

ಪರೀಕ್ಷೆ ಬಳಿ ಬಂತು. ಭಯವೂ ಬಳಿಗೆ ಬಂದಿದೆ. ವಿದ್ಯಾರ್ಥಿಗಳ ದೃಷ್ಟಿ ಯಾವುದರ ಮೇಲೆ? 'ಅಂಕ'ಗಳನ್ನು ನಮ್ಮೆಡೆಗೆ ಅಪಹರಿಸುವುದು ಹೇಗೆ? 'ನೀವು ಖಂಡಿತಾ ದಡ್ಡರಲ್ಲ, ನಿಮ್ಮಲ್ಲಿ ಮರೆಗುಳಿತನ ಇಲ್ಲ. ನೀವು ಡಿಸ್ಟಿಂಕ್ಷನ್ ಬಂದೇ ಬರುತ್ತೀರಿ' ಎಂಬ 'ಖುಷಿ'ಯ ಕಾಳಜಿಯೊಂದಿಗೆ ಸುಲಭದ ಎಕ್ಸಾಮಿಗೆ ಒಂದಿಷ್ಟು ಹಾದಿಗಳನ್ನು ತೋರಿಸುತ್ತಿದ್ದೇವೆ...
ಟ್ರಾಫಿಕ್ ಜಂಕ್ಷನ್‌ನ 3 ಸಿಗ್ನಲ್ ದೀಪಗಳಲ್ಲಿ ಹಸಿರು ಬಣ್ಣದ ದೀಪ ಮೇಲಿರುತ್ತದೋ, ಮಧ್ಯದಲ್ಲಿರುತ್ತದೋ, ಕೆಳಗಿರುತ್ತದೋ ಹೇಳಿ? ನೀವು ನಿತ್ಯ ನೂರು ಬಾರಿ ನೋಡಿರುತ್ತೀರಲ್ಲವೆ!?
ಹಾಗೆ ಇನ್ನೊಂದು ಪ್ರಶ್ನೆ- ಈಗ ನೀವು ಹಾಕಿಕೊಂಡಿರುವ ಅಂಗಿಗೆ ಎಷ್ಟು ಗುಂಡಿಗಳಿವೆ? ಅತ್ತ ನೋಡಬೇಡಿ. ಶರ್ಟ್ ಅಲ್ಲದಿದ್ದರೆ ಜಾಕೆಟ್‌ಗೆ ಎಷ್ಟು ಹುಕ್ಸ್‌ಗಳಿವೆ? ಹೇಳಿ.
ಮತ್ತೊಂದು ಪ್ರಶ್ನೆ. ಈಗ ನೀವಿರುವ ಕೊಠಡಿಯಲ್ಲಿ ಗಡಿಯಾರ, ಇಲ್ಲವೆ ನಿಮ್ಮ ಕೈಯಲ್ಲಿರುವ ವಾಚ್‌ಬಕ್ಕು 11ನೇ ಸಂಖ್ಯೆಯ ಸ್ಥಾನದಲ್ಲಿ ಯಾವ ಗುರುತಿದೆ? ಅಂದರೆ, 11 ಎಂಬ ಸಂಖ್ಯೆ ಇದೆಯೋ, ್ಗಐ ಎಂಬ ರೋಮನ್ ಸಂಖ್ಯೆ ಇದೆಯೋ?... ಅತ್ತ ನೋಡಬೇಡಿ, ಉತ್ತರ ಹೇಳಿ.
ಮೇಲಿನ ಮೂರು ಪ್ರಶ್ನೆಗಳಿಗೆ ನಿಮ್ಮ ಉತ್ತರ ತಪ್ಪಾದರೆ ನೀವು ಗ್ರೇಟ್! ಸರಿಯಾದರೆ ಮಾತ್ರ ನಿಮಗೆ ಬೇರೆ ಕೆಲಸವೇನೂ ಇಲ್ಲವೆಂದಾಯ್ತು. ಅವೆಲ್ಲವನ್ನೂ ನೋಡಿಕೊಳ್ಳುತ್ತ ಸಮಯ ವ್ಯರ್ಥ ಮಾಡುತ್ತಿದ್ದೀರ ಎಂದಾಯ್ತು. ಅಂಥ ವಿಷಯದಲ್ಲಿ ಮರೆವು ಬಂದರೂ ತಪ್ಪಿಲ್ಲ. ಏಕೆಂದರೆ, ಅವು ಅಂಥ ಮುಖ್ಯವಾದವುಗಳೇನಲ್ಲ. ಆದರೆ, ಕೆಲವರು ಅಂಥ ವಿಷಯಗಳನ್ನು ಮರೆತುಹೋದಾಗ ಬಹಳ ಪೇಚಾಡುತ್ತಿರುತ್ತಾರೆ. ಅದರ ಪ್ರಭಾವ ಇತರೆ ಕೆಲಸಗಳ ಮೇಲೆ, ಓದಿನ ಮೇಲೆ ಬೀಳುತ್ತಿರುತ್ತದೆ. ಉದಾಹರಣೆಗೆ ಕಣ್ಣಿನ ಕನ್ನಡಕ ತೆಗೆದಾಗ, ಅದು ದಿನ ಎಲ್ಲಿಡುತ್ತೀರೋ ಅದೇ ಜಾಗದಲ್ಲಿ ಇಡಬೇಕೆ. ಹಾಗಲ್ಲದೆ ಮತ್ತೊಂದು ಜಾಗದಲ್ಲಿಟ್ಟಾಗ ಅದರ ಅಗತ್ಯ ಬಿದ್ದಾಗ ಎಲ್ಲೆಡೆ ಹುಡುಕುತ್ತೇವೆ. ಅದು ಸಿಗುವುದಿಲ್ಲ. 'ಛೇ... ಛೇ... ಇತ್ತೀಚೆಗೆ ಮರೆವು ಹೆಚ್ಚಾಗ್ತಿದೆ' ಎಂದು ಗೊಣಗಾಡುತ್ತೇವೆ, ಸಿಡಿಮಿಡಿಗೊಳ್ಳುತ್ತೇವೆ. ಈ ಸಿಟ್ಟು ಮೆದುಳನ್ನು ಸೇರಿದರೆ ಅಪಾಯ ಕಟ್ಟಿಟ್ಟ ಬುತ್ತಿ!
ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳು, 'ಜ್ಞಾಪಕಶಕ್ತಿ ಇಲ್ಲ' ಎಂದು ಕೊರಗುತ್ತಾರೆ. ಇದೂ ತುಂಬಾ ಡೇಂಜರ್. ಎಲ್ಲರಿಗೂ ವಿಶಿಷ್ಟವಾದ ಜ್ಞಾಪಕಶಕ್ತಿ ಇದೆ. ನನ್ನದೊಂದು ಸಲಹೆ- ಚಿಕ್ಕಂದಿನಲ್ಲಿ ನನ್ನ ಮೇಲೆ ನಾನೇ ಪ್ರಯೋಗಿಸಿಕೊಂಡೆ. ನಿಮ್ಮ ಹತ್ತಿರ ಇರುವ ಪಾಕೆಟ್ ಮನಿ ಎಲ್ಲವನ್ನೂ ಒಬ್ಬ ಸ್ನೇಹಿತನಿಗೆ ಕೊಡಿ, ಅದು ನೀವು ಕೂಡಿಟ್ಟ ದುಡ್ಡು. ನಿಮಗೆ ತುಂಬಾ ಅಗತ್ಯ. ಆದರೂ ಸರಿಯೇ, ಆ ದುಡ್ಡೆಲ್ಲ ಒಬ್ಬ ಸ್ನೇಹಿತನ ಪರೀಕ್ಷೆಯ ಮೊದಲ ದಿನ ಕೊಟ್ಟು ಮರೆತುಬಿಡಲು ಪ್ರಯತ್ನಿಸಿ. ಆ ದುಡ್ಡಿಗೆ, ನಿಮಗೆ ಸಂಬಂಧ ಇಲ್ಲವೆಂದುಕೊಳ್ಳಿ. ಅದು ನಿಮ್ಮಿಂದ ಸಾಧ್ಯವಿಲ್ಲವೆಂದು ನನಗೆ ಗೊತ್ತು. ಆದರೆ ಮರೆಯಲು ಪ್ರಯತ್ನಿಸಿ. ಇನ್ನು ಪರೀಕ್ಷೆ ಬರೆಯುವಾಗ ಏನಾದರೂ ಮರೆತುಹೋಗಿದ್ದೇನೆ ಅನಿಸಿದಾಗ, ನಿಮ್ಮ ದುಡ್ಡಿನ ವಿಷಯ ಕೂಡ ಮರೆತು ಹೋದಿರಾ? ಇಲ್ಲವಾ? ಎಂಬುದನ್ನು ಪರೀಕ್ಷಿಸಿಕೊಳ್ಳಿ. ಖಂಡಿತವಾಗಿಯೂ ದುಡ್ಡು ಜ್ಞಾಪಕ ಇರುತ್ತದೆ. ಅಂದರೆ ನಿಮಗೆ ಮರೆಗುಳಿತನ ಇಲ್ಲ ಎಂಬ ಸತ್ಯವನ್ನು ನೀವು ಗುರುತಿಸುತ್ತೀರ. ಅದೇ ಕ್ಷಣದಲ್ಲಿ ಆಟೋಮೆಟಿಕ್ಕಾಗಿ ನೀವು ಮರೆತುಹೋದ ಅಂಶ (ಪಾಯಿಂಟ್) ಜ್ಞಾಪಕಕ್ಕೆ ಬರುತ್ತದೆ. ಇದೇನೋ ತಮಾಷೆಗೆ ಬರೆಯುತ್ತಿರುವುದಲ್ಲ. ಅಕ್ಷರಶಃ ಕೆಲಸ ಮಾಡುತ್ತದೆ. ಇಂದೇ ಪ್ರಯತ್ನಿಸಿ...
ಜ್ಞಾಪಕಶಕ್ತಿಗೆ ಸಲಹೆ
ಪರೀಕ್ಷೆಗಳು ಅಂದೊಡನೆ, ಇವು ಯಾಕೆ ನಮ್ಮ ಪ್ರಾಣ ತೆಗೆಯುವುದಕ್ಕಾ? ಅಂದುಕೊಳ್ಳುತ್ತಾರೆ ಬಹಳಷ್ಟು ವಿದ್ಯಾರ್ಥಿಗಳು. ಅದರೆ, ನಿಜಕ್ಕೂ ಇದೊಂದು ಹಬ್ಬವೇ. ಒಂದು ವರ್ಷ ಓದಿದ ವಿಷಯವನ್ನು ಒಂದು ವಾರ ಹಾಳೆಯ ಮೇಲೆ ಬರೆದರೆ ಪ್ರಮೋಷನ್ ಬಂದು, ಮೇಲ್ತರಗತಿಗೆ ಹೋಗಬಹುದು. ಹಾಗೇ ಮೇಲ್ಮೇಲಕ್ಕೆ ಬೆಳೆಯುತ್ತ ಅಂದುಕೊಂಡಿದ್ದನ್ನು ಸಾಧಿಸಲು ಈ ಪರೀಕ್ಷೆ ಒಂದು ಮೆಟ್ಟಿಲು ಮಾತ್ರವೆಂದು ಗ್ರಹಿಸಬೇಕು. ಮೇಲಂತಸ್ತಿಗೆ ತಲುಪಲು ಮೆಟ್ಟಿಲುಗಳನ್ನು ಹೇಗೆ ಹತ್ತಬೇಕೋ ಹಾಗೆಯೆ ಓದಿಗೂ ಅಷ್ಟೇ! ಮೆಟ್ಟಿಲುಗಳ ನಡುವೆ ನಿಂತವರಿಗೆ ಎಷ್ಟು ತೊಂದರೆಗಳೋ ಇದೂ ಅಷ್ಟೇ!
ದುರದೃಷ್ಟವಶಾತ್, ಇತ್ತೀಚೆಗೆ ಪರೀಕ್ಷೆಗಳೆಂದರೆ ಭಯ ಎಂಬ ಪ್ರಚಾರ ಹೆಚ್ಚಾಗಿದೆ. ಅದಕ್ಕೆ ಕಾರಣ ರ್ಯಾಂಕುಗಳು ಬಾರದೆ ಹೋದರೆ, ಮೇಲ್ತರಗತಿಯಲ್ಲಿ ಸೀಟು ಸಿಗುವುದಿಲ್ಲವೆಂದು, ಯಾವುದೇ ಕೋಟಾ ಇಲ್ಲದೆ ಹೋದರೆ ಲಕ್ಷಗಳನ್ನು ಸುರಿಯಬೇಕೆಂಬ ಭಯ ಹೆತ್ತವರಲ್ಲೂ ಹೆಚ್ಚಾಗಿದೆ. ಹೀಗಾಗಿ ಅವರು ಮಕ್ಕಳ ಮೇಲೆ ಒತ್ತಡ ಹೇರುತ್ತಲೇ ಇರುತ್ತಾರೆ. 'ನೀನು ಖಂಡಿತ ಪಾಸಾಗ್ತೀಯ' ಎಂದು ಹೇಳುವ ತಾತಂದಿರು, ಅಜ್ಜಿಯರು ಮನೆಗಳಲ್ಲಿಲ್ಲ. 'ನಿನಗೆ ರ್ಯಾಂಕ್ ಬರದೆ ಹೋದರೆ ನಮ್ಮ ಸಂಸ್ಥೆಯ ಮರ್ಯಾದೆ ಹೋಗುತ್ತೆ ಹುಷಾರು...' ಎಂದು ಎಚ್ಚರಿಸುವ ಗುರುಗಳು ಈಗಿದ್ದಾರೆ, ಎಚ್ಚರ!
ಪರೀಕ್ಷೆಯ ವೇಳೆ ಬಹಳ ಮನೆಗಳಲ್ಲಿರುವುದು ಯುದ್ಧದ ವಾತಾವರಣ. ಒಂದೆಡೆ ಪರೀಕ್ಷೆಗಳು, ಮತ್ತೊಂದೆಡೆ ಕ್ರಿಕೆಟ್, ಟೀವಿ ನೋಡಬೇಡವೆಂದು ಎಷ್ಟೇ ಹೇಳಿದರೂ ಮಕ್ಕಳು ಆಕಡೆ ಈ ಕಡೆ ಬಂದು ನೋಡುವುದು, ಇಲ್ಲವೇ ಫೋನಿನಲ್ಲಿ ಸ್ನೇಹಿತರೊಂದಿಗೆ ಮಾತನಾಡುತ್ತ ಸ್ಕೋರ್ ತಿಳಿದುಕೊಳ್ಳುವುದು ನಡೆಯುತ್ತದೆ. ತಾಯಿತಂದೆ ಗೂಢಾಚಾರರಂತೆ ಸುಳಿದಾಡುತ್ತ ಬ್ಯುಸಿಯಾಗಿದ್ದು ಮಕ್ಕಳಿಗೆ ಭಾವನಾತ್ಮಕ ಬೆಂಬಲ ನೀಡಲಾಗದೆ ಒದ್ದಾಡುತ್ತಾರೆ. ಇನ್ನು ಕೆಲ ತಾಯಿತಂದೆಯರು 'ಹುಷಾರು... ಇದು ಮಾಮೂಲಿ ಪರೀಕ್ಷೆ ಅಲ್ಲ, ಪಬ್ಲಿಕ್ ಪರೀಕ್ಷೆ. ಬೇಜವಾಬ್ದಾರಿಯಿಂದ ಏನೋ ಬರೆದರೆ ಮುಗಿದುಹೋಗ್ತೀಯ' ಎಂದು ನಕಾರಾತ್ಮಕ ಸಲಹೆಗಳನ್ನು ಕೊಡುತ್ತಾರೆ. ಮತ್ತು ಕೆಲವರು ತಾಯಂದಿರು, 'ಎದುರುಮನೆ ಹುಡ್ಗೀನ ನೋಡಾದ್ರೂ ಬುದ್ಧಿ ಕಲಿತುಕೋ...' ಎಂದು ಅರ್ಥವಿಲ್ಲದ ಹೋಲಿಕೆಗಳನ್ನು ನೀಡುತ್ತಾರೆ. ಇನ್ನೂ ಕೆಲವರು 'ನಿನ್ನ ಓದಿಗೆ ಎಷ್ಟು ದುಡ್ಡು ಖರ್ಚು ಮಾಡಿದ್ದೇವೆ ಗೊತ್ತಾ? ನೀನು ಫೇಲಾದರೆ ನಾವು ಸಾಲದ ಗುಂಡಿಗೆ ಬಿದ್ದಂತೆ' ಎನ್ನುತಾರೆ. ಇಂಥ ಮಾತುಗಳು ತಿಳಿದೋ, ತಿಳಿಯದೆಯೋ ಅಡುತ್ತ, ಹಿರಿಯರು ಮಕ್ಕಳ ಮನಸ್ಸನ್ನು ಕಳವಳ ಪಡಿಸುತ್ತಿದ್ದಾರೆ. ಅದಕ್ಕೇ ಮಕ್ಕಳಿಗೆ ಉಪಯೋಗವಾಗುವ ಈ ಇಪ್ಪತೈದು ಸಲಹೆಗಳನ್ನು ಇಲ್ಲಿ ನೀಡಿದೆ. ಅವುಗಳನ್ನು ಅನುಸರಿಸಿ ಅರ್ಥೈಸಿಕೊಳ್ಳಿ.
ಪರೀಕ್ಷೆಯಲ್ಲಿನ ಪ್ರಶ್ನೆಗಳೆಲ್ಲ ನೀವು ಓದಿದ ಪುಸ್ತಕದಲ್ಲೇ ಇರುತ್ತದೆ ಎಂಬ ಸತ್ಯ ಗ್ರಹಿಸಿ.
ಪರೀಕ್ಷೆ ವೇಳೆ ಓದಿದ ಪ್ರತಿ ಪಾಠ ನೆನಪಿಗೆ ಬರುತ್ತೆ ಎಂದು ಪದೇಪದೇ ಮನಸ್ಸಿನಲ್ಲಿ ಅಂದುಕೊಳ್ಳಿ.
ನೀವು ನಿಮ್ಮ ಶಾಲೆಯಲ್ಲಿ ವಾರಕ್ಕೊಮ್ಮೆ ನೀಡುವ ಟೆಸ್ಟುಗಳಲ್ಲಿ ಬರೆದ ಪರೀಕ್ಷೆಯಂಥದ್ದೇ ಈ ಪಬ್ಲಿಕ್ ಪರೀಕ್ಷೆ. ವ್ಯತ್ಯಾಸವೆಂದರೆ, ದೊಡ್ಡ ಪರೀಕ್ಷೆಯಲ್ಲಿ ಹಾಲ್‌ಟಿಕೆಟ್ ಕೊಡುತ್ತಾರಷ್ಟೇ.
ಪರೀಕ್ಷೆ ವೇಳೆ ಇಡೀ ಪಠ್ಯವನ್ನು ಓದುವುದಕ್ಕಿಂತ ಸಾರಾಂಶ ಬರೆದುಕೊಂಡು ಓದಿದರೆ ಸಾಕು.
ಅವಕಾಶ ಸಿಕ್ಕಾಗೆಲ್ಲ ಹಳೇ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆಯುವುದು ಉತ್ತಮ.
ಒಂದೇ ದಿನದಲ್ಲಿ ನಾಲ್ಕೈದು ವಿಷಯಗಳನ್ನು ಓದಬೇಡಿ. ಮೆದುಳು ಗೊಂದಲಕ್ಕೆ ಬೀಳಬಹುದು.
ಒಂದೇ ಸಮ ನಾಲ್ಕೈದು ಗಂಟೆ ಓದುವುದು ಒಳ್ಳೆಯಲ್ಲ. ಒಂದು ಗಂಟೆ ಓದಿ, ಐದು ನಿಮಿಷ ಬಿಡುವು ಕೊಡಿ. ಆ ಸಮಯದಲ್ಲಿ ಒಂದು ನಿಮಿಷ ಮನೆಯ ಚಾವಣಿ ಕಡೆ ನೋಡುತ್ತ ನಡೆಯಿರಿ. ಇದನ್ನು 'ಸ್ಕೈ ವಾಕಿಂಗ್' ಅಂತಾರೆ. ಉಳಿದ ಸಮಯದಲ್ಲಿ ಕೊಠಡಿಯಲ್ಲಿ ಆಕಡೆ- ಈಕಡೆ ಓಡಾಡಿ.
ಓದುವ ಸಮಯದಲ್ಲಿ ಟೀವಿ, ರೇಡಿಯೋ ಟೇಪ್‌ರೆಕಾರ್ಡರ್‌ಗಳನ್ನು ಸಂಪೂರ್ಣ ಆಫ್ ಮಾಡಿ. ಅವು ನಿಮ್ಮ ಮನಸ್ಸನ್ನು ದಾರಿ ತಪ್ಪಿಸುತ್ತವೆ. ಬೇಕಾದರೆ ಸಂಗೀತವನ್ನು ಇಳಿದನಿಯಲ್ಲಿ ಹಾಕಿಕೊಳ್ಳಿ.
ಬೆಳಗ್ಗೆ ಎದ್ದಾಗಿನಿಂದ ನಿಮ್ಮ ಮನಸ್ಸು 16 ಗಂಟೆ ಏನೂ ಓದಿದರೂ ದಾಖಲಿಸಿಕೊಳ್ಳುತ್ತದೆ. ಅಂದರೆ ಬೆಳಗ್ಗೆ ಆರು ಗಂಟೆಗೆ ನಿದ್ರೆಯಿಂದ ಎದ್ದರೆ ರಾತ್ರಿ 10 ಗಂಟೆಯವರೆಗೂ ಓದಬಹುದು. ಆ ಬಳಿಕ ಓದಿದ್ದು, ದಾಖಲಾಗುವುದಿಲ್ಲ.
ರಾತ್ರಿ ಮಲಗುವಾಗ ನಾಲ್ಕೈದು ನಿಮಿಷ ರಿಲ್ಯಾಕ್ಸ್ ಆಗಿ, ಪರೀಕ್ಷಾ ಹಾಲಿನಲ್ಲಿ ಅದ್ಭುತವಾಗಿ ಬರೆಯುತ್ತಿರುವಂತೆ ಕಲ್ಪಿಸಿಕೊಳ್ಳಿ. ಇದು ನಕಾರಾತ್ಮಕ ಸಲಹೆಗಳನ್ನು ಸಕಾರಾತ್ಮಕವಾಗಿ ಬದಲಾಯಿಸುತ್ತದೆ. ರಾತ್ರಿ ಅದಕ್ಕೆ ಸಂಬಂಧಪಟ್ಟ ಕನಸುಗಳು ಬರುತ್ತವೆ.
ಬೆಳಗಿನ ಜಾವ ಎದ್ದು ಓದುವುದು ಒಳ್ಳೆಯದು. ಆ ಸಮಯದಲ್ಲಿ ಮೆದುಳು ಫ್ರೆಷ್ ಆಗಿರುತ್ತದೆ. ಏನೇ ಓದಿದರೂ ಹೆಚ್ಚಾಗುತ್ತದೆ. ಅದನ್ನು 'ಬ್ರಹ್ಮ ಮುಹೂರ್ತ' ಅಂತಾರೆ.
ಕಂಬೈನ್ಡ್ ಸ್ಟಡಿ ಒಳ್ಳೆಯದು. ಆದರೆ ಒಬ್ಬರಿಗಿಂತ ಹೆಚ್ಚು ಜನ ಇರಬಾರದು. ಒಬ್ಬರಿಗೊಬ್ಬರು ಪರಸ್ಪರ ಸಹಕರಿಸುತ್ತ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು. ಒಬ್ಬರಿಗಿಂತ ಹೆಚ್ಚಾದರೆ ಹರಟೆ ಶುರುವಾಗುತ್ತದೆ.
ನೀವು ಓದುವ ಇಷಯದಲ್ಲಿ (ಸಬ್ಜೆಕ್ಟ್) ಕಷ್ಟ ಎನಿಸಿದ್ದನ್ನು ಮೊದಲು ಓದಿ. ಆ ಪಾಠಗಳನ್ನು ನೆನಪಿಟ್ಟುಕೊಳ್ಳಲು ಕೆಲವು ಬೆಟ್ಟದ ಗುರುತುಗಳನ್ನು ಇಟ್ಟುಕೊಳ್ಳುವುದರಲ್ಲಿ ತಪ್ಪಿಲ್ಲ. ಉದಾಹರಣೆಗೆ- NEWS ಎಂಬ ಪದ ನೆನಪಿಟ್ಟುಕೊಂಡರೆ ಅದರಲ್ಲಿ North, East, West, South ಜ್ಞಾಪಕಕ್ಕೆ ಬರುತ್ತದೆ. VIBGYOR ಜ್ಞಾಪಕ ಇಟ್ಟುಕೊಂಡರೆ, Violet, Indigo, Blue, Green, Yellow, Orange, Red ನೆನಪಿಗೆ ಬರುತ್ತವೆ. VIBGYOR ಪದ ಕಷ್ಟವಾಗಿದ್ದರೆ- BIG V ROY ಎಂದು ನೆನಪಿಟ್ಟುಕೊಳ್ಳಿ.
ಓದಲು ಕುಳಿತುಕೊಳ್ಳುವ ಮುನ್ನ 'ಕನಿಷ್ಠ ಒಂದು ಗಂಟೆ ನಾನು ಓದುತ್ತೇನೆ' ಎಂಬ ನಿರ್ಣಯ ತೆಗೆದುಕೊಳ್ಳಬೇಕು. 'ಮಧ್ಯದಲ್ಲಿ ನೀರು ಕುಡಿಯಲಿಕ್ಕೆಂದು, ಟಾಯ್ಲೆಟ್‌ಗೆಂದು ಏಳುವುದಿಲ್ಲ. ಕಡೆಗೆ ಭೂಕಂಪ ಬಂದರೂ ಸರಿಯೇ ಏಳುವುದಿಲ್ಲ' ಎಂಬ ಒಪ್ಪಂದವನ್ನು ನಿಮ್ಮ ಮನಸ್ಸಿನಲ್ಲಿ ಮಾಡಿಕೊಳ್ಳಿ.
ಪರೀಕ್ಷೆಯ ಭಯ ಕೊಲ್ಲಲು ಹೀಗೆ ಓದಿ...
ಮೊದಲು ಬೇಕಾದ ಪಾಠವನ್ನು ಆಯ್ಕೆಮಾಡಿಕೊಳ್ಳಿ.
Mood- ಓದುವುದಕ್ಕೆ ಮನಃಸ್ಥಿತಿ (ಮೂಡ್) ತಂದುಕೊಂಡು ಕೂರಬೇಕು.
Understand - ಓದಿದ್ದನ್ನು ಅರ್ಥ ಮಾಡಿಕೊಳ್ಳಿ.
Re Read - ಓದಿದ್ದರಲ್ಲಿ ಮತ್ತೊಮ್ಮೆ ಓದಿ.
Detect- ಓದಿದ್ದರಲ್ಲಿ ಅರ್ಥವಾಗದ್ದನ್ನು ಗುರುತಿಸಿ.
Effective final reading- ಕೊನೆಯದಾಗಿ ಮತ್ತೊಮ್ಮೆ ಚೆನ್ನಾಗಿ ಓದಿ.
ಖಜಢ್ಝಜಢಿ- ಓದಿದ್ದನ್ನು ಮನಸ್ಸಿನಲ್ಲಿ ಮನನ ಮಾಡಿಕೊಳ್ಳಿ.
ಮೇಲಿನ ಇಂಗ್ಲಷ್ ಪದಗಳಲ್ಲಿನ ಮೊದಲ ಅಕ್ಷರಗಳನ್ನು ಸೇರಿಸಿದರೆ MURDER ಆಗುತ್ತದೆ. ಅಂದರೆ ಭಯವನ್ನು Murder ಮಾಡಬಹುದು!
ಪರೀಕ್ಷೆ ವೇಳೆ ಗಂಭೀರವಾಗಿರುತ್ತ ಒಂದೊಂದೇ ಮುಖ್ಯವೆಂದು ಭಾವಿಸಬೇಡಿ. ಮನೆಯವರ ಜೊತೆಯಲ್ಲಿ ತಮಾಷೆಯಿಂದ ಹರಟುತ್ತಿರಿ. ಜೋಕ್ಸ್ ಕೇಳುವುದೋ, ಹೇಳುವುದೋ ಮಾಡಿ.
ಕ್ರಿಕೆಟ್ ಗೆದ್ದರೂ, ಸೋತರೂ ನಿಮಗಾಗುವ ಲಾಭ ಏನೂ ಇಲ್ಲ. ಆ ಸ್ಕೋರ್ ಕಟ್ಟಿಕೊಂಡು ನಿಮಗೇನಾಗಬೇಕು? ಪಂದ್ಯದ ಬಗ್ಗೆ ಉದ್ವೇಗ ಅನಗತ್ಯ. ಒಬ್ಬ ಅಕ್ಕಸಾಲಿಗ ಶ್ರೀಲಂಕಾ- ಭಾರತ ಮ್ಯಾಚ್‌ನಲ್ಲಿ ಶ್ರೀಲಂಕಾ ಗೆಲ್ಲುವುದಾಗಿ ಬೆಟ್ ಕಟ್ಟಿ, ಸೋತು ಆತ್ಮಹತ್ಯೆ ಮಾಡಿಕೊಂಡ. ಚರಿತ್ರೆಯಲ್ಲಿ ಇಂಥ ಎಷ್ಟೋ ಮ್ಯಾಚ್‌ಗಳು ನಡೆಯುತ್ತವೆ. ಗೆಲ್ಲುತ್ತೇವೆ, ಸೋಲುತ್ತೇವೆ. ಅದಕ್ಕೋಸ್ಕರ ಕಳೆದುಕೊಂಡ ಜೀವ ಮತ್ತೆ ಬರುತ್ತದೆಯೆ? ಹಾಗೆ, ಒಮ್ಮೆ ಪರೀಕ್ಷೆಯಲ್ಲಿ ಫೇಲಾದರೆ, ಆ ಮಚ್ಚೆ ಶಾಶ್ವತವಲ್ಲವೇ? ಯೋಚಿಸಿ.
= ನೀವು ಓದುತ್ತಿರುವ ಕೊಠಡಿ ಗೋಡೆಗಳ ಮೇಲೆ ಭಿತ್ತಿಪತ್ರಗಳು, ಕ್ಯಾಲೆಂಡರ್‌ಗಳು ಇಲ್ಲದಿದ್ದರೆ ಫಲಿತಾಂಶ ಉತ್ತಮವಾಗಿರುತ್ತದೆ. ಇಲ್ಲವಾದರೆ ಆ ಐಶ್ವರ್ಯ ರೈ, ಶಾರುಖ್‌ಖಾನ್, ಅಮೀರ್‌ಖಾನ್, ಸುದೀಪ್‌ರ ಭಾವಚಿತ್ರಗಳತ್ತ ನೋಡಿದ ಕೂಡಲೇ ಕೆಲವು ನಿಮಿಷ ನಿಮ್ಮ ಗಮನ ಅತ್ತ ಹರಿಯುತ್ತದೆ. ಟೈಮ್‌ವೇಸ್ಟಾಗುತ್ತೆ.
= ಓದುವ ಕೊಠಡಿಯಲ್ಲಿ ಬೆಳಕು ತೀರಾ ಹೆಚ್ಚಾಗಿರುವುದೂ ಬೇಡ, ಕಡಿಮೆಯಿರುವುದೂ ಬೇಡ. ಸಾಕಷ್ಟಿರಬೇಕು. ಬಣ್ಣದ ದೀಪಗಳು ಬೇಡವೇಬೇಡ.
= ಬೆಳಗ್ಗೆದ್ದ ಕೂಡಲೇ ಕನಿಷ್ಠ ಹತ್ತು ನಿಮಿಷ ನಡೆದಾಡಿ. ಆ ಸಮಯದಲ್ಲಿ ಪರೀಕ್ಷೆಯ ಕುರಿತು ಆಲೋಚಿಸಬೇಡಿ, ಪಠ್ಯದ ವಿಚಾರಗಳನ್ನಷ್ಟೇ ಪುನರಾವರ್ತನೆ ಮಾಡಿಕೊಳ್ಳಿ.
ಪರೀಕ್ಷೆಯ ಟೆನ್ಷನ್‌ನಿಂದ ಕೆಲವೊಮ್ಮೆ ಊಟದ ನೆನಪೇ ಇರುವುದಿಲ್ಲ. ಅದು ಅಪಾಯ. ಅದರ ಪ್ರಭಾವ ಓದಿನ ಮೇಲೆ ಖಂಡಿತ ಇರುತ್ತದೆ. ತಿನ್ನದೇ ಹೋದರೆ ಸುಸ್ತಿನಿಂದ ಓದಬೇಕು ಅನಿಸುವುದಿಲ್ಲ. ಆದ್ದರಿಂದ ಆಹಾರ ವಿಷಯದಲ್ಲಿ ಉದಾಸೀನ ಬೇಡ. ಹಾಗೆ ಬೆಳಗ್ಗೆ ತಪ್ಪದೆ ಹಾಲಾಗಲಿ, ಹಣ್ಣಿನ ರಸವನ್ನಾಗಲಿ ತೆಗೆದುಕೊಳ್ಳುವುದು ತುಂಬ ಒಳ್ಳೆಯದು.
ಪರೀಕ್ಷೆ ವೇಳೆ ಕೆಲವು ವಿದ್ಯಾರ್ಥಿಗಳು ಮನೆಯವರ ಮೇಲೆ ಹಾರಾಡುತ್ತಾರೆ, ಜಗಳವಾಡುತ್ತಾರೆ. ಅದು ಅವರು ಸರಿಯಾಗಿ ಓದಲಾಗುತ್ತಿಲ್ಲ ಎಂಬ ಕಳವಳದಿಂದಲೇ ಹಾಗೆ ಮಾಡುತ್ತಿರುವರೆಂದು ಹಿರಿಯರು ಗುರುತಿಸಬೇಕು. ನಾಳೆ ಪರೀಕ್ಷೆ ಫೇಲಾದರೆ ಅವರು ಅದಕ್ಕೆ ಕಾರಣ ಮನೆಯಲ್ಲಿ ನಡೆದ ಜಗಳವೆಂದು, ನಂತರ ಹೇಳುವುದಕ್ಕೆ ಸಿದ್ಧಪಡಿಸಿಕೊಳ್ಳುವ ಗ್ರೌಂಡ್ ಎಂಬ ವಾಸ್ತವವನ್ನು ಮನಗಾಣಬೇಕು. ಅಂಥವರು ಯಾವುದೋ ಒಂದು ರೀತಿಯಲ್ಲಿ ಜಗಳ ತಂದುಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ. ಆದ್ದರಿಂದ ಮನೆಯವರೇ ಅನುಸರಿಸಿಕೊಂಡು ಹೋಗಬೇಕು.
ಪರೀಕ್ಷೆ ವೇಳೆ ಅಮ್ಮನ ಪಾತ್ರ ಬಹಳ ದೊಡ್ಡದು. 'ಓದು... ಓದು...' ಎನ್ನುತ್ತ ಅಮ್ಮ ಶಿಕ್ಷಕಿಯ ಪಾತ್ರವನ್ನು ಬಿಟ್ಟು, ಅಕ್ಷರಶಃ ಅಮ್ಮನ ಪಾತ್ರವನ್ನು ವಹಿಸುತ್ತ ಓದಿನ ಕುರಿತು ಕೇಳುವುದಿಲ್ಲವೆಂದು ಪ್ರಮಾಣ ಮಾಡಬೇಕು. ಇದು ಚೆನ್ನಾಗಿ ಓದುತ್ತಿರುವವರ ವಿಷಯದಲ್ಲಷ್ಟೇ ಎಂಬುದನ್ನು ಮಾತ್ರ ನೀವು ಮರೆಯಬಾರದು.
ಹಿಂದೆ ಕೆಲವು ಸಂದರ್ಭಗಳಲ್ಲಿ ನೀವು ಓದುವ ವಿಷಯದಲ್ಲಿ ಹೆದರಿರಬಹುದು. ಭಯಪಟ್ಟಂತೆ ಯಾವುದೂ ನಡೆಯದೇ ಇರಬಹುದು. ಅದೇ ರೀತಿಯಾಗಿ ಮುಂಬರುವ ಪರೀಕ್ಷೆಯ ಕುರಿತು ಭಯಪಡಬೇಡಿ. ಆಗಬೇಕಾದ್ದು ಆಗುತ್ತದೆ.
ನಿದ್ರಿಸಲು ಹೆದರುವುದೇಕೆ? ನಿದ್ರಿಸುವಾಗೇನು ಮೇಷ್ಟ್ರಿರುತ್ತಾರಾ? ನಿದ್ದೆ ಚೆನ್ನಾಗಿ ಮಾಡಿ.
-ತನುಜಾ ಗೌಡ, thanumgowda03@gmail.com
ಚಿತ್ರಗಳು: ಶಿವಮೊಗ್ಗ ನಂದನ್, ಇಂಟರ್ನೆಟ್