

ಸಾಂಬಾರು ಬಟ್ಟಲಿನಲ್ಲಿ
ಒಣಮೆಣಸು ಮುಗಿದುಹೋಗಿದೆ
ಬರೀ ಒಣತೊಟ್ಟುಗಳಿವೆ-
ಜೀರಿಗೆ- ಕೊತ್ತುಂಬರಿಗೆ
ಮುಗ್ಗುಲು ಹಿಡಿದಿದೆ
ಸಾಸಿವೆ ಅಲ್ಲಿ- ಇಲ್ಲಿ ಹಾರಿಹೋಗಿದೆ
ಇಂಗು ಘಮ್ಮೆನ್ನುತ್ತಿಲ್ಲ...
ಎಳ್ಳಿಗೆ ಹುಳು ಹಿಡಿದಿದೆ
ಅರಿಶಿನ ಪುಡಿಗೆ ರಂಗೇ ಇಲ್ಲ
ಹೆಸರು ತೊಗರಿ ಮುಂಚಿನಂತಿಲ್ಲ
ಕಡ್ಲೆ, ಉದ್ದು ಇಟ್ಟಲ್ಲೇ ಹಿಟ್ಟಾಗಿದೆ
ಮೆಂತ್ಯವೊಂದೇ ಕಹಿ ಬೀರುತ್ತಿದೆ
ಲವಂಗ- ಚಕ್ಕೆಗೆ ಮೊದಲಿನ ಸೊಗಡಿಲ್ಲ
ಕೊತಕೊತನೆ ಕುದಿ ಬಂದರೂ
ಚಹಾಪುಡಿ ಕಣ್ಣು ಬಿಡುತ್ತಿಲ್ಲ.
ಉಪ್ಪು ನೀರಾಗಿದೆ
ಸಕ್ಕರೆ ಕಲ್ಲಾಗಿದೆ
ಕೇಸರಿ ಬಣ್ಣ ಕಳೆದುಕೊಳ್ಳುತ್ತಿದೆ
ಎಲ್ಲಾ ಇದೆ ಏನೂ ಇಲ್ಲ
ಸಾಂಬಾರ ಬಟ್ಟಲ ಬದುಕು ಅಸ್ತವ್ಯಸ್ತ
ನಾನಿದ್ದೇನೆ- ನನ್ನತನವಿಲ್ಲ
ನಗಬೇಕೆನಿಸಿದರೂ
ನಾನೀಗ ನಗುತ್ತಿಲ್ಲ!ಟಿ
- ಸಿಂಧುಚಂದ್ರ