ವಿಕ್ರಮಾದಿತ್ಯ v/s ಬೇತಾಳ

ಅವರೆಲ್ಲ ದಂಗಾಗಿಬಿಟ್ಟರು!
ಅಮೆರಿಕಕ್ಕೂ ಅಳುಕು. ಚೀನಾದ ಎದೆಯೊಳಗೂ ಚೀತ್ಕಾರ. ಇನ್ನು ಪಾಕ್ನ ನಾಡಿಯ ಕಂಪನವಂತೂ ಸ್ಟೆತೋಸ್ಕೋಪಿಲ್ಲದೆಯೂ ಕೇಳುವಂಥದ್ದು. 'ಐಎನ್ಎಸ್ ವಿಕ್ರಮಾದಿತ್ಯ' ಬಂದಾಕ್ಷಣ ಅವರೆಲ್ಲರ ಬೆರಗುನೋಟ ಹಾಗಿತ್ತು. ಅವರೆಲ್ಲ ಬೆವರಿದಂತಿದ್ದರು. ಇದು ದೇಶದ ಅತಿದೊಡ್ಡ ವಿಮಾನ ವಾಹಕ ಯುದ್ಧ ನೌಕೆ. ರಷ್ಯಾದಿಂದ ಭಾರತದತ್ತ ಚಲಿಸುತ್ತಿದ್ದಂತೆ ನಮ್ಮೆಲ್ಲರ ಎದೆ ಉಬ್ಬಿಯೇ ಹೋಯಿತು. ಈ ನೌಕೆ ಬಂದು ಲಂಗರು ಹಾಕಿದ್ದು ಕಾರವಾರ ಬಳಿಯ ಸೀಬರ್ಡ್ ನೌಕಾನೆಲೆಯಲ್ಲಿ.
ಈ 'ವಿಕ್ರಮಾದಿತ್ಯ'ನೀಗ ನಮ್ಮ ಅರಬ್ಬೀ ಸಮುದ್ರದ ಗಡಿಗೆ ಬೇಲಿ. ರಷ್ಯಾದಿಂದ ಖರೀದಿಸಿದ ಈ ಬೃಹತ್ ಯುದ್ಧ ನೌಕೆ ಇಲ್ಲಿ ನೆಲೆಗೊಳ್ಳಲೂ ಅನೇಕ ಕಾರಣಗಳು. ಅರಬ್ಬೀ ಸಮುದ್ರದೆಡೆಯಿಂದ ಬಂದೆರಗುವ ಆಪತ್ತುಗಳಿಗೆಲ್ಲ ವಿಕ್ರಮಾದಿತ್ಯ ಸೂಕ್ತ ಉತ್ತರ ನೀಡುತ್ತಾನೆಂಬ ವಿಶ್ವಾಸ ಎಲ್ಲರಲ್ಲಿ.
ಯಾಕಾಗಿ ಬಂತು?
ಭಾರತಕ್ಕೆ ಸಮೀಪದ, ಅರಬ್ಬೀ ಸಮುದ್ರದ 'ಬಿಗೆಸಿಯೋ ಗಾರ್ಸಿಯಾ' ದ್ವೀಪ ಅಮೆರಿಕದ ಹಿಡಿತದಲ್ಲಿದೆ. ಇಷ್ಟಲ್ಲದೆ ಇಲ್ಲಿ ದೊಡ್ಡಣ್ಣ ನೌಕಾನೆಲೆಯನ್ನೂ ಸ್ಥಾಪಿಸಿದ್ದಾನೆ. ಕೆಲವು ವರುಷಗಳ ಹಿಂದೆ ಆಫ್ಘಾನಿಸ್ತಾನದ ಮೇಲೆ ಅಮೆರಿಕ ಎರಗಿದ್ದೂ ಇದೇ ನೆಲೆಯನ್ನು ಬಳಸಿಕೊಂಡೇ. ಹೀಗಾಗಿಯೇ ಭಾರತ 'ಅಮೆರಿಕ ಯಾವತ್ತಿದ್ದರೂ ಅಪಾಯಕಾರಿ' ಎಂಬ ತೀರ್ಮಾನಕ್ಕೆ ಬಂದುಬಿಟ್ಟಿತು. ಆ ಪಾಕಿಸ್ತಾನಕ್ಕೆ ಯಾವ ಚಿಂತೆಯೂ ಇಲ್ಲ. ಅಲ್ಲಿನ ಬಂದರಿನ ಅಭಿವೃದ್ಧಿಯ ಹೊಣೆಯನ್ನು ಚೀನಾ ಹೊತ್ತಿದೆ. ಚೀನೀ ಯುದ್ಧ ನೌಕೆಗಳು ಅಲ್ಲಿ ವಿರಾಜಮಾನವಾಗಿ ಓಡಾಡುತ್ತಿವೆ. ಈ ಎರಡೂ ಶತ್ರು ರಾಷ್ಟ್ರಗಳು ನಮ್ಮ ನಾಶಕ್ಕೆ ಯಾವತ್ತು ಮುಂದಾಗುತ್ತವೋ ಗೊತ್ತಿಲ್ಲ. ಹೀಗಾಗಿ, ನಮಗೆ ಈ ವಿಕ್ರಮಾದಿತ್ಯನ ಆಗಮನ ಅಗತ್ಯವಾಯಿತು. ಇಷ್ಟಲ್ಲದೆ, ಮಾಲ್ಡೀವ್ಸ್ನಲ್ಲಿ ವಿವಿಧ ಕಾಮಗಾರಿಗಳ ಗುತ್ತಿಗೆಯನ್ನೂ ಚೀನಾ ನಿರ್ವಹಿಸುತ್ತಿದೆ. ಈ ಅರಬ್ಬೀ ಸಮುದ್ರದಲ್ಲಿ ಯುದ್ಧ ಸುನಾಮಿ ಏಳುವ ಮುನ್ನ ನಮಗೊಂದು ಸೆಕ್ಯೂರಿಟಿಯ ಅಗತ್ಯವಿತ್ತು. ಭಯೋತ್ಪಾದನಾ ದಾಳಿ ನಡೆದಾಗಲೆಲ್ಲ ಕಾರವಾರ ಸಮೀಪದ ಕೈಗಾ ಅಣುಸ್ಥಾವರಕ್ಕೂ ರಕ್ಷಣೆ ಬೇಕಾಗುತ್ತದೆ. ಅರಬ್ಬೀಯಲ್ಲಿ ನೌಕಾಪಡೆ, ಕರಾವಳಿ ಕಾವಲು ಪಡೆ, ಕರಾವಳಿ ಕಾವಲು ಪೊಲೀಸ್ ಪಡೆ ಎಷ್ಟೇ ಗಸ್ತು ನಡೆಸಿದರೂ ಸಂಭವನೀಯ ದಾಳಿ ತಡೆಯುವಷ್ಟು ಶಕ್ತವಾಗಿಲ್ಲ.
ನೆರೆಹೊರೆಯವರ ಕಾಟ ಬಿಡಿ. ಆ ಸೋಮಾಲಿಯಾ ಕಡಲ್ಗಳ್ಳರ ಕಾಟ ತಪ್ಪಿಸಲೂ ನಮಗೊಬ್ಬ ಬಲಾಢ್ಯ ಬೇಕಿತ್ತು. 2009ರಲ್ಲಿ ಕುವೈತ್ನಿಂದ ವಿಶಾಖಪಟ್ಟಣಕ್ಕೆ ಬರುತ್ತಿದ್ದ ತೈಲ ಹಡಗಿನ ಮೇಲೆ ಕಡಲ್ಗಳ್ಳರು ದಾಳಿ ನಡೆಸಿದ್ದರು. ಇಂಥಆತಂಕಗಳನ್ನು ಕಡಲ್ಗಳ್ಳರು ತಂದಿದ್ದು ಹತ್ತಾರು ಸಲ. ಇದಕ್ಕೆಲ್ಲ ಪರಿಹಾರವಾಗಿ ನಮಗೆ ಕಾಣುತ್ತಿರುವುದು 'ವಿಕ್ರಮಾದಿತ್ಯ'.
ಕಾರವಾರವೇ ಏಕೆ?
1971ರಲ್ಲಿ ಪಾಕ್ ಮೇಲೆ ಯುದ್ಧ ನಡೆದಾಗ ನಮಗೆ ಅರಬ್ಬಿ ಸಮುದ್ರ ತೀರದಲ್ಲಿ ಭದ್ರತಾ ಸಂಬಂಧಿಯ ಕೊರತೆ ಎದುರಾಯಿತು. ನೌಕಾಪಡೆಗಾಗಿಯೇ ಪ್ರತ್ಯೇಕ ಬಂದರು ಇರಲಿಲ್ಲ. ಒಂದೇ ಬಂದರಿನಲ್ಲಿ ವಾಣಿಜ್ಯ ಹಡಗುಗಳು, ಮೀನುಗಾರಿಕೆ ಬೋಟುಗಳು, ಪ್ರವಾಸಿ ಬೋಟುಗಳು ತುಂಬಿ ಹೋಗುತ್ತಿದ್ದರಿಂದ ಭದ್ರತೆಗೂ ಭಾರಿ ಸಮಸ್ಯೆ. ಆಗ ರೂಪುಗೊಂಡಿದ್ದು ಕಾರವಾರ ಬಳಿ ನೌಕಾನೆಲೆ. ಪಾಕ್- ಚೀನಾಗಳ ಕ್ಷಿಪಣಿ ದಾಳಿಗೆ ನಿಲುಕದ ಸುರಕ್ಷಿತ ಪ್ರದೇಶ ಕಾರವಾರ.
ಒಳಗೆ ಏನೇನಿದೆ?
1,491,130 ಚದರ ಕಿ.ಮೀ. ವಿಸ್ತೀರ್ಣದ ವಿಶಾಲವಾದ ಅರಬ್ಬೀ ಸಮುದ್ರದಲ್ಲಿ ಭದ್ರತೆಯೆನ್ನುವುದೇ ದೊಡ್ಡ ತಲೆನೋವು. 'ವಿಕ್ರಮಾದಿತ್ಯ' ಜಲ ಹಾಗೂ ವಾಯು ಮಾರ್ಗದ ದಾಳಿ ತಡೆಯಲು ಸಮರ್ಥ. ಇದರಲ್ಲಿ 20 ಯುದ್ಧ ವಿಮಾನಗಳು, 10 ಬಗೆಯ ಹೆಲಿಕಾಪ್ಟರ್ಗಳ ನಿಲುಗಡೆಗೆ ವ್ಯವಸ್ಥೆ ಇದೆ. ಕ್ಷಿಪಣಿಗಳು, ಬಾಂಬ್ಗಳು ಮತ್ತಿತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳೂ ಇದರೊಳಗಿವೆ.
ಮತ್ತೇನು ವಿಶೇಷ?
'ವಿಕ್ರಮಾದಿತ್ಯ'ನ ಒಟ್ಟಾರೆ ಭಾರ 44500 ಟನ್. 284 ಮೀಟರ್ ಅಗಲ. 700 ನಾಟಿಕಲ್ ಮೈಲು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ರು. 13,000 ಕೋಟಿ ನೀಡಿ ರಷ್ಯಾದಿಂದ ಭಾರತ ಖರೀದಿಸಿದೆ. ಇದರಲ್ಲಿ 2 ಸಾವಿರ ಸಿಬ್ಬಂದಿ ನಿಯೋಜಿಸಬಹುದು. ಸದ್ಯ ಇರುವುದು ರಷ್ಯಾದ 177 ಸಿಬ್ಬಂದಿ. 30 ಯುದ್ಧ ವಿಮಾನಗಳನ್ನು ಹಾಗೂ 10 ಹೆಲಿಕಾಪ್ಟರ್ಗಳನ್ನು ಹೊತ್ತೊಯ್ಯಬಲ್ಲದಿದು. 1,40,000 ಅಶ್ವಶಕ್ತಿ ಸಾಮರ್ಥ್ಯದ ಎಂಜಿನ್ ಹೊಂದಿರುವ ವಿಕ್ರಮಾದಿತ್ಯ ಗಂಟೆಗೆ 54.3 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ನಿರಂತರವಾಗಿ 25 ಸಾವಿರ ಕಿ.ಮೀ. ಚಲಿಸುತ್ತದೆ. ಮಿಗ್ ಹಾಗೂ ಕಾಮೋವ್ ಶ್ರೇಣಿಯ ಯುದ್ಧ ವಿಮಾನಗಳನ್ನೂ ಇಲ್ಲಿ ಅಳವಡಿಸಲಾಗುತ್ತದೆ. 'ವಿಕ್ರಮಾದಿತ್ಯ' ತೇಲುವ ನಗರವಿದ್ದಂತೆ. 3000 ಸಿಬ್ಬಂದಿ ಇಲ್ಲಿರಲಿದ್ದಾರೆ. ಈ 3000 ಸಿಬ್ಬಂದಿಗೆ ಏನಿಲ್ಲವೆಂದರೂ ಪ್ರತಿ ತಿಂಗಳಿಗೆ 1 ಲಕ್ಷಕ್ಕೂ ಹೆಚ್ಚು ಮೊಟ್ಟೆಗಳು ಬೇಕು. 20 ಸಾವಿರ ಲೀಟರ್ ಹಾಲು ಬೇಕು. ಅವೆಲ್ಲವಕ್ಕೂ ಸಂಗ್ರಹ ವ್ಯವಸ್ಥೆ ಇಲ್ಲಿರಲಿದೆ.
ಅವರಿಗೆ ದುಬಾರಿ ನಮಗೀಗ ಅಂಬಾರಿ!
1987ರ ಸೋವಿಯತ್ ಒಕ್ಕೂಟದಲ್ಲಿ 'ಬಕು' ಹೆಸರಿನ ಯುದ್ಧ ನೌಕೆಯನ್ನು ನಿರ್ಮಿಸಲಾಯಿತು. ನಂತರ ಅದಕ್ಕೆ 'ಗೋರ್ಶಕೋವ್' ಅಂತ ನಾಮಕರಿಸಲಾಯಿತು. ಈ ನೌಕೆಯ ನಿರ್ವಹಣೆ ತೀರಾ ದುಬಾರಿ ಅಂತ ತೀರ್ಮಾನಿಸಿದ ರಷ್ಯಾ, 1996ರಲ್ಲಿ ಇದನ್ನು ಸ್ಥಗಿತಗೊಳಿಸಿತು. ಆಗ ಭಾರತ ಇದರ ಮೇಲೆ ನೋಟ ಹೊರಳಿಸಿತು. 2004ರಲ್ಲಿ ಖರೀದಿಗೆ ಒಪ್ಪಂದವಾಯಿತು. 2013ರ ನ.16ರಂದು ಇದನ್ನು ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಸಮ್ಮುಖದಲ್ಲಿ ಭಾರತಕ್ಕೆ ಹಸ್ತಾಂತರಿಸಲಾಯಿತು.
- ವಸಂತಕುಮಾರ ಕತಗಾಲ
vasant800@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


