ಕೇಳುವಿರೆಂದರೆ ಪೇಳುವೆನು...

ನಾಡೂ ಕಾಡಿನಂತಿರುವ ಪ್ರದೇಶ ಕರಾವಳಿ ಮತ್ತು ಮಲೆನಾಡು. ಚುಮುಚುಮು ಚಳಿಯ ರಾತ್ರಿಯಲ್ಲಿ ದೂರದಿಂದೆಲ್ಲೋ ಕೇಳಿಸುವ ಪದ ಆಲಿಸುತ್ತಾ, ಟಾರ್ಚ್‌ನ ಬೆಳಕಿನಲ್ಲಿ ಎಡವುತ್ತ, ಬೀಳುತ್ತ ಕಾಲುದಾರಿಗಳಲ್ಲಿ ಬೇಲಿಗಳನ್ನು ದಾಟುತ್ತ ನಾವು ತಲುಪುತ್ತಿದ್ದುದು ಆ ಧರೆಗಿಳಿದ ಯಕ್ಷಲೋಕಕ್ಕೆ, ಅದುವೇ ಯಕ್ಷಗಾನ. ನವರಸಭರಿತ ಅಭಿನಯ, ವಿಭಿನ್ನ ಕುಣಿತ, ಸುಶ್ರಾವ್ಯ ಗಾನ, ಕಣ್ಮನ ಸೆಳೆವ ವೇಷಭೂಷಣ, ಚಂಡೆ-ಮದ್ದಳೆ, ಹಾರ್ಮೋನಿಯಂಗಳ ಜುಗಲ್‌ಬಂದಿ. ಈ ಎಲ್ಲದರ ಒಟ್ಟಾರೆ ಪ್ರದರ್ಶನವನ್ನು ಆಸ್ವಾದಿಸಲು ನಿದ್ದೆ ಎಳೆಯುತ್ತಿದ್ದರೂ, ಚಳಿ ಕಾಡುತ್ತಿದ್ದರೂ, ಇಬ್ಬನಿ ಬೀಳುತ್ತಿದ್ದರೂ ನಾವು ಮೈಮರೆತು ಕುಳಿತಿರುತ್ತಿದ್ದೆವು.
ಬಾಲ್ಯದ ಸುಂದರ ನೆನಪುಗಳು ಪ್ರತಿಯೊಬ್ಬರ ಕರಗದ ಆಸ್ತಿ. ಆಗಾಗ ಅವುಗಳನ್ನು ನೆನಪಿಸಿಕೊಂಡು ಮುದಗೊಳ್ಳುವುದರಲ್ಲಿ ಸಿಗುವ ಆನಂದ ಮತ್ತೆಲ್ಲೂ ಸಿಗದು. ನೆನಪುಗಳಲ್ಲಿ ಸಿಹಿನೆನಪುಗಳೇ ಜಾಸ್ತಿ ನೆನಪಿನಲ್ಲಿರುವುದು. ಯಕ್ಷಗಾನ ಅಂಥ ಸಿಹಿಗಳಲ್ಲೊಂದು. ಎಷ್ಟು ದೂರ ಬೇಕಾದರೂ ಕಾಲ್ನಡಿಗೆಯಲ್ಲಿ ಸಾಗಿ, ಆ ಬಣ್ಣದ ಬೆರಗನ್ನು ನೋಡುತ್ತಿದ್ದೆವು.
ಅಲ್ಲಿ ಮಂಡಕ್ಕಿ, ಗೋಲಿಬಜೆ ಮಾರುವ ಪುಟ್ಟಪುಟ್ಟ ವಲಸೆ ಅಂಗಡಿಗಳ ಸಾಲು. 10-15 ರುಪಾಯಿಗಳ ಗಂಟು ಕಟ್ಟಿಕೊಂಡು ಹೋಗುತ್ತಿದ್ದ ನಾವು ಅದನ್ನು ಲೆಕ್ಕಾಚಾರದಿಂದ ರಾತ್ರಿಯಿಡೀ ಖರ್ಚು ಮಾಡುತ್ತಿದ್ದೆವು. ತಿಂಡಿಗಳನ್ನು ಮೆಲ್ಲುತ್ತಾ ಯಕ್ಷಗಾನ ನೋಡುವ ಅನುಭವ ಈಗಲೂ ಪುಳಕಗೊಳಿಸುತ್ತದೆ.
ಯಕ್ಷಗಾನದ ಇನ್ನೊಂದು ವೈಶಿಷ್ಟ್ಯವೆಂದರೆ, ಪಾತ್ರಧಾರಿಗಳು ಅವರವರ ಅಲಂಕಾರ- ವೇಷಭೂಷಣಗಳನ್ನು ಯಾರ ಸಹಾಯವಿಲ್ಲದೆ ಮಾಡಿಕೊಳ್ಳುವುದು. ಅವರು ತಯಾರಾಗಲು ರಂಗಸ್ಥಳದ ಪಕ್ಕ ಇರುವ ಜಾಗದ ಹೆಸರೇ 'ಚೌಕಿ ಮನೆ'. ನಾವು ಪ್ರದರ್ಶನದ ಮಧ್ಯ ಮಧ್ಯ ಚೌಕಿಮನೆಗೆ ಹೋಗಿ ನಿಂತು ನೋಡುತ್ತಿದ್ದೆವು. ಮುಂದೆ ರಂಗಸ್ಥಳಕ್ಕೆ ಬರುವ ವೇಷಧಾರಿಗಳನ್ನು ಮೊದಲೇ ನೋಡುವ ಕೂತೂಹಲ ನಮಗೆ.
ಕಥೆಗೆ ಹೊಂದಿಕೊಂಡಿರುವ ಹಾಸ್ಯ ಸನ್ನಿವೇಶಗಳು ನಗೆಯ ಹೊನಲು ಹರಿಸುತ್ತಿದ್ದವು. ಪ್ರದರ್ಶನವಿಡೀ ಮಾಮೂಲಿ ಕನ್ನಡ (ಪುಸ್ತಕದ ಕನ್ನಡ) ಮಾತನಾಡುವ ಪಾತ್ರಧಾರಿಗಳು ಹಾಸ್ಯ ಸನ್ನಿವೇಶಗಳಲ್ಲಿ ನಮ್ಮ ಹಳ್ಳಿಯ ಕನ್ನಡ (ಕುಂದಾಪುರ ಕನ್ನಡ, ಮಂಗಳೂರು ಕನ್ನಡ) ಮಾತಾಡಿ ರಂಜಿಸುತ್ತಾರೆ. ರಾಮಾಯಣ, ಮಹಾಭಾರತ, ಆಧುನಿಕ ಪ್ರಸಂಗಗಳೂ ಯಕ್ಷಗಾನದ ರೂಪದಲ್ಲಿ ನಮ್ಮ ಮುಂದೆ ಬರುತ್ತಿದ್ದವು.
ಇಡೀ ರಾತ್ರಿ ಯಕ್ಷಗಾನ ನೋಡಿ ಬೆಳಗ್ಗೆ ಶಾಲೆಗೆ ಹೋಗುವ ಅನಿವಾರ್ಯತೆ ನಮಗೆ. ಯಾಕೆಂದರೆ ಮಾರನೇ ದಿನ ಶಾಲೆ ತಪ್ಪಿಸುವುದಿಲ್ಲ ಎಂಬ ಕರಾರನ್ನು ಒಪ್ಪಿಕೊಂಡ ಮೇಲೆಯೇ ನಮ್ಮನ್ನು ಯಕ್ಷಗಾನಕ್ಕೆ ಕಳಿಸುತ್ತಿದ್ದರು! ರಾತ್ರಿಯಿಡೀ ನಿದ್ದೆಬಿಟ್ಟ ಕಾರಣ ಶಿಕ್ಷಕರ ಪಾಠಗಳು ಯಕ್ಷಗಾನದ ಪದ್ಯದಂತೆಯೂ, ಮಕ್ಕಳ ಗಲಾಟೆ-ಗದ್ದಲಗಳು ಚಂಡೆ-ಮದ್ದಳೆಯ ಶಬ್ದದಂತೆ ಕೇಳಿಸುತ್ತಿತ್ತು. ಯಕ್ಷಗಾನದ 3-4 ತಿಂಗಳ ಸೀಜನ್ನು ಮುಗಿದಾಗ ನಮ್ಮ ಸ್ನೇಹಿತರಲ್ಲಿ ಯಾರ್ಯಾರು ಎಷ್ಟೆಷ್ಟು ಯಕ್ಷಗಾನ ನೋಡಿದ್ದಾರೆಂದು ಲೆಕ್ಕ ಹಾಕುತ್ತಿದ್ದೆವು. ಎಲ್ಲರಿಗಿಂತ ಹೆಚ್ಚು ಯಕ್ಷಗಾನ ನೋಡಿದವನಿಗೆ ಹೆಮ್ಮೆ ಮತ್ತು ಎಲ್ಲರಿಗಿಂತ ಜಾಸ್ತಿ ಮರ್ಯಾದೆ. ಆದರೆ ಈ ಮರ್ಯಾದೆ ಮುಂದೆ ಕ್ಷೀಣಿಸುತ್ತಾ ಹೋಗುವುದು ಮತ್ತು ಮುಂದಿನ ಯಕ್ಷಗಾನದ ಸಮಯಕ್ಕೆ ಮುಗಿದೇ ಹೋಗುತ್ತಿತ್ತೆನ್ನಿ.
ಇನ್ನು ಮನೆಯಲ್ಲಿ ಯಕ್ಷಗಾನವೂ ಒಂದು ಚರ್ಚಾವಸ್ತುವಾಗಿತ್ತು. ಸುಮ್ಮನೆ ಕುಳಿತಾಗ ಯಕ್ಷಗಾನದ ಪದ್ಯಗಳನ್ನು ಗುನುಗುವುದು ಮಾಮೂಲಾಗಿತ್ತು. ಮನೆಯಲ್ಲಿ ಯಕ್ಷ ಕಲಾವಿದರಿದ್ದರಂತೂ ಮೂರು ಹೊತ್ತೂ ಯಕ್ಷಗಾನದ ಪಾತ್ರಗಳು, ಕುಣಿತ ಇತ್ಯಾದಿಗಳ ಗೋಷ್ಠಿ.
ಯಕ್ಷಗಾನದ ದೊಡ್ಡ ಅಭಿಮಾನಿ ಬಳಗವೇ ಕರಾವಳಿ ಮತ್ತು ಮಲೆನಾಡಿನಲ್ಲಿದೆ. ಈ ಕಲೆ ಮಾಡಿದ ಮೋಡಿ ಎಷ್ಟೆಂದರೆ ಮನರಂಜನೆಯ ಪಾಕವೆಂಬಂತಿರುವ ಸಿನಿಮಾ ಕೂಡ ಈ ಭಾಗಗಳಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಿಲ್ಲ. ಇಲ್ಲಿಯ ಜನ ವರ್ಷಕ್ಕೆ ಒಂದೆರಡು ಸಿನಿಮಾ ನೋಡಿದರೆ ಹೆಚ್ಚು. ತಂತ್ರಜ್ಞಾನ, ಗ್ರಾಫಿಕ್ಸ್, ಆಧುನಿಕ ಸಂಗೀತ ಉಪಕರಣಗಳು ಇತ್ಯಾದಿಗಳ ಭರಾಟೆಯ ಸಿನಿಮಾದಲ್ಲಿ ನೈಜ ಅಭಿನಯ ಕಾಣಲು ಸಿಗುವುದಿಲ್ಲ.
ಸಿನಿಮಾಗಳಂತೆ ಇಲ್ಲಿ ಯಾವ ಕಿರಿಕಿರಿಗಳೂ ಇಲ್ಲ. ಟಿಕೆಟು, ಡಬ್ಬಿಂಗು, ಸೀಟಿನ ಸಮಸ್ಯೆಗಳು ಇಲ್ಲಿ ಉದ್ಭವಿಸುವುದೇ ಇಲ್ಲ. ಆದರೂ, ನಮ್ಮ ಯಕ್ಷಗಾನಕ್ಕೆ ಒಂದು ಟಾಕೀಸಿಲ್ಲ. ಬಿಡಿ, ಇದಕ್ಕೆ ನಮಗೇನು ಬೇಜಾರಿಲ್ಲ. ಏಕೆಂದರೆ, ಈ ಕಲೆಗೆ ಪ್ರತಿ ಊರೂ ಟಾಕೀಸು!
-ಸಚಿನ್ ಶೆಟ್ಟಿ
shettysachu8@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


