ಖುಷಿ

ಬಾಲ್ ಬಾಲ್ ಆತಿ ಹೈ ಮುಜುಕೋ...

ಬಾಲ್ ಬಾಲ್ ಆತಿ ಹೈ ಮುಜುಕೋ...
Published On :

ಆಟಗಾರರಿಗೆ ಪ್ರಶಸ್ತಿ ಮೇಲೆ ಕಣ್ಣು, ಅಂಪೈರ್‌ಗಳಿಗೆ ಆಟಗಾರರ ಮೇಲೆ ಕಣ್ಣು. ಕೋಚ್‌ಗಳಿಗೆ ಜಯದ ಮೇಲೆ ಕಣ್ಣು. ಆದರೆ, ಬಾಲ್‌ಬಾಯ್‌ಗೆ ಚೆಂಡಿನ ಮೇಲಷ್ಟೇ ಕಣ್ಣು!
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್‌ರಿಂದ ಹಿಡಿದು ಅದೆಷ್ಟೋ ಸ್ಟಾರ್ ಆಟಗಾರರು ಬಾಲ್ ಬಾಯ್ಸ್ ಆಗುವ ಮೂಲಕವೇ ವೃತ್ತಿ ಆರಂಭಿಸಿದವರು. ಅಲ್ಲದೆ, ಕ್ರೀಡಾಸ್ಫೂರ್ತಿ ಹೊಂದಿರುವ ಪ್ರತಿಯೊಬ್ಬ ಬಾಲಕ ತಾನು ಬಾಲ್‌ಬಾಯ್ ಆಗಬೇಕೆಂದೇ ಕನಸು ಕಾಣುತ್ತಿರುತ್ತಾನೆ. ಫುಟ್ಬಾಲ್, ಕ್ರಿಕೆಟ್, ಹಾಕಿ, ಟೆನಿಸ್, ಬೇಸ್‌ಬಾಲ್, ವಾಲಿಬಾಲ್, ಬಾಸ್ಕೇಟ್‌ಬಾಲ್‌ಗಳಲ್ಲೇ ಚೆಂಡಿನದ್ದೇ ಸಾಮ್ರಾಜ್ಯ. ಇಲ್ಲಿ ಕ್ರೀಡಾಪಟುಗಳಿಂದ ಹಿಡಿದು ಪ್ರೇಕ್ಷಕರೆಲ್ಲರೂ, ಪಂದ್ಯದ ಆರಂಭದಿಂದ ಮುಕ್ತಾಯದವರೆಗೂ ಪ್ರತಿಕ್ಷಣವೂ ಚೆಂಡನ್ನು ಗಮನಿಸುತ್ತಾರೆ. ಆದರೆ, ಇವರೆಲ್ಲರಿಗಿಂತ ಹೆಚ್ಚು ಚೆಂಡಿನ ಮೇಲೆ ದೃಷ್ಟಿ ಹಾಯಿಸುವವರು ಬಾಲ್ ಬಾಯ್ಸ್.
ಆಟಗಾರರು ಶಕ್ತಿ ಮೀರಿದ ಪ್ರದರ್ಶನ ನೀಡಿದಾಗ, ನಿಯಂತ್ರಣ ತಪ್ಪಿ ಬಾರಿಸಿದಾಗಲೆಲ್ಲ ಚೆಂಡು ಇವರ ಕೈಸೇರುತ್ತದೆ. ಟೆನಿಸ್‌ನಲ್ಲಿ ಬಾಲ್‌ಬಾಯ್ ಆಗಲು ಭಾರಿ ಪೈಪೋಟಿಯೇ ಇದೆ. ಯುಎಸ್ ಓಪನ್, ಫ್ರೆಂಚ್ ಓಪನ್, ವಿಂಬಲ್ಡನ್ ಹಾಗೂ ಆಸ್ಟ್ರೇಲಿಯಾ ಓಪನ್‌ನಲ್ಲಿ ಬಾಲ್‌ಬಾಯ್ ಆಗಲಂತೂ ಸ್ಪರ್ಧೆ ಕೇಳುವುದೇ ಬೇಡ. ಗ್ರ್ಯಾನ್‌ಸ್ಲ್ಯಾಮ್‌ಗಳಲ್ಲಿ ಇವರೆಲ್ಲ ಸ್ಟಾರ್ ಆಟಗಾರರೊಂದಿಗೆ ಮಿಂಚುವಾಗ ಇತರ ಮಕ್ಕಳಿಗೂ 'ನಾನೂ ಬಾಲ್‌ಬಾಯ್ ಆಗಿದ್ದಿದ್ದರೆ...' ಎಂಬ ಕನಸು ಚಿಗುರೊಡೆಯುತ್ತದೆ.
ಫಿಟ್ಟಿದ್ದರೆ ಅಷ್ಟೇ...
ಬಾಲ್‌ಬಾಯ್ ಆಗೋದಕ್ಕೂ ನಾನಾ ಸರ್ಕಸ್ಸಿದೆ. ದೈಹಿಕವಾಗಿ ಸಮರ್ಥರಿರಬೇಕು. ಏಕಾಗ್ರತೆ, ಚುರುಕುತನ ಅಲ್ಲದೆ ಸಂಯಮ, ಶಿಸ್ತು ಇಲ್ಲಿ ಬಹುಮುಖ್ಯ. ಸಮಯದ ಅರಿವಿರಬೇಕು. ಹಾಗಿದ್ದಾಗಲಷ್ಟೇ ಆಟಗಾರರು, ಲೈನ್ ಅಂಪೈರ್‌ಗಳಿಗೆ ಇವರು ಅನುಕೂಲವಾಗುತ್ತಾರೆ.
ಎಲ್ಲಿಂದ ಶುರು?
'ಬಾಲ್‌ಬಾಯ್ಸ್‌' ಮೊದಲು ಪರಿಚಯಗೊಂಡಿದ್ದು 1920ರ ವಿಂಬಲ್ಡನ್ ಟೆನಿಸ್‌ನಲ್ಲಿ. 1977ರವರೆಗೂ ಹುಡುಗರಷ್ಟೇ ಈ ಕೆಲಸ ಮಾಡುತ್ತಿದ್ದರು. 1977ರ ನಂತರ ಹುಡುಗಿಯರೂ 'ಬಾಲ್‌ಗರ್ಲ್ಸ್‌' ಆಗಿ ಬಂದರು. ಈಗಿನ ಬಾಲ್‌ಬಾಯ್ಸ್ ಹುದ್ದೆಯಲ್ಲಿ ಇಬ್ಬರೂ ಇರುತ್ತಾರೆ.
ಆಯ್ಕೆ ಹೇಗೆ?
ಸ್ಥಳೀಯ ಮಟ್ಟದಲ್ಲೇ ಇದಕ್ಕೆ ತರಬೇತಿ ಇದೆ. ಯೋಗ್ಯ ಮಕ್ಕಳನ್ನಷ್ಟೇ ಬಾಲ್‌ಬಾಯ್ಸ್ ಆಗಿ ನೇಮಿಸಲಾಗುತ್ತದೆ. ಆದರೆ, ಗ್ರ್ಯಾನ್‌ಸ್ಲ್ಯಾಮ್‌ಗಳ ಬಾಲ್‌ಬಾಯ್ಸ್‌ಗೆ ಟೆನಿಸ್ ನಿಯಮಗಳ ಬಗ್ಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ನಂತರ ದೈಹಿಕ ಪರೀಕ್ಷೆ. ಇವು ಕಡ್ಡಾಯ ಪಾಸಾದರಷ್ಟೇ, ಚೆಂಡು ಹೆಕ್ಕಲು ಅವಕಾಶ.
ಪಗಾರ ಎಷ್ಟು?
ಬೆಂಗಳೂರಿನಲ್ಲಿ ನಡೆಯುವ ಟೆನಿಸ್ ಪಂದ್ಯಗಳಲ್ಲೂ ಬಾಲ್‌ಬಾಯ್ಸ್‌ಗೆ ಒಳ್ಳೆಯ ಡಿಮ್ಯಾಂಡ್ ಇದೆ. ಪ್ರತಿ ಪಂದ್ಯಕ್ಕೆ ರು. 400 ಸಂಭಾವನೆ ಸಿಗುತ್ತದೆ. ಪ್ರಾಯೋಜಕರು ಬಲಿಷ್ಠರಾಗಿದ್ದರೆ ಸಂಭಾವನೆ ಇನ್ನೂ ಅಧಿಕ. ಪ್ರತಿಷ್ಠಿತ ವಿಂಬಲ್ಡನ್‌ನಲ್ಲಂತೂ 13 ದಿನಕ್ಕೆ ಅಂದಾಜು ರು. 8000ದಿಂದ 10,000ವರೆಗೂ ಸಂಭಾವನೆ ಸಿಗುತ್ತದೆ. ಇನ್ನು ಚಿನ್ನಸ್ವಾಮಿಯ ಸ್ಟೇಡಿಯಮ್ಮಿನ ಬಾಲ್‌ಬಾಯ್ಸ್‌ಗೆ ಟಿಶರ್ಟ್, ಟೀ- ತಿಂಡಿ ಅಷ್ಟೇ. ಸಂಭಾವನೆ ಇರುವುದಿಲ್ಲ.


-    ಮಲ್ಲಿಕಾರ್ಜುನ ಕರಿಯಪ್ಪನವರ
malluk3@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.