ನನಗೀಗ 25 ವರ್ಷ. ಸಂಗೀತದಲ್ಲಿ ಆಸಕ್ತಿ ಹೊಂದಿದ್ದೇನೆ. ಆದರೆ ಇದುವರೆಗೆ ಎಲ್ಲಿಯೂ ಹಾಡಿಲ್ಲ. ಸಂಗೀತ ಕಲಿಯಲು ಸಾಧ್ಯವೆ?
- ವಿಶ್ವಾಸ್ ಪೂಜಾರಿ, ನೂಚಿಲ
ನೀನು ಹೆಸರಿಗೆ ತಕ್ಕಂತೆ ಇರಬೇಕು. ಸಂಗೀತ ಕಲಿಯಲು ವಯಸ್ಸಿನ ಹಂಗಿಲ್ಲ. ಕಲಿಯುವ ಮನಸ್ಸಿದ್ದರೆ ಸಾಧ್ಯವಿದೆ. ಧ್ವನಿಯನ್ನು ಉತ್ತಮಪಡಿಸಿಕೋ. ಶುರುವಿನ ದಿನಗಳಲ್ಲಿ ಧ್ವನಿಯದ್ದೇ ಸಮಸ್ಯೆ ಆಗಬಹುದು. ಚಿಂತೆ ಬೇಡ. ನಿರಂತರ ಅಭ್ಯಸಿಸು. ಕಂಠ ಶುದ್ಧಿಯಾದಂತೆ ಸ್ವರ ಕೈ ಹಿಡಿಯುತ್ತದೆ.
ಮದುವೆಗೂ ಮುನ್ನ ಅಡುಗೆ ಬರದಿದ್ದರೂ ಪರವಾಗಿಲ್ಲ ಎಂದಿದ್ದರು. ಈಗ ಅಡುಗೆ ಬರದಿದ್ದರೆ ಉಪವಾಸ ಇರು ಎನ್ನುತ್ತಿದ್ದಾರೆ. ಕಿರಿಕಿರಿ ಆಗುತ್ತಿದೆ.
- ನವಿತಾ ಜೈನ್, ಶಿವಮೊಗ್ಗ
ಅಡುಗೆ ಭಟ್ಟನನ್ನೇ ಮದುವೆ ಆಗಬೇಕಿತ್ತು. ಇನ್ನು ಸ್ವತಂತ್ರಳಾಗಿ ಬದುಕುತ್ತೀಯಾ ಎಂದಾದರೆ ಅಡುಗೆ ಕಲಿಯುವುದು ಅನಿವಾರ್ಯ. ಯಾವಾಗಲೂ ಹೋಟೆಲ್ನಲ್ಲೇ ಹೊಟ್ಟೆ ತುಂಬಿಸಿದರೆ ನಾನಾ ಕಾಯಿಲೆಗೆ ಎಡೆಮಾಡಿಕೊಟ್ಟಂತೆ. ಅಹಂಕಾರ ಬಿಟ್ಟು ಅಡುಗೆ ಮಾಡುವುದ ಕಲಿ.
ನೌಕರಿಯಲ್ಲಿದ್ದೇನೆ. ಮನೆಯಲ್ಲಿ ಹುಡುಗಿ ನೋಡುತ್ತಿದ್ದಾರೆ. ಮದುವೆ ಬಗ್ಗೆ ವಿಪರೀತ ಹೆದರಿಕೆ. ಸಂಸಾರ, ಮಕ್ಕಳು, ಜಂಜಾಟ ಇವೆಲ್ಲಾ ಬೇಕಾ? ಅಯ್ಯಯ್ಯೋ.
- ಸುರೇಶ್, ಕೈಕಂಬ
ಬದುಕು ಜಂಜಾಟ ಎಂದೆನಿಸಿದರೆ ನೌಕರಿಯನ್ನೇಕೆ ಮಾಡುತ್ತಿದ್ದೀಯ? ಸಂಸಾರ, ಮಡದಿ, ಮಕ್ಕಳ ಬಗ್ಗೆ ಸುಂದರ ಕಲ್ಪನೆ ಕಟ್ಟಿಕೋ. ಸುಂದರ ಸಂಸಾರದ ಚಿತ್ರಣವಿರುವ ಸಿನಿಮಾಗಳನ್ನು ನೋಡು. ಹುಟ್ಟಿದ ಮೇಲೆ ಅಂಥ ಅನುಭವಗಳಾಗದೆ, ಸತ್ತಮೇಲಾಗುತ್ತದಾ? ಹೆದರಿಕೆ ಬಿಡು.
- ಡಾ. ನರೇಂದ್ರ ಗಾಂಧಿ
nemmadikendra4@gmail.com