ಒಂದೇ ಒಂದು ಚಂದ್ರಬಿಂಬ
ಕೊಳದ ತುಂಬ
ಬೆಳಕ ಕಾಣುವ ಬಯಕೆಯ ಗರಿ
ಕಾಣದ ಅಂತರ ಹೇಳುವ
ರೀತಿ ನೀತಿಗೆ
ನಿಂತ ನೀರಲ್ಲ ಸಾಕ್ಷಿ
ಆಕಾಶಕ್ಕೆ ಕಂದೀಲು ತೂಗಿಬಿಟ್ಟಂತೆ
ಹಿಡಿಯಲಾಗದ ಬೆಳಕು
ಕೇಳಲಾಗದ ಕಥೆ ಹೇಳುತ್ತಿರುವುದೇನು?
ಮಸ್ತಕದ ತುಂಬೆಲ್ಲ
ಗೋರಿಯೊಳಗಿನ ನೆನಪು
ಎದ್ದೆದ್ದು ಬಂದು ಕುತ್ತಿಗೆ ಹಿಚುಕುವುದರೊಳಗೆ
ಕೆರೆಗೆ ಹಾರಿಬಿಡುವುದೇ ಲೇಸು
ಚಂದ್ರಬಿಂಬ ಕದಡುವ ಮನಸ್ಸಿಲ್ಲ
ಅಲೆಗಳನ್ನು ನಿಯಂತ್ರಿಸುವ
ಗಾಳದ ಹುಡುಕಾಟದಲ್ಲಿ
ಕಳೆದು ಹೋಗುವ ಮೀನು
ಉಪ್ಪುಂಟು ದಡದಲ್ಲಿ
ಮುಷ್ಟಿ ಮೆಣಸು
ಕೆತ್ತಿ ನಿಲ್ಲಿಸಿದ ಬಟ್ಟೆ ಇಲ್ಲದ ಮೂರ್ತಿ
ಬೆಟ್ಟದ ತುದಿಗೊಂದು ಗೋಪುರದ ಕಳಸ
ಕಟ್ಟಕಡೆಯ ಆಸೆ
ತುಳಿದ ದಾರಿಯ ಬದಿಗೆ
ಬೆಳೆದ ಗರಿಕೆಯ ಹುಲ್ಲು
ಎಮ್ಮೆ, ದನ, ಕುರಿ, ಮೇಕೆ
ಬರುವ ಹೊತ್ತಿಗೆ ಭಯದ ಸೆಳಕು
ಒಮ್ಮೆ ಕತ್ತಲಾದರೆ ಸಾಕು ಭಗವಂತಾ
ಮತ್ತೆ ಬೆಳಗಾಗುವ ತನಕ
ಬದುಕಿಕೊಂಡೇನು.
= ವಿನಾಯಕ ಭಟ್ ತದ್ದಲಸೆ
sirsipora@gmail.com