ಕ್ಯಾಮೆರಾ ಕಣ್ಣಂಚಿನ ಹನಿ

ಕ್ಯಾಮೆರಾ ಕಣ್ಣಂಚಿನ ಹನಿ
Updated on: 

ಕ್ಯಾಮೆರಾಮನ್ನುಗಳ ನಾಲಗೆಯ ತುದಿಯಲ್ಲಿರುವ ಪದ 'ಸ್ಮೈಲ್ ಪ್ಲೀಸ್‌'. ಆದರೆ, ನನ್ನ ಕ್ಯಾಮೆರಾಕ್ಕೆ ಈ ಆಜ್ಞೆಯನ್ನು ಕೇಳಿದ ತಕ್ಷಣಕ್ಕೆ ನನ್ನ ಮೇಲೇನೋ ಮುನಿಸು ಬರುತ್ತದೆ. ಹೌದು, ನನ್ನ ಕ್ಯಾಮೆರಾದ ಸ್ವಭಾವ ನನಗೆ ಚೆನ್ನಾಗಿ ಗೊತ್ತಿದೆ. ಅದು ನನ್ನೊಂದಿಗೆ ಸುಮಾರು ಮೂವತ್ತೈದು ವರ್ಷಗಳಿಂದ ನನ್ನ ಕುತ್ತಿಗೆಗೆ ಜೋತು ಬಿದ್ದು ಸಂಸಾರ ನಡೆಸುತ್ತಿದೆ. ಅದೆಂದೂ ನನ್ನ ಪಾಲಿಗೆ ನೇಣು ಕುಣಿಕೆಯಾಗಲಿಲ್ಲ.
ಅವತ್ತು ನಾನು ಮೈಸೂರಿನ ಅರಮನೆಯಲ್ಲಿದ್ದೆ. ರಾಜನಾಗಿ, ಮಂತ್ರಿಯಾಗಿ, ಅಷ್ಟೇ ಏಕೆ ಜವಾನನಾಗಿಯೂ ಅಲ್ಲ. ಸುಮ್ಮನೆ ಒಂದು ರೌಂಡು ಹೋಗಿದ್ದೆ ಅಷ್ಟೇ. ಬಹುಶಃ ಅಂದು ಸಂಜೆ ಸುಮಾರು ಫೋರ್‌ಟ್ವೆಂಟಿಯ ಸಮಯ. ಅಲ್ಲೊಂದು ಕಾಯ ಕಾಣಿಸಿತು. ವೈಟ್ ಆ್ಯಂಡ್ ವೈಟ್ ಕಾಂಬಿನೇಶನ್ನು; ಬಿಳೀ ಕಚ್ಚೆ ಪಂಚೆ, ಬಿಳೀ ಷರ್ಟು, ತಲೆಗೆ ಹಳದಿ ರುಮಾಲು; ಪಕ್ಕಾ ಹುಬ್ಬಳ್ಳಿ ಹುಲಿ. ಥೇಟ್ ಮಹಾರಾಜರಂತೆ ಕೂತು ಫೋಟೋ ತೆಗಿಸಿಕೊಳ್ಳುತ್ತಿದ್ದಾರೆ. ಈ ನಡುವೆ ನಾನವರ ಬಳಿ ಹೋದೆ.
ಆ ಹುಲಿ ಒಂದು ಬದಿಯ ಪಂಚೆಯನ್ನು ಬೆರಳಿಂದ ಎತ್ತಿ, ಕ್ಯಾಮೆರಾದೆದುರು ಕ್ರಾಸ್ ಆಗಿ ನಿಂತಿತು. 'ಹೊಡೀರಿ ಈಗ ಕಣ್ಣ ಒಮ್ಮೆ' ಅಂತಂದಿದ್ದಲ್ಲದೆ, 'ಲೇ ಮಲ್ಲಪ್ಪ, ಅಂವನ ಕೈಯ್ಯಾಗ ಕೊಡ್ಲೇ ಕ್ಯಾಮೆರಾನ' ಎಂದೂ ಗರ್ಜಿಸಿತು. ನನಗೋ ಕ್ಯಾಮೆರಾ, ಮೊದಲ ಪರಿಚಯ. ಆ ಮಲ್ಲಪ್ಪ ಬಟನ್ನುಗಳ ಪರಿಚಯಮಾಡಿಕೊಟ್ಟ. ನನ್ನ ಅರ್ಧ ಚೊಣ್ಣದ ತುಂಡು ಭಾಗದಿಂದ ಕ್ಯಾಮೆರಾದ ಕಣ್ಣನ್ನ ಸ್ವಚ್ಛಮಾಡಿದೆ. 'ನೋಡಲೇ ಕಲ್ಕೋ ಅಂವನ ನೋಡಿ' ಎಂದಿತು ಹುಬ್ಬಳ್ಳಿ ಹುಲಿ. ಮೂಗಿನಲ್ಲಿದ್ದ ಅಮೃತ ಒರೆಸಿಕೊಳ್ಳಲು ಬರುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಕ್ಯಾಮೆರಾದ ಮೂಗು ಮೂತಿಯನ್ನು ಒರೆಸಿದ್ದೆ. ಅಂತೂ ಕ್ಲಿಕ್ ಮಾಡಿದೆ. ಆ ಫೋಟೋವನ್ನು ತೊಳೆಸಲು ಆ ಹುಲಿ, ಮಲ್ಲಪ್ಪನನ್ನು ಕಳುಹಿಸಿಕೊಟ್ಟಿತು. ಇತ್ತ ನನ್ನೊಂದಿಗೆ ಮಾತಿಗಿಳಿಯಿತು; 'ಏನ್‌ಪಾ ತಮ್ಮಾ, ನಿನ್ ಹೆಸರ?' ಎಂದರು. ನಾನು 'ಪ್ರವೀಣ' ಎಂದಿದ್ದೆ. 'ಹೌದ್ ಬಿಡ್ಲೆ, ನೀ ಪ್ರವೀಣನ ಇದ್ದೀ ಮತ್‌ಅ' ಅಂದರು. 'ಇಲ್ಲೇನ್ ಮಾಡ್ತೀ?' ಕೇಳಿದರು. 'ನಾನು ಅನಾಥ, ನನಗ್ಯಾರೂ ಇಲ್ಲ. ಇಲ್ಲಿಯೇ ಭಿಕ್ಷೆ ಬೇಡಿಕೊಂಡಿದ್ದೇನೆ' ಎಂದೆ. ಬಾಯಲ್ಲಿದ್ದ ಗುಟುಕಾದ ಕೆಂಪು ರಸವನ್ನು ಚಿಲ್ಲನೆ ಉಗುಳಿ, 'ಹೌದೇನ್?' ಎಂದರು.
ಅಷ್ಟರಲ್ಲೇ ನಾನು ಕ್ಲಿಕ್ ಮಾಡಿದ ಆ ಫೋಟೋವನ್ನು ಹಿಡಿದು ತಂದ ಮಲ್ಲಪ್ಪ. 'ನೋಡೋ ಮಂಗ್ಯ ಏನ್ ಚೊಲೋ ತೆಗೆದಾನೆ ಫೋಟೋ' ಎಂದರು ಗೌಡ್ರು, ಆ ಮಲ್ಲಪ್ಪನಿಗೆ ಚಿತ್ರ ತೋರಿಸಿ. ಅಲ್ಲದೆ ನನ್ನ ಬೆನ್ನು ತಟ್ಟಿದರು. 'ಬೇಷ್‌ಲೆ  ತಮ್ಮಾ, ಭಾಳ್ ಚೊಲೋ ತಗ್ದಿ ಮತ್‌' ಎಂದರು. ಮಾತಾಡ್ತಾ, ಮಾತಾಡ್ತ ಇನ್ನೇನು ಗೌಡ್ರು ಹೊರಟೇ ಬಿಟ್ಟರು. ಸುಮ್ಮನೆ ಹೋಗಿದ್ದರೆ ನಿಮಗಿಂದು ನನ್ನ ಕಥೆಯನ್ನು ಹೇಳುತ್ತಿರಲಿಲ್ಲ, ಅದಕ್ಕಿಂತ ಮಿಗಿಲಾಗಿ ಈ ಕ್ಯಾಮೆರಾ ನನ್ನಲ್ಲಿ ಜೋತಾಡುತ್ತಲೂ ಇರಲಿಲ್ಲ.
ಸ್ವಲ್ಪ ದೂರ ಹೊರಟಿದ್ದ ಗೌಡ್ರು 'ಲೇ ತಮ್ಮಾ, ಪ್ರವೀಣ' ಎಂದೆನ್ನುತ್ತಾ ಮರಳಿ ಬಂದವರೆ ನನ್ನ ಕೊರಳಿಗೆ ವಿಜಯಶಾಲಿಯಾದವನಿಗೆ ಮಾಲೆ ಹಾಕಿದಂತೆ ತಮ್ಮ ಕ್ಯಾಮೆರಾ ಹಾಕಿದರು. 'ನೋಡಪ್ಪಾ ಪ್ರವೀಣ, ಈ ಕ್ಯಾಮೆರಾನ ನೀನೇ ಇಟ್ಕೋ. ನೀನು ಅನಾಥ ಅದೀ. ಆದ್ರ ನೀ ಫೋಟೋ ಚೊಲೋ ತೆಗೀತಿ. ಅದೂ ಅಲ್ದ, ಒಂದು ಚೊಲೋ ವಸ್ತು ಚೊಲೋ ಮನಷ್ಯನ ಕೈಯಾಗ ಇರಬೇಕ್. ಭಿಕ್ಷೆ ಬೇಡೋದ್ ಬಿಟ್ಟು ಫೋಟೋಗ್ರಾಫರ್ ಆಗಲೇ. ನಿನ್ ಕಾಲ್‌ಮೇಲೆ ನೀ ನಿಂತ್ಕೋ. ನೀ ಪ್ರವೀಣ ಅದೀಲೇ ಅಂದ ಮ್ಯಾಲ್ ನೀ ಏನಾದ್ರೂ ಸಾಧಿಸ್ಬೇಕ್‌' ಎಂದು ಹರಸಿ ಹೊರಟೇಬಿಟ್ಟರು. ನನಗೆ ಆ ಖುಷೀಲಿ ಅವರ ಹೆಸರು, ಅಡ್ರೆಸ್ಸು ತಗೋಬೇಕು ಅಂತನ್ನಿಸಲೇ ಇಲ್ಲ. ಇದಕ್ಕಿಂತ ಮಿಗಿಲಾಗಿ ನನ್ನ ಆ ವಯಸ್ಸು ಇಷ್ಟು ಗಾಢವಾದ ಚಿಂತೆಯನ್ನು ಮಾಡುವ ಹಂತದಲ್ಲೇ ಇರಲಿಲ್ಲ. ಆಗ ನಾನಿನ್ನೂ ಬಾಲಕ. ಆದರೆ, ನನ್ನ ಕ್ಯಾಮೆರಾದ ಕಣ್ಣು ಮಾಡಿದ್ದೂ ಫಿಫ್ಟಿ- ಫಿಫ್ಟಿಯ ಕೆಲಸವನ್ನು! ಸ್ವಲ್ಪ ದೂರದಲ್ಲಿ ಹೊರಟ ಗೌಡ್ರ ಹಾಗೂ ಮಲ್ಲಪ್ಪನನ್ನ ಹಿಂಬದಿಯಿಂದ ಕ್ಲಿಕ್ ಮಾಡಿದ್ದೆ. ಈಗ ನನ್ನ ಬಳಿ ಇರುವುದು ಅದೊಂದೇ. ಅದೂ ಹಿಂಬದಿಯ ಚಿತ್ರ!
ಈಗ ನಾನೊಬ್ಬ ನುರಿತ ಫೋಟೋಗ್ರಾಫರ್ ಆಗಿ ಬೆಳೆದಿದ್ದೇನೆ. 'ನೀನ್ ಪ್ರವೀಣನ ಇದೀ ಬಿಡ್ಲೇ ಮತ್‌ಅ' ಎಂಬ ಗೌಡ್ರ ಮಾತು ನೆನಪಾಗುತ್ತಿದೆ. ಪ್ರತಿ ಶುಭ ಸಮಾರಂಭದಲ್ಲಿ 'ಸ್ಮೈಲ್ ಪ್ಲೀಸ್‌' ಎಂದು ಫೋಟೋ ಕ್ಲಿಕ್ಕಿಸುತ್ತಿದ್ದ ನನಗೆ, ಅದೊಂದು ದಿನ ಶವದ ಫೋಟೋ ತಗೆಯಲು ಹೋಗಿದ್ದೆ. ಬಾಯ್ತಪ್ಪಿ ಸ್ಮೈಲ್ ಪ್ಲೀಸ್ ಎನ್ನುತ್ತಿದ್ದಂತೆ ನನ್ನ ಕ್ಯಾಮೆರಾ ಅಸ್ತವ್ಯಸ್ಥಗೊಂಡಿತು. ಅಲ್ಲಿರುವವರನ್ನು ಕ್ಷಮೆ ಕೇಳಿ, ಅನಾಹುತದಿಂದ ಪಾರಾದೆ. ಮತ್ತೊಂದು ಶುಭ ಸಮಾರಂಭದಲ್ಲಿ ಸ್ಮೈಲ್ ಪ್ಲೀಸ್ ಎನ್ನುತ್ತಿದ್ದಂತೆ ಮತ್ತೆ ಕೆಟ್ಟು ಹೋಯಿತು. ನನ್ನ ಕ್ಯಾಮೆರಾದ ಕಿವಿಗೆ ಈ ಪದ ಆಗಿಬರುವುದಿಲ್ಲವೇನೋ.  ಆಗ ಅರ್ಥಮಾಡಿಕೊಂಡೆ 'ನಗುವೆಂಬುದು ಕೇವಲ ಕ್ಷಣಿಕ. ಕೇವಲ ಫೋಟೋದಲ್ಲಿ ಮಾತ್ರ ಇರುವಂಥದ್ದಲ್ಲ. ಅದು ಜೀವನಪೂರ್ತಿ ಇರುವಂಥದ್ದು, ಇರಬೇಕಾದಂಥದ್ದು' ಎಂದು ಈ ನಗುವಿನ ಪಾಠವನ್ನು ಕಲಿಸಿಕೊಟ್ಟದ್ದು ಈ ಕ್ಯಾಮೆರಾ. ಅಂದಿನಿಂದ ಸ್ಮೈಲ್ ಪ್ಲೀಸ್ ಎಂದು ಹೇಳುವುದನ್ನೇ ಕೈಬಿಟ್ಟಿದ್ದೇನೆ. ಮತ್ತೆ ಇಲ್ಲಿಯತನಕ ನನ್ನ ಕ್ಯಾಮೆರಾ ಕೈಕೊಟ್ಟಿಲ್ಲ. ಅಪ್ಪಿ-ತಪ್ಪಿಯೂ ನಾನು 'ಸ್ಮೈಲ್ ಪ್ಲೀಸ್‌' ಎಂದು ಹೇಳುವುದಿಲ್ಲ.
ಆಕಸ್ಮಿಕವಾಗಿ ಸಿಕ್ಕ ಗೌಡ್ರು ನನ್ನ ಬದುಕಿಗೆ ಗುರುವಾದರು. ಗೌಡರು ನನ್ನಲ್ಲೀಗ ಇರುವುದು ಕೇವಲ ನೆಗೆಟಿವ್ ನೆನಪಾಗಿ ಮಾತ್ರ. ಅದು ನನ್ನ ಮನಸ್ಸಿನಲ್ಲಿ, ಕಣ್ಣಲ್ಲಿ ಕಲರ್ ಪ್ರಿಂಟ್ ಕೊಟ್ಟರೂ ಅದನ್ನು ನಾನು ಮಾತ್ರ ನೋಡಬಲ್ಲೆ. ಮತ್ತಾರಿಂದಲೂ ಅದು ಸಾಧ್ಯವಿಲ್ಲ. ಅವತ್ತು ಗೌಡ್ರು ಸಿಗದಿದ್ದರೆ ನನಗೆ ಕ್ಯಾಮೆರಾನೂ ಸಿಗುತ್ತಿರಲಿಲ್ಲ, ನಿಮಗೀ ಕಥೆನೂ ಸಿಗುತ್ತಿರಲಿಲ್ಲ. ಮತ್ತದೆ ಭಿಕ್ಷೆ ಬೇಡಿಕೊಂಡು ಬದುಕಬೇಕಿತ್ತೇನೋ? ಆ ಭಿಕ್ಷೆ ಕ್ಯಾಮೆರಾ ನನ್ನನ್ನು ಒಂದು ಶ್ರೇಷ್ಠ ಹಂತಕ್ಕೆ ಕರೆತಂದಿದೆ. ಈಗ ಎಲ್ಲ ಫೋಟೋವನ್ನೂ ಸರಾಗವಾಗಿ ತೆಗೆಯಬಲ್ಲ ಪ್ರವೀಣ ನಾನು. ಆದರೆ, ಗೌಡರ ಮುಖವನ್ನೇ ಹಿಡಿದಿಡಲು ಸಾಧ್ಯವಾಗುತ್ತಿಲ್ಲ. ಎಲ್ಲ ಶ್ರೇಷ್ಠ ಗುರುಗಳೂ ಹಾಗೆಯೇ... ಬೇಕೆಂದಾಗ ಸುಮ್ಮನೆ ಸಿಕ್ಕಿಬಿಡುವುದಿಲ್ಲ. ಅದಕ್ಕೆಂದೇ ಈಗಲೂ ಒಂದು ಹಾಡನ್ನು ನಾನು ಗುನುಗುತ್ತಿರುತ್ತೇನೆ... 'ಇನ್ನು ಯಾಕ ಬರಲಿಲ್ಲವಾ...'!

= ರಾಘವಾಂಕುರ
raghavankura@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com