

ಬಹುತೇಕ ಮಂದಿ ತಮ್ಮ ಜೀವನದ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ತಾವಾಯಿತು, ತಮ್ಮ ಹೆಂಡತಿ, ಮಕ್ಕಳಾಯಿತು. ಒಂದು ರೀತಿಯಲ್ಲಿ ಅವರದು ಅಪಾರ್ಟ್ಮೆಂಟ್ ಜೀವನ. ತಮ್ಮ ಪಕ್ಕದ ಅಪಾರ್ಟ್ಮೆಂಟ್ನಲ್ಲಿ ಯಾರಿರುತ್ತಾರೆ, ಅವರು ಯಾರು, ಏನು ಮಾಡ್ತಾರೆ. ಹೀಗೆ ಯಾವ ಸಂಗತಿಗಳೂ ಗೊತ್ತಿರುವುದಿಲ್ಲ.
ಯಾಕೆಂದರೆ ನಮಗೆ ಅವರ ಬಗ್ಗೆ ತಿಳಿದುಕೊಳ್ಳಲು ಇಷ್ಟವಿಲ್ಲ ಎಂಬುದಕ್ಕಿಂತ ನಮ್ಮ ಪ್ರಪಂಚದಲ್ಲಿಯೇ ಮುಳುಗಿರುತ್ತೇವೆ. ನಮ್ಮ ಸುತ್ತ ಗೋಡೆ ಕಟ್ಟಿಕೊಳ್ಳುತ್ತೇವೆ. ಹೀಗಾಗಿ ನಮಗೆ ಬೇರೆಯವರ ಜೀವನದಲ್ಲಿ ನೆಲೆಸಲು ಸಾಧ್ಯವಾಗುವುದೇ ಇಲ್ಲ. ಅವರೂ ಸಹ ನಮ್ಮನ್ನು ದೂರವೇ ಇಟ್ಟಿರುತ್ತಾರೆ.
ಬೇರೆಯವರ ಜೀವನದಲ್ಲಿ ನೆಲೆಸುವುದು ಅಂದ್ರೆ ಏನು? ಬೇರೆಯವರಿಗೆ ಸಹಾಯ ಮಾಡುವುದು, ಪ್ರಭಾವ ಬೀರುವಂಥದ್ದು. ಕಷ್ಟ-ಸುಖ ಹಂಚಿಕೊಳ್ಳುವಂಥದ್ದು. ಅವರೂ ಉತ್ತಮ ಬದುಕು ಸಾಗಿಸಲು ನೆರವಾಗುವಂಥದ್ದು. ಉತ್ತಮ ಜೀವನ ಮಾರ್ಗ ಹೇಳುವಂಥದ್ದು. ಅವರ ವ್ಯಕ್ತಿತ್ವ ಸುಧಾರಣೆಗೆ ಸಹಕರಿಸುವಂಥದ್ದು. ಅಂದರೆ ಬೇರೆಯವರ ಜೀವನದಲ್ಲೂ ನಿಮ್ಮ ಹೆಜ್ಜೆ ಗುರುತುಗಳು ಇರುವಂತಾಗಬೇಕು. ಬೆಳೆಯುವುದೆಂದರೆ ನಾವೊಬ್ಬರೇ ಬೆಳೆಯುವುದಲ್ಲ. ಮುಂದುವರಿಯುವುದೆಂದರೆ ನಾವೊಬ್ಬರೇ ಮುಂದುವರಿಯುವುದಲ್ಲ.
ನಮ್ಮೊಂದಿಗೆ ಇರುವವರನ್ನು ನಮ್ಮ ಸ್ನೇಹಿತರು ಹಾಗೂ ನಮ್ಮ ನಿಕಟ ಸಂಪರ್ಕದಲ್ಲಿ ಇರುವವರನ್ನು ಸಹ ಮುಂದೆ ತರಲು ಸಹಾಯಕವಾಗಬೇಕು. ಸುತ್ತಮುತ್ತ ಇರುವವರು ಬಡತನದಲ್ಲಿ ಇದ್ದರೆ, ನೆಂಟರು ಹಾಗೂ ಸ್ನೇಹಿತರು ಪಡಬಾರದ ಕಷ್ಟ ಅನುಭವಿಸುತ್ತಿದ್ದರೆ ನೀವು ಸಮಾಧಾನ, ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಬೇರೆಯವರು ನಿಮ್ಮಿಂದಾಗಿ ಉತ್ತಮ ಸ್ಥಿತಿಗೆ ಬಂದರೆ ಅದರಿಂದ ಸಿಗುವ ಸಂತಸ, ಸಂತೃಪ್ತಿಗೆ ಪಾರವೇ ಇರುವುದಿಲ್ಲ. ಅನುಭವಿಗಳು ಹೇಳುವುದುಂಟು-ಈಛ್ಠಢಜ ಣ್ಟ್ಡ್ಠ ಟಿಛಟಜ ್ಟಟಿ ಜಛ್ಠಡಿಡ ಛಟಿಜ ಟ್ಟಿಡಿ ್ಟಟಿ ಟಛ್ಠಛಿಟಜ. ಬೇರೆಯವರ ಹೃದಯದಲ್ಲಿ ನಿಮ್ಮ ಹೆಸರನ್ನು ಕೆತ್ತಬೇಕೇ ಹೊರತು ಅಮೃತಶಿಲೆಯ ಮೇಲಲ್ಲ. ಬೇರೆಯವರ ಸಾಮರ್ಥ್ಯವೇನೆಂಬುದನ್ನು ಗುರುತಿಸಿ, ಅವರ ಜೀವನ ಮಟ್ಟವನ್ನು ಸುಧಾರಿಸಲು ಸಹಕರಿಸಿದರೆ ಅವರು ಜೀವನ ಪರ್ಯಂತ ನಿಮಗೆ ಋಣಿಗಳಾಗಿರುತ್ತಾರೆ. ನೀವು ಕಷ್ಟದಲ್ಲಿದ್ದಾಗ ಸಹಕರಿಸುತ್ತಾರೆ. ಇದರಿಂದ ಒಂದು ಸಮುದಾಯ ಉತ್ತಮವಾಗುವ ಅವಕಾಶಕ್ಕೆ ತೆರೆದುಕೊಳ್ಳುತ್ತದೆ. ಬೇರೆಯವರ ಜೀವನದಲ್ಲಿ ನೆಲೆಸುವುದು ಅಂದ್ರೆ ನಮ್ಮ ಜೀವನವನ್ನು ಇನ್ನಷ್ಟು ಸುಧಾರಿಸಿಕೊಳ್ಳುವುದು ಎಂದೂ ಅರ್ಥ. ಹೀಗಾದಾಗ ನಾವು ಸ್ವಾರ್ಥಿಗಳೆಂದು ಕರೆಯಿಸಿಕೊಳ್ಳುವುದಿಲ್ಲ.
ಲೇ: ವಿಶ್ವೇಶ್ವರ ಭಟ್
ಪ್ರ: ಅಂಕಿತ ಪುಸ್ತಕ, ಬೆಂಗಳೂರು. ಪುಟಗಳು 104, ಬೆಲೆ 80