

ಜಗತ್ತಿನ ಅತಿ ಸಣ್ಣ ಕತೆಗಳನ್ನು ಎಸ್.ದಿವಾಕರ್ ಕನ್ನಡಕ್ಕೆ ತರುತ್ತಲೇ ಇದ್ದಾರೆ. ಅತ್ಯಂತ ಸಣ್ಣ ಕತೆಯನ್ನೂ ಅವರೇ ಪರಿಚಯಿಸಿ, ಅದಕ್ಕೊಂದು ಸುದೀರ್ಘ ವಿವರಣೆಯನ್ನೂ ಬರೆದದ್ದುಂಟು. ಆ ಕತೆ ಹೀಗಿದೆ: 'ಡೈನೋಸಾರ್: ನಾನು ಎಚ್ಚೆತ್ತಾಗ, ಅದಿನ್ನೂ ಅಲ್ಲೇ ಇತ್ತು'. ಬರೆದವನು ಗ್ವಾಟೆಮಾಲದ ಕತೆಗಾರ ಅಗಸ್ತೋ ಮೊಂತೆರ್ರೋಸೊ.
ಆದರೆ ಇಂಗ್ಲಿಷ್ನ ಈ ಕತೆಯಲ್ಲಿ ಎಂಟು ಪದಗಳಿವೆ. ಇದಕ್ಕಿಂತಲೂ ಕಡಿಮೆ ಪದಗಳಲ್ಲಿ ಒಂದು ಕತೆ ಹೇಳಲು ಸಾಧ್ಯವೆ? ದಕ್ಷಿಣ ಅಮೆರಿಕದ ಕ್ಲಬ್ಬೊಂದರಲ್ಲಿ ಊಟ ಮಾಡುತ್ತಿದ್ದ ಗೆಳೆಯರ ನಡುವೆ ಇದ್ದಕ್ಕಿದ್ದಂತೆ ಈ ಚರ್ಚೆ ಹುಟ್ಟಿಕೊಂಡಿತು. ಸಾಧ್ಯ, ನಾನು ಆರೇ ಪದಗಳಲ್ಲಿ ಪರಿಣಾಮಕಾರಿ ಕತೆ ಹೇಳಬಲ್ಲೆ ಎಂದೊಬ್ಬ ತರುಣ ಬೆಟ್ ಕಟ್ಟಿದ. ಹಾಗಿದ್ದರೆ ಬರೆದು ತೋರಿಸು ಎಂದು ಗೆಳೆಯರು ಸವಾಲು ಹಾಕಿದರು. ಆತ ಅಲ್ಲೇ ಇದ್ದ ನ್ಯಾಪ್ಕಿನ್ ಎತ್ತಿಕೊಂಡು ಗೀಚಿದ ಕತೆ ಹೀಗಿತ್ತು- 'ಫಾರ್ ಸೇಲ್: ಬೇಬಿ ಶೂಸ್, ನೆವರ್ ವೋರ್ನ್' (ಮಾರಾಟಕ್ಕಿದೆ: ಮಗುವಿನ ಶೂಗಳು, ಯಾರೂ ಧರಿಸಿಲ್ಲ). ಹೀಗೆ ಕತೆ ಬರೆದು ಎದ್ದು ಹೋದ ತರುಣನ ಹೆಸರು ಅರ್ನೆಸ್ಟ್ ಹೆಮಿಂಗ್ವೇ!
ಈ ಕತೆ ನಿಜಕ್ಕೂ ಹೆಮಿಂಗ್ವೇ ಬರೆದದ್ದೇ ಅಲ್ಲವೇ ಎಂಬುದರ ಕುರಿತೂ ಚರ್ಚೆಯಾಗಿದೆ. ಆತನ ಜೀವಿತಕಾಲದಲ್ಲೆಂದೂ ಇದು ಪ್ರಕಟವಾಗಿರಲಿಲ್ಲ. ಆತ ಸತ್ತು 30 ವರ್ಷಗಳ ಬಳಿಕ, ಅಂದರೆ 1991ರಲ್ಲಿ ಖ್ಯಾತ ವಿಜ್ಞಾನ ಸಾಹಿತಿ ಆರ್ಥರ್ ಕ್ಲಾರ್ಕ್ನ ಪತ್ರದ ಉಲ್ಲೇಖದೊಂದಿಗೆ ಇದು ಬಹಿರಂಗಗೊಂಡಿತು. ಜಗತ್ತಿನ ಅತ್ಯಂತ ಸಣ್ಣ ಹಾರರ್ ಕತೆ ಯಾವುದೆಂಬುದೂ ಚರ್ಚೆಯಾಗಿದೆ. ಅದು ಇಲ್ಲಿದೆ- 'ಬಡಿತ: ಜಗತ್ತಿನ ಕೊಟ್ಟ ಕೊನೆಯ ಮನುಷ್ಯ ಕೋಣೆಯೊಂದರಲ್ಲಿ ಕೂತಿದ್ದ. ಇದ್ದಕ್ಕಿದ್ದಂತೆ ಯಾರೋ ಬಾಗಿಲು ಬಡಿದರು.' ಇದಕ್ಕೆ ಸಂಬಂಧಿಸದ ಇನ್ನೊಂದು ತಮಾಷೆ ಲಿಂಕ್ ಇತ್ತೀಚೆಗೆ ಅಂತರ್ಜಾಲದಲ್ಲಿ ಸಿಕ್ಕಿತು. ಅದೂ ಕೂಡ ಹಾರರ್ ಮಿನಿಕತೆಯೇ. ಅದು ಹೀಗಿತ್ತು: 'ಕಂಪ್ಯೂಟರ್: ಅಂತರ್ಜಾಲ ಸಂಪರ್ಕ ಲಭ್ಯವಿಲ್ಲ!'
ಕನ್ನಡದಲ್ಲಿ ಇಂಥ ಪುಟ್ಟ ಕತೆಗಳನ್ನು ಬಿ.ಎಂ.ಬಶೀರ್ರಂಥ ಕೆಲವರು ಬಿಟ್ಟರೆ ಹಿರಿಯ ಬರಹಗಾರರು ಬರೆದಂತಿಲ್ಲ. ಇಲ್ಲೊಂದು ನನ್ನ ಪುಟ್ಟ ಕತೆಯಿದೆ- 'ಮರು ಭೇಟಿ: ಮರಣಶಯ್ಯೆಯಲ್ಲಿದ್ದ ಗೆಳತಿ ನನ್ನ ಕೈಹಿಡಿದು ಕೇಳಿದಳು- ಮತ್ತೆಂದು ಸಿಗುವೆ?'
-ಹರೀಶ್ ಕೇರ