜಲಿ'ಯನ್ನು ಕನ್ನಡಕ್ಕೆ ತಂದವರು. ಅದನ್ನು ಓದಿದ್ದೆ. ಮಹಾದೇವನ ಮದುವೆಯಾದ ಮೇಲೆ ಅಂಬೇಡ್ಕರ್ ಬಗ್ಗೆ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿ, ತಿಳಿದುಕೊಂಡೆ.
ಮೊದಲನೇ ಮಗಳು ಉಜ್ವಲ ಡೆಲ್ಲಿಯಲ್ಲಿ ಎಂಜಿನಿಯರ್. ಎರಡನೇ ಮಗಳು ಮಿತಾ ಡಾಕ್ಟರ್. ನಮ್ಮ ಜೊತೆಗೆ ಇದ್ದು, ಮೈಸೂರಿನಲ್ಲೇ ಪ್ರಾಕ್ಟೀಸ್ ಮಾಡ್ತಾ ಇದ್ದಾಳೆ. ಇಬ್ಬರಿಗೂ ಮಕ್ಕಳಿದ್ದಾರೆ.


-   ನಿರೂಪಣೆ- ಅಂಶಿ ಪ್ರಸನ್ನಕುಮಾರ್
amshipkumar@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.